ವಿಜಯಪುರ: ರಾಜ್ಯದಲ್ಲಿ ಮಳೆ (Rain News) ಅವಾಂತರ ಮತ್ತು ಅದರಿಂದಾಗುವ ಅನಾಹುತಗಳು ಒಮ್ಮಿಂದೊಮ್ಮೆಗೇ ಹೆಚ್ಚಾಗತೊಡಗಿದೆ. ರಾಜ್ಯದಲ್ಲಿ ಮಳೆಯಿಂದಾಗಿ ಭಾನುವಾರದವರೆಗೆ 28 ಮಂದಿ ಮೃತಪಟ್ಟಿದ್ದರೆ, ಸೋಮವಾರ ನಾಲ್ವರು ಸಾವನ್ನಪ್ಪಿದ್ದರು. ಇದೀಗ ಮಂಗಳವಾರ 11 ಗಂಟೆಯ ಹೊತ್ತಿಗೇ ನಾಲ್ಕು ಸಾವುಗಳು ದಾಖಲಾಗಿವೆ.
ದಾವಣಗೆರೆಯಲ್ಲಿ ಪುಟ್ಟ ಮಗು ಮೃತ್ಯು
ದಾಣಗೆರೆಯ ಹರಿಹರ ತಾಲೂಕಿನ ಕುಂಬಳೂರು ಗ್ರಾಮದಲ್ಲಿ ಮನೆ ಗೋಡೆ ಬಿದ್ದು 1 ವರ್ಷ 3 ತಿಂಗಳ ಹೆಣ್ಣು ಮಗು (Girl child death in Davanagere) ಮೃತಪಟ್ಟಿದೆ. ಕುಂಬಳೂರಿನ ಲಕ್ಷ್ಮೀ ಹಾಗೂ ಕೆಂಚಪ್ಪ ದಂಪತಿಗಳ ಪುತ್ರಿ ಸ್ಪೂರ್ತಿ ಸಾವನ್ನಪ್ಪಿದ ದುರ್ದೈವಿ ಮಗು.
ಈ ಭಾಗದಲ್ಲಿ ಕಳೆದ ಕಳೆದ ನಾಲ್ಕೈದು ದಿನಗಳಿಂದ ಮಳೆ ಸುರಿಯುತ್ತಿದೆ. ಸೋಮವಾರ ರಾತ್ರಿ ಲಕ್ಷ್ಮಿ ಮತ್ತು ಕೆಂಚಪ್ಪ ದಂಪತಿ ತಮ್ಮ ಪುಟ್ಟ ಕಂದಮ್ಮನನ್ನು ಮಧ್ಯೆ ಮಲಗಿಸಿಕೊಂಡು ನಿದ್ದೆ ಹೋಗಿದ್ದರು. ಈ ವೇಳೆ ಅವರ ಮನೆಯ ಚಾವಣಿಯೇ ಕುಸಿದು ಕೆಳಗೆ ಬಿದ್ದಿದೆ.
ಪುಟ್ಟ ಮಗುವಿನ ಮೇಲೆ ಮಣ್ಣು ಬಿದ್ದ ಹಿನ್ನೆಲೆಯಲ್ಲಿ ಮಗು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದೆ. ತಂದೆ ಮತ್ತು ತಾಯಿಗೂ ಗಾಯಗಳಾಗಿದ್ದು, ಅವರಿಗೆ ದಾವಣಗೆರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪುಟ್ಟ ಮಗುವನ್ನು ಕಳೆದುಕೊಂಡ ಹೆತ್ತವರು ಮತ್ತು ಪೋಷಕರ ಆಕ್ರಂದನ ಮುಗಿಲು ಮಟ್ಟಿದೆ. ಮಲೆಬೆನ್ನೂರು ಪೊಲೀಸ್ ಠಾಣಾ ವ್ಯಾಪ್ತಿ ಘಟನೆ ನಡೆದಿದೆ.
ವಿಜಯಪುರದ ಕನ್ನೂರು ಗ್ರಾಮದಲ್ಲಿ ವೃದ್ಧೆ ಮೃತ್ಯು
ವಿಜಯಪುರ ಜಿಲ್ಲೆ ಕನ್ನೂರು ಗ್ರಾಮದಲ್ಲಿ ಮಳೆಯಿಂದ ಚಾವಣಿ ಕುಸಿದು ವೃದ್ಧೆಯೊಬ್ಬರು ಮೃತಪಟ್ಟಿದ್ದಾರೆ (Old woman death in Vijaypur). 60 ವರ್ಷದ ಶಿವಮ್ಮ ಸಾವಳಗಿ ಅವರ ಮನೆ ರಾತ್ರಿ ಸುರಿದ ಮಳೆಗೆ ಕುಸಿದು ಬಿದ್ದಿದೆ. ಮೇಲ್ಚಾವಣಿಯೇ ಕುಸಿದು ಅವರ ಮೇಲೆ ಬಿದ್ದ ಕಾರಣ ಸ್ಥಳದಲ್ಲೇ ಮೃತ್ಯು ಸಂಭವಿಸಿದೆ.
ಹಾವೇರಿಯಲ್ಲಿ ಮೂರು ವರ್ಷದ ಪುಟ್ಟ ಮಗು ಸಾವು
ಹಾವೇರಿ: ಹಾವೇರಿ ತಾಲೂಕಿನ ಮಾಳಪುರ ಗ್ರಾಮದಲ್ಲಿ ನಿರಂತರ ಮಳೆಗೆ ದುರ್ಬಲವಾದ ಮನೆ ಕುಸಿದು ಪುಟ್ಟ ಮಗು ಮೃತಪಟ್ಟಿದೆ. ಭಾಗ್ಯ ಚಲಮರದ್ ಎಂಬ ಮೂರು ವರ್ಷ ಮಗುವೇ ಮೃತಪಟ್ಟ ದುರ್ದೈವಿ. ಎರಡು ದಿನಗಳ ಹಿಂದೆ ನಿರಂತರ ಬಿರುಗಾಳಿ ಮಳೆಗೆ ಮನೆ ಕುಸಿದು ಬಿದ್ದಿತ್ತು. ಈ ವೇಳೆ ಇಬ್ಬರು ಮಕ್ಕಳಿಗೆ ಗಾಯವಾಗಿತ್ತು. ಅದರಲ್ಲಿ ಒಂದು ಮಗು ಮೃತಪಟ್ಟಿದೆ.
ಬೀದರ್‌ನಲ್ಲಿ ಹಳ್ಳದಲ್ಲಿ ಕೊಚ್ಚಿ ಹೋದ ಯುವಕ
ಬೀದರ್: ಬಸವಕಲ್ಯಾಣ ತಾಲೂಕಿನ ಧನ್ನೂರ (ಆರ್) ಗ್ರಾಮದಲ್ಲಿ ನಡೆದ ಉಕ್ಕಿ ಹರಿಯುತ್ತಿರುವ ನೀರಿನ ಹಳ್ಳದಲ್ಲಿ ಕೊಚ್ಚಿ ಹೋದ ಯುವಕನೊಬ್ಬ ಮೃತಪಟ್ಟಿದ್ದಾರೆ. ಮಲ್ಲಪ್ಪ ಶರಣಪ್ಪ ಕರೆಪನೋರ್ (25) ನೀರಿನಲ್ಲಿ ಕೊಚ್ಚಿಕೊಂಡು ಹೋದ ಯುವಕ. ಗ್ರಾಮದ ಹೊರವಲಯದಲ್ಲಿರುವ ತೋಟದ ಮನೆಯಿಂದ ಮರುಳುವಾಗ ದುರ್ಘಟನೆ ಸಂಭವಿಸಿದೆ. ಧಾರಾಕಾರವಾಗಿ ಮಳೆ ಸುರಿದ ಹಿನ್ನೆಲೆಯಲ್ಲಿ ಹಳ್ಳದಲ್ಲಿ ನೀರು ಜೋರಾಗಿ ಹರಿಯುತ್ತಿತ್ತು. ಆದರೆ, ದಾಟಬಹುದು ಎಂಬ ಧೈರ್ಯದಲ್ಲಿ ಆತ ಮುಂದಡಿ ಇಟ್ಟಿದ್ದ. ಆದರೆ, ನೀರಿನ ಸೆಳೆತಕ್ಕೆ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾನೆ.
ಇದನ್ನೂ ಓದಿ : Weather Report : ಮನೆಯಿಂದ ಹೊರ ಹೋಗುವ ಮುನ್ನ ಎಚ್ಚರ; ಮುಂದುವರಿದ ಮಳೆ ರಗಳೆ