ಬೆಂಗಳೂರು: ರಾಜ್ಯದಲ್ಲಿ ಸೋಮವಾರದಿಂದ ಆರಂಭವಾಗಿರುವ ಮಳೆಯಬ್ಬರ ಮಂಗಳವಾರ ರಾತ್ರಿಯೂ (ಆ.2) ಸಹ (Rain News) ಮುಂದುವರಿದಿದೆ. ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದ್ದು, ಅಪಾಯಮಟ್ಟವನ್ನು ಮೀರಿವೆ. ಈ ವೇಳೆ ಹಳ್ಳವೊಂದರಲ್ಲಿ ನೀರಿನ ಸೆಳೆತಕ್ಕೆ ಸಿಲುಕಿ ಟಾಟಾ ಏಸ್ ಮತ್ತು ಸ್ಕೂಟಿ ಕೊಚ್ಚಿ ಹೋಗಿವೆ. ಇನ್ನು ಹಲವು ಕಡೆ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಕೊಡಗಿನಲ್ಲಿ ಮಳೆಯ ಅಬ್ಬರ ಹೆಚ್ಚಾಗಿದ್ದು ಸಂಪಾಜೆ ಗ್ರಾಮದ ಅರೆಕಲ್ಲು ಬೆಟ್ಟ ಕುಸಿದಿದೆ.
ನೀರಿನ ರಭಸಕ್ಕೆ ಕೊಚ್ಚಿ ಹೋದ ಟಾಟಾ ಏಸ್ ಮತ್ತು ಸ್ಕೂಟಿ
ರಾಯಚೂರಿನಲ್ಲಿ ಹಳ್ಳದ ನೀರಿನ ರಭಸಕ್ಕೆ ಟಾಟಾ ಏಸ್ ಮತ್ತು ಸ್ಕೂಟಿ ಕೊಚ್ಚಿ ಹೋಗಿವೆ. ಸಿರವಾರ ತಾಲೂಕಿನ ಹಳ್ಳಿ ಹೊಸೂರು ಗ್ರಾಮದಲ್ಲಿ ವಿಪರೀತ ಮಳೆಯಿಂದಾಗಿ ಸಿರವಾರ ಮಾನ್ವಿ ನಡುವಿನ ಸಂಪರ್ಕದ ಹಳ್ಳಿ ಹೊಸೂರು ಸೇತುವೆ ಮೇಲೆ ನೀರು ಹರಿಯುತ್ತಿದ್ದರು ಸವಾರರು ವಾಹನ ಚಾಲಾಯಿಸಿದ್ದಕ್ಕೆ ಈ ಅವಾಂತರ ಸೃಷ್ಟಿಯಾಗಿದೆ ಎಂದು ತಿಳಿದು ಬಂದಿದೆ. ಇಬ್ಬರು ವಾಹನ ಸವಾರರನ್ನು ಸ್ಥಳೀಯ ಗ್ರಾಮಸ್ಥರು ರಕ್ಷಣೆ ಮಾಡಿದ್ದಾರೆ.
ಕೊಡಗಿನ ಚೆಂಬು ಗ್ರಾಮದ ಊರುಬೈಲು ಎಂಬಲ್ಲಿ ರಸ್ತೆ ಸಂಪೂರ್ಣ ಹಾನಿಗೊಂಡಿದ್ದು ಜನತೆಯಲ್ಲಿ ಆತಂಕ ಮನೆಮಾಡಿದೆ.
ಮಂಡ್ಯದಲ್ಲಿ ಭಾರಿ ಮಳೆ
ಮಂಡ್ಯದಲ್ಲಿ ಭಾರಿ ಮಳೆಯಿಂದ ನಾಗಮಂಗಲ ತಾಲೂಕಿನ ಕೆ. ಮಲ್ಲೇನಹಳ್ಳಿ ಸೀಗಡಿಗಟ್ಟೆ ಕೆರೆ ಒಡೆದು ಜಮೀನಿಗೆ ಕೆರೆ ನೀರು ನುಗ್ಗಿದೆ. ಪ್ರತಿವರ್ಷ ಕೆರೆ ಕಾಮಗಾರಿ ಹೆಸರಲ್ಲಿ ಲಕ್ಷ ಲಕ್ಷ ಹಣ ವ್ಯಯ ಮಾಡುತ್ತಿದ್ದು, ಕಾಮಗಾರಿ ಸರಿಯಾಗಿ ಮಾಡದೆ ಕೆರೆ ಒಡೆದು ಹೋಗುತ್ತಿದೆ. ಕೆರೆ ಒಡೆದರೂ ಸ್ಥಳಕ್ಕೆ ಆಗಮಿಸದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಮೇಲೆ ಸ್ಥಳೀಯರು ಆಕ್ರೋಶವನ್ನು ಹೊರಹಾಕಿದ್ದಾರೆ.
ಇದನ್ನೂ ಓದಿ | Rain News | ರಾಜಧಾನಿಯಲ್ಲಿ ರಾತ್ರಿಯಿಡೀ ಮಳೆ: ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಮರ, ಮನೆಗಳಿಗೆ ನುಗ್ಗಿದ ನೀರು
ಕೆ.ಆರ್.ಪೇಟೆ ತಾಲೂಕಿನ ದೇವರಹಳ್ಳಿ ಸೇರಿದಂತೆ ಹಲವು ಗ್ರಾಮಗಳಿಗೆ ನೀರು ನುಗ್ಗಿದೆ. ನೂರು ಎಕರೆ ಜಮೀನು ಹಾಗೂ ಬಾಳೆ, ಕಬ್ಬು, ತೆಂಗು, ಅಡಕೆ ಸೇರಿದಂತೆ ಇತರೆ ಬೆಳೆಗಳು ಜಲಾವೃತಗೊಂಡಿವೆ. ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಚಂದಗಿರಿ ಕೊಪ್ಪಲು, ಸುಬ್ಬನಕುಪ್ಪೆ ಗ್ರಾಮಗಳ ಸಂಪರ್ಕ ಕಡಿತಗೊಂಡಿವೆ. ಎರಡು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಮುಳುಗಡೆ ಆಗಿದ್ದು, ವಾಹನ, ಜನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ನೂರಾರು ಎಕರೆ ಜಮೀನು ಕೂಡ ಜಲಾವೃತಗೊಂಡಿವೆ.
ಮಂಡ್ಯ ಕೆ.ಆರ್.ಪೇಟೆ ತಾಲೂಕಿನ ಸೊಳ್ಳೇಪುರ, ಕಿಕ್ಕೇರಿ ಸೇತುವೆ ಮುಳುಗಡೆ ಹಿನ್ನೆಲೆಯಲ್ಲಿ ಸೊಳ್ಳೆಪುರ-ಕಿಕ್ಕೇರಿ ಗ್ರಾಮದ ಸಂಪರ್ಕ ಸ್ಥಗಿತಗೊಂಡಿದೆ. ಸೊಳ್ಳೇಪುರ ಕೆರೆ ಅಪಾಯದಂಚಿನಲ್ಲಿದ್ದು ಸ್ಥಳೀಯರಿಗೆ ಆತಂಕ ಹೆಚ್ಚಾಗಿದೆ.
ದಕ್ಷಿಣ ಕನ್ನಡದಲ್ಲಿ ಭಾರಿ ಮಳೆ
ಕನ್ನಡ ಜಿಲ್ಲೆಯ ಹಲವೆಡೆ ಭಾರಿ ಮಳೆಯಾಗಿದ್ದು, ಸುಳ್ಯ ಹಾಗೂ ಕಡಬ ತಾಲೂಕಿನಲ್ಲಿ ಬುಧವಾರ (ಆ.3) ಶಾಲೆಗೆ ರಜೆ ಘೋಷಿಸಿದೆ. ಪಯಸ್ವಿನಿ ನದಿ ಉಕ್ಕಿ ಹರಿಯುತ್ತಿದ್ದು ಸುಳ್ಯ ತಾಲೂಕಿನ ಕಲ್ಲುಗುಂಡಿ ಹಾಗೂ ಗೂನಡ್ಕದಲ್ಲಿ ಮತ್ತೆ ನೆರೆ ಆತಂಕ ಸೃಷ್ಟಿಯಾಗಿದೆ. ಹಲವು ಮನೆಗಳು ಜಲಾವೃತಗೊಂಡ ಹಿನ್ನೆಲೆಯಲ್ಲಿ ಎನ್‌ಡಿಆರ್‌ಎಫ್ ಕಾರ್ಯಾಚರಣೆ ಮಾಡಿದೆ. ರಾತ್ರಿಯಲ್ಲ ಲೈಫ್ ಬೋಟ್‌ಗಳ ಮೂಲಕ ಜನರನ್ನು ಸ್ಥಳಾಂತರಿಸಲಾಗಿದೆ. ಮಡಿಕೇರಿ ಸುಳ್ಯ ನಡುವಿನ ಪೆರಾಜೆಯಲ್ಲಿ ರಸ್ತೆಯಲ್ಲಿ ನೀರು ನಿಂತಿದ್ದು ಗ್ರಾಮದ ಜನರಿಗೆ ಮನೆಯಿಂದ ಹೊರಬರಲು ಆಗದ ಸ್ಥಿತಿ ನಿರ್ಮಾಣವಾಗಿದೆ. ಎನ್‌ಡಿಆರ್‌ಎಫ್ ಹಾಗೂ ಎಸ್‌ಡಿಆರ್‌ಎಫ್ ಜತೆ ಸ್ಥಳೀಯರಿಂದ ರಕ್ಷಣಾ ಕಾರ್ಯ ಆಗುತ್ತಿದೆ.
ಕಲಬುರಗಿಯಲ್ಲಿ ಮಳೆ
ಕಲಬುರಗಿಯಲ್ಲಿ ವರುಣನ ಅಬ್ಬರ ಮುಂದುವರಿದ್ದಿದ್ದು, ಜಿಲ್ಲೆಯ ಚಿಂಚೋಳಿ ತಾಲೂಕಿನ ದೇಗಲಮಡಿ ಗ್ರಾಮದಲ್ಲಿ ನೀರು ನುಗ್ಗಿದೆ. ನಿರಂತರ ಸುರಿದ ಮಳೆಯಿಂದಾಗಿ ಗ್ರಾಮದಲ್ಲಿ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ತುಂಬಿ ಹರಿಯುತ್ತಿರುವ ಹಳ್ಳ ದಾಟಲು ಗ್ರಾಮಸ್ಥರು ದುಸ್ಸಾಹಸಕ್ಕೆ ಮುಂದಾಗಿದ್ದಾರೆ.
ವಿಜಯಪುರದ ತಾಳಿಕೋಟೆ ತಾಲೂಕಿನ ಭಾಗದಲ್ಲಿ ಪ್ರವಾಹ ಸ್ಥಿತಿ
ವಿಜಯಪುರದಲ್ಲಿ ವಿವಿಧ ಭಾಗಗಳಲ್ಲಿ ಮಳೆಯಾಗಿದ್ದು, ತಾಳಿಕೋಟೆ ತಾಲೂಕಿನ ಭಾಗದಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ. ತಾಳಿಕೋಟೆ ಬಳಿಯ ಡೋಣಿ ನದಿಯ ಹಳೆಯ ಸೇತುವೆ ಮತ್ತೆ ಜಲಾವೃತಗೊಂಡಿದ್ದು, ಹೊಸ ಸೇತುವೆ ಬಿರುಕು ಬಿಟ್ಟು ಶಿಥಿಲವಾದ ಕಾರಣ ಸಂಚಾರ ಸ್ಥಗಿತಗೊಂಡಿದೆ. ಹಳೆಯ ಸೇತುವೆ ಜಲಾವೃತವಾದ ಕಾರಣ ವಿಜಯಪುರ ತಾಳಿಕೋಟೆ ಸಂಪರ್ಕಕ್ಕೆ ಸಮಸ್ಯೆ ಮತ್ತೆ ಎದುರಾಗಿದೆ. ಮನಗೂಳಿ ದೇವಾಪೂರ ರಾಜ್ಯ ಹೆದ್ದಾರಿ 61 ಸಂಚಾರ ಬಂದ್ ಆಗಿದ್ದು, 50ಕಿ.ಮೀ ಸುತ್ತು ಹಾಕಿ ಸಂಚರಿಸುವ ಅನಿವಾರ್ಯ ನಿರ್ಮಾಣವಾಗಿದೆ.
ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಜಯಮಂಗಲಿ
ತುಮಕೂರಿನಲ್ಲಿ ಕೊರಟಗೆರೆ ತಾಲೂಕಿನ ಹಲವು ಗ್ರಾಮಗಳಿಗೆ ಜಯಮಂಗಲಿ ನದಿ ನೀರು ನುಗ್ಗಿದೆ. ಜಯಮಂಗಲಿ ಹಾಗೂ ಸುವರ್ಣಮುಖಿ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಕೊರಟಗೆರೆ ತಾಲೂಕಿನ ಹೊಳವನಹಳ್ಳಿ, ಬೆಳಧರ, ಚೆನ್ನಾಸಾಗರ, ಮಾದಾವರ ಗ್ರಾಮಗಳಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಮಧುಗಿರಿ- ಗೌರಿಬಿದನೂರು ಹೆದ್ದಾರಿಯ ಸೇತುವೆ ಮೇಲೆ ಜಯಮಂಗಲಿ ನೀರು ತುಂಬಿ ಹರಿದಿದೆ.
ಇದನ್ನೂ ಓದಿ | Rain News | ಭಾರಿ ಮಳೆಗೆ ರಾಜ್ಯದಲ್ಲಿ ಒಂದೇ ದಿನ 11 ಸಾವು; ಅಪಾರ ನಷ್ಟ
ಹಾಸನದಲ್ಲಿ ಭಾರಿ ಮಳೆ
ಹಾಸನದ ತಾಲೂಕಿನ ಗಾಣಿಗರಹೊಸಳ್ಳಿ ಗ್ರಾಮದಲ್ಲಿ ಭಾರಿ ಮಳೆಗೆ ಕೆರೆ ಏರಿ ಒಡೆದು ಅಪಾರ ಪ್ರಮಾಣದ ಹಾನಿ ಆಗಿದೆ. ಹೊಲ, ಗದ್ದೆ, ತೋಟಗಳಿಗೆ ನೀರು ನುಗಿದ್ದು, ಜೋಳ, ಭತ್ತದ ಸಸಿಗಳು ಕೊಚ್ಚಿ ಹೋಗಿದೆ. ಹಾಸನದ ಅರಕಲಗೂಡು ತಾಲೂಕಿನ ಮುತ್ತಿಗೆ ಗ್ರಾಮದಲ್ಲಿ ಹೊಲ, ಗದ್ದೆ, ತೋಟಗಳು ಜಲಾವೃತಗೊಂಡಿವೆ. ರಸ್ತೆಯಲ್ಲಿ ಭಾರಿ ಪ್ರಮಾಣದ ನೀರು ಹರಿಯುತ್ತಿರುವುದರಿಂದ ವಾಹನ ಸವಾರರು ಪರದಾಡುವಂತಾಗಿದೆ.
ಹೊಸಪೇಟೆಯ ರಾಯರ ಕೆರೆ ಪ್ರದೇಶದಲ್ಲಿ ಬೆಳೆಗಳು ಜಲಾವೃತ
ವಿಜಯನಗರದಲ್ಲಿ ಹೊಸಪೇಟೆಯ ರಾಯರ ಕೆರೆ ಪ್ರದೇಶದಲ್ಲಿ ಬೆಳೆಗಳು ಜಲಾವೃತಗೊಂಡಿವೆ. ನೂರಾರು ಎಕರೆ ಪ್ರದೇಶದಲ್ಲಿ ಬೆಳೆದ ಬೆಳೆಗಳು, ನವಣೆ, ಮೆಕ್ಕೆಜೋಳ, ತೊಗರಿ ಸೇರಿದಂತೆ ವಿವಿಧ ಬೆಳೆಗಳು ಮಳೆಗಾಹುತಿ ಆಗಿವೆ. ರಾ.ಹೆ. 50 ನಿರ್ಮಾಣ ವೇಳೆ ಮಾಡಿರುವ ಎಡವಟ್ಟೇ ಇದಕ್ಕೆಲ್ಲ ಕಾರಣ ಎಂದು ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ.
ಹಾಸನದಲ್ಲಿ ಕಳೆದ ಹದಿನೈದು ದಿನದ ಹಿಂದೆ ರೈತರು ನಾಟಿ ಮಾಡಲಾಗಿತ್ತು. ಭಾರಿ ಪ್ರಮಾಣದಲ್ಲಿ ನೀರು ಹರಿದು ಭತ್ತದ ಸಸಿಗಳು ಕೊಚ್ಚಿ ಹೋಗಿವೆ. ಕೆರೆ ಕೋಡಿ ಒಡೆದ ಪರಿಣಾಮ ಅಪಾರ ಪ್ರಮಾಣದ ಬೆಳೆ ಹಾನಿ ಆಗಿದೆ. ನೂರಾರು ಎಕರೆ ಪ್ರದೇಶದ ಗದ್ದೆಗಳು, ಹೊಲ, ತೋಟಗಳು ಜಲಾವೃತಗೊಂಡಿವೆ.
ಕೊಳ್ಳೇಗಾಲ-ಸತ್ಯಮಂಗಲ ಅಂತರ ರಾಜ್ಯ ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತ
ಚಾಮರಾಜನಗರದಲ್ಲಿ ರಾತ್ರಿ ಸುರಿದ ಮಳೆಯಿಂದಾಗಿ ಹನೂರು ತಾಲೂಕು ಕೊರಮನಕತ್ತರಿ ಬಳಿ ಜೆ.ವಿಲೇಜ್ ಹಳ್ಳದ ಸೇತುವೆ ಮೇಲೆ ಭಾರಿ ಪ್ರಮಾಣದ ನೀರು ಉಕ್ಕಿ ಹರಿಯುತ್ತಿದೆ. ಕೊಳ್ಳೇಗಾಲ-ಸತ್ಯಮಂಗಲ ಅಂತಾರಾಜ್ಯ ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ. ಸೇತುವೆ ತೂತು ಬಿದ್ದು ಶಿಥಿಲಗೊಂಡಿದೆ ಎಂದು ಸ್ಥಳೀಯರ ಆರೋಪ ಮಾಡಿದ್ದಾರೆ. ಸೇತುವೆ ದುರಸ್ತಿಗೆ ಮುಂದಾಗದ ಪಿ.ಡಬ್ಲ್ಯು.ಡಿ ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ. ಬೇರೆ ಮಾರ್ಗದಲ್ಲಿ ಸಂಚಾರ ನಿರ್ಮಾಣ ಆಗಿದೆ.
ಇದನ್ನೂ ಓದಿ | Rain news | ಮಳೆ ರಭಸಕ್ಕೆ ಕುಸಿದು ಬಿದ್ದ ಕುರಿ ಶೆಡ್ಡು; ಕುರಿ, ಮೇಕೆಗಳ ಸಾವು