ಬೆಂಗಳೂರು: ರಾಜ್ಯದಲ್ಲಿ ಭಾನುವಾರ ಸುರಿದ ಮಳೆಯು ನಾನಾ ಅವಾಂತರವನ್ನೇ ಸೃಷ್ಟಿಸಿದ್ದು, ಸಾವು-ನೋವಿಗೂ ಕಾರಣವಾಗಿದೆ. ಹಲವು ಜಿಲ್ಲೆಗಳಲ್ಲಿ ರಾತ್ರಿಯಿಡೀ ಮಳೆ ಸುರಿದು ರೈತರು ಕಂಗಾಲಾಗಿದ್ದಾರೆ.
ವಿದ್ಯುತ್ ತಂತಿ ತುಳಿದು ಯುವಕ ಸಾವು
ಮೈಸೂರಿನಲ್ಲಿ ಮಳೆ ಅನಾಹುತಕ್ಕೆ ಯುವಕನೊಬ್ಬ ಪ್ರಾಣ ಕಳೆದುಕೊಂಡಿದ್ದಾನೆ. ಪಿರಿಯಾಪಟ್ಟಣ ತಾಲೂಕು ಬಾರಸೆ ಗ್ರಾಮದಲ್ಲಿ ವಿದ್ಯುತ್ ತಂತಿ ತುಳಿದು ಯುವಕ ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಸ್ವಾಮಿ (18) ಮೃತ ದುರ್ದೈವಿ. ಹರೀಶ್ ಹಾಗೂ ಸಂಜಯ್‌ಗೆ ಗಾಯಾಳನ್ನು ಪಿರಿಯಾಪಟ್ಟಣ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮಳೆ ಗಾಳಿಯಿಂದಾಗಿ ಜಮೀನಿನಲ್ಲಿ ವಿದ್ಯುತ್ ತಂತಿ ಕೆಳಗೆ ಬಿದ್ದಿತ್ತು. ವಿದ್ಯುತ್ ತಂತಿ ಪಕ್ಕಕ್ಕೆ ಸರಿಸಲು ಹೋಗಿ ಈ ಅನಾಹುತ ನಡೆದಿದೆ. ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮರ ಬಿದ್ದು ವಾಹನ ಜಖಂ
ಕೊಪ್ಪಳದ ಕುಕನೂರು ಪಟ್ಟಣದ 1ನೇ ವಾರ್ಡ್‌ನಲ್ಲಿ ರಾತ್ರಿ ಸುರಿದ ಗಾಳಿ ಮಳೆಗೆ ಟಾಟಾ ಏಸ್ ಮೇಲೆ ಮರವೊಂದು ಬಿದ್ದು, ಜಖಂಗೊಂಡಿದೆ. ಪರಶುರಾಮ ಪೊಳದ ಎಂಬುವವರಿಗೆ ಸೇರಿದ ಟಾಟಾಏಸ್ ವಾಹನಕ್ಕೆ ಹಾನಿಯಾಗಿದೆ. ಮರ ಬಿದ್ದ ಪರಿಣಾಮ ಮನೆಯೊಂದರ ಛಾವಣಿಗೂ ಹಾನಿಯಾಗಿದೆ. ಅದೃಷ್ಠವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ.
ಮಳೆಗೆ ಬೆಳೆ ಹಾನಿ
ಚಾಮರಾಜನಗರದ ಹನೂರು ತಾಲೂಕಿನ ಅನಾಪುರ ಗ್ರಾಮದಲ್ಲಿ ಜೋಳದ ಬೆಳೆ ನೆಲಕಚ್ಚಿದೆ. ಉಮೇಶ್ ಎಂಬುವವರು 2 ಎಕರೆ ಜಮೀನಿನಲ್ಲಿ ಜೋಳ ಬೆಳೆದಿದ್ದರು. ಗಾಳಿ ಸಹಿತ ಬಂದ ಮಳೆಗೆ ಬೆಳೆಯು ಸಂಪೂರ್ಣ ನೆಲಕಚ್ಚಿದೆ. ಬಸವಟ್ಟಿ ಗ್ರಾಮದಲ್ಲಿ ಬಿರುಗಾಳಿ ಸಹಿತ ಮಳೆಗೆ ಬಾಳೆ ಬೆಳೆ ನೀರುಪಾಲಾಗಿದೆ. ಗ್ರಾಮದ ಬಿಪಿ ವೀರಣ್ಣ ಹಾಗೂ ಬಾಬು ಎಂಬ ರೈತರಿಗೆ ಸೇರಿದ ಮೂರೂವರೆ ಸಾವಿರಕ್ಕೂ ಹೆಚ್ಚು ಬಾಳೆ ಕಟ್ಟೆ ನಾಶವಾಗಿದೆ. ಲಕ್ಷಾಂತರ ರೂಪಾಯಿ ನಷ್ಟ ವಾಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಬೆಳೆ ನಾಶದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಸೂಕ್ತ ಪರಿಹಾರಕ್ಕೆ ಆಗ್ರಹಿಸಿದ್ದಾರೆ.
ಮಳೆ ಗಾಳಿಗೆ ಬಾಳೆ ತೋಟ ನೆಲಸಮ
ಚಿತ್ರದುರ್ಗದ ಹಿರಿಯೂರಲ್ಲಿ ಗಾಳಿ ಸಹಿತ ಮಳೆಗೆ ಅವಾಂತರವೇ ಸೃಷ್ಟಿಯಾಗಿದೆ. ಗಾಳಿ ಸಹಿತ ಮಳೆಗೆ ಬಾಳೆ ತೋಟ ನೆಲಸಮವಾಗಿದೆ. ಸಿದ್ಧಿ ವಿನಾಯಕ ವೃತ್ತದಲ್ಲಿ ತೆಂಗಿನ ಮರ ನೆಲಕ್ಕುರುಳಿದೆ. ವಿದ್ಯುತ್ ತಂತಿಯ ಮೇಲೆ ಮರದ ಕೊಂಬೆಗಳು ಬಿದ್ದ ಕಾರಣ, ನಗರದ ಹಲವೆಡೆ ವಿದ್ಯುತ್ ಕಡಿತವಾಗಿತ್ತು. ಜತೆಗೆ ಗಾಳಿಯ ರಭಸಕ್ಕೆ ಶೆಡ್ಡುಗಳ ಛಾವಣಿಗಳು ನೆಲಕಚ್ಚಿದ್ದವು.
ಆಲಿಕಲ್ಲು ಮಳೆಗೆ ತತ್ತರಿಸಿದ ರೈತರು
ಚಿಕ್ಕಬಳ್ಳಾಪುರದಲ್ಲಿ ರಾತ್ರಿ ಸುರಿದ ಆಲಿಕಲ್ಲು ಮಳೆಗೆ ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ನೂರಾರು ಎಕರೆಯಲ್ಲಿ ಬೆಳೆದಿದ್ದ ಮಾವು ಮಣ್ಣು ಪಾಲಾಗಿದೆ. ರಾತ್ರಿ ಬಿರುಗಾಳಿ ಸಮೇತ ಸುರಿದಿದ್ದ ಆಲಿಕಲ್ಲು ಮಳೆಗೆ ಮರದಿಂದ ಮಾವು ಉದುರಿ ಬಿದ್ದಿದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆದಿದ್ದ ಬೆಳೆಯು ನಾಶವಾಗಿದ್ದರಿಂದ ರೈತರು ಕಂಗಾಲಾಗಿದ್ದಾರೆ.
ಮಳೆ ಹಾನಿ ಪ್ರದೇಶಗಳಿಗೆ ಶಿಡ್ಲಘಟ್ಟ ಶಾಸಕ ಬಿ.ಎನ್ ರವಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ರೈತರು ತಮ್ಮ ಅಳಲನ್ನು ತೋಡಿಕೊಂಡರು. ಬೆಳೆ ಪರಿಹಾರ ಕೊಡಿಸುವಂತೆ ಶಾಸಕರಿಗೆ ಮನವಿ ಮಾಡಿಕೊಂಡರು.
ಕೋಲಾರದಲ್ಲೂ ಮಳೆ ಅವಾಂತರ
ಕೋಲಾರದ ಶ್ರೀನಿವಾಸಪುರ ತಾಲೂಕಿನ ಹಲವೆಡೆ ಮಳೆ ಅವಾಂತರಕ್ಕೆ ರೈತರು ಕಂಗಾಲಾಗಿದ್ದಾರೆ. ಬಿರುಗಾಳಿ ಮಳೆಯಿಂದಾಗಿ ಕೊಯ್ಲಿಗೆ ಬಂದಿದ್ದ ಮಾವು ನೆಲಕಚ್ಚಿದೆ. ನೇರಳೆ ಮರ, ಮಾವು ಮರಗೆಳ ಬೆಳೆಗಳಿಗೂ ಮಳೆಯಿಂದ ಹಾನಿಯಾಗಿವೆ.
ಮಳೆಗೆ ರಸ್ತೆಗೆ ಅಡ್ಡಲಾಗಿ ಮರಗಳು ಬಿದ್ದು ಶೆಟ್ಟಿಹಳ್ಳಿ, ವೈ ಹೊಸಕೋಟೆ ಸೇರಿ ಹಲವು ಗ್ರಾಮಗಳ ಸಂಪರ್ಕ ಕಡಿತವಾಗಿದೆ. ವಿದ್ಯುತ್ ತಂತಿಗಳ ಮೇಲೆ ಮರಗಳು ಬಿದ್ದ ಕಾರಣ, ನಂಬಿಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ 12ಕ್ಕೂ ಹೆಚ್ಚು ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಡಿತವಾಗಿದೆ.
ಇದನ್ನೂ ಓದಿ: Bangalore Rain: ಬೆಂಗಳೂರಲ್ಲಿ ಅಸುರಕ್ಷಿತ ಅಂಡರ್‌ಪಾಸ್ ಬಂದ್; ಮಳೆಗಾಲ ಮುಗಿಯುವವರೆಗೆ ಕ್ರಮ
ಇತ್ತ ದೊಡ್ಡಬಳ್ಳಾಪುರ ತಾಲೂಕಿನ ಸುತ್ತಮುತ್ತ ಗ್ರಾಮೀಣ ಭಾಗದಲ್ಲಿ ಬೆಳೆ ಹಾನಿಯಾಗಿದೆ. ತಡರಾತ್ರಿ ಆಲಿಕಲ್ಲು ಸಹಿತ ಭಾರಿ ಗಾಳಿ ಮಳೆಗೆ ಹತ್ತಾರು ಎಕರೆ ಮಿಶ್ರ ಬೆಳೆಗಳು ಮಣ್ಣು ಪಾಲಾಗಿದೆ. ಹೂಕೋಸು, ಜೋಳ, ಹೀರೆಕಾಯಿ ಹಾಗೂ ಹೂ ಬೆಳೆಗಳು ಸೇರಿದಂತೆ ಹಲವು ಬೆಳೆಗಳಿಗೆ ಹಾನಿಯಾಗಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.