ಕೊಡಗು: ಜಿಲ್ಲೆಯಾದ್ಯಂತ ಮಳೆಯ ಅಬ್ಬರ ಮುಂದುವರಿದಿದೆ. ಮಳೆಯಿಂದಾಗಿ ಅವಾಂತರ ಸೃಷ್ಟಿಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಭಾರಿ ಮಳೆಯಿಂದಾಗಿ ಸ್ನಾನಗೃಹದ ಗೋಡೆ ಬಿದ್ದು ವೃದ್ಧೆ ಗಂಭೀರ ಗಾಯಗೊಂಡಿದ್ದಾರೆ. ಶನಿವಾರ (ಜು.೨) ಸೋಮವಾರಪೇಟೆ ತಾಲೂಕಿನ ಸುಳುಗಳಲೆ ಕಾಲೋನಿಯಲ್ಲಿ ಮನೆಯ ಗೋಡೆ ಬಿದ್ದಿದ್ದು, ವಸಂತಮ್ಮ (69) ಗಂಭೀರ ಗಾಯಗೊಂಡಿದ್ದಾರೆ. ಅವರ ಕಾಲುಗಳು, ಮುಖ ಮತ್ತು ಕಣ್ಣಿಗೆ ತೀವ್ರ ಪೆಟ್ಟಾಗಿದ್ದು, ಗಾಯಾಳು ವಸಂತಮ್ಮ ಅವರನ್ನು ಹಾಸನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ | Rain News | ಮಳೆಯ ಅಬ್ಬರ, ಗುಡ್ಡ ಕುಸಿತ; ಗೋವಾ, ಕರ್ನಾಟಕ ಸಂಚಾರ ಸ್ಥಗಿತ
ಮಡಿಕೇರಿ ಹೊರವಲಯದ ಮೊಣ್ಣಂಗೇರಿ ಬಳಿ ಮಳೆಯಿಂದಾಗಿ ಮಡಿಕೇರಿ-ಮಂಗಳೂರು ಹೆದ್ದಾರಿ ಮೇಲೆ ಗುಡ್ಡ ಕುಸಿದಿದೆ. 2018ರಲ್ಲಿ ಭೂಕುಸಿತವಾಗಿದ್ದ ಪ್ರದೇಶವಾಗಿದ್ದು, ಆ ಸ್ಥಳದಲ್ಲಿ ತಡೆಗೋಡೆ ನಿರ್ಮಿಸಲಾಗುತ್ತಿತ್ತು. ತಡೆಗೋಡೆ ಮೇಲಿಂದ ಗುಡ್ಡದ ಮಣ್ಣು ಕುಸಿದಿದೆ. ಇದೀಗ ಗುಡ್ಡ ಕುಸಿದ ಪ್ರದೇಶಗಳಿಗೆ NDRF ತಂಡಗಳು ತೆರಳಿ ರಸ್ತೆ ಮೇಲೆ ಬಿದ್ದಿರುವ ಮಣ್ಣನ್ನು ತೆರವುಗೊಳಿಸುತ್ತಿದ್ದಾರೆ. ಸದ್ಯ ರಾಷ್ಟ್ರೀಯ ಹೆದ್ದಾರಿ 275ರ ಕರ್ತೋಜಿ ಬಳಿ ಕಾರ್ಯಾಚರಣೆ ನಡೆಯುತ್ತಿದೆ.
ನಾಪೋಕ್ಲು ವ್ಯಾಪ್ತಿಯಲ್ಲೂ ಮಳೆ ಹೆಚ್ಚಾಗಿದ್ದು, ಮಡಿಕೇರಿ ತಾಲೂಕಿನ ಚೆರಿಯಪರಂಬು ರಸ್ತೆ , ಕಲ್ಲು ಮೊಟ್ಟೆಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಸಂಪರ್ಕ ಸ್ಥಗಿತಗೊಂಡಿದೆ. ಈ ರಸ್ತೆಗಳು 300ಕ್ಕೂ ಹೆಚ್ಚಿನ ಮನೆಗಳಿಗೆ ಸಂಪರ್ಕವನ್ನು ಕಲ್ಪಿಸುತ್ತಿತ್ತು. ಈ ಎಲ್ಲ ಕಡೆಗಳಲ್ಲಿ 2/3 ಅಡಿ ನೀರು ಹರಿಯುತ್ತಿದೆ.
ಭಾಗಮಂಡಲದಿಂದ ತಲಕಾವೇರಿಗೆ ಹೋಗುವ ನಡು ರಸ್ತೆಗೆ ಭೂಮಿ ಕಂಪಿಸಿದ ಭಾಗದಲ್ಲಿ ಬೆಟ್ಟದ ಮೇಲಿಂದ ಬಂಡೆ ಕಲ್ಲು ಬಿದ್ದಿದೆ. ಈ ಬೆಳವಣಿಗೆಗಳು ಸ್ಥಳೀಯರಲ್ಲಿ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.
ಇದನ್ನೂ ಓದಿ | Weather Report | ಕರಾವಳಿಯಲ್ಲಿ ಜುಲೈ 8ರ ವರೆಗೂ ಗುಡುಗು ಸಹಿತ ಭಾರಿ ಮಳೆ; ಮೀನುಗಾರರಿಗೆ ಎಚ್ಚರಿಕೆ