ಕೊಡಗು: ಕಳೆದ ಹತ್ತು ದಿನಗಳಿಂದ ಜಿಲ್ಲೆಯಾದ್ಯಂತ ನಿರಂತರವಾಗಿ ಮಳೆ ಆಗುತ್ತಿದ್ದು, ವಾರದಿಂದೀಚೆಗೆ ಮಳೆ ಅವಾಂತರಗಳೂ ಹೆಚ್ಚಾಗಿವೆ. ಜಿಲ್ಲೆಯ ಅಲ್ಲಲ್ಲಿ ಗುಡ್ಡ ಕುಸಿತ ಆರಂಭವಾಗಿರುವುದು ಸ್ಥಳೀಯ ಜನತೆಯನ್ನು ಮತ್ತಷ್ಟು ಭಯಕ್ಕೆ ದೂಡಿದೆ. ಪರಿಸ್ಥಿತಿ ಹೀಗೇ ಮುಂದುವರಿದರೆ ಏನು..? ಎನ್ನುವ ಆತಂಕ ಮನೆ ಮಾಡಿದೆ.
ಜಿಲ್ಲೆಯ ಮದೆ ಪಂಚಾಯಿತಿ ವ್ಯಾಪ್ತಿಯ ಬೆಟ್ಟತ್ತೂರು ಗ್ರಾಮದಲ್ಲಿ ಸಣ್ಣ ಪ್ರಮಾಣದಲ್ಲಿ ಗುಡ್ಡ ಕುಸಿದ ವರದಿಯಾಗಿದೆ. ಕಳೆದ 9 ದಿನಗಳಿಂದ ಆಗಾಗ ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಭೂಕಂಪನವಾಗುತ್ತಿರುವುದು ತೀವ್ರ ಕಳವಳವನ್ನು ಹುಟ್ಟುಹಾಕಿದ್ದು, ಚೆಂಬು, ಕರಿಕೆ, ಮಡಿಕೇರಿ ಸೇರಿದಂತೆ ಮತ್ತಿತರ ಕಡೆಗಳಲ್ಲಿ ಭೂಮಿ ಕಂಪಿಸಿದೆ. ಇದು ಸಹ ಗುಡ್ಡ ಕುಸಿತಕ್ಕೆ ಪ್ರಮುಖ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಮಡಿಕೇರಿ, ಸೋಮವಾರಪೇಟೆ, ವಿರಾಜಪೇಟೆ, ಪೊನ್ನಂಪೇಟೆ ಭಾಗದಲ್ಲೂ ಶುಕ್ರವಾರದಿಂದ (ಜೂ.30) ನಿರಂತರ ಮಳೆ ಸುರಿಯುತ್ತಿದೆ.
ಸರಣಿ ಭೂಕಂಪನದ ಬೆನ್ನಲ್ಲೆ ಚೆಂಬು ಗ್ರಾಮದಲ್ಲಿ ಭೂ ಕುಸಿತವಾಗಿದ್ದು, ಗ್ರಾಮದ ಪೂಜಾರಿಗದ್ದೆ ಗಿರಿಧರ ಎಂಬುವರ ಮನೆ ಮೇಲೆ ಮುಂಜಾನೆ 3 ಗಂಟೆ ಸಮಯದಲ್ಲಿ ಮಣ್ಣು ಕುಸಿದಿದೆ.
ಇದನ್ನೂ ಓದಿ | ಕೊಡಗು ಜಿಲ್ಲೆಯಾದ್ಯಂತ ವರುಣನ ಅಬ್ಬರ, ರಾಜ್ಯದಲ್ಲಿ ಮುಂಗಾರು ಮಳೆ ಚುರುಕು
ಹಾರಂಗಿ ಜಲಾಶಯದಿಂದ ನೀರು ಹೊರಕ್ಕೆ
ಜಿಲ್ಲೆಯ ಕುಶಾಲನಗರ ತಾಲೂಕಿನ ಹಾರಂಗಿ ಜಲಾಶಯವು ಭರ್ತಿ ಹಂತ ತಲುಪಿದ್ದು, ಈಗಾಗಲೇ 10 ಸಾವಿರ ಕ್ಯೂಸೆಕ್ ನೀರನ್ನು ಹೊರಬಿಡಲಾಗಿದೆ. ಜಲಾಶಯದ ಗರಿಷ್ಠ ಮಿತಿ 2,859 ಅಡಿಗಳಾಗಿದ್ದು, ಹಾಲಿ ೨,೮೫೩ ಅಡಿಗಳಷ್ಟು ನೀರಿದೆ. ಮುನ್ನೆಚ್ಚರಿಕೆ ಕ್ರಮವಾಗಿ ನೀರನ್ನು ಹೊರಬಿಟ್ಟಿರುವುದಾಗಿ ಹಾರಂಗಿ ಜಲಾಶಯದ ಅಧಿಕಾರಿಗಳು ತಿಳಿಸಿದ್ದಾರೆ. ಜಲಾಶಯದಿಂದ ನೀರು ಹರಿಸುವುದಕ್ಕೂ ಮುನ್ನ ಶಾಸಕ ಅಪ್ಪಚ್ಚು ರಂಜನ್ ಬಾಗಿನ ಅರ್ಪಿಸಿದ್ದಾರೆ.
ನೈಋತ್ಯ ಮುಂಗಾರು ಚುರುಕು
ರಾಜ್ಯದಲ್ಲಿ ನೈಋತ್ಯ ಮುಂಗಾರು ಚುರುಕಾಗಿದ್ದು, ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ ಬೆಂಗಳೂರಿನಲ್ಲಿ ಇನ್ನೆರಡು ದಿನ ಮಳೆ ಆಗುವ ನಿರೀಕ್ಷೆ ಇದೆ. ಇನ್ನೂ ಮೂರು ದಿನ ಕರಾವಳಿ ಜಿಲ್ಲೆಯಲ್ಲಿ ಕಟ್ಟೆಚ್ಚರ ಘೋಷಿಸಲಾಗಿದೆ.
ಜುಲೈ ೨ರಂದು ಚಾಮರಾಜನಗರ ಹಾಗೂ ಜುಲೈ ೪ರಂದು ಬೆಳಗಾವಿ, ಹಾವೇರಿ, ಧಾರಾವಾಡದಲ್ಲಿ ಕಟ್ಟೆಚ್ಚರ ಘೋಷಿಸಲಾಗಿದೆ. ಉತ್ತರ ಒಳನಾಡಿನಲ್ಲಿ ಎರಡು ದಿನ ಉತ್ತಮ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಒಳನಾಡಿನ ಹಲವೆಡೆ ನಾಲ್ಕು ದಿನ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಮಾಹಿತಿಯನ್ನು ನೀಡಿದೆ. ಅಲ್ಲದೆ, ಕರಾವಳಿ ತೀರದಲ್ಲಿ ಪ್ರತಿ ಗಂಟೆಗೆ ೪೦-೫೦ ಕಿ.ಮೀ. ವೇಗದಲ್ಲಿ ಗಾಳಿಯ ಚಲನೆ ಇರುವುದರಿಂದ ಮೀನುಗಾರರು ಸಮುದ್ರಕ್ಕಿಳಿಯದಂತೆ ಸೂಚನೆ ನೀಡಲಾಗಿದೆ.
ಇದನ್ನೂ ಓದಿ | Weather report | ರಾಜ್ಯದಲ್ಲಿ ಮುಂದಿನ 48 ಗಂಟೆಗಳಲ್ಲಿ ಭಾರಿ ಮಳೆ ನಿರೀಕ್ಷೆ