ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮತ್ತೆ ಬುಲ್ಡೋಜರ್ ಗರ್ಜಿಸಿ, ಅಕ್ರಮ ಒತ್ತುವರಿ ಕಟ್ಟಡಗಳನ್ನು ಬಿಬಿಎಂಪಿ ಉರುಳಿಸಿಯೇ ಬಿಡುತ್ತೆ ಎಂದುಕೊಂಡಿದ್ದರು. ಆದರೆ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆಗೆ ಸ್ಟೇ ಆರ್ಡರ್ ಬಿಸಿ ತುಪ್ಪವಾಗಿದೆ. ಮುಂಗಾರು ಪ್ರವೇಶಕ್ಕೂ ಮುನ್ನವೇ ಸನ್ನದ್ಧವಾಗಿ, ಒತ್ತುವರಿದಾರರಿಗೆ ಬಿಸಿ ಮುಟ್ಟಿಸಲು ತಯಾರಿ ನಡೆಸಿತ್ತು. ಮತ್ತಷ್ಟು ಅಕ್ರಮ ಒತ್ತುವರಿ ಕಟ್ಟಡಗಳು ಉರುಳಲಿವೆಯೇ ಎಂದುಕೊಂಡಿದ್ದರು. ಆದರೆ ಈ ಬಾರಿಯೂ ಕಂದಾಯ ಇಲಾಖೆ, ಬಿಬಿಎಂಪಿ ನಡುವಿನ ಸಮನ್ವಯ ಕೊರತೆಯಿಂದಾಗಿ ತೆರವು ಕಾರ್ಯವು ನಗೆಪಾಟಲಿಗೀಡಾಗಿದೆ.
ಕಳೆದ ವರ್ಷ ಬೆಂಗಳೂರಿನ ಐಟಿ ಕಾರಿಡಾರ್‌ಗಳು ಅಕ್ಷರಶಃ ಪ್ರವಾಹ ಪರಿಸ್ಥಿತಿಯನ್ನು ಎದುರಿಸಿದ್ದವು. ಧಾರಾಕಾರ ಮಳೆಗೆ (Bengaluru Rain) ಜನವಸತಿ ಪ್ರದೇಶಗಳು ಜಲಾವೃತಗೊಂಡಿತ್ತು. ನಗರದ ರಸ್ತೆಗಳೆಲ್ಲವೂ ನದಿಯಂತಾಗಿ, ಮಿನಿ ಐಲ್ಯಾಂಡ್ ರೀತಿ ಪರಿವರ್ತನೆ ಆಗಿತ್ತು. ಐಷಾರಾಮಿ ಕಾರು, ಬೈಕ್‌ನಲ್ಲಿ ಓಡಾಡುತ್ತಿದ್ದವರು, ಮನೆಯಿಂದ ಹೊರಬರಲು ತೆಪ್ಪವನ್ನು ಬಳಸುವ ಪರಿಸ್ಥಿತಿ ನಿರ್ಮಾಣವಾಗಿತ್ತು. ದೇಶದೆಲ್ಲೆಡೆ ಬೆಂಗಳೂರಿನ ಅವ್ಯವಸ್ಥೆಯ ಚರ್ಚೆಯೂ ನಡೆದಿತ್ತು. ರಾಜಕಾಲುವೆ ಒತ್ತುವರಿಯೇ ಇದಕ್ಕೆಲ್ಲ ಮೂಲ ಕಾರಣವೆಂದು ಆರೋಪಿಸಲಾಗಿತ್ತು.
ಮಳೆಯಿಂದಾಗುವ ಹಾನಿಯನ್ನು ತಪ್ಪಿಸಲು ಬಿಬಿಎಂಪಿ ಕಳೆದ ನಾಲ್ಕೈದು ವರ್ಷದಿಂದ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಕೈಗೊಳ್ಳುತ್ತಿದೆ. ಈ ಬಾರಿಯು ಒತ್ತುವರಿ ತೆರವಿಗೆ ಸ್ಟೇ ಆರ್ಡರ್‌ಗಳೇ ಅಡ್ಡ ಬಂದಿದೆ. ಮಹದೇವಪುರ ವಲಯದ ಮುನ್ನೇನಕೊಲು, ಸ್ಪೈಸ್ ಗಾರ್ಡನ್‌ನಲ್ಲಿ 22 ಕಡೆಗಳಲ್ಲಿ ರಾಜಕಾಲುವೆ ಒತ್ತುವರಿ ಮಾಡಿ ಕಟ್ಟಡ ನಿರ್ಮಾಣ ಮಾಡಲಾಗಿತ್ತು. ಹೀಗಾಗಿ ಜೂ.17ರಂದು ತೆರವು ಕಾರ್ಯಾಚರಣೆ ಮಾಡಲು ಬಿಬಿಎಂಪಿ ಅಧಿಕಾರಿಗಳ ದಂಡು ಹಾಗೂ ಜೆಸಿಬಿಗಳು ಸ್ಥಳಕ್ಕೆ ತೆರಳಿದ್ದವು. ಇನ್ನೇನು ಡೆಮಾಲಿಷನ್ ಡ್ರೈವ್ ಶುರುವಾಯ್ತು ಎನ್ನುವಾಗಲೇ ಠುಸ್ ಪಟಾಕಿ ಆಗಿದೆ.
ನೋಟಿಸ್‌ಗೆ ಸ್ಟೇ ತಂದ ಸ್ಪೈಸ್ ಗಾರ್ಡ್‌ನ್ ನಿವಾಸಿಗಳು
ಸ್ಪೈಸ್ ಗಾರ್ಡನ್‌ನ ನಿವಾಸಿಗಳು ಕಳೆದ ಸೆಪ್ಟೆಂಬರ್‌ನಲ್ಲೇ ತಹಸೀಲ್ದಾರ್ ಕೊಟ್ಟಿದ್ದ ನೊಟೀಸ್‌ಗೆ ಸ್ಟೇ ತಂದಿದ್ದರು. ಆದರೆ ಈ ವಿಚಾರವನ್ನು ತಹಸೀಲ್ದಾರ್ ಬಿಬಿಎಂಪಿ ಅಧಿಕಾರಿಗಳ ಗಮನಕ್ಕೆ ತಂದಿರಲಿಲ್ಲ. ಬಿಬಿಎಂಪಿ ಹಾಗೂ ಕಂದಾಯ ಇಲಾಖೆ ನಡುವೆ ಸಮನ್ವಯತೆ ಇಲ್ಲದೆ ಇರುವುದರಿಂದ 22 ಅಪಾರ್ಟ್‌ಮೆಂಟ್‌ಗಳ ಡೆಮಾಲಿಷನ್ ಪ್ರಕ್ರಿಯೆ ಸ್ಥಗಿತಗೊಂಡಿದೆ.
ಇದನ್ನೂ ಓದಿ: Weather Report: ಇನ್ನೂ 3 ದಿನ ಈ ಜಿಲ್ಲೆಯಲ್ಲಿ ಭರ್ಜರಿ ಮಳೆ; ಮೀನುಗಾರರಿಗೆ ಮುಂದುವರಿದ ಅಲರ್ಟ್
ಎಂದಿನಂತೆ ಬಡವರ ಮೇಲೆ ಗದಾಪ್ರಯೋಗ ಮಾಡಿದ ಬಿಬಿಎಂಪಿ ಅಧಿಕಾರಿಗಳು ಕೂಲಿ ಕಾರ್ಮಿಕರ ಶೆಡ್‌ಗಳನ್ನು ಮಾತ್ರ ತೆರವು ಮಾಡಿದ್ದಾರೆ. ಇತ್ತ ಸ್ಥಳೀಯರು ಮತ್ತು ವಕೀಲರು ಕೋರ್ಟ್ ಕೊಟ್ಟಿರುವ ಆದೇಶದ ಪ್ರತಿ ತೋರಿಸುತ್ತಿದ್ದಂತೆ ಬಿಬಿಎಂಪಿ ಅಧಿಕಾರಿಗಳು ತಬ್ಬಿಬ್ಬಾದ್ದರು. ಒಂದು ವಾರದಿಂದ ಡೆಮಾಲಿಷನ್‌ಗೆ ಸಿದ್ಧತೆ ಮಾಡಿಕೊಂಡಿದ್ದವಿ. ಕೋರ್ಟ್ ಕೊಟ್ಟಿರುವ ತಡೆಯಾಜ್ಞೆ ಪ್ರತಿಯನ್ನು ತಹಸೀಲ್ದಾರ್ ನೀಡದೆ ಇರುವುದು ಇಷ್ಟೆಲ್ಲಾ ಗೊಂದಲಕ್ಕೆ ಕಾರಣವಾಗಿದೆ ಎಂದು ಮಹಾದೇವಪುರ ವಲಯ ಚೀಫ್ ಎಂಜಿನಿಯರ್ ಲೋಕೇಶ್ ಮಾಹಿತಿ ನೀಡಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ