Site icon Vistara News

ರಾಜ ಮಾರ್ಗ ಅಂಕಣ: ಆದಿವಾಸಿಗಳ ಆರಾಧ್ಯ ದೈವ ಬಿರ್ಸಾ ಮುಂಡಾ; ಬಿಹಾರದ ರಕ್ತ ಕ್ರಾಂತಿಯ ಕಿಡಿ

Birsa Munda hero of bihar

ಬ್ರಿಟಿಷ್ ಸಾಮ್ರಾಜ್ಯವು ಭಾರತವನ್ನು ಆಳುತ್ತಿರುವಾಗ ನಡೆದಿದ್ದ ಹಲವು ರಕ್ತಕ್ರಾಂತಿಗಳ ಬಗ್ಗೆ ನಮ್ಮ ಯುವಜನತೆಗೆ ಅರಿವು ಇಲ್ಲದಿರುವುದು ನಿಜವಾಗಿ ದುರಂತ! ಅಂತಹ ಒಂದು ಭಾರೀ ರಕ್ತಕ್ರಾಂತಿಗೆ ಕಾರಣ ಆದವರು, ಆದಿವಾಸಿಗಳ ಸಂಘಟನೆ ಮಾಡಿ ಬ್ರಿಟಿಷ್ ಸರಕಾರವನ್ನು ವಸ್ತುಶಃ ನಡುಗಿಸಿದವರು ಬಿರ್ಸಾ ಮುಂಡಾ (Birsa Munda)! ಇಂದು ಜಾರ್ಖಂಡ್ ರಾಜ್ಯವು ಅವರನ್ನು ರಾಷ್ಟ್ರೀಯ ಐಕಾನ್ (National icon of Jharkhand) ಆಗಿ ಸ್ವೀಕರಿಸಿದೆ ಮತ್ತು ಭಾರತದ ಪಾರ್ಲಿಮೆಂಟ್ ಭವನದಲ್ಲಿ (Indian Parliament house) ಅವರ ಭಾವಚಿತ್ರ ಇದೆ. ಆ ಗೌರವ ಪಡೆದ ಭಾರತದ ಏಕೈಕ ಆದಿವಾಸಿ ಬಿರ್ಸಾ ಮುಂಡಾ (ರಾಜ ಮಾರ್ಗ ಅಂಕಣ)!

ಕಾಡು ನಂಬಿ ಬದುಕು ಕಟ್ಟಿದವರು

ಬಿರ್ಸಾ ಮುಂಡಾ ಹುಟ್ಟಿದ್ದು ರಾಂಚಿ ಸಮೀಪದ ‘ಉಳಿಹಾಟು’ ಎಂಬ ಕುಗ್ರಾಮದಲ್ಲಿ. ಅವರದ್ದು ಮುಂಡಾ ಎಂಬ ಗುಡ್ಡಗಾಡು ಜನಾಂಗವಾಗಿತ್ತು. ಗುರುವಾರ ಹುಟ್ಟಿದ ಕಾರಣ ಮುಂಡಾ ಸಂಸ್ಕೃತಿಯ ಪ್ರಕಾರ ಅವರಿಗೆ ಬಿರ್ಸಾ ಎಂಬ ಹೆಸರು ಬಂತು. ಕಾಡಿನಲ್ಲಿ ಸಣ್ಣ ಗುಡಿಸಲು ಕಟ್ಟಿ, ಕಾಡಿನ ಉತ್ಪನ್ನಗಳನ್ನು ಸಂಗ್ರಹಿಸಿ ಪೇಟೆಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡುವುದು ಅವರ ಉದ್ಯೋಗವಾಗಿತ್ತು. ಕಾಡುಗಳೇ ಅವರ ಸರ್ವಸ್ವ. ಯಾರೂ ಶಾಲೆಗೆ ಹೋದವರಲ್ಲ.

ಅಂತಹ ಶ್ರೀಮಂತ ಕಾಡುಗಳ ಮೇಲೆ ಬ್ರಿಟಿಷರ ಕಣ್ಣು ಬೀಳಲು ಹೆಚ್ಚು ದಿನಗಳು ಬೇಕಾಗಲಿಲ್ಲ. ಆದಿವಾಸಿಗಳು ಕಾಡಿನ ಉತ್ಪನ್ನಗಳನ್ನು ಸಂಗ್ರಹ ಮಾಡುವ ಹಾಗಿಲ್ಲ ಎಂಬ ಕಾನೂನನ್ನು ಆಂಗ್ಲ ಸರಕಾರ ಮಾಡಿಬಿಟ್ಟಿತು! ಅವಿದ್ಯಾವಂತ ಆದಿವಾಸಿಗಳನ್ನು ಬಲವಂತವಾಗಿ ಮತಾಂತರ ಮಾಡಲು ಆಂಗ್ಲರು ಮುಂದಾದರು.

ಬಿರ್ಸಾ ಅವರ ಪೂರ್ತಿ ಕುಟುಂಬ ಬಲವಂತದ ಮತಾಂತರ ಆಯ್ತು!

ಹಾಗೆ ಬಿರ್ಸಾ ಅವರ ಅಪ್ಪ ತನ್ನ ಇಡೀ ಕುಟುಂಬವನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡಿ ಬಿಟ್ಟರು! ಆಗ ಬಿರ್ಸಾ ಅವರಿಗೆ ಕೇವಲ 13 ವರ್ಷ. ಅವರ ಹೆಸರನ್ನು ‘ದೌದ ಪೂರ್ತಿ’ ಎಂದು ಮರುನಾಮಕರಣ ಮಾಡಲಾಯಿತು. ದಟ್ಟವಾದ ಬೋಹೊಂದಾ ಎಂಬ ಕಾಡಿನಲ್ಲಿ ಕುರಿಗಳನ್ನು ಕಾಯುತ್ತ, ಕೊಳಲು ಬಾರಿಸುತ್ತ ಬಿರ್ಸಾ ತನ್ನ ಬಾಲ್ಯದ ದಿನಗಳನ್ನು ಕಳೆದರು. ಕಲಿಯುವುದರಲ್ಲಿ ಬುದ್ಧಿವಂತ ಆದ ಕಾರಣ ಜರ್ಮನ್ ಮಿಷನ್ ಶಾಲೆಗೆ ಹೋಗಿ ಒಂದಿಷ್ಟು ಶಿಕ್ಷಣವನ್ನು ಪಡೆದಿದ್ದರು.

ಬಿರ್ಸಾ ಬೆಳೆಯುತ್ತ ಹೋದಂತೆ ಅವರಿಗೆ ಬ್ರಿಟಿಷ್ ದೌರ್ಜನ್ಯವು ಅರ್ಥ ಆಗತೊಡಗಿತು. ರಕ್ತ ಬಿಸಿ ಆಗತೊಡಗಿತು. ತಮ್ಮ ‘ಮುಂಡಾ ಸಂಸ್ಕೃತಿ’ಯನ್ನು ಉಳಿಸಬೇಕು ಎಂಬ ಸಂಕಲ್ಪವು ಗಟ್ಟಿ ಆಯಿತು. ಪರಿಣಾಮವಾಗಿ ತಮ್ಮ ಇಡೀ ಕುಟುಂಬವನ್ನು ಅವರು ಮರಳಿ ಮುಂಡಾ ಸಂಸ್ಕೃತಿಗೆ ಪರಿವರ್ತನೆ ಮಾಡಿಕೊಂಡರು. ಆದಿವಾಸಿಗಳನ್ನು ಸಂಘಟನೆ ಮಾಡುವ ಕೆಲಸಕ್ಕೆ ಇಳಿದರು.

ತಮ್ಮನ್ನು ತಾವೇ ಪ್ರವಾದಿ ಎಂದು ಕರೆದುಕೊಂಡರು!

ಆದರೆ ವಿದ್ಯೆ ಇಲ್ಲದ, ಶಾಲೆಗೆ ಹೋಗದ ಆದಿವಾಸಿಗಳಿಗೆ ಅವರ ಮಾತುಗಳನ್ನು ಕೇಳುವ ತಾಳ್ಮೆ ಇರಲಿಲ್ಲ. ಅದಕ್ಕೆ ಬೇರೆ ದಾರಿ ಇಲ್ಲದೆ ಬಿರ್ಸಾ ತಮ್ಮನ್ನು ಪ್ರವಾದಿ (Prophet) ಎಂದು ಕರೆದುಕೊಂಡರು.

‘ ಪ್ರಕೃತಿಯೇ ನಮ್ಮ ದೇವರು. ಸಮಾನ ಸಮಾಜವೇ ನಮ್ಮ ನ್ಯಾಯ ನೀತಿ ‘ ಎಂದು ಬೋಧನೆ ಆರಂಭ ಮಾಡಿದರು. ಆದಿವಾಸಿಗಳು ಈಗ ಅವರ ಮಾತುಗಳನ್ನು ಕೇಳಲು ಆರಂಭಿಸಿದರು.

ಬ್ರಿಟಿಷರ ವಿರುದ್ಧ ಸೆಟೆದು ನಿಂತರು ಮುಂಡಾ

1893-94ರ ಹೊತ್ತಿಗೆ ಸರಕಾರವು ಇನ್ನೊಂದು ಹೊಸ ಆದೇಶ ಹೊರಡಿಸಿತು. ‘ಎಲ್ಲ ಅರಣ್ಯಗಳು ಸಂರಕ್ಷಿತ ಅರಣ್ಯಗಳು, ಆದಿವಾಸಿಗಳಿಗೆ ಕಾಡಿನಲ್ಲಿ ಯಾವುದೇ ಹಕ್ಕಿಲ್ಲ’ ಎನ್ನುವುದು ಆ ಆದೇಶ! ಇದು ಆದಿವಾಸಿಗಳನ್ನು ಕೆರಳಿಸಿತು. 1894ರ ಅಕ್ಟೋಬರ್ 1ರಂದು ಬಿರ್ಸಾ ಮುಂಡಾ ಅವರ ನೇತೃತ್ವದಲ್ಲಿ ಛೋಟಾ ನಾಗ್ಪುರ ಎಂಬಲ್ಲಿ ಒಂದು ಬೃಹತ್ ಮೆರವಣಿಗೆಯು ಬೀದಿಗೆ ಇಳಿದು ಭಾರೀ ಸದ್ದು ಮಾಡಿತು.

‘ಮಹಾರಾಣಿಯ ಅಧಿಕಾರ ನಿಲ್ಲಿಸಬೇಕು. ಮುಂಡಾ ಸಂಸ್ಕೃತಿ ಉಳಿಸಬೇಕು’ ಎನ್ನುವುದು ಅವರ ಘೋಷಣೆ. ಬ್ರಿಟಿಷ್ ಸರಕಾರ ಬಿರ್ಸಾ ಅವರನ್ನು ತಕ್ಷಣ ಬಂಧಿಸಿ ಹಾಜಿರಾಬಾದನ ಸೆರೆಮನೆಗೆ ಕಳುಹಿಸಿತು. ಎರಡು ವರ್ಷ ಜೈಲು ಮುಗಿದು ಹೊರಗೆ ಬಂದ ನಂತರ ಬಿರ್ಸಾ ಇನ್ನಷ್ಟು ದೊಡ್ಡ ಹೋರಾಟಕ್ಕೆ ಕಿಡಿ ಹಚ್ಚಿದರು.

ಈ ಬಾರಿ ಭೂಗತರಾಗಿ ಹೋರಾಟ!

ಈ ಬಾರಿ ಅವರು ಬಿರ್ಸಾ ಮುಂಡಾ ಭೂಗತರಾದರು ಮತ್ತು ತೀವ್ರ ಹಿಂಸಾತ್ಮಕವಾದ ಹೋರಾಟಕ್ಕೆ ಇಳಿದರು. ನಾಲ್ಕು ಜಿಲ್ಲೆಗಳ ಸುಮಾರು 7000 ಆದಿವಾಸಿಗಳನ್ನು ಒಟ್ಟು ಸೇರಿಸಿ ಅವರನ್ನು ಗೆರಿಲ್ಲಾ ಯುದ್ಧಕ್ಕೆ ಸಿದ್ಧಪಡಿಸಿದರು. 550 ಚದರ ಮೈಲು ವಿಸ್ತಾರದ ದಟ್ಟವಾದ ಅರಣ್ಯ ಪ್ರದೇಶದಲ್ಲಿ ಅವರ ಹೋರಾಟದ ರೂಪುರೇಷೆಯು ಸಿದ್ಧವಾಯಿತು. ಬ್ರಿಟಿಷ್ ಕಟ್ಟಡಗಳ ಮೇಲೆ, ಅಧಿಕಾರಿಗಳ ಮೇಲೆ, ಬ್ರಿಟಿಷರನ್ನು ಬೆಂಬಲಿಸುವ ನಾಗರಿಕರ ಮೇಲೆ……… ಹೀಗೆ ಸಾಲು ಸಾಲು ಗೆರಿಲ್ಲಾ ಮಾದರಿಯ ಶಸ್ತ್ರಾಸ್ತ್ರ ದಾಳಿಗಳು ನಡೆದವು. ಪೋಲಿಸ್ ಠಾಣೆಯ ಮೇಲೆ ದಾಳಿ ನಡೆದು ಎಂಟು ಪೊಲೀಸರು ಹತರಾದರು. 32 ಜನರು ಪರಾರಿ ಆದರು. 89 ಭೂಮಾಲೀಕರ ಮನೆಗಳು ಉರಿದು ಹೋದವು. ಬ್ರಿಟಿಷರ ಆಸ್ತಿಗಳಿಗೆ ಬೆಂಕಿ ಹಚ್ಚಲಾಯಿತು. ಸುಲಿಗೆ ಮಾಡುವ ವ್ಯಾಪಾರಿಗಳನ್ನು ಹೊಡೆದು ಹಾಕಲಾಯಿತು.

ವಸ್ತುಶಃ ನಡುಗಿ ಹೋಯಿತು ಕಂಪೆನಿ ಸರಕಾರ!

ಇಂತಹ ದಾಳಿಗಳಿಂದ ಆಂಗ್ಲ ಸರಕಾರ ಎಷ್ಟು ನಡುಗಿ ಹೋಯಿತು ಎಂದರೆ ರಾಂಚಿಯ ಜಿಲ್ಲಾಧಿಕಾರಿ ಸೈನ್ಯಕ್ಕೆ ಬರ ಹೇಳಿದನು! ಬಿರ್ಸಾ ಮುಂಡಾ ತಲೆಗೆ 500 ಆಗಿನ ಕಾಲದ ರೂಪಾಯಿಗಳ ಬಹುಮಾನ ಘೋಷಣೆ ಆಯಿತು!

1900 ಸೈನಿಕರ ಬ್ರಿಟಿಷ್ ಸೇನೆಯು ಆಧುನಿಕ ಶಸ್ತ್ರಗಳ ಜೊತೆ ದುಂಬಾರಿ ಬೆಟ್ಟದ ಮೇಲೆ ಬಿರ್ಸಾ ಅವರ ಆದಿವಾಸಿ ಸೈನ್ಯದ ಮೇಲೆ ಮುಗಿಬಿದ್ದಿತು. ಬಿಲ್ಲು, ಬಾಣ ಹಿಡಿದು ಹೋರಾಡಿದ ದಿಟ್ಟ ಆದಿವಾಸಿಗಳ ಸೇನೆಯು ಧರಾಶಾಯಿ ಆಯಿತು. ನೂರಾರು ಆದಿವಾಸಿಗಳು ಪ್ರಾಣವನ್ನು ಕಳೆದುಕೊಂಡರು. ಅವರ ರಕ್ತದಿಂದ ತೊಯ್ದು ಹೋದ ದುಂಬಾರಿ ಬೆಟ್ಟವನ್ನು ಮುಂದೆ ‘ಹೆಣಗಳ ಬೆಟ್ಟ’ ಎಂದೇ ಕರೆಯಲಾಯಿತು.

ಮಲಗಿದ್ದ ಸಿಂಹದ ಬಂಧನ!

ಮುಂದೆ 1899ರ ಹೊತ್ತಿಗೆ ನಿದ್ರೆಯಲ್ಲಿದ್ದ ಬಿರ್ಸಾ ಅವರನ್ನು ಬ್ರಿಟಿಷರು ಬಂಧಿಸಿದರು. ಜೊತೆಗೆ ಅವರ 482 ಸಂಗಡಿಗರು ಅರೆಸ್ಟ್ ಆದರು. ಅವರ ಮೇಲೆ ವಿವಿಧ ಕ್ರಿಮಿನಲ್ ಮೊಕದ್ದಮೆಗಳನ್ನು ಜಡಿದು ವಿಚಾರಣೆಯ ನಾಟಕವು ಆರಂಭ ಆಯಿತು. ಆದರೆ ವಿಚಾರಣೆ ನಡೆಯುತ್ತಿರುವ ಹೊತ್ತಿನಲ್ಲಿ 1900 ಜೂನ್
9ರಂದು ಬಿರ್ಸಾ ಮುಂಡಾ ಅವರ ಮರಣವು ಸೆರೆಮನೆಯಲ್ಲಿ ಆಯಿತು. ಆಗ ಅವರಿಗೆ ಕೇವಲ 25 ವರ್ಷ!

ಇದನ್ನೂ ಓದಿ : ರಾಜ ಮಾರ್ಗ ಅಂಕಣ : ಕಣ್ಣೇ ಇಲ್ಲದಿದ್ದರೂ ಕನಸಿಗೆ ಬರವಿಲ್ಲ; ಅಂಧತ್ವ ಮೀರಿ IAS ಅಧಿಕಾರಿಯಾದ ಪ್ರಾಂಜಲ್‌!

ಆದಿವಾಸಿಗಳು ಅವರನ್ನು ಮರೆಯಲಿಲ್ಲ

ಮುಂದೆ ಮುಂಡಾ ಜನರು ಅವರನ್ನು ಧರ್ಥಿ ಆಬಾ ( ಭೂಮಿಯ ಅಪ್ಪ) ಎಂದು ಗೌರವದಿಂದ ಕರೆದರು. ದೇಶದ ಸ್ವಾತಂತ್ರ್ಯ ಚಳುವಳಿಯಲ್ಲಿ ಅವರ ಪಾತ್ರವನ್ನು ಭಾರತವು ಮರೆಯಲಿಲ್ಲ.

ಬಿರ್ಸಾ ಅವರ ಜನ್ಮದಿನವಾದ (ನವೆಂಬರ್ 15)ವನ್ನು ದೇಶದ ಆದಿವಾಸಿಗಳು ಇಂದಿಗೂ ಆಚರಿಸಿ ಅವರನ್ನು ನೆನೆಯುತ್ತಾರೆ. ಅವರ ಹೆಸರಲ್ಲಿ ಬಿರ್ಸಾ ಮುಂಡಾ ವಿಮಾನ ನಿಲ್ದಾಣ, ಬಿರ್ಸಾ ಮುಂಡಾ ಕೃಷಿ ವಿವಿ, ಬಿರ್ಸಾ ಮುಂಡಾ ಆದಿವಾಸಿ ವಿವಿ, ಬಿರ್ಸಾ ಮುಂಡಾ ತಾಂತ್ರಿಕ ಕಾಲೇಜು ಇವುಗಳು ಜಾರ್ಖಂಡ್ ಮತ್ತು ಬಿಹಾರ್ ರಾಜ್ಯದಲ್ಲಿ ಇವೆ! ಅವರ ಜೀವನ ಚರಿತ್ರೆಯನ್ನು ಆಧರಿಸಿದ ಹಿಂದಿ ಚಲನಚಿತ್ರ ʻಗಾಂಧಿ ಸೇ ಪೇಹಲೆ ಗಾಂಧಿ ( 2008) ತೆರೆಗೆ ಬಂದು ಜನಪ್ರಿಯ ಆಗಿದೆ. ಪ್ರಸಿದ್ದ ಬೆಂಗಾಲಿ ಲೇಖಕಿ ಮಹಾ ಶ್ವೇತಾದೇವಿ ಅವರು ಬಿರ್ಸಾ ಮುಂಡಾ ಅವರ ಬದುಕನ್ನು ಆಧಾರವಾಗಿಟ್ಟುಕೊಂಡು ‘ಅರನ್ಯೇರ್ ಅಧಿಕಾರಿ’ ಎಂಬ ಬೃಹತ್ ಕಾದಂಬರಿಯನ್ನು ಬರೆದಿದ್ದಾರೆ. ಬಿರ್ಸಾ ಮುಂಡಾ ಅವರ ಬದುಕು ಮತ್ತು ಹೋರಾಟಗಳು ಇಂದಿನ ಜನಾಂಗಕ್ಕೆ ಮಾದರಿ ಆಗಬೇಕು.

Exit mobile version