ಚಿಕ್ಕಮಗಳೂರು/ ಕಾರವಾರ: ಗಾಳಿ-ಮಳೆ ಅಬ್ಬರಕ್ಕೆ (Heavy rain) ಮಲೆನಾಡಿನ 212 ಹೆಚ್ಚು ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ (Power Cut) ಕಡಿತಗೊಂಡಿದೆ. ಮೂಡಿಗೆರೆ, ಕಳಸ, ಕೊಪ್ಪ, ಶೃಂಗೇರಿ ಭಾಗದ ಗ್ರಾಮಸ್ಥರು ಕಂಗಾಲಾಗಿದ್ದು, ಕಗ್ಗತ್ತಲಲ್ಲಿ ಇರುವಂತಾಗಿದೆ. ಚಿಕ್ಕಮಗಳೂರು ತಾಲೂಕಿನ ಹಲವು ಗ್ರಾಮಗಳಲ್ಲಿ ವಿದ್ಯುತ್ ಕಂಬಗಳ ಮೇಲೆ ಮರ ಬಿದ್ದು ಅವಾಂತರವೇ (Rain News) ಸೃಷ್ಟಿ ಆಗಿದೆ. ಇತ್ತ ವಿದ್ಯುತ್ ಸರಿಪಡಿಸಲು ಮೆಸ್ಕಾಂ ಸಿಬ್ಬಂದಿ (Mescom) ಹರಸಾಹಸ ಪಡುತ್ತಿದ್ದಾರೆ. ವ್ಯಾಪಕ ಮಳೆಯಾಗುತ್ತಿರುವುದರಿಂದ (Rain Effect) ಕೆಲಸ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ.
ಕ್ಯಾಸಲರಾಕ್‌ನಲ್ಲಿ ಭೂ ಕುಸಿತ, ರೈಲು ಸಂಚಾರ ಸ್ಥಗಿತ
ಉತ್ತರಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಕ್ಯಾಸಲರಾಕ್ ಸಮೀಪದ ಕರಂಜೋಲ್ ಬಳಿ ಭೂಕುಸಿತ ಉಂಟಾಗಿದೆ. ಭಾರೀ ಮಳೆಯಿಂದ ಕರಂಜೋಲ್ ರೈಲ್ವೆ ಮಾರ್ಗದಲ್ಲಿ ಭೂಕುಸಿತವಾಗಿದ್ದು, ರೈಲ್ವೆ ಸಂಚಾರವು ಸ್ಥಗಿತಗೊಂಡಿದೆ. ಹುಬ್ಬಳ್ಳಿ-ಗೋವಾ ರೈಲು ಸಂಚಾರಕ್ಕೆ ಅಡ್ಡಿ ಆಗಿದ್ದು, ರೈಲ್ವೆ ಸಿಬ್ಬಂದಿ ಭೂಕುಸಿತ ಸ್ಥಳದಲ್ಲಿ ಮಣ್ಣು ತೆರವು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಆದರೆ ಈ ಕಾರ್ಯಾಚರಣೆಗೆ ಭಾರಿ ಮಳೆಯು ಅಡ್ಡಿಯಾಗುತ್ತಿದೆ. ಭಟ್ಕಳದಲ್ಲಿ ತಡರಾತ್ರಿಯಿಂದ ಮಳೆ ಹೆಚ್ಚಾಗಿ ಸುರಿಯುತ್ತಿದ್ದು, ತಾಲೂಕಿನ ಶಾಲಾ- ಕಾಲೇಜಿಗೆ ಬುಧವಾರವೂ ರಜೆಯು ಮುಂದುವರಿದಿದೆ. ಶಿಕ್ಷಣ ಇಲಾಖೆಯ ಸಹಾಯಕ ಆಯುಕ್ತೆ ಡಾ. ನಯನರಿಂದ ರಜೆ ಘೋಷಣೆ ಮಾಡಲಾಗಿದೆ.
ಕರ್ನಾಟಕ-ಗೋವಾ ಗಡಿ ಹೊಂದಿಕೊಂಡಿರುವ ದೂದ್ ಸಾಗರ ಜಲಪಾತದ ಬಳಿ ಬೃಹತ್ ಪ್ರಮಾಣದಲ್ಲಿ ಭೂಕುಸಿತ ಉಂಟಾಗಿದೆ. ರೈಲ್ವೆ ಟ್ರಾಕ್ ಮೇಲೆ ಬಂಡೆ, ಮಣ್ಣು ಕುಸಿತದಿಂದಾಗಿ ರೈಲ್ವೆ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಗೋವಾ- ಹುಬ್ಬಳ್ಳಿ- ಬೆಳಗಾವಿ ಮಾರ್ಗ ಮಧ್ಯೆ ತಾತ್ಕಾಲಿಕ ರೈಲ್ವೆ ಸಂಚಾರ ಸ್ಥಗಿತವಾಗಿದೆ. ರೈಲ್ವೆ ಹಳಿ ಮೇಲೆ ಬಿದ್ದ ಬಂಡೆ, ಮಣ್ಣು ತೆರವು ಮಾಡಲಾಗುತ್ತಿದೆ.
ಕುಡಚಿ-ಉಗಾರ ಸೇತುವೆ ಮುಳುಗಡೆ
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಕಾಗವಾಡ ಅಥಣಿ ಭಾಗದಲ್ಲಿ ಕೃಷ್ಣಾ ನದಿಯಲ್ಲಿ ಒಳಹರಿವು ಗಣನೀಯ ಹೆಚ್ಚಳವಾಗಿದೆ. ಕುಡಚಿ-ಉಗಾರ ಸೇತುವೆ ಮುಳುಗಡೆ ಆಗಿದೆ. ಕೃಷ್ಣಾ ನದಿಗೆ ಅಡ್ಡಲಾಗಿರುವ ಕುಡಚಿ ಸೇತುವೆ ಮುಳುಗಡೆಯಿಂದಾಗಿ ಎರಡು ಪಟ್ಟಣದ ಸಂಪರ್ಕ ಕೊಂಡಿ ಕಡಿತವಾಗಿದೆ. ಸೇತುವೆ ಮೇಲಿನಿಂದ ವಾಹನ ಸಂಚಾರಕ್ಕೆ ಪೊಲೀಸರು ನಿರ್ಬಂಧ ಹೇರಿದ್ದಾರೆ. ರಸ್ತೆಗೆ ಅಡ್ಡಲಾಗಿ ಬ್ಯಾರಿಕೇಡ್ ಅಳವಡಿಸಿ ಸಂಚಾರಕ್ಕೆ ತಡೆ ನೀಡಿದ್ದಾರೆ.
ಮಹಾರಾಷ್ಟ್ರದ ಪಶ್ಚಿಮಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಕೃಷ್ಣಾ ಉಪನದಿ ಧೂದ್‌ಗಂಗಾದಲ್ಲಿ ನೀರಿನ ಒಳಹರಿವು ಹೆಚ್ಚಳವಾಗಿದೆ. ದೂಧ್‌ಗಂಗಾ ನದಿಗೆ 27 ಸಾವಿರ ಕ್ಯೂಸೆಕ್‌ಗೂ ಹೆಚ್ಚು ಒಳ ಹರಿವು ಹೆಚ್ಚಳದಿಂದ ಸದಲಗಾ ಪಟ್ಟಣ ಬಳಿ ಅಪಾಯಮಟ್ಟ ಮೀರಿ ಹರಿಯುತ್ತಿದೆ. ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಸದಲಗಾ ಪಟ್ಟಣದಲ್ಲಿ ಬೋರಗಾಂವ ಕೆಳಹಂತದ ಸೇತುವೆ ಮುಳುಗಡೆ ಹಂತಕ್ಕೆ ತಲುಪಿದೆ. ರಸ್ತೆ ಬದಿಯಲ್ಲಿರುವ ವಿದ್ಯುತ್ ಟ್ರಾನ್ಸಫಾರ್ಮರ್‌ಗಳು, ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಕಬ್ಬಿನ ಗದ್ದೆ ಜಲಾವೃತಗೊಂಡಿದೆ. ದೂಧ್‌ಗಂಗಾ, ವೇದಗಂಗಾ, ಕೃಷ್ಣಾ ನದಿ ಪಾತ್ರದಲ್ಲಿರುವವರು ಎಚ್ಚರದಲ್ಲಿ ಇರುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.
ಇತ್ತ ಗದಗ ಜಿಲ್ಲೆಯ ರೋಣ ತಾಲೂಕಿನ ಹೊಳೆ ಆಲೂರು, ನೀರಲಗಿ ಗ್ರಾಮದ ನಡುವೆ ಸೇತುವೆ ಮುಳುಗಡೆ ಸಾಧ್ಯತೆ ಇದೆ. ಮಲಪ್ರಭಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಳ ಆಗುತ್ತಿದೆ. ಇದರಿಂದಾಗಿ ನದಿ ದಡದ ಗ್ರಾಮಸ್ಥರಿಗೆ ಪ್ರವಾಹದ ಭೀತಿ ಶುರುವಾಗಿದೆ. ಮಲೆನಾಡಿನಲ್ಲಿ ಮಳೆ ಹೆಚ್ಚಾಗಿರುವ ಪರಿಣಾಮ ಬೆಣ್ಣೆ ಹಳ್ಳ ಹಾಗೂ ಮಲಪ್ರಭಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಿದೆ. ಹೊಳೆ ಮಣ್ಣೂರು ಬಳಿ ಮಲಪ್ರಭಾ ನದಿಯಲ್ಲಿ ಬೆಣ್ಣೆ ಹಳ್ಳ ಸಂಗಮವಾಗುತ್ತದೆ. ಗಾಡಗೋಳಿ, ಹೊಳೆ ಮಣ್ಣೂರು, ಹೊಳೆ ಆಲೂರು, ಹೊಳೆ ಹಡಗಲಿ, ಅಮರಗೋಳ, ಬಿಎಸ್ ಬೇಲೇರಿ, ಆಚಾರ ಕೊಪ್ಪ ಗ್ರಾಮಗಳಿಗೆ ಪ್ರವಾಹದ ಭೀತಿ ಎದುರಾಗಿದೆ. ಬಾಗಲಕೋಟೆ ಜಿಲ್ಲೆಯ ಬದಾಮಿ ಸಂಪರ್ಕ ಮಾಡುವ ಸೇತುವೆ ಮುಳುಗಡೆಯಿಂದ ಸಂಚಾರ ಸ್ಥಗಿತವಾಗಿದೆ.
ಕಲಬುರಗಿ ಜಿಲ್ಲೆಗೆ ರೆಡ್ ಅಲರ್ಟ್ ಘೋಷಣೆ ಮಾಡಿರುವುದರಿಂದ ಅಂಗನವಾಡಿ ಹಾಗೂ ಶಾಲೆಗಳಿಗೆ ರಜೆ ಘೋಷಿಸಿ ಕಲಬುರಗಿ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಆದೇಶವನ್ನು ಹೊರಡಿಸಿದ್ದಾರೆ.
ಮಳೆಯ ಆರ್ಭಟಕ್ಕೆ ಮನೆ ಸಂಪೂರ್ಣ ಜಖಂ
ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಸಾಲುಮರ ಗ್ರಾಮದಲ್ಲಿ ಭಾರಿ ಮಳೆಗೆ ಮನೆ ಸಂಪೂರ್ಣ ನೆಲಸಮವಾಗಿದೆ. ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನಿನ್ನೆ ತಡರಾತ್ರಿ ಮನೆಯಲ್ಲಿ ಮಲಗಿದ್ದಾಗ ಈ ಅವಘಡ ಸಂಭವಿಸಿದೆ. ಗ್ರಾಮದ ಬೈರಯ್ಯ ಎಂಬುವರ ಮನೆಗೆ ಸಂಪೂರ್ಣ ಹಾನಿಯಾಗಿದೆ. ಮನೆಯಲ್ಲಿದ್ದ ದವಸ ಧಾನ್ಯ, ಪಾತ್ರೆಗಳು ನಾಶವಾಗಿವೆ. ಸ್ಥಳಕ್ಕೆ ಸ್ಥಳೀಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದ್ದಾರೆ.
ರಾಜ್ಯದ ಇನ್ನುಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ