ಬೆಂಗಳೂರು: ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆಯಲ್ಲಿ (Rajakaluve Encroachment) ಬಿಬಿಎಂಪಿ ಅಧಿಕಾರಿಗಳು ಒಂದು ಕಣ್ಣಿಗೆ ಸುಣ್ಣ, ಮತ್ತೊಂದು ಕಣ್ಣಿಗೆ ಬೆಣ್ಣೆ ಎಂಬ ನೀತಿಯನ್ನು ಅನುಸರಿಸುತ್ತಿದ್ದಾರೆ. ಸಾಮಾನ್ಯರು ಎಂದಾಗ ಅಸಾಮಾನ್ಯ ರೀತಿಯಲ್ಲಿ ವರ್ತಿಸುವ ಪಾಲಿಕೆ ಅಧಿಕಾರಿಗಳು, ಪ್ರಭಾವಿಗಳು ಎದುರಾದರೆ ಹೆದರಿ ಮೂಲೆ ಸೇರುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.
ಕಳೆದ 6 ದಿನಗಳಿಂದ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ನಡೆಸುತ್ತಿರುವ ಪಾಲಿಕೆ ಅಧಿಕಾರಿಗಳ 7ನೇ ದಿನದ ತೆರವಿನಲ್ಲಿ ವಿಪ್ರೋ ಸಂಸ್ಥೆಗೆ ತಾತ್ಕಾಲಿಕ ಬ್ರೇಕ್ ಸಿಕ್ಕಿದೆ. ಸೋಮವಾರ ವಿಪ್ರೋ ಕಟ್ಟಡ ತೆರವಿನಲ್ಲಿ ಒಂದು ತಾಸು ಗರ್ಜಿಸಿ ಆ ಬಳಿಕ ಒಂದೇ ಒಂದು ಫೋನ್ ಕಾಲ್‌ಗೆ ಸುಮ್ಮನಾಗಿತ್ತು.
ಆದರೆ ಮಂಗಳವಾರ ಬೆಳಗ್ಗೆ ತಾವು ಒತ್ತುವರಿ ಮಾಡಿಕೊಂಡು ಕಬ್ಬಿಣದ ಕಾಂಪೌಂಡ್ ಹಾಕಿಕೊಂಡಿದ್ದ ತಡೆಗೋಡೆಯನ್ನು ಸ್ವತಃ ಸರ್ಜಾಪುರದ ವಿಪ್ರೋ ಕಂಪನಿಯವರೇ ತೆರವುಗೊಳಿಸಿದರು. ಆದರೆ ಮಧ್ಯಾಹ್ನದ ಬಳಿಕ ಆಗಮಿಸಿದ ಪಾಲಿಕೆ ಅಧಿಕಾರಿಗಳು, ಬಾಕಿ ಉಳಿದಿದ್ದ ಕಲ್ಲಿನ ತಡೆಗೋಡೆಯನ್ನು ಉರುಳಿಸಲು ಮುಂದಾದರು. ಶೇ.20 ರಷ್ಟು ತೆರವು ಕಾರ್ಯಾಚರಣೆ ವೇಳೆ ಜೆಸಿಬಿಯ ಪೈಪ್ ಕಟ್ ಆದ ಕಾರಣ ಕಾರ್ಯಾಚರಣೆಯನ್ನು ಅರ್ಧಕ್ಕೆ ಸ್ಥಗಿತಗೊಳಿಸಲಾಯಿತು.
ಯಂತ್ರ ಸರಿಪಡಿಸಲು ಮೂರು ತಾಸಿಗೂ ಅಧಿಕ ಸಮಯ ಬೇಕಿದೆ ಎಂದು ವಿಪ್ರೋ ತಡೆಗೋಡೆ ಸೇರಿದಂತೆ ಕಸವನಹಳ್ಳಿ ಸಮೀಪದ ಶೆಡ್, ಸರ್ಜಾಪುರದ ಗ್ರೀನ್ ವುಡ್ ರೆಸಿಡೆನ್ಸಿಯ ರಾಜಕಾಲುವೆ ಸ್ವ್ಯಾಬ್ ತೆರವು ಕಾರ್ಯಾಚರಣೆಯನ್ನು ಬುಧವಾರಕ್ಕೆ ಮುಂದೂಡಿದೆ.
ಅಧಿಕಾರಿಗಳ ಕಾಟಾಚಾರದ ತೆರವು ಕಾರ್ಯಾಚರಣೆಗೆ ಜನಾಕ್ರೋಶ ವ್ಯಕ್ತವಾಗಿದೆ. ಮಹದೇವಪುರ ವಲಯದಲ್ಲಿ ಸದ್ಯ ಸ್ಥಗಿತವಾಗಿರುವ ಒತ್ತುವರಿ ತೆರವು ಬುಧವಾರ ಮುಂದುವರಿಯಲಿದೆ.
ಇದನ್ನೂ ಓದಿ | Encroachment | ಅರೆಬರೆ ಒತ್ತುವರಿ ತೆರವಿಗೆ ಹೈಕೋರ್ಟ್ ಅಸಮಾಧಾನ, ಸಮಿತಿ ರಚನೆಗೆ ಸೂಚನೆ