ಕೊಡಗು: ಕೊಡಗು ಜಿಲ್ಲೆಯಲ್ಲಿ ಮಳೆಯ ಆರ್ಭಟ ಮುಂದುವರಿದಿದ್ದು, ಕಾವೇರಿ ನದಿ ನೀರು ಕೆಲವು ತಗ್ಗು ಪ್ರದೇಶಗಳಿಗೆ ನುಗ್ಗಿದೆ.
ಕುಶಾಲನಗರದ ಸಾಯಿ ಬಡಾವಣೆಯ ಮನೆಗಳಿಗೆ ನೀರು ನುಗ್ಗಿದ ಪರಿಣಾಮ ರಾತ್ರೋ ರಾತ್ರಿ ಕೆಲ ಮನೆಗಳ ನಿವಾಸಿಗಳು ಮನೆ ಖಾಲಿ ಮಾಡಿದ್ದಾರೆ. ಹಾರಂಗಿ ಜಲಾಶಯದಿಂದ 30,000 ಕ್ಯೂಸೆಕ್ಸ್ ನೀರು ನದಿಗೆ ಬಿಟ್ಟ ಹಿನ್ನೆಲೆಯಲ್ಲಿ ಕುಶಾಲನಗರದ ಸಾಯಿ ಬಡಾವಣೆಗೆ ನೀರು ನುಗ್ಗಿದೆ. ಮನೆಗೆ ನೀರು ನುಗ್ಗುತ್ತಿದಂತೆ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗುವ ಆತಂಕ ಇದೆ, ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಜಿಲ್ಲಾಡಳಿತ ಮೊದಲೇ ಸೂಚಿಸಿತ್ತು.
ನೇಕಾರ ಕಾಲನಿಗೆ ನುಗ್ಗಿದ ನಾಲೆ ನೀರು
ಬೆಳಗಾವಿ: ಸುರಿಯುತ್ತಿರುವ ಮಳೆಯಿಂದ ಬೆಳಗಾವಿಯ ಸಿದ್ಧಾರೂಢ ನಗರದ ನೇಕಾರ ಕಾಲನಿಗೆ ಹತ್ತಿರದ ಬಳ್ಳಾರಿ ನಾಲೆಯ ನೀರು ನುಗ್ಗಿದೆ. ನಾಲಯಿಂದ ಸುಮಾರು ಒಂದು ಕಿಮೀ ಈಚೆಗೂ ವ್ಯಾಪಿಸಿ ನೀರು ಮನೆಗಳಿಗೆ ನುಗ್ಗಿದ್ದು, ನಾಲೆಯ ಅಕ್ಕಪಕ್ಕದ ಜಮೀನು ದೊಡ್ಡ ಕೆರೆಯಂತೆ ಭಾಸವಾಗುತ್ತಿದೆ.
ನೇಕಾರ ಕಾಲನಿಯ ಜನ ರಾತ್ರಿ ಇಡೀ ಜಾಗರಣೆ ಮಾಡಿದ್ದಾರೆ. ರೈತರು ಬೆಳೆದ ಕಬ್ಬು, ಭತ್ತ ಎಲ್ಲವೂ ನೀರಿನಲ್ಲಿ ಹೋಮವಾದ ಸ್ಥಿತಿಯಾಗಿದೆ. ಮನೆಯಿಂದ ಹೊರಗೆ ಹೋಗಲಾಗದೆ ಹಲವರು ಟೆರೇಸ್ ಏರಿ ಕುಳಿತಿದ್ದಾರೆ. ಈ ಹಿಂದೆ ಬಳ್ಳಾರಿ ನಾಲೆಯ ಹೂಳೆತ್ತಲು ನೇಕಾರ ಕಾಲನಿಯ ಜನ ಆಗ್ರಹಿಸಿದ್ದರು.
ಹಾಸನದಲ್ಲಿ ಶಾಲೆಗಳಿಗೆ ರಜೆ
ಹಾಸನ: ಹಾಸನ ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರಿದಿದೆ. ಕಳೆದ ನಾಲ್ಕು ದಿನಗಳಿಂದ ಹಾಸನ ನಗರ, ಸಕಲೇಶಪುರ, ಆಲೂರು ಹಾಗೂ ಬೇಲೂರು ತಾಲೂಕುಗಳಲ್ಲಿ ಭಾರಿ ಮಳೆಯಾಗುತ್ತಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಇಂದು ಜಿಲ್ಲೆಯ ಐದು ತಾಲೂಕುಗಳ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಹಾಸನ, ಸಕಲೇಶಪುರ, ಆಲೂರು, ಬೇಲೂರು ಹಾಗೂ ಅರಕಲಗೂಡು ತಾಲೂಕುಗಳಲ್ಲಿ ಅಂಗನವಾಡಿ ಸೇರಿದಂತೆ ಶಾಲೆಗಳಿಗೆ ಜಿಲ್ಲಾಧಿಕಾರಿ ಸತ್ಯಭಾಮಾ ರಜೆ ಘೋಷಿಸಿದ್ದಾರೆ.
ಇದನ್ನೂ ಓದಿ: Rain News: ಮಳೆಗೆ ಮನೆ ಗೋಡೆ ಕುಸಿದು ಮಹಿಳೆ ಸಾವು; ಕಲ್ಯಾಣಿಯಲ್ಲಿ ಮುಳುಗಿ ವಿದ್ಯಾರ್ಥಿ ಮೃತ್ಯು