ಬೆಂಗಳೂರು: ಒಂದೆಡೆ ಉತ್ತರ ಕರ್ನಾಟಕದಲ್ಲಿ ಬರದ ಛಾಯೆ ವ್ಯಾಪಿಸಿದ್ದರೆ, ಕರಾವಳಿ ಹಾಗೂ ಮಲೆನಾಡುಗಳಲ್ಲಿ ಭಾರಿ ಮಳೆಯಾಗುತ್ತಿದೆ (Rain News). ಗುರುವಾರ ಮಳೆ ಸೃಷ್ಟಿಸಿದ ಅವಾಂತರಕ್ಕೆ ರಾಜ್ಯದ ನಾನಾ ಕಡೆ ನಾಲ್ಕು ಮಂದಿ ಬಲಿಯಾಗಿದ್ದಾರೆ (rain deaths).
ಕಾಲು ಜಾರಿ ಬಿದ್ದು ಇಬ್ಬರು ನೀರುಪಾಲು
ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಮಳೆ ಅಬ್ಬರ ಮುಂದುವರಿದಿದೆ. ಭಾರೀ ಮಳೆಗೆ ಕುಮಟಾದ ಬೆಟ್ಕುಳಿಯಲ್ಲಿ ಇಬ್ಬರು ಬಲಿಯಾಗಿದ್ದಾರೆ. ಗದ್ದೆಯಲ್ಲಿ ನಡೆದು ಹೋಗುತ್ತಿದ್ದ ವೇಳೆ ಕಾಲು ಜಾರಿ ಹೊಳೆಗೆ ಬಿದ್ದು ಸಾವಿಗೀಡಾಗಿದ್ದಾರೆ. ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ಬೆಟ್ಕುಳಿಯಲ್ಲಿ ಭಾರೀ ಮಳೆಯಿಂದಾಗಿ ಜಲಾವೃತವಾಗಿದ್ದ ಗದ್ದೆಗಳಲ್ಲಿ ನಡೆದು ಹೋಗುತ್ತಿದ್ದಾಗ ಇವರು ಜಾರಿ ಬಿದ್ದಿದ್ದು, ಹೊಳೆಯಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಮೃತರನ್ನು ಸತೀಶ ಪಾಂಡುರಂಗ ನಾಯ್ಕ(38), ಉಲ್ಲಾಸ ಗಾವಡಿ(50) ಎಂದು ಗುರುತಿಸಲಾಗಿದೆ. ಕಣ್ಮರೆಯಾದವರಿಗಾಗಿ ಗ್ರಾಮಸ್ಥರು ಶೋಧ ನಡೆಸಿದ್ದು, ಕೆಲವು ಗಂಟೆಗಳ ಬಳಿಕ ಇಬ್ಬರೂ ಶವವಾಗಿ ಪತ್ತೆಯಾಗಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ಗೋಕರ್ಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಹೊಳೆಪಾಲಾದ ಕಾರ್ಮಿಕ
ಮಂಗಳೂರು: ಧಾರಾಕಾರ ಸುರಿಯುತ್ತಿರುವ ಮಳೆಗೆ ವ್ಯಕ್ತಿಯೊಬ್ಬರು ನೀರು ಪಾಲಾಗಿದ್ದಾರೆ. ಸುಳ್ಯದ ಆಲೆಟ್ಟಿಯ ಕೂರ್ನಡ್ಕ ಬಳಿ ಘಟನೆ ನಡೆದಿದೆ. ಕೇರಳ ಮೂಲದ ಕಾರ್ಮಿಕ ಹೊಳೆಯ ಸಂಕ ದಾಟುತ್ತಿರುವಾಗ ಆಯ ತಪ್ಪಿ ಬಿದ್ದಿದ್ದಾರೆ. ತೋಟದಲ್ಲಿ ಕೂಲಿ ಕೆಲಸ ಮುಗಿಸಿ ಹಿಂತಿರುಗುವಾಗ ಘಟನೆ ನಡೆದಿದ್ದು, ಸದ್ಯ ನಾಪತ್ತೆ ಆಗಿರೋ ಕಾರ್ಮಿಕನ ಹುಡುಕಾಟವನ್ನು ಅಗ್ನಿ ಶಾಮಕ ದಳದವರು ನಡೆಸಿದ್ದಾರೆ. ಸುಳ್ಯ ಪೋಲಿಸರು ನಾಪತ್ತೆ ಪ್ರಕರಣ ದಾಖಲಿಸಿದ್ದಾರೆ.
ಮರ ಬಿದ್ದು ಬೈಕ್ ಸವಾರ ಸಾವು
ಉಡುಪಿ: ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಗೆ ಮತ್ತೊಂದು ಬಲಿಯಾಗಿದೆ. ಕಾರ್ಕಳ ತಾಲೂಕಿನ ಬೆಳ್ಮಣ್ ಪರಿಸರದಲ್ಲಿ ದುರ್ಘಟನೆ ನಡೆದಿದ್ದು, ಬೃಹತ್ ಆಲದ ಮರ ಬಿದ್ದು ಬೈಕ್ ಸವಾರ ಸಾವಿಗೀಡಾಗಿದ್ದಾರೆ. ಗಾಳಿ ಮಳೆ ಹಿನ್ನೆಲೆಯಲ್ಲಿ ಮರ ಧರೆಗುರುಳಿದ್ದು, ಸಂಚರಿಸುತ್ತಿದ್ದ ಬೈಕ್ ಸವಾರನ ಮೇಲೆ ಬಿದ್ದಿದೆ. ಬೈಕ್ ಸವಾರ ಪ್ರವೀಣ್ ಆಚಾರ್ಯ ಸಾವಿಗೀಡಾಗಿದ್ದಾರೆ. ಮರ ಬಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮರ ಬಿದ್ದದ್ದರಿಂದ ವಿದ್ಯುತ್ ಕಂಬ ಸೇರಿದಂತೆ ಇತರ ಕಟ್ಟಡಗಳಿಗೂ ಹಾನಿಯಾಗಿದೆ.
ಇದನ್ನೂ ಓದಿ: Viral News : ಮಳೆ ನೀರು ತುಂಬಿದ್ದ ರಸ್ತೆಯಲ್ಲಿ ಕೆಟ್ಟು ನಿಂತ ಕಾರು, ರಿಪೇರಿಗೆ ಬೇಕಾಯ್ತು 40 ಲಕ್ಷ ರೂಪಾಯಿ!