Site icon Vistara News

Rain News: ಚಿತ್ತಾಪುರದಲ್ಲಿ ಸಿಡಿಲು ಬಡಿದು ಇಬ್ಬರ ದುರ್ಮರಣ; ಹೊತ್ತಿ ಉರಿದ ತೆಂಗಿನ ಮರ

Rain News

ಕಲಬುರಗಿ: ಜಿಲ್ಲೆ ಚಿತ್ತಾಪುರ ತಾಲೂಕಿನ ಲಾಡ್ಲಾಪುರ ಗ್ರಾಮದಲ್ಲಿ ಸಿಡಿಲು ಬಡಿದು (Lightning strike) ಇಬ್ಬರು ಮೃತಪಟ್ಟಿದ್ದಾರೆ. ವಾಡಿ ಪಟ್ಟಣದ ರೈಲ್ವೆ ಕಾಲೋನಿಯ ಏಕನಾಥ್ ವಾಘಮೂಡೆ (55), ಸತೀಶ್ ಶಳಕೆ (40) ಮೃತರು. ಜಮೀನಿನಿಂದ ಮನೆಗೆ ಹೋಗುತ್ತಿದ್ದಾಗ ಗುಡುಗು ಸಿಡಿಲು ಸಹಿತ ಮಳೆ (Rain News) ಆರಂಭವಾಗಿದೆ. ಈ ವೇಳೆ ರಕ್ಷಣೆಗಾಗಿ ಮರದಡಿ ನಿಂತಿದ್ದಾಗ ಸಿಡಿಲು ಬಡಿದು ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ವಾಡಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಅರ್ಧ ಗಂಟೆಗೂ ಹೆಚ್ಚುಕಾಲ ಹೊತ್ತಿ ಉರಿದ ತೆಂಗಿನ ಮರ

ರಾಯಚೂರು: ಶಕ್ತಿನಗರದ ದತ್ತಾತ್ರೇಯ ದೇವಸ್ಥಾನದ ಆವರಣದದಲ್ಲಿ ಸಿಡಿಲು ಬಡಿದಿ ತೆಂಗಿನ ಮರ ಹೊತ್ತಿ ಉರಿದಿದೆ. ತೆಂಗಿನ ಮರಕ್ಕೆ ನೇರವಾಗಿ ಸಿಡಿಲು ಬಡಿದ ಕಾರಣ ಮಳೆಯ ನಡುವೆಯೂ ಅರ್ಧ ಗಂಟೆಗೂ ಹೆಚ್ಚುಕಾಲ ತೆಂಗಿನ ಮರ ಹೊತ್ತಿ ಉರಿಯಿತು.

ಕೆರೆಯಂತಾದ ಬಡಾವಣೆ

ಯಾದಗಿರಿ: ಜಿಲ್ಲೆಯಲ್ಲಿ ಬಿರುಗಾಳಿ ಸಹಿತ ಭಾರಿ ಮಳೆ ಹಿನ್ನೆಲೆ ಯಾದಗಿರಿ ನಗರದ ಹೊಸಹಳ್ಳಿ ಕ್ರಾಸ್ ಬಳಿಯ ಬಡಾವಣೆಯೊಂದು ಕೆರೆಯಂತಾಗಿದೆ. ಮಳೆ‌ ನಿಂತ ಮೇಲೂ ಮನೆಯಿಂದ ಹೊರ ಬರಲಾಗದೆ ನಿವಾಸಿಗಳ ಪರದಾಡುತ್ತಿದ್ದಾರೆ. ಸತತ ಮೂರು ಗಂಟೆಗಳ ಕಾಲ ಸುರಿದ ಮಳೆಯಿಂದ ರಸ್ತೆ ಮೇಲೂ ನೀರು ಆವರಿಸಿಕೊಂಡಿದ್ದರಿಂದ ವಾಹನ ಸವಾರರ ಪರದಾಡುತ್ತಿದ್ದಾರೆ.

ರಸ್ತೆ ಮೇಲೆ ಉರುಳಿ ಬಿದ್ದ ಬೃಹತ್ ಮರ

ರಾಯಚೂರು: ಬಿರುಗಾಳಿ ಸಹಿತ ಮಳೆಗೆ ರಸ್ತೆಗೆ ಬೃಹತ್ ಮರ ಉರುಳಿ ಬಿದ್ದ ಘಟನೆ ರಾಯಚೂರು ನಗರದ ಆರ್.ಬಿ. ರಸ್ತೆಯಲ್ಲಿ ನಡೆದಿದೆ. ರಸ್ತೆ ಬದಿ ಇದ್ದ ತಳ್ಳುವ ಗಾಡಿ ಮೇಲೆ ಮರ ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಬೃಹತ್ ಮರದ ಜತೆ ಕೆಲ ವಿದ್ಯುತ್ ಕಂಬಗಳು ನೆಲಕಚ್ಚಿವೆ. ರಸ್ತೆಗೆ ಮರ ಉರುಳಿ ಬಿದ್ದಿದ್ದರಿಂದ ಸಂಚಾರ ಅಸ್ತವ್ಯಸ್ತವಾಗಿದೆ.

ಇದನ್ನೂ ಓದಿ | Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

ಮೊಬೈಲ್ ಟವರ್ ರಾಡ್ ಕಳಚಿ ಬಿದ್ದು ವಿದ್ಯಾರ್ಥಿನಿಗೆ ಗಾಯ

ಕಲಬುರಗಿ: ಮೊಬೈಲ್ ಟವರ್ ರಾಡ್ ಕಳಚಿ ಬಿದ್ದು ವಿದ್ಯಾರ್ಥಿನಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಚಿತ್ತಾಪುರ ತಾಲೂಕಿನ ಲಾಡ್ಲಾಪುರ ಗ್ರಾಮದಲ್ಲಿ ನಡೆದಿದೆ. ಸುಮಾ ಗಾಯಗೊಂಡ ಯುವತಿ. ಈಕೆಯನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಲಾಡ್ಲಾಪುರ ಗ್ರಾಮದ ಮನೆಯ ಮುಂದೆ ನಿಂತಿದ್ದಾಗ, 180 ಅಡಿ ಎತ್ತರದ ಬಿಎಸ್‌ಎನ್‌ಎಲ್ ಟವರ್‌ನ ರಾಡ್‌ ಕಳಚಿ ಬಿದ್ದಿದ್ದರಿಂದ ವಿದ್ಯಾರ್ಥಿನಿ ಗಾಯಗೊಂಡಿದ್ದಾಳೆ. ಕಳೆದ ಹಲವು ವರ್ಷಗಳಿಂದ ಕಾರ್ಯ ಸ್ಥಗಿತಗೊಂಡಿರುವ ಟವರ್‌ನ ರಾಡುಗಳು ಸಡಿಲಗೊಂಡಿದ್ದು ನೇತಾಡುತ್ತಿವೆ. ಸಣ್ಣ ಗಾಳಿಗೂ ಸಹ ಯಾವುದೇ ಕ್ಷಣದಲ್ಲಿ ರಾಡ್‌ಗಳು ಬಿದ್ದು ಜನರ ಪ್ರಾಣಕ್ಕೆ ಕುತ್ತು ತರುವ ಸಾಧ್ಯತೆ ಇದೆ.

ಇದನ್ನೂ ಓದಿ | Monsoon 2024: ಮೇ 31 ರಿಂದ ಕರ್ನಾಟಕದಲ್ಲಿ ಶುರುವಾಗುತ್ತಾ ಮುಂಗಾರು ಮಳೆ ದರ್ಬಾರ್‌!

ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ನ ಹಳೇ ಟವರ್ ತೆರವು ಮಾಡಿ ಎಂದು ಸ್ಥಳೀಯರು ಹಲವು ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಹೀಗಾಗಿ ಗಾಳಿ ಮಳೆ ಸಮಯದಲ್ಲಿ ಜನರು ಟವರ್‌ ಬಳಿ ಆತಂಕದಿಂದ ಓಡಾಡುವಂತಾಗಿದೆ.

Exit mobile version