Site icon Vistara News

Rain News : ಗಾಳಿ-ಮಳೆಗೆ ಮನೆ ಚಾವಣಿ, ಗೋಡೆ ಕುಸಿತ; ಅಪಾಯದಲ್ಲಿ ಜಲಾಶಯ ಮಟ್ಟ

Rain Effect collapse

ಚಿಕ್ಕಮಗಳೂರು/ಶಿವಮೊಗ್ಗ: ರಾಜ್ಯದ ಹಲವೆಡೆ ಬಿರುಗಾಳಿ ಸಹಿತ ಭಾರಿ ಮಳೆಗೆ (Rain News) ಜನರು ತತ್ತರಿಸಿ ಹೋಗಿದ್ದಾರೆ. ಕೆಲವೆಡೆ ಸಾವು-ನೋವಿಗೆ ಕಾರಣವಾಗಿದ್ದರೆ, ಹೊಳೆಯಂತಾದ ರಸ್ತೆಗಳಲ್ಲಿ ಸೇತುವೆಗಳು ಮುಳುಗಿ (Rain Effect) ಹೋಗಿವೆ. ಕಾಫಿನಾಡು ಚಿಕ್ಕಮಗಳೂರಿನಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಬಾಲಕರ ವಿದ್ಯಾರ್ಥಿ ನಿಲಯದ ಕಾಂಪೌಂಡ್ ದಿಢೀರ್ ಕುಸಿದಿದೆ. ಕೊಪ್ಪ ತಾಲೂಕಿನ ಬಸರಿಕಟ್ಟೆ ಗ್ರಾಮದಲ್ಲಿರುವ ಕಾಂಪೌಂಡ್ ಕುಸಿದಿದೆ. ಈ ದೃಶ್ಯವನ್ನು ವಿದ್ಯಾರ್ಥಿಗಳು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ.

ಹಾಸ್ಟೆಲ್‌ ಕಾಂಪೌಂಡ್‌ ಕುಸಿತ

ಇತ್ತ ಕೊಪ್ಪ ತಾಲೂಕಿನ ಕೊಳೂರು ಬಳಿ ಶೃಂಗೇರಿ ಜಯಪುರ ರಸ್ತೆ ಕುಸಿಯುವ ಹಂತ ತಲುಪಿದೆ. ಜಯಪುರ ಶೃಂಗೇರಿ ರಸ್ತೆಯ ಕಿರು ಸೇತುವೆಗೆ ಹಾನಿ ಆಗಿದೆ. ತೀವ್ರ ಮಳೆಯಿಂದಾಗಿ ಸೇತುವೆ ಕುಸಿಯುವ ಭೀತಿ ಇದ್ದು, ಪೊಲೀಸರು ಮುನ್ನೆಚ್ಚರಿಕ ಕ್ರಮವಾಗಿ ಬ್ಯಾರಿಕ್ಯಾಡ್ ಅಳವಡಿಸಿದ್ದಾರೆ.

ಗಾಳಿ-ಮಳೆಗೆ ಶಾರ್ಟ್‌ ಸರ್ಕ್ಯೂಟ್

ಕಾಫಿನಾಡು ಮಲೆನಾಡು ಭಾಗದಲ್ಲಿ ಗಾಳಿ-ಮಳೆ ಅಬ್ಬರ ಮುಂದುವರಿದಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ವಿದ್ಯುತ್ ತಂತಿ ಬೆಂಕಿ ಹೊತ್ತಿದೆ. ಬೆಂಕಿ ಹತ್ತಿ ಭದ್ರಾ ನದಿಗೆ ತುಂಡಾಗಿ ವಿದ್ಯುತ್ ತಂತಿ ಬಿದ್ದಿದೆ. ಕಳಸ ತಾಲೂಕಿನ ಹೆಬ್ಬಾಳೆ ಸೇತುವೆ ಬಳಿ ಭದ್ರಾ ನದಿಗೆ ವಿದ್ಯುತ್ ತಂತಿ ಬಿದ್ದಿದೆ. ಇದರಿಂದಾಗಿ ಹೊರನಾಡು, ಬಲಿಗೆ ಸೇರಿದಂತೆ ಹತ್ತಾರು ಹಳ್ಳಿಗಳು ಕರೆಂಟ್‌ ಇಲ್ಲದಂತಾಗಿದೆ. ಭಾರೀ ಗಾಳಿ ಮಳೆ ಮಧ್ಯೆ ದುರಸ್ಥಿ ಕೂಡ ಕಷ್ಟವಾಗಿದೆ.

ವಿದ್ಯುತ್‌ ಶಾರ್ಟ್‌ ಸರ್ಕ್ಯೂಟ್‌

ಶಿವಮೊಗ್ಗದಲ್ಲಿ ಮದರಸದ ಗೋಡೆ ಕುಸಿತ

ಶಿವಮೊಗ್ಗದಲ್ಲೂ ಭಾರಿ ಮಳೆ-ಗಾಳಿಗೆ ಮದರಸದ ಗೋಡೆ ಮೇಲ್ಚಾವಣಿ ಕುಸಿದಿದೆ. ಚುಂಚನಾಲ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಗಾಳಿಬೈಲು ಗ್ರಾಮದ ಐತಿಹಾಸಿಕ ಹಿನ್ನೆಲೆ ಇರುವ ಮದರಸದ ಶಾಲೆಯ ಮೇಲ್ಚಾವಣಿ ಕಳಚಿದೆ. ಭಾನುವಾರ ಸುರಿದ ಭಾರಿ ಮಳೆಗೆ ಈ ದುರ್ಘಟನೆ ನಡೆದಿದ್ದು, ಮಕ್ಕಳಿಗೆ ರಜೆ ಕಾರಣಕ್ಕೆ ಅಪಾಯ ತಪ್ಪಿದೆ.

ಶಿವಮೊಗ್ಗ ಜಿಲ್ಲೆಯ ಹೊಸನಗರ, ಸೊರಬ ಭದ್ರಾವತಿ ತಾಲೂಕಿನ ಗ್ರಾಮಗಳಲ್ಲಿ ಮನೆಗಳು ಕುಸಿದಿದೆ. ಸಾಗರ ತಾಲೂಕಿನ ತಾಳಗುಪ್ಪ ಹೋಬಳಿಯಲ್ಲಿ ಜಮೀನು ಜಲಾವೃತಗೊಂಡಿದೆ.

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಬರೂರು ಗ್ರಾಮದಲ್ಲಿ ಕಾಲುವೆ ಒಡೆದು ನೀರೆಲ್ಲವೂ ಜಮೀನುಗಳಿಗೆ ನುಗ್ಗಿದೆ. ಕೃಷಿ ಮಾಡಲಾಗದೇ ರೈತರು ಹೈರಾಣಾಗಿದ್ದಾರೆ. ಜಮೀನುಗಳು ಕೆರೆಯಂತೆ ಮಾರ್ಪಾಟಾಗಿದೆ.

ಶಿವಮೊಗ್ಗದಲ್ಲಿ ತುಂಗಾ ಜಲಾಶಯದಿಂದ ನೀರು ಬಿಡುತ್ತಿರುವ ಹಿನ್ನೆಲೆ ಕೋರ್ಪಲಯ್ಯ ಛತ್ರ ಮಂಟಪ ಸಂಪೂರ್ಣ ಮುಳುಗಡೆಯಾಗಿದೆ. ಶರಾವತಿ ಹಿನ್ನೀರಿನ ಕಣಿವೆ ಪ್ರದೇಶದಲ್ಲಿ ನಿರಂತರ ಮಳೆಗೆ ಹೊಲ-ಗದ್ದೆಗಳೆಲ್ಲ ಜಲಾವೃತಗೊಂಡಿದೆ. ಬಿತ್ತನೆ ಮಾಡಿದ ಸಸಿಯ ಮಡಿಗಳೆಲ್ಲ ನೀರು ಪಾಲಾಗಿದೆ. ಅಲ್ಲಲ್ಲಿ ಧರೆ ಕುಸಿತ, ವಿದ್ಯುತ್ ಕಂಬಗಳು ಉರುಳಿದೆ. ಇದರಿಂದಾಗಿ ಕರೂರು ಹೋಬಳಿಯ ಹಿನ್ನೀರು ಪ್ರದೇಶ ಕಗ್ಗತ್ತಲೆಯಲ್ಲಿದೆ.

ಚಿಕ್ಕೋಡಿಯ ಪಂಚಗಂಗಾ ನದಿಯ ರುದ್ರ ನರ್ತನ

ಅಪಾಯದ ಮಟ್ಟ ಮೀರಿ ಪಂಚಗಂಗಾ ನದಿ ಹರಿಯುತ್ತಿದೆ. ಪಂಚಗಂಗಾ ನದಿಯ ರುದ್ರ‌ನರ್ತನ ಡ್ರೋನ್ ಕಣ್ಣಲ್ಲಿ ಸೆರೆಯಾಗಿದೆ. ಕೃಷ್ಣಾ ನದಿಯ ಉಪನದಿಯಾಗಿರುವ ಪಂಚಗಂಗಾ ನದಿಯಲ್ಲಿ ನೀರು ಹೆಚ್ಚಳವಾಗುತ್ತಿರುವುದರಿಂದ ಕೊಲ್ಹಾಪುರದ 80ಕ್ಕೂ ಹೆಚ್ಚು ಸೇತುವೆಗಳು ಜಲಾವೃತಗೊಂಡಿವೆ. ಕೊಲ್ಹಾಪುರ ಜಿಲ್ಲೆಯಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದೆ.

ಬೆಳಗಾವಿ ಜಿಲ್ಲೆಯ ‌ಮೂಡಲಗಿ ತಾಲೂಕಿನ ಮತ್ತೆರಡು ಸೇತುವೆಗಳು ಮುಳುಗಡೆ ಆಗಿವೆ. ಘಟಪ್ರಭಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಅವರಾದಿ ನಂದಗಾಂವ್ ಹಾಗೂ ಸುಣಧೋಳಿ ಮೂಡಲಗಿ ಸೇತುವೆಗಳು ಮುಳುಗಡೆ ಆಗಿದೆ. ಸೇತುವೆ ಮುಳುಗಡೆಯಿಂದ ನಾಲ್ಕು ಹಳ್ಳಿಗಳ ಸಂಚಾರವು ಬಂದ್‌ ಆಗಿದೆ. ಅನ್ಯ ಮಾರ್ಗವನ್ನು ಬಳಸಿ ಸವಾರರು ಪ್ರಯಾಣಿಸುತ್ತಿದ್ದಾರೆ.

ದಾವಣಗೆರೆಯಲ್ಲಿ ಅಂಗಡಿಗಳು ಮುಳುಗಡೆ

ಮಲೆನಾಡು ಭಾಗದಲ್ಲಿ ಮಳೆ ಹೆಚ್ಚಾದ ಹಿನ್ನೆಲೆ ತುಂಗಾ ಭದ್ರಾ ನದಿ ತುಂಬಿ ಹರಿಯುತ್ತಿದೆ. ಇತ್ತ ದಾವಣಗೆರೆಯ ಉಕ್ಕಡಗಾತ್ರಿ ದೇವಸ್ಥಾನದ ಸಮೀಪ ಹೊಳೆ ನೀರು ಬಂದಿದೆ. ಇದರಿಂದಾಗಿ ದೇವಸ್ಥಾನದ ಆವರಣದಲ್ಲಿದ್ದ 20ಕ್ಕೂ ಹೆಚ್ಚು ಅಂಗಡಿಗಳು ಮುಳುಗಡೆಯಾಗಿದೆ. ನೀರಿನ ಪ್ರಮಾಣ ಇನ್ನು ಹೆಚ್ಚಾದರೆ ಉಕ್ಕಡಗಾತ್ರಿ ಸಂಪರ್ಕ ರಸ್ತೆ ಕೂಡ ಕಡಿತವಾಗುವ ಸಾಧ್ಯತೆ ಇದೆ. ಯಾರು ಕೂಡ ಸ್ನಾನಕ್ಕೆ ನದಿಯೊಳಗೆ ಇಳಿಯದಂತೆ ದೇವಸ್ಥಾನ ಅಡಳಿತ ಮಂಡಳಿ ಸೂಚ‌ನೆಯನ್ನು ನೀಡಿದೆ.

ಸೇತುವೆ ನೀರಿನಿಂದ ಜಲಾವೃತ

ಮಹಾರಾಷ್ಟ್ರದಲ್ಲಿ ನಿರಂತರ ಮಳೆ ಹಿನ್ನೆಲೆಯಿಂದಾಗಿ ಬಾಗಲಕೋಟೆ ಜಿಲ್ಲೆಯಲ್ಲಿ ಕೃಷ್ಣೆಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಹಿಪ್ಪರಗಿ ಜಲಾಶಯದಿಂದ ಅಂದಾಜು ಒಂದು ಲಕ್ಷ ಕ್ಯೂಸೆಕ್ಸ್ ನೀರಿನ ಒಳ ಹರಿವಿದ್ದರಿಂದ ಚಿಕ್ಕಪಡಸಲಗಿ ಸೇತುವೆ ಜಲಾವೃತಗೊಂಡಿದೆ. ನದಿ ಪಾತ್ರದ ಗ್ರಾಮಗಳಲ್ಲಿ ನದಿಗೆ ಇಳಿಯದಂತೆ ಸೂಚನೆ ನೀಡಲಾಗಿದೆ. ಈಗಾಗಲೇ ಬಾಗಲಕೋಟೆ ಜಿಲ್ಲಾಡಳಿತ ಡಂಗೂರ ಬಾರಿಸಿ ಸಂದೇಶ ಸಾರಿವೆ. ಬೆಳಗಾವಿಯ ವಡಗಾವಿಯ ರಾಘವೇಂದ್ರ ಕಾಲೋನಿಗೆ ಮಳೆ ನೀರು ನುಗ್ಗಿದೆ. ನೀರು ಹೊರಹಾಕಲು ಆಗದೆ 20ಕ್ಕೂ ಹೆಚ್ಚು ಮನೆಗಳ ನಿವಾಸಿಗಳು ಪರದಾಡಿದ್ದಾರೆ. ಮನೆಗೆ ನೀರು ನುಗ್ಗಿದ್ದರಿಂದ ವೃದ್ಧರು ಟೆರೆಸ್ ಮೇಲೆ ನಿಂತರೆ, ಮಕ್ಕಳನ್ನು ಕಂಕಳಲ್ಲಿ ಕಟ್ಟಿಕೊಂಡು ರಾತ್ರಿಯೆಲ್ಲ ಜಾಗರಣೆ ಮಾಡುವಂತಾಗಿದೆ.

ಧಾರವಾಡದಲ್ಲಿ ಮಳೆಗೆ 24 ಮನೆಗಳು ಕುಸಿತ

ಧಾರವಾಡದಲ್ಲಿ ನಿರಂತರ ಮಳೆಗೆ ಶಿಥಿಲಾವಸ್ಥೆಯಲ್ಲಿರುವ ಮನೆಗಳು ಕುಸಿಯುತ್ತಿವೆ. ಈವರೆಗೆ 24 ಮನೆಗಳು ಭಾಗಶಃ ಕುಸಿದು ಹೋಗಿದೆ. ಮಳೆಯಿಂದಾಗಿ ಗ್ರಾಮೀಣ ಪ್ರದೇಶದಲ್ಲಿ ಮನೆ ಬಿದ್ದು ಜಾನುವಾರಗಳು ಪ್ರಾಣ ಬಿಟ್ಟಿವೆ. ಧಾರವಾಡ ಜಿಲ್ಲೆಯ ಹೊನ್ನಾಪುರ ಗ್ರಾಮದಲ್ಲಿ ದನದ ಕೊಟ್ಟಿಗೆ ಕುಸಿದು ಸಿದ್ದಪ್ಪ ಭೀಮಪ್ಪ ಎಂಬವರಿಗೆ ಸೇರಿದ ಎಮ್ಮೆ ಮೃತಪಟ್ಟಿದೆ. ನಿರಂತರ ಮಳೆಯಿಂದಾಗಿ ಮತ್ತಷ್ಟು ಮನೆಗಳು ಕುಸಿಯುವ ಹಂತದಲ್ಲಿದೆ.

ಕೊಪ್ಪಳದಲ್ಲಿ ಹೊಂಡವಾಯ್ತು ಅಂಡರ್‌ಪಾಸ್‌

ಕೊಪ್ಪಳ ಜಿಲ್ಲೆಯ ಕುಷ್ಟಗಿ ಪಟ್ಟಣದಲ್ಲಿರುವ ರಾಷ್ಟ್ರೀಯ ಹೆದ್ದಾರಿ 50ರಲ್ಲಿರುವ ಅಂಡರ್ ಪಾಸ್ ಮಳೆ ಬಂದರೆ ಹೊಂಡದಂತಾಗುತ್ತದೆ. ಹೆದ್ದಾರಿಯ ಬೃಹತ್ ಮೇಲ್ಸೆತುವೆಯ ಕೆಳಗೆ ಇರುವ ಅಂಡರ್ ಪಾಸ್ ಹನುಮಸಾಗರ- ಟೆಂಗುಟಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಲಘು ವಾಹನ ಓಡಾಟಕ್ಕಾಗಿ ಅಂಡರ್ ಪಾಸ್ ನಿರ್ಮಿಸಿದ್ದು, ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ ಎಂದು ಜನರು ಕಿಡಿಕಾರಿದ್ದಾರೆ.

ಹಾಸನ ಜಿಲ್ಲೆಯಲ್ಲಿ ಮಳೆ ಅಬ್ಬರಕ್ಕೆ ಹಳ್ಳಕೊಳ್ಳಗಳು ಉಕ್ಕಿ ಹರಿಯುತ್ತಿದೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಐಗೂರು ಹೊಳೆ ನೀರು ಸೇತುವೆ ಮೇಲೆ ಉಕ್ಕಿ ಹರಿಯುತ್ತಿದ್ದು, ಕುಂಭರಹಳ್ಳಿ- ಐಗೂರು-ಹೆತ್ತೂರು ರಸ್ತೆ ಸಂಪರ್ಕವು ಕಡಿತಗೊಂಡಿದೆ. ಸಕಲೇಶಪುರ, ಹೆತ್ತೂರು ಕಡೆ ಸಾಗಲು ಪರ್ಯಾಯ ಯಸಳೂರು, ಶುಕ್ರವಾರಸಂತೆ ಮಾರ್ಗದಲ್ಲಿ ಸವಾರರು ಪ್ರಯಾಣಿಸುತ್ತಿದ್ದಾರೆ.

ತ್ರಿವೇಣಿ ಸಂಗಮ ಮುಳುಗಡೆ

ಪಶ್ಚಿಮ‌ ಘಟ್ಟ ಪ್ರದೇಶದ ಬ್ರಹ್ಮಗಿರಿ ತಪ್ಪಲಿನಲ್ಲಿ ಭಾರೀ ಮಳೆ ಹಿನ್ನೆಲೆ ಕಾವೇರಿ, ಕನ್ನಿಕೆ, ಸುಜೋತಿ ನದಿಗಳು ಉಕ್ಕಿ ಹರಿಯುತ್ತಿದೆ. ಕೊಡಗಿನ ಭಾಗಮಂಡಲದ ತ್ರಿವೇಣಿ ಸಂಗಮ ಸಂಪೂರ್ಣ ಜಲಾವೃತಗೊಂಡಿದೆ. ಭಾಗಮಂಡಲದ ತಲಕಾವೇರಿ ನಾಪೋಕ್ಲು ರಸ್ತೆ ಸಂಚಾರ ಬಂದ್ ಆಗಿದೆ. ಭಗಂಡೇಶ್ವರ ದೇವಾಲಯದ ಮೆಟ್ಟಿಲವರೆಗೆ ನೀರು ಬಂದಿದೆ. ಮುಂಜಾಗ್ರತಾ ಕ್ರಮವಾಗಿ ರಕ್ಷಣಾ ಸಿಬ್ಬಂದಿ, ಬೋಟ್ ಸನ್ನದ್ಧವಾಗಿದೆ.

ಅತಿಯಾದ ಮಳೆಯಿಂದಾಗಿ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಬಿಳಗಿ ಬಳಿ ಗುಡ್ಡ ಕುಸಿದಿದೆ. ಕುಮಟಾ-ಕೊಡಮಡಗಿ ರಾಜ್ಯ ಹೆದ್ದಾರಿ ಸಂಪರ್ಕ ಕಡಿತಗೊಂಡಿದೆ. ಕಳೆದ ಎರಡು ವಾರಗಳಿಂದ ಸಿದ್ದಾಪುರ ತಾಲೂಕಿನಾದ್ಯಂತ ಧಾರಾಕಾರ ಮಳೆಯಾಗುತ್ತಿದೆ. ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಭೂಮಿ ಸಂಪೂರ್ಣ ತೇವಗೊಂಡಿದೆ. ಪರಿಣಾಮ ಧರೆ ಕುಸಿದು ರಸ್ತೆಗೆ ಮಗುಚಿದ ಪರಿಣಾಮ ಸುಮಾರು ಐದು ಗಂಟೆಗಳ ಕಾಲ ರಾಜ್ಯ ಹೆದ್ದಾರಿಯಲ್ಲಿ ವಾಹನ ಸಂಚಾರ ಬಂದ್ ಆಗಿದೆ. ಸುದ್ದಿ ತಿಳಿಯುತ್ತಿದ್ದಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ಜೆಸಿಬಿ ಮೂಲಕ ಮಣ್ಣು ತೆರವುಗೊಳಿಸಿದ್ದಾರೆ.

ನದಿ ತೀರಕ್ಕೆ ತೆರಳದಂತೆ ಎಚ್ಚರಿಕೆ

ನದಿ ತೀರಕ್ಕೆ ತೆರಳದಂತೆ ಎಸ್‌ಪಿ ಡಾ.ಸಿ.ಬಿ.ವೇದಮೂರ್ತಿ ಎಚ್ಚರಿಕೆ ನೀಡಿದ್ದಾರೆ. ಯಾದಗಿರಿಯಲ್ಲಿ ಮಳೆಯೊಂದಿಗೆ ಕೃಷ್ಣಾ ಹಾಗೂ ಭೀಮಾನದಿಗೆ ಹೆಚ್ಚಿನ ಪ್ರಮಾಣದ ನೀರು ಬರುತ್ತಿದೆ. ಭೀಮಾನದಿಗೆ ಹೆಚ್ಚಿನ ನೀರು ಬಿಡುಗಡೆ ಮಾಡಲಾಗಿದೆ. ಹೀಗಾಗಿ ಸಾರ್ವಜನಿಕರು ಯಾರು ನದಿ ತೀರಕ್ಕೆ ತೆರಳಬಾರದು. ರೈತರು ನದಿ ತೀರದಲ್ಲಿರುವ ಪಂಪ್ ಸೆಟ್ ತೆಗೆದು ಸುರಕ್ಷಿತ ಸ್ಥಳದಲ್ಲಿ ಇಡಬೇಕು. ಯಾರು ಜಮೀನು ಕೆಲಸಕ್ಕೆಂದು ನದಿ ದಾಟುವ ಕೆಲಸ ಮಾಡಬಾರದು. ಒಂದು ವೇಳೆ ಹೆಚ್ಚು ನೀರು ಬಂದರೆ ಪ್ರವಾಹ ಪರಿಸ್ಥಿತಿ ಎದುರಾದರೆ ಅಗತ್ಯ ಮುಂಜಾಗ್ರತೆ ವಹಿಸಲಾಗುತ್ತದೆ. ಜನರು ನದಿಯಿಂದ ದೂರವಿದ್ದು ಸುರಕ್ಷಿತವಾಗಿ ಇರಲು ಎಸ್‌ಪಿ ಡಾ.ಸಿ.ಬಿ.ವೇದಮೂರ್ತಿ ಸೂಚನೆ ನೀಡಿದ್ದಾರೆ.

ಮನೆಗಳಿಗೆ ನುಗ್ಗಿದ ನೀರು

ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಕುನ್ನೂರು ಗ್ರಾಮಸ್ಥರು ನಲುಗಿ ಹೋಗಿದ್ದಾರೆ. ಮನೆಗಳಿಗೆ ನೀರು ನುಗ್ಗಿದ್ದು, ರಾತ್ರಿ ಇಡೀ ನಿದ್ದೆ ಇಲ್ಲದೆ ಪರದಾಡಿದ್ದಾರೆ. ಮಳೆ ನೀರು ಹೊರಹಾಕಲು ಜನರು ಹರಸಾಹಸಪಟ್ಟಿದ್ದಾರೆ.

ಇತ್ತ ಹೇಮಾವತಿ ನದಿ ಉಕ್ಕಿ ಹರಿಯುತ್ತಿದ್ದು, ನೂರಾರು ಎಕರೆ ಭತ್ತದ ಗದ್ದೆಗಳು ನೀರು ಪಾಲಾಗಿದೆ. ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಐಗೂರು ಸಮೀಪದಲ್ಲಿ ಬಿತ್ತನೆಗೆ ಸಿದ್ದವಿದ್ದ ಭತ್ತದ ಗದ್ದೆಗಳು ಮುಳುಗಡೆಯಾಗಿದೆ. ಮಳೆ ಮತ್ತಷ್ಟು ಹೆಚ್ಚಾದರೆ ಸಕಲೇಶಪುರ ತಾಲೂಕಿನ ಹೆತ್ತೂರು ಹಾಗು ಕೊಡ್ಲಿಪೇಟೆ ನಡುವಿನ ರಸ್ತೆ ನೀರು ಹರಿಯುವ ಆತಂಕ ಇದೆ.

ಮಂಗಳೂರಲ್ಲಿ ಶಾಲೆಯ ಆಟದ ಮೈದಾನ ಜಲಾವೃತ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಮಳೆಗೆ ಬಂಟ್ವಾಳದ ನಂದಾವರ ಶಾಲೆಯ ಆಟದ ಮೈದಾನ ಜಲಾವೃತಗೊಂಡಿದೆ. ನದಿ ತೀರದಲ್ಲಿರುವ ನಂದಾವರ ಶಾರದಾ ಪ್ರೌಢ ಶಾಲೆಯ ಆಟದ ಮೈದಾನ ಕೆರೆಯಂತಾಗಿದೆ. ನೇತ್ರಾವತಿ ನದಿ ಉಕ್ಕಿ ಹರಿದ ಪರಿಣಾಮ ನೆರೆ ಬಂದಿದೆ. ಈಗಾಗಲೇ ಮುಂಜಾಗ್ರತ ಕ್ರಮವಾಗಿ ಶಾಲೆಗೆ ತಹಸೀಲ್ದಾರ್‌ ರಜೆಯನ್ನು ಘೋಷಿಸಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version