Site icon Vistara News

Rain News | ಹರಿಯುವ ನೀರಿನಲ್ಲಿ ರಸ್ತೆ ದಾಟಲು ಹೋಗಿ ಬೈಕ್ ಸವಾರ ನೀರುಪಾಲು; ಮತ್ತೊಬ್ಬ ಪಾರು

rain news

ಚಿಕ್ಕಬಳ್ಳಾಪುರ: ಸತತ ಮಳೆಗೆ (Rain News) ಕೆರೆಗಳು ತುಂಬಿ ಹರಿಯುತ್ತಿವೆ. ಹರಿಯುವ ನೀರು ಲೆಕ್ಕಿಸದೆ ಬೈಕ್ ಸವಾರರಿಬ್ಬರು ರಸ್ತೆ ದಾಟಲು ಹೋಗಿದ್ದು, ಒಬ್ಬ ಪ್ರಾಣಾಪಾಯದಿಂದ ಪಾರಾಗಿದ್ದರೆ, ಮತ್ತೊಬ್ಬ ನೀರು ಪಾಲಾಗಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಜಾಲಹಳ್ಳಿ ಇಡಗೂರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಮಧ್ಯೆ ಶುಕ್ರವಾರ ರಾತ್ರಿ ಘಟನೆ ನಡೆದಿದೆ.

ಈ ರಸ್ತೆಯಲ್ಲಿ ಕುಮುದ್ವತಿ ನದಿ ನೀರು ಹರಿಯುತ್ತಿದ್ದು, ನದಿ ನೀರಿಗೆ ಅಡ್ಡಲಾಗಿ ಬ್ರಿಡ್ಜ್‌ವೊಂದನ್ನು ನಿರ್ಮಾಣ ಮಾಡಲಾಗಿದೆ. ಸತತ ಮಳೆಗೆ ನದಿಯ ನೀರು ತುಂಬಿ ಬ್ರಿಡ್ಜ್ ಮೇಲೆ ಹರಿಯುತ್ತಿದೆ. ಈ ಅಪಾಯದ ಸೂಚನೆ ಇದ್ದರೂ ಶುಕ್ರವಾರ ರಾತ್ರಿ ತಾಲೂಕಿನ ಆನೂಡಿ ಗ್ರಾಮದ ಕಾರ್ಮಿಕರಾದ ಪ್ರಶಾಂತ್ ಕುಮಾರ್ ಹಾಗೂ ಆತನ ಸಂಬಂಧಿ ತುಮಕೂರು ಜಿಲ್ಲೆಯ ಸಿತರಾ ಮೂಲದ ಬಸವರಾಜ್ ಬೈಕ್‌ನಲ್ಲಿ ಸಾಹಸ ಮಾಡಲು ನೀರಿಗೆ ಇಳಿದಿದ್ದಾರೆ.

ಆದರೆ ನೀರಿನ ರಭಸಕ್ಕೆ ನಿಯಂತ್ರಣ ಸಿಗದಿದ್ದಾಗ ಬೈಕ್ ಸಮೇತ ಇಬ್ಬರೂ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ತಕ್ಷಣ ಸ್ಥಳದಲ್ಲಿದ್ದ ಸ್ಥಳೀಯರು ಸಹಾಯಕ್ಕೆ ಧಾವಿಸಿ ಪ್ರಶಾಂತನನ್ನು ರಕ್ಷಣೆ ಮಾಡಿದ್ದಾರೆ. ಆದರೆ, ಬಸವರಾಜ್‌ಗಾಗಿ ರಾತ್ರಿಯಿಡಿ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ.

ಶನಿವಾರ ಬೆಳಗ್ಗೆ ಕುಮದ್ವತಿ ನದಿಯಲ್ಲಿ ಜಾಲಿ ಗಿಡ ಬಳಿ ಕಾರ್ಮಿಕ ಬಸವರಾಜ್ ಶವವಾಗಿ ಪತ್ತೆಯಾಗಿದ್ದಾರೆ. ಸ್ಥಳಕ್ಕೆ ಗೌರಿಬಿದನೂರು ಗ್ರಾಮಾಂತರ ಠಾಣೆ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಪರಿಶೀಲನೆ ನಡೆಸಿದ್ದು ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಇಬ್ಬರು ಯುವಕರು ಪಾನಮತ್ತರಾಗಿ ಹರಿಯುವ ನೀರಿನಲ್ಲಿ ರಸ್ತೆ ದಾಟಲು ಹೋಗಿದ್ದೇ ಈ ಅವಘಡಕ್ಕೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಗೌರಿಬಿದನೂರು ತಾಲೂಕು ಆಡಳಿತವು ಮುಂಜಾಗ್ರತಾ ಕ್ರಮವಾಗಿ ಇಡಗೂರು ಜಾಲಹಳ್ಳಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ತಾತ್ಕಾಲಿಕವಾಗಿ ಬಂದ್ ಮಾಡಿದೆ.

ಕೊಚ್ಚಿ ಹೋದ ರಸ್ತೆ

ಧಾರಾಕಾರ ಮಳೆಗೆ ಜಿಲ್ಲೆಯ ಜಿ ಮದ್ದೇಪಲ್ಲಿ ಗ್ರಾಮದ ಕೆರೆ ಕೋಡಿ ಹರಿದು, ರಸ್ತೆಯೇ ಕಾಣದಂತಾಗಿದೆ. ಸಾಕವಂಡ್ಲಪಲ್ಲಿ ಮಿಟ್ಟವಂಡ್ಲಪಲ್ಲಿ ಸೇರಿದಂತೆ ಹಲವು ಗ್ರಾಮಗಳ ರಸ್ತೆ ಸಂಪರ್ಕ ಕಡಿತವಾಗಿದ್ದು, ಸ್ಥಳಕ್ಕೆ ಬಾಗೇಪಲ್ಲಿ ತಹಸೀಲ್ದಾರ್‌ ರವಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರೈತರ ಜಮೀನುಗಳಿಗೆ ಕೆರೆ ನೀರು ನುಗ್ಗಿ ಅವಾಂತರವೇ ಸೃಷ್ಟಿಯಾಗಿದ್ದು, ಬೆಳೆ ಕೈಗೆ ಬರುವ ಮುನ್ನವೇ ನಾಶವಾಗಿದೆ. ಇದರಿಂದ ರೈತರು ಕಂಗಲಾಗಿದ್ದಾರೆ.

ಇದನ್ನೂ ಓದಿ | Rain news | ಬಂಗಾಳ ಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ, ಇನ್ನೂ 5 ದಿನ ಭಾರಿ ಮಳೆ

Exit mobile version