ರಾಯಚೂರು: ರಾಜ್ಯಾದ್ಯಂತ ಸುರಿಯುತ್ತಿರುವ ಧಾರಾಕಾರ ಮಳೆ (Rain news) ಜನರ ನಿದ್ದೆಗೆಡಿಸಿದ್ದು, ಜಿಲ್ಲೆಯ ಲಿಂಗಸುಗೂರು ತಾಲೂಕಿನ ಬಗಡಿ ತಾಂಡಾದಲ್ಲಿ ಲಕ್ಷ್ಮೀಬಾಯಿ ಎಂಬುವವರ ಕುರಿ ಶೆಡ್ ಮಳೆಯ ರಭಸಕ್ಕೆ ಕುಸಿದು ಬಿದ್ದಿದೆ. ಸುಮಾರು 100ಕ್ಕೂ ಹೆಚ್ಚು ಕುರಿ, ಮೇಕೆಗಳು ಶೆಡ್ ಅವಶೇಷದಡಿ ಸಿಲುಕಿದ್ದವು.
ತಾಂಡಾ ಗ್ರಾಮಸ್ಥರಿಂದಲೇ ರಕ್ಷಣಾ ಕಾರ್ಯ ನಡೆದಿದ್ದು, ನಾಲ್ಕುಕ್ಕೂ ಹೆಚ್ಚು ಕುರಿ-ಮೇಕೆಗಳು ಮೃತಪಟ್ಟಿದ್ದು, ಉಳಿದ ಕುರಿ-ಮೇಕೆಗಳಿಗೆ ಗಾಯಗಳಾಗಿವೆ. ಮೃತಪಟ್ಟ ಕುರಿ, ಮೇಕೆ ಕಂಡು ಮಾಲೀಕರು ಕಣ್ಣೀರು ಹಾಕುತ್ತಾ ಗೋಳಾಡುತ್ತಿದ್ದ ಚಿತ್ರಣ ಕಂಡು ಬಂತು. ಮಂಗಳವಾರ ನಸುಕಿನ ಜಾವ ಈ ದುರ್ಘಟನೆ ನಡೆದಿದ್ದು, ತಾಲೂಕು ಪಶುವೈದ್ಯಾಧಿಕಾರಿ, ತಹಸೀಲ್ದಾರ್ ಸೇರಿ ಯಾವೊಬ್ಬ ಅಧಿಕಾರಿ ಭೇಟಿ ನೀಡದೇ ಇರುವುದಕ್ಕೆ ಬಗಾಡಿ ತಾಂಡಾ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.
ಪ್ರಾಣ ಲೆಕ್ಕಿಸದೆ ಸೇತುವೆ ದಾಟಿದ ದಂಪತಿ
ರಾಯಚೂರು ತಾಲೂಕಿನ ಇಡಪನೂರು ಗ್ರಾಮದ ಸೇತುವೆ ಜಲಾವೃತವಾಗಿದೆ. ಸೇತುವೆ ಮೇಲೆ ನೀರು ರಭಸವಾಗಿ ಹರಿಯುತ್ತಿದ್ದರೂ ಅದನ್ನೂ ಲೆಕ್ಕಿಸದೆ ಗಂಡ-ಹೆಂಡತಿ ಸೇತುವೆ ದಾಟಿದ್ದಾರೆ. ಆದರೆ, ಇದಕ್ಕೆ ಸಾರ್ವಜನಿಕರಿಂದ ಟೀಕೆಗಳು ವ್ಯಕ್ತವಾಗಿವೆ. ಪ್ರತಿ ಮಳೆಗಾಲದಲ್ಲೂ ಇದೇ ಸಮಸ್ಯೆ ಎದುರಾಗುತ್ತಿದ್ದು ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರಹಾಕಿದರು. ರಸ್ತೆಯು ನೀರಿನಿಂದ ಜಲಾವೃತವಾಗಿದ್ದು ಬಸ್ ಸಂಚಾರ ಸ್ಥಗಿತವಾಗಿದೆ. ನಾಲ್ಕೈದು ಗ್ರಾಮಗಳ ಸಂಪರ್ಕ ಕಡಿತವಾಗಿದೆ.
ರಾಯಚೂರು ಜಿಲ್ಲೆಯಲ್ಲಿ ವಿಪರೀತ ಮಳೆಯಾಗುತ್ತಿರುವ ಹಿನ್ನೆಲೆ ಪರಿಸ್ಥಿತಿ ನೋಡಿಕೊಂಡು ಜಿಲ್ಲೆಯಾದ್ಯಂತ ಶಾಲೆಗಳಿಗೆ ರಜೆ ನೀಡಲು ಜಿಲ್ಲಾಡಳಿತದಿಂದ ಮೌಖಿಕ ಸಲಹೆ ನೀಡಲಾಗಿದೆ. ಶಿಥಿಲಾವಸ್ಥೆ ತಲುಪಿದ ಕಟ್ಟಡದ ಶಾಲೆ, ನದಿ ಪಾತ್ರದ ಶಾಲೆಗಳಿಗೆ ಮೊದಲ ಆದ್ಯತೆ ನೀಡುವಂತೆ ಮುಖ್ಯೋಪಾಧ್ಯಾಯರಿಗೆ ಮೌಖಿಕವಾಗಿ ಸೂಚನೆ ನೀಡಲಾಗಿದೆ.
ಇದನ್ನು ಓದಿ | Rain News | ಭಾರಿ ಮಳೆಗೆ ದ್ವೀಪದಂತಾದ ಸುಳ್ಯ: ಹಲವೆಡೆ ರಸ್ತೆ ಸಂಪರ್ಕ ಕಡಿತ