ಶಿವಾನಂದ ಹಿರೇಮಠ, ವಿಸ್ತಾರ ನ್ಯೂಸ್ ಗದಗ
ಬೆಳಗಾವಿ ಜಿಲ್ಲೆಯ ನವಿಲು ತೀರ್ಥ ಜಲಾಶಯದಲ್ಲಿ ನೀರಿನ ಒಳಹರಿವು ಹೆಚ್ಚಾಗಿದ್ದರಿಂದ 12500 ಕ್ಯೂಸೆಕ್ ನೀರನ್ನು ಹರಿಬಿಡಲಾಗಿದೆ. ಪರಿಣಾಮ ಗದಗ ಜಿಲ್ಲೆಯ ನರಗುಂದ ಮತ್ತು ರೋಣ ತಾಲೂಕಿನ ಮಲಪ್ರಭಾ ನದಿ ಪಾತ್ರದ ಹಳ್ಳಿ ಜನರು ಜೀವ ಹಿಡಿದು ಬದುಕುವಂತಾಗಿದೆ. ಇದು ಕೇವಲ ಈ ವರ್ಷದ ಸಮಸ್ಯೆಯಲ್ಲ. ಪ್ರತಿ ವರ್ಷವೂ ಇದೇ ಗೋಳು.
ಬೆಳಗಾವಿ ಜಿಲ್ಲೆಯ ಮಲಪ್ರಭಾ ಅಚ್ಚುಕಟ್ಟು ಪ್ರದೇಶದಲ್ಲಿ ಅತಿ ಹೆಚ್ಚು ಮಳೆಯಾದರೆ ಗದಗ ಜಿಲ್ಲೆಯ ನರಗುಂದ ಮತ್ತು ರೋಣ ತಾಲೂಕಿನ 24 ಹಳ್ಳಿಗಳು ಜಲಾವೃತಗೊಂಡು 4100 ಹೆಕ್ಟೇರ್ ಪ್ರದೇಶ ಕೃಷಿ ಭೂಮಿ ನೀರಿಗೆ ಆಹುತಿಯಾಗುತ್ತಿದೆ. ಬೆಳಗಾವಿ ಜಿಲ್ಲೆಯ ಸವದತ್ತಿ ಬಳಿ ಮಲಪ್ರಭಾ ನದಿಗೆ ನಿರ್ಮಿಸಿರುವ ನವಿಲು ತೀರ್ಥ ಜಲಾಶಯದಿಂದ ನೀರನ್ನು ಏಕಾಏಕಿ ಹೊರ ಬಿಡುವುದರಿಂದ ಗದಗ ಜಿಲ್ಲೆಯಲ್ಲಿ ಹರಿದ ಮಲಪ್ರಭಾ ನದಿ ಪ್ರವಾಹ ಬಂದು ನದಿ ಪಾತ್ರದಲ್ಲಿನ ಹಳ್ಳಿಗಳು, ಕೃಷಿ ಭೂಮಿ ಜಲಾವೃತಗೊಳ್ಳುತ್ತದೆ. ಈ ಸಂದರ್ಭದಲ್ಲಿ ಹಲವಡೆ ಸಂಪರ್ಕ ಕಡಿತ, ಸೇತುವೆಗಳು ಮುಳಗುವುದು, ಹಳ್ಳಿಗಳು ನಡುಗಡ್ಡೆಯಂತಾಗುವುದು ಸಾಮಾನ್ಯ.
ನರಗುಂದ ತಾಲೂಕಿ ಲಖಮಾಪುರ, ಬೆಳ್ಳೆರಿ, ವಾಸನ, ಕೊಣ್ಣುರು ಬುದಿಹಾಳ, ಕಲ್ಲಾಪುರ ಮತ್ತು ಶಿರೋಳ ಗ್ರಾಮಗಳು ಹಾಗೂ ರೋಣ ತಾಲೂಕಿನ ಹೊಳೆಆಲೂರು ಹೋಬಳಿಯ 16 ಹಳ್ಳಿಗಳಿಗೆ ಈ ಸಂಕಷ್ಟ ತಪ್ಪಿದಲ್ಲ.
ಲಖಮಾಪುರ ಗ್ರಾಮದಲ್ಲಿ 4 ಮನೆಗಳು ಸಂಪೂರ್ಣ ಜಲಾವೃತಗೊಂಡು, ಕುಟುಂಬ ಸದಸ್ಯರಿಗೆ ತಾತ್ಕಾಲಿಕ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ. ಕೊಣ್ಣುರು ಗ್ರಾಮದ ಹಳೆ ಬ್ರಿಡ್ಜ್ ನೀರಿನಲ್ಲಿ ಮುಳುಗಿದೆ. ಬಾಗಲಕೋಟೆ ಜಿಲ್ಲೆಯ ಬಾದಾಮಿ ನಗರಕ್ಕೆ ಸಂಪರ್ಕಿಸುವ ಹೊಳೆಆಲೂರು ಬ್ರಿಡ್ಜ್ ಜಲಾವೃತಗೊಂಡು ಸಂಪರ್ಕ ಕಡಿತಗೊಂಡಿದೆ.
ಈ ಭಾಗದ ತೋಟಗಾರಿಕೆ ಬೆಳೆ, ಮೆಕ್ಕೆ ಜೋಳ, ಹತ್ತಿ, ಈರುಳ್ಳಿ, ಹತ್ತಿ, ಶೆಂಗಾ, ಮೆಣಸಿನಕಾಯಿ ಬೆಳೆ ಸಂಪೂರ್ಣ ನಾಶವಾಗಿದೆ. ನೀರಿನ ಪ್ರವಾಹಕ್ಕೆ ಸಿಕ್ಕ ಈ ಬೆಳೆಗಳಿಗೆ ಹಳದಿ ರೋಗ ಕಟ್ಟಿಟ್ಟ ಬುತ್ತಿ. ಇನ್ನೂ ಭಾಗಶಃ ರೈತರು ಕಬ್ಬು ಬೆಳೆದಿದ್ದಾರೆ. ನೀರಿನ ವೇಗಕ್ಕೆ ಮೇಲ್ಮೈ ಮಣ್ಣಿನ ಪದರು ಕೊಚ್ಚಿ ಹೋಗುವುದರಿಂದ ಕಬ್ಬಿನ ಇಳುವರಿಯು ಕಡಿಮೆಯಾಗುತ್ತದೆ ಎಂಬುದು ಕೃಷಿ ಇಲಾಖೆ ತಿಳಿಸಿದೆ.
ಬೆಣ್ಣೆಹಳ್ಳದ ಪ್ರಭಾವವೇ ಹೆಚ್ಚು
ಧಾರವಾಡ ಜಿಲ್ಲೆಯ ಕುಂದಗೋಳ, ನವಲಗುಂದ, ಗದಗ ಜಿಲ್ಲೆಯ ನರಗುಂದ ಗಡಿ ಭಾಗದಲ್ಲಿ ಹರಿದು ರೋಣ ತಾಲೂಕು ಪ್ರವೇಶಿಸುವ ಬೆಣ್ಣೆಹಳ್ಳದ ಪ್ರಭಾವವೇ ಹೆಚ್ಚು. ಮಲಪ್ರಭಾ ನದಿ ಸೇರುವ ಈ ಬೆಣ್ಣೆಹಳ್ಳ, ನದಿಗಿಂತಲೂ ಹೆಚ್ಚು ವೇಗ ಹರಿಯುವುದರಿಂದ ಹಳದ ಪ್ರವಾಹ ನಿಯಂತ್ರಿಸಲು ಸಾಧ್ಯವಿಲ್ಲ ಎಂಬುದು ಅಧಿಕಾರಿಗಳ ಅಭಿಪ್ರಾಯ.
ಪ್ರಾಣ ಲೆಕ್ಕಿಸದೆ ಕರ್ತವ್ಯ ನಿರ್ವಹಿಸಿದ ಹೆಸ್ಕಾಂ ಸಿಬ್ಬಂದಿ
ಮಲಪ್ರಭಾ ನದಿ ಪ್ರವಾಹದಿಂದ ನರಗುಂದ ತಾಲೂಕಿನ ಕೊಣ್ಣುರು ಗ್ರಾಮದಲ್ಲಿ ನೀರು ನುಗ್ಗಿದ್ದು, ಮುಂಜಾಗ್ರತಾ ಕ್ರಮವಾಗಿ ಜಮೀನಿನಲ್ಲಿದ್ದ ಟ್ರಾನ್ಸ್‌ಫಾರ್ಮರ್ ದುರಸ್ತಿಗೆ ಹೆಸ್ಕಾಂ ಸಿಬ್ಬಂದಿ ಕಾರ್ಯ ಪ್ರವೃತ್ತರಾಗಿದ್ದಾರೆ. ನದಿ ನೀರು ಸುತ್ತುವರೆದು ಅಪಾಯ ಮಟ್ಟ ಮೀರಿದ್ದರು ಕೂಡ ಮಂಜುನಾಥ ಚಂದನ್ನವರ್ ಎಂಬ ಹೆಸ್ಕಾಂ ಸಿಬ್ಬಂದಿ ನೀರಲ್ಲಿ ಈಜಿಕೊಂಡು ಹೋಗಿ ದುರಸ್ತಿ ಕಾರ್ಯ ಮುಗಿಸಿ ಮತ್ತೆ ನೀರಿನಲ್ಲಿ ಈಜಿ ದಡ ಸೇರಿದ್ದಾನೆ. ಇವರ ಕರ್ತವ್ಯ ಪ್ರಜ್ಞೆಗೆ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿಗಳು ಏನಂತಾರೆ?
ಮಲಪ್ರಭಾ ನದಿ ಪಾತ್ರದ ಹಳ್ಳಿ ಜನರಿಗೆ ಪ್ರವಾಹದ ಕುರಿತು ಮುನ್ನೆಚ್ಚರಿಕೆ ನೀಡಲಾಗಿದೆ. ಪ್ರವಾಹ ಪ್ರದೇಶಗಳಿಗೆ ಹೋಗದಂತೆ ಮತ್ತು 24/7 ಸಹಾಯವಾಣಿಗೆ ಕರೆ ಮಾಡುವಂತೆ ಸೂಚಿಸಲಾಗಿದೆ. ಸ್ಥಳಕ್ಕೆ ನಾನೂ ಭೇಟಿ ನೀಡಿ ಪರಿಶೀಲಿಸಿದ್ದೇನೆ. ನರಗುಂದ, ರೋಣ ತಾಲೂಕಾಧಿಕಾರಿಗಳಿಂದ ಮಾಹಿತಿ ಪಡೆಯುತ್ತಿದ್ದೇನೆ ಎಂದು ಗದಗ ಜಿಲ್ಲಾಧಿಕಾರಿಗಳಾದ ವೈಶಾಲಿ ಹೇಳಿದ್ದಾರೆ.
ಇದನ್ನೂ ಓದಿ | Rain News | ಕಾಫಿನಾಡಿನಲ್ಲಿ ಮಳೆ; ಜಪಾವತಿ ನದಿ ಅಬ್ಬರಕ್ಕೆ ಕೊಚ್ಚಿ ಹೋದ ಕಾಫಿ, ಅಡಕೆ ತೋಟ