ಬೆಂಗಳೂರು: ಬಿಬಿಎಂಪಿ ಅಧಿಕಾರಿಗಳಿಂದ ಅನಧಿಕೃತವಾಗಿ ರಾಜಕಾಲುವೆ ಒತ್ತುವರಿ (Rajakaluve Encroachment) ಮಾಡಿರುವ ಪ್ರದೇಶಗಳ ತೆರವು ಕಾರ್ಯಾಚರಣೆಯು ಸೋಮವಾರ (ಜೂ.19) ಮುಂದುವರಿದಿದೆ. ಮಹದೇವಪುರ ವಲಯದ ಪಣತ್ತೂರು ಹಾಗೂ ದೊಡ್ಡಾನೆಕುಂದಿ ವ್ಯಾಪ್ತಿಯಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ.
ಡೆಮಾಲಿಷನ್ ರಾಜಕೀಯ
ರಾಜಕಾಲುವೆ ಡೆಮಾಲಿಷನ್ ವಿಚಾರದಲ್ಲಿ ರಾಜಕೀಯ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ಬಿಜೆಪಿ ಮುಖಂಡ ನಂದೀಶ್ ರೆಡ್ಡಿ ಗಂಭೀರ ಆರೋಪ ಮಾಡಿದರು. ಒತ್ತುವರಿ ತೆರವು ಕಾರ್ಯಾಚರಣೆ ನಡೆಯುತ್ತಿದ್ದ ಜಾಗಕ್ಕೆ ಬಂದ ಅವರು, ಫರ್ನ್ಸ್ ಸಿಟಿಯಲ್ಲಿ ಹೆಚ್ಚು ಬಿಜೆಪಿ ಮತದಾರರು ಇದ್ದಾರೆ. ಹೀಗಾಗಿಯೇ ಏಕಾಏಕಿ ಡೆಮಾಲಿಷನ್ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ದೊಡ್ಡಾನೆಕುಂದಿ ಕೆರೆ ಆರಂಭದಿಂದ ಸರ್ವೆ ಮಾಡಿಕೊಂಡು ಬನ್ನಿ, ಅದು ಬಿಟ್ಟು ಹೀಗೆ ಮಧ್ಯದಲ್ಲಿ ತೆರವು ಮಾಡುವುದು ಸರಿಯಲ್ಲ. ಮೊದಲು ಮಾರ್ಕ್ ಮಾಡಿ ಬಳಿಕ ಪಕ್ಷಪಾತ ಮಾಡದೆ ಯಾರದ್ದೇ ಕಟ್ಟಡ ಇದ್ದರೂ ಡೆಮಾಲಿಷನ್ ಮಾಡಿ. ಅದನ್ನು ಬಿಟ್ಟು ಬಿಜೆಪಿ ಮತದಾರರು ಹೆಚ್ಚಿರುವ ಕಡೆ ಡೆಮಾಲಿಷನ್ ಮಾಡುವುದು ಸರಿಯಲ್ಲ ಎಂದು ಕಿಡಿಕಾರಿದರು. ನಾವು ಯಾರು ತೆರವು ಕಾರ್ಯಾಚಾರಣೆಯ ವಿರೋಧಿಗಳಲ್ಲ, ಆದರೆ ಮಧ್ಯದಲ್ಲಿ ತೆರವು ಮಾಡುವುದರಿಂದ ಇಲ್ಲಿ ಫ್ಲಡ್ ಆಗುತ್ತದೆ. ನನ್ನ ಜಾಗ ಇಲ್ಲಿಲ್ಲ, ಇದ್ದರೂ ನ್ಯಾಯಯುತವಾಗಿ ತೆರವು ಮಾಡಿ ಎಂದರು.
ಈ ಮಧ್ಯೆ ಬಿಬಿಎಂಪಿ ಅಧಿಕಾರಿಗಳು ತೆರವಿಗೆ ಮುಂದಾದಾಗ, ಬಿಜೆಪಿ ಮುಖಂಡ ನಂದೀಶ್ ರೆಡ್ಡಿ ಜೆಸಿಬಿಯ ಬೀಗ ಕಿತ್ತುಕೊಂಡು ಅಡ್ಡಿಪಡಿಸಿದರು. ಏರು ಧ್ವನಿಯಲ್ಲಿ ಅವಾಜ್ ಹಾಕಿ, ತೆರವು ಮಾಡಿದರೆ ನಾನೇ ಅಡ್ಡ ಕೂರುತ್ತಿನಿ ಎಂದರು. ವಿರೋಧದ ನಡುವೆಯೇ ಫರ್ನ್ಸ್ ಸಿಟಿ ಒತ್ತುವರಿ ಮಾಡಿದ್ದ, 15 ಮೀಟರ್ ರಾಜಕಾಲುವೆಯನ್ನು ತೆರವು ಮಾಡಲಾಯಿತು.
ನಿವಾಸಿಗಳ ನಡುವೆಯೇ ಹೊಡಿಬಡಿ
ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ಫರ್ನ್ಸ್ ಸಿಟಿ ನಿವಾಸಿಗಳೆ ಕಿತ್ತಾಡಿಕೊಂಡರು. ಕೆಲ ನಿವಾಸಿಗಳು ತೆರವು ಕಾರ್ಯಾಚರಣೆ ವಿರೋಧಿಸಿ ಬೆಂಬಲ ನೀಡಿಲ್ಲ ಎಂದು ಫರ್ನ್ಸ್ ಸಿಟಿ ನಿವಾಸಿಗಳ ನಡುವೆಯೇ ಮಾತಿನ ಚಕಮಕಿ ನಡೆದಿದೆ. ಇದು ವಿಕೋಪಕ್ಕೆ ತಿರುಗಿ ಬೀದಿಯಲ್ಲಿ ತಳ್ಳಾಡಿ ನೂಕಾಡಿ ಕೈಕೈ ಮಿಲಾಯಿಸಿದ್ದಾರೆ. ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ಇದಕ್ಕೂ ಮೊದಲು ನಿವಾಸಿಗಳು ಬಿಬಿಎಂಪಿ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದರು. ಕೆರೆಯ ಆರಂಭದಿಂದ ತೆರವು ಮಾಡಿಕೊಂಡು ಬನ್ನಿ, ಇಲ್ಲಿ ಮಧ್ಯದಲ್ಲಿ ಯಾಕೆ ತೆರವು ಮಾಡುತ್ತೀರಿ. ಸ್ಟೇ ಇದೆ ಎಂದು ದೊಡ್ಡವರ ಬಳಿ ಹೋಗುತ್ತಿಲ್ಲ. ಇಲ್ಲಿ ಯಾವುದೇ ಸಮಸ್ಯೆಯೇ ಇಲ್ಲ, ಆದರೂ ತೆರವು ಮಾಡುವ ಅಗತ್ಯ ಏನಿದೆ ಎಂದು ಫರ್ನ್ಸ್ ಸಿಟಿ ನಿವಾಸಿಗಳು ಪ್ರಶ್ನೆಗಳ ಸುರಿಮಳೆಗೈದರು.
ಜೆಸಿಬಿ ಅಡ್ಡ ನಿಂತ ಮಹಿಳೆ
ಇನ್ನು ಡೆಮಾಲಿಷನ್ ವೇಳೆ ಮಹಿಳೆಯೊಬ್ಬರು ಜೆಸಿಬಿಗೆ ಅಡ್ಡ ನಿಂತರು. ಫರ್ನ್ಸ್ ಸಿಟಿ ಮುಂಭಾಗ ಇದ್ದ ಮರ ತೆರವಿಗೆ ಮಹಿಳೆ ವಿರೋಧ ವ್ಯಕ್ತಪಡಿಸಿದರು. ಈ ವೇಳೆ ಅಧಿಕಾರಿಗಳು ಪೊಲೀಸರ ಮಧ್ಯಸ್ಥಿಕೆಯಿಂದ ಮಹಿಳೆಯನ್ನು ಹೊರಗೆ ಕಳುಹಿಸಿ ತೆರವು ಮಾಡಿದರು.
ಇದನ್ನೂ ಓದಿ: Missing Case: ಅಪ್ಪ ಚಾಕೊಲೇಟ್ ಕೊಟ್ಟಿಲ್ಲ ಅನ್ನೋ ಸಿಟ್ಟಿಗೆ ಫ್ರೀ ಬಸ್‌ನಲ್ಲಿ ಊರೂರು ಸುತ್ತಿದ ಸೋದರಿಯರು!
ಕ್ಲಬ್ ಹೌಸ್ ಉರುಳಿಸಿದ ಜೆಸಿಬಿ
ರಾಜಕಾಲುವೆ ಮೇಲೆ ಫರ್ನ್ಸ್ ಸಿಟಿಯ ಕ್ಲಬ್ ಹೌಸ್ ನಿರ್ಮಿಸಲಾಗಿದ್ದು, ಸುಮಾರು 15 ಮೀಟರ್ ಒತ್ತುವರಿಯಾಗಿದೆ. ಇದನ್ನೂ ಡೆಮಾಲಿಷನ್ ಮಾಡಲು ಹೋದಾಗ, ಪರ್ಯಾಯ ಕಾಲುವೆ ನಿರ್ಮಿಸಿದರೆ ಸೂಕ್ತ ಎಂದು ನಿವಾಸಿಗಳು ಮನವಿ ಮಾಡಿದ್ದಾರೆ. ಆದರೆ ಇದ್ಯಾವುದಕ್ಕೂ ಸೊಪ್ಪು ಹಾಕದೆ ಅಧಿಕಾರಿಗಳು ಡೆಮಾಲಿಷನ್ ಮಾಡಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ