Site icon Vistara News

Rajakaluve Encroachment | ಮುಗಿದಿಲ್ಲ ಜೆಸಿಬಿ ಗರ್ಜನೆ; ನಾಳೆಯೂ ಇದೆ ಕಾರ್ಯಾಚರಣೆ

ಬೆಂಗಳೂರು: ಬಿಬಿಎಂಪಿ ಹಾಗೂ ಕಂದಾಯ ಅಧಿಕಾರಿಗಳಿಂದ 8ನೇ ದಿನದ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ (Rajakaluve Encroachment) ಅಂತ್ಯಗೊಂಡಿದೆ. ನಗರದ ಮಹದೇವಪುರ ವಲಯ ವ್ಯಾಪ್ತಿಯಲ್ಲಿ ಬುಧವಾರ ಕಸವನಗಳ್ಳಿಯ ವಲ್ಲಿಯಮ್ಮ ಲೇಔಟ್, ಗ್ರೀನ್ ಹುಡ್ ರೆಸಿಡೆನ್ಸಿ, ಮಾರತಹಳ್ಳಿ ಪೊಲೀಸ್ ಠಾಣೆಯ ಹಿಂಭಾಗ ಜಲಮಂಡಳಿಯ ಎಸ್.ಟಿ.ಪಿ ಬಳಿ ರಾಜಕಾಲುವೆ ಮೇಲೆ ನಿರ್ಮಿಸಿದ್ದ ಆರ್.ಸಿ.ಸಿ ಸೇತುವೆಯ ತೆರವು ಕಾರ್ಯಾಚರಣೆಯನ್ನು ಮಾಡಲಾಗಿದೆ.

ಕಸವನಹಳ್ಳಿ ವಲ್ಲಿಯಮ್ಮ ಲೇಔಟ್‌ನಲ್ಲಿ ಶೆಡ್‌ಗಳನ್ನು ತೆರವುಗೊಳಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಗ್ರೀನ್ ಹುಡ್ ರೆಸಿಡೆನ್ಸ್ ಆವರಣದಲ್ಲಿ ಸುಮಾರು 150 ಮೀಟರ್ ಉದ್ದದ ಮಳೆ ನೀರುಗಾಲುವೆಯ ಮೇಲೆ ಅಳವಡಿಸಿದ್ದ ಸ್ಲ್ಯಾಬ್‌ನ ತೆರವು ಕಾರ್ಯ ಬಹುತೇಕ ಪೂರ್ಣಗೊಂಡಿದ್ದು, ಸ್ಲ್ಯಾಬ್‌ಗೆ ಅಳವಡಿಸಿದ್ದ ಗ್ರಿಲ್ ತೆರವುಗೊಳಿಸಬೇಕಿದೆ. ಮಳೆ ನೀರುಗಾಲುವೆ ಮೇಲೆ ನಿರ್ಮಿಸಿದ್ದ ಕಾಂಪೌಂಡ್ ಅನ್ನು ಕೂಡಾ ತೆರವುಗೊಳಿಸಲಾಗಿದೆ.

ಮಾರತಹಳ್ಳಿ ಪೊಲೀಸ್ ಠಾಣೆಯ ಹಿಂಭಾಗ, ಜಲಮಂಡಳಿ ಎಸ್.ಟಿ.ಪಿ ಬಳಿ ರಾಜಕಾಲುವೆಯ ಮೇಲೆ ನಿರ್ಮಾಣ ಮಾಡಿರುವ ಸೇತುವೆ ತೆರವು ಕಾರ್ಯಾಚರಣೆಯು ಬಹುತೇಕ ಪೂರ್ಣಗೊಂಡಿದ್ದು, ಗುರುವಾರವೂ ತೆರವು ಕಾರ್ಯಾಚರಣೆ ಮುಂದುವರಿಯಲಿದೆ. ಕಸವನಹಳ್ಳಿ, ಹೂಡಿ ವ್ಯಾಪ್ತಿಯಲ್ಲಿ ಸರ್ವೇ ಕಾರ್ಯವನ್ನು ಮಾಡುತ್ತಿದ್ದು, ಒತ್ತುವರಿ ಮಾಡಿರುವ ಜಾಗವನ್ನು ಮಾರ್ಕಿಂಗ್ ಮಾಡಿದ ಬಳಿಕ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ | Bengaluru Rain | ಕೆರೆ, ರಾಜಕಾಲುವೆ ನುಂಗಿದ್ದರ ತನಿಖೆಗೆ ಆಯೋಗ, ಅಭಿವೃದ್ಧಿಗೆ ಟಾಸ್ಕ್‌ ಫೋರ್ಸ್‌

Exit mobile version