ಬೆಂಗಳೂರು: ಬಿಜೆಪಿಯಿಂದ ರಾಜ್ಯದಲ್ಲಿ ಬರ ಅಧ್ಯಯನ ಆರಂಭವಾದ ಬೆನ್ನಲ್ಲೇ ಮೈತ್ರಿ ಪಕ್ಷ ಜೆಡಿಎಸ್ ಕೂಡ ಬರ ಅಧ್ಯಯನ (Drought Study) ನಡೆಸಿ, ಬರ ಪರಿಸ್ಥಿತಿ ನಿರ್ವಹಣೆ ಮಾಡಲು ರಾಜ್ಯ ಸರ್ಕಾರಕ್ಕೆ ಸಲಹೆ, ಸೂಚನೆಗಳನ್ನು ನೀಡುವುದಾಗಿ ಘೋಷಿಸಿದೆ. ಇದಕ್ಕಾಗಿ ಪಕ್ಷದ ಮುಖಂಡರನ್ನು ಒಳಗೊಂಡ 24 ತಂಡಗಳನ್ನು ರಚಿಸಲಾಗಿದೆ. ಇನ್ನು 31 ಜಿಲ್ಲೆಗಳಲ್ಲೂ ರೈತ ಸಾಂತ್ವನ ಯಾತ್ರೆ ಮೂಲಕ ನಾನೇ ಸ್ವತಃ ಪ್ರವಾಸ ಮಾಡಿ ರೈತರ ಸಮಸ್ಯೆ ಆಲಿಸುತ್ತೇನೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ನಗರದ ಜೆಡಿಎಸ್ ಕಚೇರಿಯಲ್ಲಿ ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು, ಪ್ರತಿ ಜಿಲ್ಲೆಯಲ್ಲೂ ನಾನೇ ಸ್ವತಃ ಪ್ರವಾಸ ಮಾಡಿ ರೈತರ ತೊಂದರೆ ಆಲಿಸುತ್ತೇನೆ. 31 ಜಿಲ್ಲೆಯಲ್ಲೂ ರೈತ ಸಾಂತ್ವನ ಯಾತ್ರೆ ನಡೆಸುತ್ತೇವೆ. ಜನತಾ ದಳ ರೈತರ ಪರವಾಗಿದೆ. ನಮ್ಮ ಪಕ್ಷದಿಂದ 30 ಜಿಲ್ಲೆಗಳಲ್ಲೂ ತಂಡ ರಚನೆ ಮಾಡಿದ್ದೇವೆ. ಅದರ ಬಗ್ಗೆ ಡಿಟೇಲ್ಸ್ ನೀಡುತ್ತೇವೆ. ಪ್ರತಿಯೊಂದು ಜಿಲ್ಲೆಯಲ್ಲೂ ಬರ ಪರಿಸ್ಥಿತಿ, ವಿದ್ಯುತ್ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆ ಸೇರಿ ಎಲ್ಲದರ ಬಗ್ಗೆ ಪರಿಶೀಲನೆ ನಡೆಸಲಾಗುವುದು. ವಿರೋಧ ಪಕ್ಷವಾಗಿ ನಾವು ಬರ ಪರಿಸ್ಥಿತಿ ಅಧ್ಯಯನ ಮಾಡುತ್ತೇವೆ. ದಯವಿಟ್ಟು ರೈತರು ಆತ್ಮ ಸ್ಥೈರ್ಯ ಕಳೆದುಕೊಳ್ಳಬಾರದು ಎಂದು ರೈತರಿಗೆ ಮನವಿ ಮಾಡಿದ್ದಾರೆ.
ರಾಜ್ಯದಲ್ಲಿ ಈ ವರ್ಷ ಮುಂಗಾರು ಮಳೆ ಕೊರತೆಯಿಂದ ರೈತರು ಸಂಕಷ್ಟಕ್ಕಿಡಾಗಿದ್ದಾರೆ. ಸಿಎಂ, ಮಂತ್ರಿಗಳು ಈ ಬಗ್ಗೆ ಕೂಡ ಹೇಳಿದ್ದಾರೆ. ಮುಂಗಾರು ಕೊರತೆಯಿಂದ 60 ಲಕ್ಷ ಹೆಕ್ಟೇರ್‌ನಲ್ಲಿ ಬೆಳೆ ಹಾನಿಯಾಗಿದೆ. ಪ್ರಾರಂಭದಲ್ಲಿ 65 ತಾಲೂಕಿನಲ್ಲಿ ಬರ ಎಂದರು, ಈಗ 216 ತಾಲೂಕು ಎನ್ನುತ್ತಿದ್ದಾರೆ. ಬರ ಮಾರ್ಗ ಸೂಚಿ ಬದಲಾಗದೇ ಹೋದರೆ ಪರಿಹಾರ ನೀಡಲಾಗದು ಎಂದು ಕೇಂದ್ರಕ್ಕೆ ಪತ್ರ ಬರೆದಿದ್ದಾರೆ. ಬರಗಾಲದ ಸಮಸ್ಯೆಗಳ ಪರಿಹಾರಕ್ಕಾಗಿ 600 ಕೋಟಿ ಇಟ್ಟಿದ್ದೇವೆ ಎಂದಿದ್ದಾರೆ. ಬರ ನಿರ್ವಗಣೆಯಲ್ಲಿ ಇವರ ವೈಫಲ್ಯ ಮರೆಮಾಚಿ ಕೇಂದ್ರ ಸರ್ಕಾರದ ಮೇಲೆ ಬೊಟ್ಟು ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಟೀಕೆ ಮಾಡಿದರು.
ಇದನ್ನೂ ಓದಿ | Karnataka Drought: ಬಿಜೆಪಿ ಬರ ಅಧ್ಯಯನ ಶುರು; ಮಡುಗಟ್ಟಿದ ರೈತರ ಆಕ್ರೋಶ
ಪ್ರಾರಂಭದ ಹಂತದಲ್ಲಿ ಸುಮಾರು 4 ಸಾವಿರ ಕೋಟಿ ರೂ. ಕೇಂದ್ರ ಕೊಡಬೇಕು ಅಂತ ರಾಜ್ಯ ಸರ್ಕಾರ ಮನವಿ ಮಾಡಿದೆ. ಕೇಂದ್ರ ಸಚಿವರು ಭೇಟಿಗೆ ಅವಕಾಶ ಸಿಗುತ್ತಿಲ್ಲ ಎಂದು ಕಾಂಗ್ರೆಸ್ ದ್ವೇಷದ ರಾಜಕಾರಣ ಮಾಡುತ್ತಿದೆ. ಮುಖ್ಯಮಂತ್ರಿ ಅವರು 5 ತಿಂಗಳ ಅವಧಿಯಲ್ಲಿ ಆಡಳಿತ ನಡೆಸುವುದರಲ್ಲಿ ವೈಫಲ್ಯ ಕಂಡಿದ್ದಾರೆ ಎಂದು ಕಿಡಿಕಾರಿದರು.
ಸಿಎಂ, ಡಿಸಿಎಂ ಹೆಸರು ಬದಲಿಸಬೇಕು?
ಸಿಎಂ, ಡಿಸಿಎಂ ಅಂತ ಇರೋದನ್ನು ಟಿಸಿಎಂ ಹಾಗೂ ಡಿಸಿಎಂ ಅಂತ ಬದಲಾಯಿಸಬೇಕು. TCM ಎಂದರೆ Temporary CM, DCM ಎಂದರೆ Duplicate CM ಎಂದಾಗಬೇಕು. ನಾನು ಎರಡು ಬಾರಿ ಸಿಎಂ ಆದಾಗಲೂ ಇಂತಹ ಆಡಳಿತ ನಡೆಸಿಲ್ಲ, ಮೈತ್ರಿ ಸರ್ಕಾರದಲ್ಲಿ ನಿಮಗೆ 136 ಸೀಟು ಕೊಟ್ಟಿದ್ದಾರೆ. ಏನ್ ಮಾಡುತ್ತಿದ್ದೀರಿ? ಜನರು ಮತ್ತೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ರೈತರಿಗೆ ಬೆಳೆನೇ ಬೆಳಿಬೇಡಿ ಎನ್ನುತ್ತಿದ್ದೀರಾ? ಯಾವ ರೀತಿಯ ಸಂದೇಶ ಕೊಡುತ್ತೀದ್ದೀರಾ ಎಂದು ಎಚ್‌ಡಿಕೆ ಪ್ರಶ್ನಿಸಿದರು.
ಇದನ್ನೂ ಓದಿ | Congress Karnataka : ಮಾತನಾಡಿ ರಾಜಕೀಯ ಭವಿಷ್ಯ ಹಾಳು ಮಾಡಿಕೊಳ್ಳಬೇಡಿ; ಶಾಸಕರು, ಸಚಿವರಿಗೆ ಡಿಕೆಶಿ ವಾರ್ನಿಂಗ್!
ಐದು ತಿಂಗಳಲ್ಲಿ ಇವರ ಪಾಪದ ಕೊಡ ತುಂಬಿದೆ. ಇದು ರೈತ ವಿರೋಧಿ ಸರ್ಕಾರ. ಜನತಾ ದಳ ಯಾವಾಗಲೂ ರೈತರ ಪರ ನಿಲ್ಲುತ್ತೆ. ಈ ಸರ್ಕಾರದ ಮೇಲೆ ನನಗೆ ಯಾವುದೇ ನಿರೀಕ್ಷೆ ಇಲ್ಲ ಎಂದ ಅವರು, ಸರ್ಕಾರ ಈ ವರ್ಷ ಕರ್ನಾಟದ ಸಂಭ್ರಮದ ವರ್ಷಾಚರಣೆ ಎಂದು ಘೋಷಣೆ ಮಾಡಿದೆ. ಅದೇ ರೀತಿ ಜನರ ಕಷ್ಟವನ್ನು ಕೂಡ ಆಲಿಸಲಿ ಎಂದ ಒತ್ತಾಯಿಸಿದರು.
ಡಿಕೆಶಿ ಸಿಎಂ ಆಗಲು ಬೆಂಬಲ?
ನಾನು ಯಾಕೆ ಡಿ.ಕೆ.ಶಿವಕುಮಾರ್ ಸಿಎಂ ಆಗಲು ಅಡ್ಡಿಯಾಗಲಿ, ನಾಳೆಯೇ ಡಿಕೆಶಿ ಸಿಎಂ ಆಗಲಿ. ನಮ್ಮ ಶಾಸಕರಿಗೆ ದಿನವೂ ಅರ್ಜಿ ಹಾಕಿಕೊಂಡು ಇದ್ದಾರೆ. ನಾನೇ ನಮ್ಮ 19 ಶಾಸಕರ ಬೆಂಬಲ ಕೊಡಿಸುತ್ತೀನಿ ಎಂದು ಹೇಳುವ ಮೂಲಕ ಆಪರೇಷನ್ ಹಸ್ತದ ಬಗ್ಗೆ ಕಿಡಿ ಕಾರಿದರು.