ಬೆಳಗಾವಿ: ಜೂನ್ ತಿಂಗಳು ಮುಗಿಯುತ್ತಾ ಬಂದರೂ ರಾಜ್ಯದ ಹಲವು ಕಡೆ ಮುಂಗಾರು ಮಳೆಯ (Rain News) ಸುಳಿವೇ ಇಲ್ಲ. ಇದರಿಂದ ಹಲವು ಕಡೆ ಜಲಕ್ಷಾಮ ಎದುರಾಗಿದೆ. ನೀರಿಗಾಗಿ ಹಾಹಾಕಾರ ಎದ್ದಿದೆ. ಈ ನಡುವೆ ಮಳೆ ಬರಲಿ ಎಂದು ಹಲವು ಕಡೆ ವಿವಿಧ ರೀತಿಯಲ್ಲಿ ದೇವರಲ್ಲಿ ಮೊರೆ ಇಡುತ್ತಿದ್ದಾರೆ. ಕೆಲವರು ಕಪ್ಪೆಗಳಿಗೆ ಮದುವೆ ಮಾಡಿದರೆ, ಮತ್ತೆ ಕೆಲವರು ಕತ್ತೆಗಳಿಗೆ ಮದುವೆ ಮಾಡಿ ವರುಣ ದೇವರಲ್ಲಿ ಪ್ರಾರ್ಥನೆ ಮಾಡಿದ್ದಾರೆ. ಮತ್ತೆ ಕೆಲವರು ದೇವರಿಗೆ ಅಭ್ಯಂಜನ ಸೇವೆ ಮಾಡಿ ಮೊರೆ ಇಟ್ಟಿದ್ದಾರೆ. ಈಗ ಬೆಳಗಾವಿಯಲ್ಲಿ ಮುಸ್ಲಿಂ ಸಮುದಾಯದವರು (Muslims Community) ಸಾಮೂಹಿಕ ಪ್ರಾರ್ಥನೆ ಮಾಡಿದ್ದು, ಕಣ್ಣೀರ ಮೂಲಕ ಮಳೆ ಬರಲಿ ಎಂದು ಅಲ್ಲಾ ಬಳಿ ಬೇಡಿಕೊಂಡಿದ್ದಾರೆ.
ಕಣ್ಣೀರಿನ ಪ್ರಾರ್ಥನೆ
ಮಳೆ ಬಾರದೇ ಇದ್ದರೆ ಸಂಕಷ್ಟ ಎದುರಾಗಲಿದೆ. ಇಷ್ಟು ದಿನವಾದರೂ ಮಳೆ ಇಲ್ಲದಿರುವುದು ಆತಂಕಕ್ಕೆ ಕಾರಣವಾಗಿದೆ. ದೇವರೇ ನೀನೇ ಕಾಪಾಡು, ದಾರಿ ತೋರು, ಮಳೆ ಬರುವಂತೆ ಮಾಡು. ಇದಕ್ಕಾಗಿ ನಾವು ನಮ್ಮ ಕಣ್ಣೀರನ್ನು ನಿನಗೆ ಅರ್ಪಿಸುತ್ತೇವೆ. ನೀನು ನಮಗೆ ಮಳೆ ಕರುಣಿಸು ಎಂದು ಈದ್ಗಾ ಮೈದಾನದಲ್ಲಿ ಮುಸ್ಲಿಂ ಸಮುದಾಯದವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ್ದಾರೆ.
ಬೆಳಗಾವಿಯ ಈದ್ಗಾ ಮೈದಾನದಲ್ಲಿ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ್ದಾರೆ. ಮುಸ್ಲಿಂ ಧರ್ಮಗುರು ಮುಫ್ತಿ ಅಬ್ದುಲ್ ಅಜೀಜ್ ಖಾಜಿ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಗಿದ್ದು, ‘ಅಲ್ಹಾ ಮಳೆ ಕರುಣಿಸು’ ಎಂದು ಸಾಮೂಹಿಕವಾಗಿ ಕಣ್ಣೀರಿಟ್ಟಿದ್ದಾರೆ. ಬೆಳಗಾವಿ ಉತ್ತರ ಕಾಂಗ್ರೆಸ್ ಶಾಸಕ ಆಸೀಫ್ ಸೇಠ್ ಸಹ ಈ ವೇಳೆ ಉಪಸ್ಥಿತರಿದ್ದರು.
ಇದನ್ನೂ ಓದಿ: Free Bus Service: 2ನೇ ವೀಕೆಂಡ್‌ಗೆ ತಗ್ಗಿದ ಮಹಿಳೆಯರ ರಷ್; ಬಸ್‌ಗಳಲ್ಲಿ ನಿರಾಳ ಸಂಚಾರ
ಮೂರು ದಿನ ಪ್ರಾರ್ಥನೆ
ಮಳೆಗಾಗಿ ಶನಿವಾರದಿಂದ ಮೂರು ದಿನಗಳ ಕಾಲ ಮುಸ್ಲಿಮರು ಪ್ರಾರ್ಥನೆ ಸಲ್ಲಿಸಲಿದ್ದಾರೆ. ಅಂದರೆ, ಶನಿವಾರ ಮಳೆಯಾಗದೇ ಇದ್ದರೆ, ಪುನಃ ಭಾನುವಾರ ಬೆಳಗ್ಗೆ 9.30ಕ್ಕೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲು ನಿರ್ಧಾರ ಮಾಡಲಾಗಿದೆ. ಹೀಗೆ ದೇವರ ಮೊರೆ ಹೋಗುವ ಮೂಲಕ ನಾಡಿನಲ್ಲಿ ಮಳೆಯಾಗಿ ಸುಭಿಕ್ಷವಾಗಲಿ ಎಂದು ಕೋರಿಕೊಳ್ಳಲಾಗುತ್ತಿದೆ.
ಕ್ಷಣ ಕ್ಷಣದ ಲೈವ್ ಸುದ್ದಿಗಳಿಗಾಗಿ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ