Site icon Vistara News

Rain News : ಕುಸಿದು ಬಿದ್ದ ಮನೆ; ಅವಶೇಷಗಳಡಿ ಸಿಲುಕಿದ್ದ 3 ವರ್ಷದ ಕಂದಮ್ಮ ಮೃತ್ಯು

Child death

ಹಾವೇರಿ: ರಾಜ್ಯದಲ್ಲಿ ಮಳೆ ಅನಾಹುತ (Rain News) ಮುಂದುವರಿದಿದೆ. ಒಂದು ಕಡೆ ನೀರು ಎಲ್ಲೆಂದರಲ್ಲಿ ನುಗ್ಗಿ ಅಲ್ಲೋಲಕಲ್ಲೋಲ ಸೃಷ್ಟಿಸುತ್ತಿದ್ದರೆ ಇನ್ನೊಂದು ಕಡೆ ಗುಡ್ಡ ಬೆಟ್ಟಗಳು ಕುಸಿಯುವ ಅಪಾಯದಲ್ಲಿವೆ. ಕೆಲವು ಕಡೆ ಮನೆಗಳು ಉರುಳಿ ಅನಾಹುಗಳು ಸಂಭವಿಸುತ್ತಿವೆ. ಹಾವೇರಿಯಲ್ಲಿ ಮನೆಯೊಂದು ಕುಸಿದು ಬಿದ್ದು (House collapse) ಮೂರು ವರ್ಷದ ಪುಟ್ಟ ಮಗು (Three year old child death) ಪ್ರಾಣ ಕಳೆದುಕೊಂಡಿದೆ.

ಹಾವೇರಿ ತಾಲೂಕಿನ ಮಾಳಪುರ ಗ್ರಾಮದಲ್ಲಿ ನಿರಂತರ ಮಳೆಗೆ ದುರ್ಬಲವಾದ ಮನೆ ಕುಸಿದು ಪುಟ್ಟ ಮಗು ಮೃತಪಟ್ಟಿದೆ. ಭಾಗ್ಯ ಚಲಮರದ್ ಎಂಬ ಮೂರು ವರ್ಷ ಮಗುವೇ ಮೃತಪಟ್ಟ ದುರ್ದೈವಿ.

ಎರಡು ದಿನಗಳ ಹಿಂದೆ ನಿರಂತರ ಬಿರುಗಾಳಿ ಮಳೆಗೆ ಮನೆ ಕುಸಿದು ಬಿದ್ದಿತ್ತು. ಈ ವೇಳೆ ಪುಟ್ಟ ಮಗುವಿಗೆ ಗಂಭೀರ ಗಾಯವಾಗಿತ್ತು. ಅವಶೇಷಗಳ ನಡುವೆ ಸಿಲುಕಿದ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಬಿದ್ದ ಹೊಡೆತಗಳು ಗಂಭೀರವಾಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಹುಬ್ಬಳ್ಳಿ ಕಿಮ್ಸ್ ಕೊನೆಯುಸಿರೆಳೆದಿದೆ.
ಈ ಘಟನೆಯಲ್ಲಿ ಇಬ್ಬರು ಮಕ್ಕಳು ಗಾಯಗೊಂಡಿದ್ದು, ಅದಕ್ಕೆ ಚಿಕಿತ್ಸೆ ಮುಂದುವರಿದಿದೆ. ಹಾವೇರಿ ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಬೀದರ್‌ನಲ್ಲಿ ಹಳ್ಳದಲ್ಲಿ ಕೊಚ್ಚಿ ಹೋದ ಯುವಕ

ಬೀದರ್‌: ಬಸವಕಲ್ಯಾಣ ತಾಲೂಕಿನ ಧನ್ನೂರ (ಆರ್) ಗ್ರಾಮದಲ್ಲಿ ನಡೆದ ಉಕ್ಕಿ ಹರಿಯುತ್ತಿರುವ ನೀರಿನ ಹಳ್ಳದಲ್ಲಿ ಕೊಚ್ಚಿ ಹೋದ ಯುವಕನೊಬ್ಬ ಮೃತಪಟ್ಟಿದ್ದಾರೆ. ಮಲ್ಲಪ್ಪ ಶರಣಪ್ಪ ಕರೆಪನೋರ್ (25) ನೀರಿನಲ್ಲಿ ಕೊಚ್ಚಿಕೊಂಡು ಹೋದ ಯುವಕ. ಗ್ರಾಮದ ಹೊರವಲಯದಲ್ಲಿರುವ ತೋಟದ ಮನೆಯಿಂದ ಮರುಳುವಾಗ ದುರ್ಘಟನೆ ಸಂಭವಿಸಿದೆ. ಧಾರಾಕಾರವಾಗಿ ಮಳೆ ಸುರಿದ ಹಿನ್ನೆಲೆಯಲ್ಲಿ ಹಳ್ಳದಲ್ಲಿ ನೀರು ಜೋರಾಗಿ ಹರಿಯುತ್ತಿತ್ತು. ಆದರೆ, ದಾಟಬಹುದು ಎಂಬ ಧೈರ್ಯದಲ್ಲಿ ಆತ ಮುಂದಡಿ ಇಟ್ಟಿದ್ದ. ಆದರೆ, ನೀರಿನ ಸೆಳೆತಕ್ಕೆ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾನೆ. ಯುವಕನಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

ಸೋಮವಾರ ರಾಜ್ಯದಲ್ಲಿ ಸಂಭವಿಸಿತ್ತು ನಾಲ್ಕು ಮಳೆ ಸಾವು

  1. ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಮಾಕನೂರು ಗ್ರಾಮದ ಬಳಿ ತುಂಗಭದ್ರಾ ನದಿಯಲ್ಲಿ ಕೈಕಾಲು ತೊಳೆಯಲು ಹೋದ ಮಂಜುನಾಥ ಬಸವರಾಜ ಆನಂದಿ (27) ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ.
  2. ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಬಿರಾಳ್ ಬಿ ಗ್ರಾಮದಲ್ಲಿ ಮಳೆಯಿಂದ ಮನೆ ಗೋಡೆ ಕುಸಿದು ಬಿದ್ದಿದ್ದರಿಂದ ಬಸಮ್ಮ (40) ಎಂಬ ಮಹಿಳೆ ಮೃತಪಟ್ಟಿದ್ದಾರೆ.
  3. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ರಾಮತೀರ್ಥದಲ್ಲಿ ಈಜಲು ಹೋದ ಪ್ರಥಮ ಪಿಯುಸಿ ವಿದ್ಯಾರ್ಥಿ ಮಣಿಕಂಠ ಮಂಜುನಾಥ ನಾಯ್ಕ (17) ನೀರಿನಲ್ಲಿ ಮುಳುಗಿ ಮೃಪಟ್ಟಿದ್ದಾನೆ. ಈತ ಹೊನ್ನಾವರದ ರಾಯಲಕೇರಿ ನಿವಾಸಿ.
  4. ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೊಲ್ಲೂರು ಬಳಿಯಿರುವ ಅರಶಿನಗುಂಡಿ ಜಲಪಾತದಲ್ಲಿ ಕಾಲು ಜಾರಿ ಬಿದ್ದು ಯುವಕ ಮೃತಪಟ್ಟಿದ್ದ. ಭದ್ರಾವತಿ ಮೂಲದ ಶರತ್ ಕುಮಾರ್ (23) ಮೃತಪಟ್ಟ ಯುವಕ. ಕೊಲ್ಲೂರಿಗೆ ಕಾರಿನಲ್ಲಿ ಬಂದಿದ್ದ ಯುವಕ, ಜಲಪಾತ ವೀಕ್ಷಣೆಗೆ ತೆರಳಿದ್ದ.

ಇದನ್ನೂ ಓದಿ: Rain News : ಜಲಪಾತದಲ್ಲಿ ಕಾಲು ಜಾರಿದ ಯುವಕನ ಶವ ಇನ್ನೂ ಪತ್ತೆ ಇಲ್ಲ; ಹುಡುಕಲು ಹೋದ ಸಾಹಸಿಗೂ ಡೇಂಜರ್

Exit mobile version