Site icon Vistara News

Rain News : ಮಳೆ ಹೊಡೆತಕ್ಕೆ ಗುಡ್ಡಕುಸಿತ; ಬಿಸಿಲೆ- ಸುಬ್ರಹ್ಮಣ್ಯ, ಮಡಿಕೇರಿ-ಮಂಗಳೂರು ರಸ್ತೆ ಬ್ಲಾಕ್

Bisile Ghat block

ಹಾಸನ: ರಾಜ್ಯದ ನಾನಾ ಭಾಗಗಳಲ್ಲಿ ಮಳೆಯ ಹೊಡೆತದಿಂದಾಗಿ (Rain News) ಗುಡ್ಡ ಬೆಟ್ಟಗಳೇ ಉರುಳುತ್ತಿವೆ. ಹೀಗಾಗಿ ಅಲ್ಲ್ಲಿ ರಸ್ತೆ ಸಂಚಾರಕ್ಕೆ (Road block) ತೊಡಕಾಗಿವೆ. ಕೆಲವು ಕಡೆ ವಾಹನಗಳು ಅರ್ಧ ದಾರಿಯಲ್ಲಿ ಸಿಕ್ಕಿ ಹಾಕಿಕೊಂಡಿವೆ. ಮಳೆ ಪರಿಸ್ಥಿತಿ ಇನ್ನೂ ಬಿಗಡಾಯಿಸುವ ಸ್ಥಿತಿ ಕಂಡುಬಂದಿದೆ (Weather Report)‌

ಭೂಕುಸಿತದಿಂದಾಗಿ ಮಡಿಕೇರಿ- ಮಂಗಳೂರು ಹೆದ್ದಾರಿ ಬಂದ್‌

ಮಡಿಕೇರಿ ಸಮೀಪದ ಮದೆನಾಡು ಸಮೀಪ ಕರ್ತೋಜೆಯಲ್ಲಿ ಮರ ಸಹಿತ ಭೂ ಕುಸಿತ ಸಂಭವಿಸಿದ್ದರಿಂದ ಮಡಿಕೇರಿ-ಮಂಗಳೂರು ರಾಷ್ಠ್ರೀಯ ಹೆದ್ದಾರಿ 275 ಬಂದ್ ಆಗಿದೆ. ಹೀಗಾಗಿ ಹೆದ್ದಾರಿಯಲ್ಲಿ ನೂರಾರು ವಾಹನಗಳು ಸಾಲುಗಟ್ಟಿ ನಿಂತಿವೆ. ರಸ್ತೆಯ ಒಂದು ಬದಿ ಮಣ್ಣು-ಮರ ತೆರವಿಗೆ ಹರಸಾಹಸ ನಡೆಯುತ್ತಿದೆ. ಕೊಯನಾಡು ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ.

ಸಕಲೇಶಪುರ ಬಳಿ ಹೆದ್ದಾರಿ ಕುಸಿತ ಆತಂಕ

ಮಂಗಳೂರು- ಬೆಂಗಳೂರು ಹೆದ್ದಾರಿಯಲ್ಲಿ ರಸ್ತೆ ಅಪಾಯದಲ್ಲಿದೆ

ಹಾಸನ ಜಿಲ್ಲೆಯ ಸಕಲೇಶಪುರ ಪಟ್ಟಣದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂಕುಸಿತ ಆತಂಕ ಎದುರಾಗಿದೆ. ಸಕಲೇಶಪುರ ಪಟ್ಟಣದ ಸಮೀಪದಲ್ಲಿ ಗುಡ್ಡದಲ್ಲಿ ಒಂದೊಂದೇ ಮರಗಳು ರಸ್ತೆಗೆ ಬೀಳುತ್ತಿದೆ. ಎತ್ತರ ಪ್ರದೇಶದಲ್ಲಿರುವ ತೆಂಗಿನಮರ, ಸಿಲ್ವರ್ ಸೇರಿ ಅನೇಕ ಮರಗಳು ರಸ್ತೆಗೆ ಉರುಳಿಬಿದ್ದಿವೆ.

ಗುಡ್ಡ ಕುಸಿತದಿಂದ ಸಕಲೇಪುರ ಬಳಿ ರಸ್ತೆ ಸಂಚಾರಕ್ಕೆ ಅಡಚಣೆ

ಮಂಗಳೂರು – ಬೆಂಗಳೂರು ಸಂಪರ್ಕ ಕಲ್ಪಿಸೋ ರಾಷ್ಟ್ರೀಯ ಹೆದ್ದಾರಿ ಇದಾಗಿದ್ದು, ಅವೈಜ್ಞಾನಿಕ ಕಾಮಗಾರಿಯಿಂದ ಗುಡ್ಡ ಕುಸಿಯುತ್ತಿದೆ ಎಂಬ ಆರೋಪವಿದೆ. ಸಕಲೇಶಪುರ ಪಟ್ಟಣದಲ್ಲಿ ಬೈಪಾಸ್ ರಸ್ತೆ‌ಗಾಗಿ ಈ ಕಾಮಗಾರಿ ನಡೆಯುತ್ತಿದೆ. ಗುಡ್ಡದ ಮೇಲ್ಬಾಗದಲ್ಲಿ ವಾಸವಾಗಿರುವ ಹತ್ತಾರು ಕೂಲಿ ಕಾರ್ಮಿಕರು ಇದರಿಂದ ಆತಂಕಿತರಾಗಿದ್ದು ಯಾವಾಗ ತಮ್ಮ ಮನೆ ಬೀಳುತ್ತದೋ ಎಂಬ ಭಯದಲ್ಲಿದ್ದಾರೆ.

ಬಿಸಿಲೆ-ಸುಬ್ರಹ್ಮಣ್ಯ ರಸ್ತೆ ಸಂಪೂರ್ಣ ಬಂದ್‌

ಬಿಸಿಲೆ ಘಾಟಿ ರಸ್ತೆಯಲ್ಲಿ ಅಯೋಮಯ ಪರಿಸ್ಥಿತಿ

ಸಕಲೇಶಪುರ ತಾಲೂಕಿನ ಬಿಸಿಲೆ ಮಾರ್ಗದ ಮೂಲಕ ತೆರಳುವ ಸುಬ್ರಹ್ಮಣ್ಯ ರಸ್ತೆ ಸಂಪೂರ್ಣ ಬಂದ್ ಆಗಿದೆ. ಬಿಸಿಲೆ‌ ಸಮೀಪದಲ್ಲಿ ರಸ್ತೆಗೆ ಭಾರಿ ಪ್ರಮಾಣದ ಮಣ್ಣು ಕುಸಿದು ಬಿದ್ದಿದೆ. ಈ ಭಾಗದಲ್ಲಿ ಬೆಳಗ್ಗೆ ಮರ ಬಿದ್ದು ಕೆಲ ಗಂಟೆ ಸ್ಥಗಿತವಾಗಿತ್ತು. ನಂತರ ಗುಡ್ಡ ಕುಸಿದು ಮತ್ತೆ ಸಂಪರ್ಕ ಸಂಪೂರ್ಣ ಸ್ಥಗಿತವಾಗಿದೆ.

ಧಾರವಾಡ ಜಿಲ್ಲೆಯಲ್ಲಿ ವರುಣನ ಆರ್ಭಟ

ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನಲ್ಲಿ ಬೇಡ್ತಿ ಹಳ್ಳ ತುಂಬಿ ಹರಿಯುತ್ತಿದ್ದು, ಹಿರೇಹೊನ್ನಳ್ಳಿ ಮತ್ತು ಬೇಗೂರು ಮಧ್ಯದ ಸೇತುವೆ ಮುಳುಗಡೆಯಾಗಿದೆ. ರಸ್ತೆ ಸೇತುವೆ ಮೇಲೆ ಉಕ್ಕಿ ಹರಿಯುತ್ತಿರುವುದರಿಂದ ಹಿರೇಹೊನ್ನಳ್ಳಿ – ಬೇಗೂರು ಮಧ್ಯದ ಬಸ್, ವಾಹನ ಸಂಚಾರ ಸ್ಥಗಿತವಾಗಿದೆ.

ಸಿದ್ದಾಪುರ ತಾಲೂಕಿನ ಬಿಳಗಿ ಬಳಿ ಗುಡ್ಡ ಕುಸಿತ

ಉ.ಕ ಜಿಲ್ಲೆಯಾದ್ಯಂತ ಧಾರಾಕಾರ ಮಳೆ ಹಿನ್ನೆಲೆಯಲ್ಲಿ ಸಿದ್ದಾಪುರ ತಾಲೂಕಿನ ಬಿಳಗಿ ಬಳಿ ಗುಡ್ಡ ಕುಸಿತವಾಗಿದೆ. ಇದರಿಂದ ಕುಮಟಾ-ಕೊಡಮಡಗಿ ರಾಜ್ಯ ಹೆದ್ದಾರಿ ಸಂಪರ್ಕ ಕಡಿತವಾಗಿದೆ.

ತಾಲೂಕಿನಲ್ಲಿ ಕಳೆದ ಎರಡು ವಾರಗಳಿಂದ ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಭೂಮಿ ಸಂಪೂರ್ಣ ತೇವಗೊಂಡ ಪರಿಣಾಮ ಧರೆ ಕುಸಿತವಾಗಿದೆ. ಸುಮಾರು ಐದು ಗಂಟೆಗಳ ಕಾಲ ರಾಜ್ಯ ಹೆದ್ದಾರಿಯಲ್ಲಿ ವಾಹನ ಸಂಚಾರ ಬಂದ್ ಆಗಿದೆ. ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ಜೆಸಿಬಿ ಮೂಲಕ ಮಣ್ಣು ತೆರವು ಮಾಡಲಾಗಿದೆ.

ಬೆಳಗಾವಿಯಲ್ಲಿ ಎರಡು ಸೇತುವೆ ಮುಳುಗಡೆ

ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಸೇತುವೆಗಳು ಘಟಪ್ರಭಾ ನದಿಯ ಅಬ್ಬರಕ್ಕೆ ಮುಳುಗಿವೆ. ಘಟಪ್ರಭಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಅವರಾದಿ ನಂದಗಾಂವ್ ಮತ್ತು ಸುಣಧೋಳಿ ಮೂಡಲಗಿ ಸೇತುವೆಗಳು ಮುಳುಗಿವೆ.

ಸೇತುವೆ ಮುಳುಗಡೆಯಾಗಿದ್ದರಿಂದ ನಾಲ್ಕು ಹಳ್ಳಿಗಳ ಸಂಚಾರ ಸ್ಥಗಿತವಾಗಿದೆ. ಹೀಗಾಗಿ ಜನರು ಅನ್ಯ ಮಾರ್ಗವನ್ನು ಬಳಸಿ ಸುತ್ತುವರೆದು ಸಾಗುತ್ತಿದ್ದಾರೆ.

ಬೈಂದೂರಿನಲ್ಲಿ ಸಂಪರ್ಕ ರಸ್ತೆ ನೀರುಪಾಲು

ಸಂಪೂರ್ಣ ಕೊಚ್ಚಿ ಹೋದ ಸಂಪರ್ಕ ರಸ್ತೆ

ಉಡುಪಿ ಜಿಲ್ಲೆಯ ಬೈಂದೂರು ಪಟ್ಟಣ ಪಂಚಾಯತ್ ವ್ಯಾಪ್ತಿಯ ತಗ್ಗರ್ಸೆ ನಿರೋಡಿಯಲ್ಲಿ ಮಳೆಯ ಆರ್ಭಟಕ್ಕೆ ಭಾನುವಾರ ಅಪಾಯದ ಸ್ಥಿತಿಯಲ್ಲಿದ್ದ ರಸ್ತೆ ಸೋಮವಾರದ ಹೊತ್ತಿಗೆ ಸಂಪೂರ್ಣವಾಗಿ ಕೊಚ್ಚಿ ಹೋಗಿದೆ.

3 ಲಕ್ಷ ಅನುದಾನದಲ್ಲಿ ನಿರ್ಮಾಣವಾಗಿದ್ದ ಕಿರು ಸೇತುವೆ ಇದಾಗಿದ್ದು ಪೂರ್ತಿ ನಾಶವಾಗಿದೆ. ಸಂಪರ್ಕ ರಸ್ತೆಯಲ್ಲಿ ಹರಿಯುತ್ತಿದ್ದ ಕಿರು ಹೊಳೆಗೆ ಅಡ್ಡಲಾಗಿ ಮಾಡಲಾಗಿದ್ದ ಕಾಮಗಾರಿ ಇದು.

ಕೊಡಗು ಜಿಲ್ಲೆ ಭಾಗಮಂಡಲ ಸಂಪೂರ್ಣ ಜಲಾವೃತ

Exit mobile version