Site icon Vistara News

Rain News | ರಾಜ್ಯಾದ್ಯಂತ ಇನ್ನೆರಡು ದಿನ ಮಳೆಯಬ್ಬರ, ಮಳೆಹಾನಿಗೆ ಜನ ತತ್ತರ!

ಮಳೆರಾಯನ ಅಬ್ಬರ

ಬೆಂಗಳೂರು: ರಾಜ್ಯದ ಎಲ್ಲ ಭಾಗಗಳಲ್ಲಿ ಇನ್ನೆರಡು ದಿನ ಮಳೆಯಬ್ಬರ ಮುಂದುವರಿಯಲಿದ್ದು, ಕರಾವಳಿ ಜಿಲ್ಲೆಗಳಲ್ಲಿ ಜುಲೈ 14ರಂದು ಹಾಗೂ ಮುಂದಿನ 2 ದಿನಗಳು ದಕ್ಷಿಣ ಒಳನಾಡಿನಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ಭಾರಿ ಮಳೆಯಾಗುವ ಸಾಧ್ಯತೆ ಇದೆ.

ಚಿಕ್ಕಮಗಳೂರು, ಕೊಡಗು, ಮೈಸೂರು, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ಮುಂದಿನ ಎರಡು ದಿನಗಳವರೆಗೆ 115.6 ಮಿ.ಮೀ.ನಿಂದ 204.4 ಮಿ.ಮೀ. ಮಳೆಯಾಗುವ ಸಾಧ್ಯತೆ ಇದೆ. ಮೈಸೂರು, ಹಾಸನ, ಕೊಡಗು, ಶಿವಮೊಗ್ಗ ಮತ್ತು ಚಿಕ್ಕಮಗಳೂರಿನಲ್ಲಿ ಗುರುವಾರ ಭಾರಿ ಮಳೆಯಾಗಲಿದೆ.

ಮೈಸೂರು, ಕೊಡಗು ಜಿಲ್ಲೆಯಲ್ಲಿ ಸುಮಾರು 64.5 ಮಿ.ಮೀ.ರಿಂದ 115.5 ಮಿ.ಮೀ. ಮಳೆಯಾಗುವ ಸಾಧ್ಯತೆ ಇದ್ದು, ಬೆಂಗಳೂರಿನಲ್ಲಿ ಇನ್ನೆರಡು ದಿನ ಆಗಾಗ ಸಾಮಾನ್ಯ ಮಳೆಯಾಗಲಿದೆ. ಹೀಗಾಗಿ ಯಾವುದೇ ಅಲರ್ಟ್ ಘೋಷಣೆ ಮಾಡಲಾಗಿಲ್ಲ. ತಂಪು ವಾತಾವರಣ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಕರಾವಳಿ ತೀರದಲ್ಲಿ ಬಿರುಗಾಳಿಯ ವೇಗವು ಪ್ರತಿ ಗಂಟೆಗೆ 45-55 ಕಿ.ಮೀ. ಇದ್ದು, 65 ಕಿ.ಮೀ.ವರೆಗೂ ತಲುಪುವ ಸಾಧ್ಯತೆ ಇದೆ. ಮೀನುಗಾರರು ಈ ಅವಧಿಯಲ್ಲಿ ಸಮುದ್ರಕ್ಕೆ ತೆರಳದಂತೆ ಎಚ್ಚರಿಕೆ ನೀಡಲಾಗಿದೆ.

ಮಳೆಯಿಂದ ವಿವಿಧೆಡೆ ಮನೆಗಳ ಕುಸಿತ

ಬೆಳಗಾವಿ ಜಿಲ್ಲೆಯ ಯರಗೊಪ್ಪ ಗ್ರಾ‌ಮದಲ್ಲಿ ಧಾರಾಕಾರ ಮಳೆಗೆ ಈರಪ್ಪ ಚಂದುಗೋಳ ಎಂಬುವವರ ಮನೆಗೋಡೆ ಕುಸಿದಿದೆ.

ಬೆಳಗಾವಿ: ಧಾರಾಕಾರ ಮಳೆಗೆ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಯರಗೊಪ್ಪ ಗ್ರಾ‌ಮದ ಜನತಾ ಪ್ಲಾಟ್‌ನಲ್ಲಿ ಈರಪ್ಪ ಚಂದುಗೋಳ ಎಂಬುವವರ ಮನೆಗೋಡೆ ಕುಸಿದಿದೆ. ಅದೃಷ್ಟವಶಾತ್ ಮನೆಯಲ್ಲಿ ಇದ್ದವರೆಲ್ಲ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸೂಕ್ತ ಪರಿಹಾರ ಕಲ್ಪಿಸುವಂತೆ ಕುಟುಂಬಸ್ಥರು ಮನವಿ ಮಾಡಿದ್ದಾರೆ.

ಭಾರಿ ಮಳೆಗೆ ಕೊಡಗು ಜಿಲ್ಲೆಯ ಸೋಮವಾರಪೇಟೆ ವಾರ್ಡ್ ನಂ 3ರಲ್ಲಿ ವಲ್ಲಭಾಯಿ ರಸ್ತೆಯ ಮಹದೇವಮ್ಮ ಎಂಬುವವರ ಮನೆ ಕುಸಿದಿದೆ. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸೂಕ್ತ ಪರಿಹಾರಕ್ಕೆ ಮಹದೇವಮ್ಮ ಕುಟುಂಬ ಒತ್ತಾಯಿಸಿದೆ.

ಇದನ್ನೂ ಓದಿ | Rain fury: ಮುಂಗಾರು ಅಬ್ಬರಕ್ಕೆ ನಲುಗಿದ ಗುಜರಾತ್‌, ಮಹಾರಾಷ್ಟ್ರ, ತೆಲಂಗಾಣ; ಇನ್ನೂ ಇದೆ ಭಾರಿ ಮಳೆ

ವಿದ್ಯುತ್‌ ತಗುಲಿ ಯುವತಿ ಸಾವು

ಬಾಗಲಕೋಟೆ: ಮಳೆಯಿಂದ ಮನೆಯ ಮಾಳಿಗೆ ಸೋರುತ್ತಿದ್ದರಿಂದ ಟಾರ್ಪಲ್‌ ಹಾಕಲು ಹೋದಾಗ ವಿದ್ಯುತ್‌ ತಗುಲಿ ಯುವತಿ ಮೃತಪಟ್ಟಿದ್ದಾಳೆ. ಜಿಲ್ಲೆಯ ಬಾದಾಮಿ ತಾಲೂಕಿನ ಗೋವನಕೊಪ್ಪ ಗ್ರಾಮದ ದೇವಕ್ಕ ಮೊರಬದ್ (25) ಮೃತ ದುರ್ದೈವಿ. ಮನೆಯ ಮೇಲೆ ಯುವತಿ ಟಾರ್ಪಲ್‌ ಹಾಕಲು ಹೋಗಿದ್ದಾಗ ದುರಂತ ಸಂಭವಿಸಿದೆ. ಕುಳಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಳುಗಿದ ಸೇತುವೆ, ಸಂಚಾರ ಬಂದ್

ಬೆಳಗಾವಿ: ಪಶ್ಚಿಮ ಘಟ್ಟ ಪ್ರದೇಶದಲ್ಲಿ ಬಿಟ್ಟುಬಿಡದೇ ಸುರಿಯುತ್ತಿರುವ ಮಳೆಯಿಂದ ಭೋರ್ಗರೆಯುತ್ತಿರುವ ಖಾನಾಪುರ ತಾಲೂಕಿನ ಮಲಪ್ರಭಾ, ಪಾಂಡ್ರಿ ನದಿಗಳು ತುಂಬಿ ಹರಿಯುತ್ತಿವೆ. ಹೀಗಾಗಿ ಮಲಪ್ರಭಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಖಾನಾಪುರ-ಅನಮೊಡ ಮಾರ್ಗದಲ್ಲಿರುವ ಸೇತುವೆ ಮುಳುಗಡೆಯಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಈ ಮಾರ್ಗದಲ್ಲಿ ಪೊಲೀಸರು ಸಂಚಾರ ಬಂದ್ ಮಾಡಿದ್ದಾರೆ. ಅದೇ ರೀತಿ ನಾಲೆ ನೀರು ನುಗ್ಗಿ ಬೆಳಗಾವಿ-ಯಳ್ಳೂರು ಮಾರ್ಗದಲ್ಲಿರುವ ಗಣಪತಿ ದೇವಸ್ಥಾನ ಜಲಾವೃತವಾಗಿದ್ದು, ಗರ್ಭಗುಡಿಗೂ ನೀರು ನುಗ್ಗಿದೆ. ದೇವಸ್ಥಾನದ ಸುತ್ತಮುತ್ತಲಿನ ಸಾವಿರಾರು ಎಕರೆ ಭತ್ತದ ಗದ್ದೆಗಳು ಜಲಾವೃತವಾಗಿವೆ.‌

ನೀರು ನುಗ್ಗಿ ಕೊಳೆಯುತ್ತಿದೆ ಹೆಸರು ಬೆಳೆ

ಚಿತ್ರದುರ್ಗ: ಕೋಟೆನಾಡಿನಲ್ಲಿ ನಿರಂತರ ಮಳೆಗೆ ಕೊಯ್ಲಿಗೆ ಬಂದ ಬೆಳೆ ಜಮೀನಿನಲ್ಲೆ ಕೊಳೆಯುವ ದುಸ್ಥಿತಿ ನಿರ್ಮಾಣವಾಗಿದೆ. ಕಳೆದ 1 ವಾರದಿಂದ ಸುರಿಯುತ್ತಿರುವ ಮಳೆಗೆ ತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಮುದಿಯಪ್ಪನಹಟ್ಟಿ ಗ್ರಾಮದಲ್ಲಿ ಮಳೆಯಿಂದ ರೈತ ಮರಿಯಣ್ಣ ಎಂಬುವರ ಜಮೀನಿನಲ್ಲಿನ ಹೆಸರು ಬೆಳೆ ಕೊಳೆಯಲು ಶುರುವಾಗಿದೆ.

ಇದನ್ನೂ ಓದಿ | Rain News | ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಅವಾಂತರ: ತೋಟ, ಮನೆಗಳಿಗೆ ನುಗ್ಗಿದ ನೀರು

Exit mobile version