Site icon Vistara News

Rain News | ತುಂಗಭದ್ರಾ ಡ್ಯಾಮ್‌ನಿಂದ ನೀರು ಬಿಡುಗಡೆ, ರಾಯರ ಜಪದ ಕಟ್ಟೆ ಜಲಾವೃತ

Rain News

ರಾಯಚೂರು : ತುಂಗಭದ್ರಾ ಜಲಾಶಯದಿಂದ ಅಧಿಕ ಪ್ರಮಾಣದಲ್ಲಿ ನೀರು ಬಿಟ್ಟ ಪರಿಣಾಮ ಬಿಚ್ಚಾಲಿ ಗ್ರಾಮದ ರಾಘವೇಂದ್ರ ಸ್ವಾಮಿಗಳ ಜಪದ ಕಟ್ಟೆ ನೀರಿನಲ್ಲಿ ಮುಳುಗಡೆಗೊಂಡಿದೆ.

ಜಿಲ್ಲೆಯ ಬಿಚ್ಚಾಲಿ ಗ್ರಾಮದಲ್ಲಿನ ಮಠದಲ್ಲಿ 650 ವರ್ಷಗಳ ಹಿಂದೆ ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳು ತಪಸ್ಸು ‌ಮಾಡಿದ್ದರು. ಅಪ್ಪಣಾಚಾರ್ಯ ಎಂಬವರು ರಾಯರು ತಪಸ್ಸು ಮಾಡಿದ ಜಾಗದಲ್ಲಿ ಏಕಶಿಲಾ ಬೃಂದಾವನ ನಿರ್ಮಿಸಿದ್ದರು.

ಇದೀಗ ಈ ಕ್ಷೇತ್ರ ಪ್ರವಾಹ ಭೀತಿ ಎದುರಿಸುತ್ತಿದೆ. ಮಲೆನಾಡು ಭಾಗಗಳಲ್ಲಿ ವಿಪರೀತ ಮಳೆ ಸುರಿಯುತ್ತಿರುವ ಪರಿಣಾಮ ತುಂಗಭದ್ರಾ ಜಲಾಶಯ ಅವಧಿಗೂ ಮುನ್ನವೇ ಭರ್ತಿಯಾಗಿದೆ. ಜಲಾಶಯಕ್ಕೆ ಒಳ ಹರಿವಿನ ಪ್ರಮಾಣ ಹೆಚ್ಚಾಗಿದೆ.

ಇದನ್ನೂ ಓದಿ | Weather Report: ಕರಾವಳಿ ಭಾಗಕ್ಕೆ ಭಾರಿ ಮಳೆ ಮುನ್ಸೂಚನೆ: ಮೀನುಗಾರಿಕೆಗೆ ಇಳಿಯದಂತೆ ಅಲರ್ಟ್‌

ಒಳಹರಿವು ಹೆಚ್ಚಾದಂತೆ ಜಲಾಶಯದ ಆಡಳಿತ ಮಂಡಳಿ ಮುನ್ನೆಚ್ಚರಿಕೆ ವಹಿಸಿದ್ದು, ತುಂಗಭದ್ರಾ ಜಲಾಶಯದಿಂದ 1 ಲಕ್ಷಕ್ಕೂ ಹೆಚ್ಚು ಕ್ಯೂಸೆಕ್ಸ್ ನೀರು ಬಿಟ್ಟಿದೆ. ಇದರಿಂದ ರಾಯರ ಜಪದ ಕಟ್ಟೆ ಬಳಿಯಿರುವ ಕಾಣೆಕೆ ಡಬ್ಬಿ, ಶಿವಲಿಂಗ ಸೇರಿದಂತೆ ಇನ್ನಿತರ ಪರಿಕರಗಳು ಸಂಪೂರ್ಣ ಜಲಾವೃತ ಆಗಿದೆ.

ಜಪದ ಕಟ್ಟೆ ಬಳಿ ತುಂಗಭದ್ರಾ ನದಿ ರಭಸದಿಂದ ಹರಿಯುತ್ತಿದ್ದು ಸಾರ್ವಜನಿಕರು ನದಿಗೆ ಇಳಿಯದಂತೆ ಭಕ್ತರ ಮೇಲೆ ಕಣ್ಗಾವಲು ಇಡಲಾಗಿದೆ. ಕರ್ನಾಟಕ ಮಾತ್ರವಲ್ಲದೆ ಹೊರ ರಾಜ್ಯಗಳ ಭಕ್ತರು ಇಲ್ಲಿ ಆಗಮಿಸಿ ದರ್ಶನ ಪಡೆಯುತ್ತಾರೆ. ಹಾಗಾಗಿ ನದಿ ಪಾತ್ರದಲ್ಲಿ 8 ಜನ ಸೆಕ್ಯುರಿಟಿ ಸಿಬ್ಬಂದಿ ನೇಮಕ ಮಾಡಲಾಗಿದ್ದು ತಾತ್ಕಾಲಿಕವಾಗಿ ರಾಯರ ಜಪದ ಕಟ್ಟೆ ಬಳಿಗೆ ಭಕ್ತರಿಗೆ ನಿರ್ಬಂಧ ಹೇರಲಾಗಿದೆ.

ಇದನ್ನೂ ಓದಿ | Rain News | ರಾಜ್ಯಾದ್ಯಂತ ಇನ್ನೆರಡು ದಿನ ಮಳೆಯಬ್ಬರ, ಮಳೆಹಾನಿಗೆ ಜನ ತತ್ತರ!

Exit mobile version