ಚಿಕ್ಕಮಗಳೂರು: ಜಿಲ್ಲೆಯಲ್ಲಿ ಭೀಕರ ಮಳೆಗೆ (Rain News) ವಿವಿಧೆಡೆ ಅಪಾರ ಹಾನಿ ಸಂಭವಿಸಿದೆ. ಸತತ ಮಳೆಯಿಂದ ಹೆದ್ದಾರಿಯಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಗುಡ್ಡ ಜರಿದು ಒಂದು ಎಕರೆ ಕಾಫಿ ತೋಟ ನಾಶವಾಗಿದೆ. ಹಲವೆಡೆ ಮರಗಳು ಉರುಳಿದ್ದು, 24 ಗಂಟೆಯಲ್ಲಿ ೨೯ ಮನೆಗಳಿಗೆ ಹಾನಿಯಾಗಿದೆ.
ಶೃಂಗೇರಿ ತಾಲೂಕಿನ ಉಳುಮೆ ಗ್ರಾಮದ ಬಳಿ ಕೊಪ್ಪ-ಶೃಂಗೇರಿ ಮಾರ್ಗದ ರಾಜ್ಯ ಹೆದ್ದಾರಿಯಲ್ಲಿ ಬಿರುಕು ಕಾಣಿಸಿಕೊಂಡಿದ್ದು, ರಸ್ತೆ ಕುಸಿಯುವ ಭೀತಿ ಎದುರಾಗಿದೆ. ಮಳೆ ಹೆಚ್ಚಾದಂತೆ ಕ್ಷಣ ಕ್ಷಣಕ್ಕೂ ಹೆದ್ದಾರಿ ಬಿರುಕು ಬಿಡುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಹೆದ್ದಾರಿಯಲ್ಲಿ ಎಚ್ಚರಿಕೆ ಫಲಕ ಅಳವಡಿಸಿ ವಾಹನ ಸವಾರರಿಗೆ ಎಚ್ಚರಿಕೆ ಮೂಡಿಸಲಾಗುತ್ತಿದೆ.
ಪ್ರತ್ಯೇಕ ಪ್ರಕರಣ ; ಕಾರು ಹಳ್ಳಕ್ಕೆ ಬಿದ್ದು ಒಬ್ಬರು ಸಾವು, ಮೂವರು ಪಾರು
ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಕಾರು ಹಳ್ಳಕ್ಕೆ ಬಿದ್ದು ಒಬ್ಬ ಮೃಟಪಟ್ಟು, ಮೂವರು ಅಪಾಯದಿಂದ ಪಾರಾಗಿದ್ದಾರೆ. ಎನ್.ಆರ್.ಪುರ ತಾಲೂಕಿನ ಸಾತ್ಕೊಳದಲ್ಲಿ ಸಂಬಂಧಿಕರ ಮನೆಗೆ ಶ್ರಾವಣಕ್ಕೆ ಹೋಗುವಾಗ ಕಾರು ಹಳ್ಳದಲ್ಲಿ ಕೊಚ್ಚಿ ಹೋಗಿ ಅರಿಶಿಣಗೆರೆ ಪ್ರಸನ್ನ (51) ಎಂಬುವವರು ಮೃತಪಟ್ಟಿದ್ದು, ಕಾರಿನಲ್ಲಿದ್ದ ಇಬ್ಬರು ಪಾರಾಗಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಕಡೂರು ತಾಲೂಕಿನ ಸಖರಾಯಪಟ್ಟಣದಲ್ಲಿ ರಸ್ತೆ ಮೇಲೆ ಐದು ಅಡಿಯಷ್ಟು ನೀರು ಹರಿಯುತ್ತಿದ್ದರೂ ಹುಚ್ಚಾಟ ಮೆರೆದು ಕಾರು ಚಲಾಯಿಸಿದ್ದರಿಂದ ಇಬ್ಬರು ಕಾರು ಸಮೇತ ಹಳ್ಳಕ್ಕೆ ಬಿದ್ದು ಕೊಚ್ಚಿಹೋಗಿದ್ದಾರೆ. ಈ ವೇಳೆ ಸ್ಥಳೀಯರು ತಕ್ಷಣ ನೆರವಿಗೆ ಬಂದಿದ್ದರಿಂದ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇದನ್ನೂ ಓದಿ | Rain fury| ಮತ್ತೆ ಕುಸಿದ ಅಣಶಿ ಗುಡ್ಡ: ಕಾರವಾರ-ಬೆಳಗಾವಿ ಹೆದ್ದಾರಿ ಸಂಚಾರ ಬಂದ್
ಗುಡ್ಡ ಜರಿದು ಎಕರೆ ಕಾಫಿ ತೋಟ ನಾಶ
ಇನ್ನು ಧಾರಾಕಾರ ಮಳೆಗೆ ಜಿಲ್ಲೆಯ ತುಂಬಳ್ಳಿಪುರ ಗ್ರಾಮದಲ್ಲಿ ಗುಡ್ಡ ಜರಿದು ಅಣ್ಣಪ್ಪ ಶೆಟ್ಟಿ ಎಂಬುವವರ ಒಂದು ಎಕರೆ ಕಾಫಿ ತೋಟ ನಾಶವಾಗಿದೆ. ಗುಡ್ಡ ಕುಸಿದಿದ್ದರಿಂದ ತೋಟದಲ್ಲಿ ಹೊಸ ಹಳ್ಳ ಕೊಳ್ಳಗಳು ಸೃಷ್ಟಿಯಾಗಿವೆ. ಸೋಮವಾರ ರಾತ್ರಿ ಘಟನೆ ಸಂಭವಿಸಿದ್ದು, ಮಂಗಳವಾರ ಬೆಳಗ್ಗೆ ತೋಟದ ಸ್ಥಿತಿ ಕಂಡು ರೈತ ಆತಂಕಗೊಂಡಿದ್ದಾರೆ. ಬೆಳೆದು ನಿಂತಿದ್ದ ಮೆಣಸು, ಅಡಿಕೆ, ಕಾಫಿ, ಬಾಳೆ ನಾಶವಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಪರಿಹಾರ ಕಲ್ಪಿಸಬೇಕು ಎಂದು ರೈತ ಒತ್ತಾಯಿಸಿದ್ದಾರೆ.
ಹೆದ್ದಾರಿಗೆ ಉರುಳಿದ ಮರ
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಿಳಗುಳ ಸಮೀಪ ರಾಷ್ಟ್ರೀಯ ಹೆದ್ದಾರಿ-173ರಲ್ಲಿ ರಸ್ತೆ ಮೇಲೆ ಬೃಹತ್ ಮರ ಉರುಳಿ ಬಿದ್ದಿದ್ದರಿಂದ ಹೆದ್ದಾರಿಯಲ್ಲಿ ಕಿಲೋ ಮೀಟರ್ ಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಯಿತು.
ಬಿರುಗಾಳಿ ಸಹಿತ ಮಳೆಗೆ ಹಲವೆಡೆ ಮರಗಳು ಉರುಳಿ ಬೀಳುತ್ತಿವೆ, ಹೋಗಾಗಿ ಜಿಲ್ಲೆಯ ರಸ್ತೆಗಳಲ್ಲಿ ಸಂಚಾರ ಮಾಡಲು ವಾಹನ ಸವಾರರು ಭಯಪಡುತ್ತಿದ್ದಾರೆ.
29 ಮನೆಗಳಿಗೆ ಹಾನಿ
ಮಲೆನಾಡಿನಲ್ಲಿ ಮಳೆ ಅಬ್ಬರಕ್ಕೆ ಭಾರೀ ನಷ್ಟ ಉಂಟಾಗುತ್ತಿದೆ. 24 ಗಂಟೆಯಲ್ಲಿ 29ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದ್ದು, ವರುಣನ ರುದ್ರ ನರ್ತನಕ್ಕೆ 4 ಹಸುಗಳು ಮೃತಪಟ್ಟಿವೆ. ತರೀಕೆರೆ ತಾಲೂಕಿನ ಸೀತಾಪುರ ಕಾವಲ್‌ನಲ್ಲಿ ಮನೆ ಚಾವಣಿ ಸಮೇತ ಕುಸಿದು ಗೋಡೆ ಕುಸಿದಿದ್ದು, ಕೂದಲೆಳೆ ಅಂತರದಲ್ಲಿ ವಳ್ಳಿಯಮ್ಮ ಎಂಬುವವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅದೇ ರೀತಿ ಮೂಡಿಗೆರೆ ತಾಲೂಕಿನ ಬಲಿಗೆ ಗ್ರಾಮದಲ್ಲಿ ವನಜಾಕ್ಷಮ್ಮ ಎಂಬುವವರ ಮನೆ ಕುಸಿದಿದೆ. ಇನ್ನು ಕಳಸ, ಮೂಡಿಗೆರೆ, ಎನ್.ಆರ್.ಪುರ, ಕೊಪ್ಪ, ಶೃಂಗೇರಿಯಲ್ಲಿ ಭಾರಿ ಮಳೆ ಮುಂದುವರಿದಿದೆ.
ಇದನ್ನೂ ಓದಿ | Shivamogga Rain | ಭಾರಿ ಮಳೆಗೆ ಕಾರ್ಪೊರೇಟರ್ ಮನೆ ಕುಸಿತ; ಭದ್ರಾ ಜಲಾನಯನದಲ್ಲಿ ಪ್ರವಾಹ ಭೀತಿ