Site icon Vistara News

Ganesh Chaturthi | ಹಬ್ಬದ ಸಂಭ್ರಮ ಕಸಿದ ಮಳೆ; ಯಾದಗಿರಿಯ ಗ್ರಾಮವೊಂದರಲ್ಲಿ ಇಲ್ಲ ಗಣೇಶೋತ್ಸವ!

Ganesh Chaturthi

| ವಿಶ್ವಕುಮಾರ್ ಭೋಗನಳ್ಳಿ, ಯಾದಗಿರಿ
ನಾಡಿನೆಲ್ಲೆಡೆ ಗೌರಿ ಗಣೇಶ ಹಬ್ದದ ಸಂಭ್ರಮ ಮನೆ ಮಾಡಿದ್ದು, ವಿಘ್ನ ನಿವಾರಕ ಎಂದು ಗಣೇಶನನ್ನು ಪೂಜಿಸಲಾಗುತ್ತಿದೆ. ಆದರೆ, ಜಿಲ್ಲೆಯ ಗ್ರಾಮವೊಂದರಲ್ಲಿ ಗಣೇಶ ಹಬ್ಬಕ್ಕೆ (Ganesh Chaturthi) ವರುಣ ಬ್ರೇಕ್ ಹಾಕಿದ್ದು, ಅದ್ಧೂರಿಯಾಗಿ ಗಣೇಶೋತ್ಸವ ಮಾಡುತ್ತಿದ್ದ ಆ ಗ್ರಾಮದಲ್ಲಿ ಈ ಬಾರಿ ಹಬ್ಬದ ಸಂಭ್ರಮ ಇಲ್ಲದಂತಾಗಿದೆ.

ರಾಜ್ಯದಲ್ಲಿ ಕೊರೊನಾ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಗಣೇಶನ ಹಬ್ಬಕ್ಕೆ ಬ್ರೇಕ್ ಬಿದ್ದಿತ್ತು. ಹೀಗಾಗಿ ಈ ಬಾರಿ ಅದ್ಧೂರಿಯಾಗಿ ಗಣೇಶೋತ್ಸವ ಆಚರಿಸಲಾಗುತ್ತಿದೆ. ಆದರೆ, ಕಳೆದ ಒಂದು ತಿಂಗಳಿಂದ ವರುಣನ ಆರ್ಭಟದಿಂದ ಯಾದಗಿರಿ ಜಿಲ್ಲೆಯ ಜನತೆ ನೆಮ್ಮದಿಯನ್ನು ಕಸಿದುಕೊಂಡಿದ್ದು, ಸಾವು-ನೋವುಗಳು ಸಂಭವಿಸಿ, ಆಸ್ತಿ-ಪಾಸ್ತಿ ನಷ್ಟ ಉಂಟಾಗಿದೆ. ಜಿಲ್ಲೆಯ ವಡಗೇರಾ ತಾಲೂಕಿನ ನಾಯ್ಕಲ್ ಗ್ರಾಮದ ಜನರು ಬೆಳೆದ ಹತ್ತಿ, ಭತ್ತ ಸೇರಿ ಹಲವು ಬೆಳೆಗಳು ಮಳೆಯಿಂದ ನೆಲಕಚ್ಚಿದ್ದು, ಉತ್ತಮ ಆದಾಯದ ನಿರೀಕ್ಷೆಯಲ್ಲಿದ್ದವರಿಗೆ ನಿರಾಸೆ ತಂದಿದೆ. ಕೈಯಲ್ಲೂ ಹಣವಿಲ್ಲದ ಕಾರಣ ಗ್ರಾಮದಲ್ಲಿ ಯಾರೊಬ್ಬರೂ ಗಣೇಶ ಹಬ್ಬವನ್ನು ಆಚರಿಸಲು ಮುಂದಾಗಿಲ್ಲ.

ಯಾದಗಿರಿ ಜಿಲ್ಲೆಯ ನಾಯ್ಕಲ್ ಗ್ರಾಮದ ರೈತರೊಬ್ಬರ ಜಮೀನಿಗೆ ಮಳೆ ನೀರು ನುಗ್ಗಿದೆ.

ಇದನ್ನೂ ಓದಿ | Ganesh Chaturthi 2022 | ತೋಟದ ಮನೆಯಲ್ಲಿ ಗಣಪನ ಪೂಜಿಸಿದ ಮಾಜಿ ಸಿಎಂ ಕುಮಾರಸ್ವಾಮಿ

ಭೀಕರ ಮಳೆಯಿಂದ ಕೆರೆ ನೀರು ಹರಿದು ನಾಯ್ಕಲ್ ಗ್ರಾಮದಲ್ಲಿ ಸುಮಾರು ನಲವತ್ತಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದು, ಮನೆಯಲ್ಲಿದ್ದ ಪದಾರ್ಥಗಳು ನೀರು ಪಾಲಾಗಿವೆ. ಇದರಿಂದ ಒಂದು ಹೊತ್ತು ತುತ್ತಿನ ಚೀಲ ತುಂಬಿಸಿಕೊಳ್ಳಲು ಸಹ ಆಗದೆ ಜನ ಪರದಾಡುವಂತಾಗಿದೆ. ಹೀಗಾಗಿ ಗಣೇಶನ ಮೂರ್ತಿ ಪ್ರತಿಷ್ಠಾಪಿಸಿ ಆಚರಿಸಲೂ ಆಗುತ್ತಿಲ್ಲ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.

ಕಳೆದ ಕೆಲ ದಿನಗಳಿಂದ ಸುರಿದ ಭಾರಿ ಮಳೆಗೆ ರೈತರ ಜಮೀನಿನಲ್ಲಿ ಬೆಳೆದ ಹತ್ತಿ, ಭತ್ತ ಸೇರಿ ವಿವಿಧ ಬೆಳೆ ನಷ್ಟವಾಗಿದೆ. ಇಷ್ಟೆಲ್ಲ ಬೆಳೆ ಹಾನಿ ಆದರೂ ಅಧಿಕಾರಿಗಳು ಆಗಮಿಸಿ ಪರಿಹಾರ ಕಲ್ಪಿಸುವ ಕೆಲಸ ಮಾಡಿಲ್ಲ. ಉಸ್ತುವಾರಿ ಸಚಿವರು ಎಲ್ಲಿದ್ದಾರೆ ಗೊತ್ತಿಲ್ಲ. ಈಗಾಗಲೇ ಗ್ರಾಮ ಪಂಚಾಯಿತಿಗೆ ನಷ್ಟ ಪರಿಹಾರಕ್ಕೆ ಮನವಿ ಮಾಡಿದ್ದರೂ ಯಾವುದೇ ಕ್ರಮವಾಗಿಲ್ಲ.
| ಖಾನ್ ಪಟೇಲ್, ರೈತ

ಸತತ ಮಳೆಯಿಂದ ಕೆರೆ ತುಂಬಿ ಗ್ರಾಮದಲ್ಲಿನ ಮನೆಗಳಿಗೆ ನೀರು ನುಗ್ಗಿದೆ. ಇದರಿಂದ ಮನೆಯಲ್ಲಿನ ಎಲ್ಲ ಸಾಮಗ್ರಿ ನೀರುಪಾಲಾಗಿವೆ. ಪ್ರತಿವರ್ಷ ಗ್ರಾಮದಲ್ಲಿ ಎಲ್ಲ ಬೀದಿಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತಿದ್ದೆವು. ಆದರೆ ಈ ಬಾರಿ ಮಳೆ ಅನಾಹುತದಿಂದ ಗಣೇಶ ಹಬ್ಬ ಮಾಡಿಲ್ಲ.
| ಪ್ರಕಾಶ್, ಗ್ರಾಮಸ್ಥ

ಇದನ್ನೂ ಓದಿ | Ganesh chaturthi | ಕೋಲು ಬಿಟ್ಟು ಡೋಲು ಬಡಿದ ಅಥಣಿ ಪೊಲೀಸರು, ಠಾಣೆಗೇ ಬಂದ ಗಣೇಶ!

Exit mobile version