ಮಂಗಳೂರು : ಬುಧವಾರ (ಜು.೬) ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಬಂಟ್ವಾಳ ತಾಲೂಕಿನ ಪಂಜಿಕಲ್ಲು ಗುಡ್ಡ ಜರಿದು ಕೇರಳ ಮೂಲದ ಮೂವರು ಸಾವನಪ್ಪಿದ್ದಾರೆ. ಇನ್ನೊಂದೆಡೆ ಮಂಗಳೂರಿನ ಏರ್‌ಪೋರ್ಟ್ ರನ್‌ವೇ ಬದಿಯಲ್ಲೇ ರಸ್ತೆ ಕುಸಿದಿದೆ. ಅದ್ಯಪಾಡಿಯಿಂದ ಕೈಕಂಬಕ್ಕೆ ಹೋಗುವ ಮಾರ್ಗದಲ್ಲಿ ರನ್‌ವೇಗೆ ತಾಕಿಕೊಂಡಂತಿರುವ ರಸ್ತೆ ಕುಸಿದಿದ್ದು ಆತಂಕ ಮೂಡಿಸಿದೆ.
ಪಂಜಿಕಲ್ಲು ಗುಡ್ಡ ಕುಸಿತ ಪ್ರಕರಣದಲ್ಲಿ ಕೇರಳದ ಪಾಲಕ್ಕಾಡ್ ನಿವಾಸಿ ಬಿಜು (೪೫) ಬುಧವಾರ (ಜು.೬) ರಾತ್ರಿಯೇ ಮೃತಪಟ್ಟಿದ್ದರು. ಗುರುವಾರ ಬೆಳಗ್ಗೆ ಕೊಟ್ಟಾಂ ನಿವಾಸಿ ಬಾಬು (46) ಮತ್ತು ಸಂತೋಷ್ ಅಲ್ಫೊನ್ಸಾ (46) ಮೃತಪಟ್ಟಿದ್ದಾರೆ. ಬುಧವಾರ (ಜು.6) ರಾತ್ರಿಯೇ ನಾಲ್ವರನ್ನೂ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಸದ್ಯ ಕಣ್ಣೂರು ನಿವಾಸಿ ಜಾನ್ (44)ಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ | Weather report | ರಾಜ್ಯದಲ್ಲಿ ಮುಂದಿನ 48 ಗಂಟೆಗಳಲ್ಲಿ ಭಾರಿ ಮಳೆ ನಿರೀಕ್ಷೆ
ಸ್ಥಳೀಯ ನಿವಾಸಿ ಹೆನ್ರಿ ಕಾರ್ಲೊ ಅವರ ಮನೆಯ ತೋಟದ ಕೆಲಸಕ್ಕೆ ಬಂದಿದ್ದ ಕೇರಳ ಮೂಲದ ಕಾರ್ಮಿಕರು ಇವರಾಗಿದ್ದರು. ಅನೇಕ ವರ್ಷಗಳಿಂದ ಇವರ ತೋಟದಲ್ಲಿಯೇ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಕಾರ್ಲೋ ಅವರ ಮನೆಯ ಹತ್ತಿರದಲ್ಲಿ ಪ್ರತ್ಯೇಕ ಕೊಠಡಿ ಅವರಿಗೆ ನೀಡಲಾಗಿತ್ತು. ಆದರೆ, ಗುಡ್ಡ ಕುಸಿದು ಈ ಕೊಠಡಿ ಮೇಲೆಯೇ ಮಣ್ಣು ಬಿದ್ದಿದ್ದರಿಂದ ಸಾವನಪ್ಪಿದ್ದಾರೆ ಎನ್ನಲಾಗಿದೆ. ಅಗ್ನಿಶಾಮಕ ದಳ ಮತ್ತು ಸ್ಥಳೀಯರು ಜೆಸಿಬಿ ಬಳಸಿ ಮಣ್ಣು ತೆರವು ಮಾಡಿದ್ದಾರೆ. ಸ್ಥಳಕ್ಕೆ ದ.ಕ. ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಎಸ್ಪಿ ಹೃಷಿಕೇಶ್ ಸೋನಾವಣೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಏರ್‌ಪೋರ್ಟ್‌ಗೆ ಆತಂಕ: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅದ್ಯಪಾಡಿ ಬಳಿ ಇರುವ ರನ್ ವೇ ಸಮೀಪವೇ ರಸ್ತೆ ಕುಸಿದಿದೆ. ಈ ಹಿನ್ನೆಲೆಯಲ್ಲಿ ಅದ್ಯಪಾಡಿಯಿಂದ ಕೈ ಕಂಬ ಹೋಗುವ ರಸ್ತೆ ಸಂಚಾರ ಸ್ಥಗಿತಗೊಂಡಿದೆ. ಅಧಿಕ ಮಳೆ, ನೀರಿನ ಹೊರಹೊಮ್ಮುವಿಕೆಯಿಂದ ಕುಸಿತ ಉಂಟಾಗಿದೆ ಎನ್ನಲಾಗುತ್ತಿದೆ. ರನ್‌ವೇ ಸಮೀಪವೇ ಈ ಕುಸಿತ ಉಂಟಾಗಿರುವುದರಿಂದ ಹಾಗೂ ಮಳೆ ಹೆಚ್ಚಿರುವುದರಿಂದ ಆತಂಕದ ವಾತಾವರಣ ಸೃಷ್ಟಿಯಾಗಿದೆ.
ಇದನ್ನೂ ಓದಿ | Test Cricket : 2 ವರ್ಷದಲ್ಲಿ 11 ಶತಕ ಬಾರಿಸಿದ ಬ್ಯಾಟರ್‌ಗೆ ಪ್ರಶಂಸೆಗಳ ಸುರಿಮಳೆ