Site icon Vistara News

Rain News : Danger! ಉಕ್ಕಿಹರಿವ ಹಳ್ಳದಲ್ಲೇ ನಡೆದುಕೊಂಡು ದಾಟುವ ಶಾಲಾ ಮಕ್ಕಳು!

Chincholi Water stream

ಕಲಬುರಗಿ: ರಾಜ್ಯಾದ್ಯಂತ ಭಾರಿ ಮಳೆಯಿಂದ ಭಾರಿ ಅನಾಹುತಗಳೇ (Rain News) ಸಂಭವಿಸಿದೆ. ಹಲವು ಕಡೆ ಮನೆ ಕುಸಿದು ಸಾವು (House wall collapse) ಸಂಭವಿಸಿದೆ, ನೀರಿನಲ್ಲಿ ಹಲವರು ಕೊಚ್ಚಿ ಹೋಗಿದ್ದಾರೆ. ಇದರ ನಡುವೆಯೂ ‌ ತುಂಬಿ ಹರಿಯುತ್ತಿರುವ ಹಳ್ಳಕೊಳ್ಳಗಳನ್ನು ಅಪಾಯಕಾರಿ ರೀತಿಯಲ್ಲಿ ದಾಟಿ ಹೋಗುವ ಸನ್ನಿವೇಶಗಳೂ ಭಯ ಹುಟ್ಟಿಸುತ್ತಿವೆ.

ಕಲಬುರಗಿ ಜಿಲ್ಲೆಯಾದ್ಯಂತ (Kalburgi News) ಸುರಿಯುತ್ತಿರುವ ಮಹಾ ಮಳೆಯಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಮಳೆಯಿಂದಾಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಅಲ್ಲಾಪುರ ಗ್ರಾಮದ ಬಳಿ ಹಳ್ಳಕೊಳ್ಳಗಳು ಉಕ್ಕಿ ಹರಿಯುತ್ತಿವೆ. ಹೀಗೆ ಉಕ್ಕಿ ಹರಿಯುತ್ತಿರುವ ಅಪಾಯಕಾರಿ ಹಳ್ಳದಲ್ಲೇ ನಡೆದುಕೊಂಡು ದಾಟಿ ಶಾಲೆಗೆ ಹೋಗುತ್ತಿರುವ ದೃಶ್ಯಗಳು ಭಯ ಹುಟ್ಟಿಸುತ್ತಿವೆ.

ಚಿಂಚೋಳಿ ತಾಲೂಕಿನ ಅಲ್ಲಾಪೂರ ಗ್ರಾಮದ ಮಕ್ಕಳು ಶಾಲೆಗೆ ಹೋಗಬೇಕು ಎಂದರೆ ಪಕ್ಕದ ಕೋಡ್ಲಿ ಗ್ರಾಮಕ್ಕೆ ಹಳ್ಳವನ್ನು ದಾಟಿಯೇ ಹೋಗಬೇಕು. ನಿತ್ಯವು ಮಕ್ಕಳು ಶಾಲೆಗೆ ಇದೇ ರೀತಿ ಹೋಗುತ್ತಾರೆ. ಆದರೆ, ಕಳೆದ ಕೆಲವು ದಿನಗಳಿಂದ ಹಳ್ಳ ಉಕ್ಕಿ ಹರಿಯುತ್ತಿದೆ. ಆದರೂ ತುಂಬಿ ಹರಿಯುತ್ತಿರುವ ಹಳ್ಳದಲ್ಲೇ ಕೈ ಕೈ ಹಿಡಿದು ಹಳ್ಳ ದಾಟುವ ಸಾಹಸ ಮಾಡುತ್ತಿದ್ದಾರೆ ಮಕ್ಕಳು.

ಕೊಂಚ ಯಾಮಾರಿದರೂ ಮಕ್ಕಳು ಹಳ್ಳದಲ್ಲಿ ಕೊಚ್ಚಿಕೊಂಡು ಹೋಗುವ ಭೀತಿ ಇದೆ. ಅಷ್ಟೇ ಅಲ್ಲ ಈ ಹಳ್ಳದಲ್ಲಿ ಯಾವಾಗ ದೊಡ್ಡ ಪ್ರಮಾಣದಲ್ಲಿ ನೀರು ಉಕ್ಕಬಹುದು ಎಂದು ಕೂಡಾ ಹೇಳಲಾಗದ ಪರಿಸ್ಥಿತಿ ಇದೆ. ಒಂದೊಮ್ಮೆ ಮಕ್ಕಳು ಹಳ್ಳ ದಾಟುವಾಗ ಏನಾದೂ ಜೋರಾಗಿ ನೀರು ಹರಿದುಬಂದರೆ ಮಕ್ಕಳು ಕೊಚ್ಚಿ ಹೋಗಬಹುದಾದ ಅಪಾಯವಿದೆ. ಒಂದೊಮ್ಮೆ ಹೀಗಾದರೆ ರಕ್ಷಣೆ ಮಾಡುವುದು ಸಾಧ್ಯವೇ ಇಲ್ಲ. ಯಾಕೆಂದರೆ, ಇದೊಂದು ಇಳಿಜಾರಿನಲ್ಲಿರುವ ಹಳ್ಳವಾಗಿದ್ದು, ಕೆಳಭಾಗ ಇನ್ನೂ ಆಳವಾಗಿದೆ.

ಪ್ರತಿಬಾರಿ ಹಳ್ಳ ತುಂಬಿದಾಗ ಗ್ರಾಮಸ್ಥರು ಹಾಗೂ ಶಾಲಾ‌ ಮಕ್ಕಳ ಓಡಾಟ ಇದೇ ರೀತಿ ಇರುತ್ತದೆ. ಅಧಿಕಾರಿಗಳಾಗಲೀ ಜನ ಪ್ರತಿನಿಧಿಗಳಾಗಲೀ ಈ ಅಪಾಯದ ಬಗ್ಗೆ ಯಾರೂ ಯೋಜನೆ ಮಾಡುತ್ತಿಲ್ಲ. ಒಂದೊಮ್ಮೆ ಅಪಾಯ ಸಂಭವಿಸಿದರೆ ಮಾತ್ರ ಕಣ್ಣೀರು ಹಾಕುವುದಾ? ಅದಕ್ಕಿಂತ ಮೊದಲು ಸರಿಯಾದ ಕ್ರಮ ವಹಿಸಲು ಸಾಧ್ಯವಿಲ್ಲವೇ ಎನ್ನುವುದು ಜನರ ಪ್ರಶ್ನೆ.

ಇದನ್ನೂ ಓದಿ: Rain News : ಹಿಂಡನ್​ ನದಿಯಲ್ಲಿ ಮುಳುಗಿದ 500 ಹೊಚ್ಚ ಹೊಸ ಕಾರುಗಳು!

Exit mobile version