ಬಳ್ಳಾರಿ/ಹೊನ್ನಾಳಿ: ರಾಜಸ್ಥಾನದಲ್ಲಿ ನಡೆದ ಕನ್ಹಯ್ಯ ಲಾಲ್ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ದೇಶಾದ್ಯಂತ ಆಕ್ರೋಶ ಭುಗಿಲೆದ್ದಿದ್ದು, ದೇಶಭಕ್ತ ನಾಗರಿಕರ ವೇದಿಕೆ ಸೋಮವಾರ ಕರೆಕೊಟ್ಟಿದ್ದ ಬಳ್ಳಾರಿ ಬಂದ್ ಯಶಸ್ವಿಯಾಯಿತು.
ಬಂದ್ ಹಿನ್ನೆಲೆಯಲ್ಲಿ ನಗರದ ಪ್ರಮುಖ ವೃತ್ತಗಳಲ್ಲಿ ಡಿಎಆರ್ ತುಕಡಿಗಳ ಸಹಿತ ಸಿವಿಲ್ ಪೊಲೀಸರ ತಂಡ, ಪೊಲೀಸ್ ಅಧಿಕಾರಿಗಳು ಬೀಡು ಬಿಟ್ಟಿದ್ದರು. ಬೆಳಗ್ಗೆ 8 ಗಂಟೆಯಿಂದ ಸಂಜೆ 4ರ ವರೆಗೆ ಕರೆ ನೀಡಿದ ಬಂದ್ ಹಿನ್ನೆಲೆಯಲ್ಲಿ ಬಳ್ಳಾರಿ ಸ್ತಬ್ಧವಾಗಿತ್ತು.
ಇದನ್ನೂ ಓದಿ | 40 ದಿನ ಬಳ್ಳಾರಿ ಜೈಲಿನಲ್ಲಿದ್ದ ಗಡಿ ಕ್ಯಾತೆಯ ಶಿಂಧೆ ಈಗ ಮಹಾ ಸಿಎಂ!
ದೇಶಭಕ್ತ ನಾಗರಿಕರ ವೇದಿಕೆಯ ಕಾರ್ಯಕರ್ತರು ಹಿಂದು ಧ್ವಜ ಹಿಡಿದು ಕನಕದುರ್ಗಮ್ಮ ದೇವಸ್ಥಾನದಿಂದ ನಗರದ ರಾಯಲ್ ಸರ್ಕಲ್, ಮೋತಿ ಸರ್ಕಲ್, ಎಸ್ಪಿ ಸರ್ಕಲ್ ಸೇರಿದಂತೆ ಪ್ರಮುಖ ರಸ್ತೆಯಲ್ಲಿ ಬೃಹತ್ ಬೈಕ್ ರ‍್ಯಾಲಿ ನಡೆಸಲಾಯಿತು. ತಾಳೂರು ರಸ್ತೆಯಲ್ಲಿ ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ಹಾಕಿದ ಸಂಘಟನೆಗಳು, ಪಾಕಿಸ್ತಾನದ ವಿರುದ್ಧ ಘೋಷಣೆ ಕೂಗಿದರು.
ಅಂಗಡಿ ಮುಂಗಟ್ಟು, ಶಾಲಾ-ಕಾಲೇಜು ಬಂದ್
ನಗರದ ಅಂಗಡಿ ಮಾಲೀಕರು ಸ್ವಯಂ ಪ್ರೇರಣೆಯಿಂದ ಬಂದ್ ಮಾಡಿ ಬೆಂಬಲ ಸೂಚಿಸಿದರು. ಚಿತ್ರಮಂದಿರ, ಪೆಟ್ರೋಲ್ ಬಂಕ್, ಹೋಟೆಲ್ ಸೇರಿದಂತೆ ಸಂಪೂರ್ಣ ವ್ಯಾಪಾರ ವಹಿವಾಟುಗಳು ಸ್ಥಗಿತಗೊಂಡಿದ್ದವು. ಬೆಳಗ್ಗೆ 8 ಗಂಟೆಯಿಂದಲೇ ವಾಹನ ಸಂಚಾರ ವಿರಳವಾಗಿದ್ದು, ಅಲ್ಲಲ್ಲಿ ಭಾರಿ ವಾಹನಗಳು, ಸಣ್ಣಪುಟ್ಟ ವಾಹನಗಳ ಸಂಚಾರ ಕಂಡುಬರುತ್ತಿತ್ತು. ಬಹುತೇಕ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿತ್ತು.
ಶಾಸಕರಿಂದಲ್ಲೂ ಬಂದ್‌ಗೆ ಸಾಥ್
ಬಳ್ಳಾರಿ ನಗರ ಶಾಸಕ ಸೋಮಶೇಖರ ರೆಡ್ಡಿ, ಮಾಜಿ ಸಂಸದೆ ಶಾಂತಾ ಸೇರಿದಂತೆ ಇತರರು ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದರು. ಶಾಸಕ ಸೋಮಶೇಖರ ರೆಡ್ಡಿ ನಗರ ರಾಯಲ್ ಸರ್ಕಲ್‌ನಲ್ಲಿಯೇ ಪ್ರತಿಭಟನಾಕಾರೊಂದಿಗೆ ಧರಣಿ ಕುಳಿತು ಆಕ್ರೋಶ ಹೊರಹಾಕಿದರು.
ಹಂತಕರ ಗುಂಡಿಕ್ಕಿ ಕೊಲ್ಲಿ ಅಂದ ರೇಣುಕಾಚಾರ್ಯ
ದಾವಣಗೆರೆಯ ಹೊನ್ನಾಳಿಯಲ್ಲಿ ಶಾಸಕ ಎಂ.ಪಿ. ರೇಣುಕಾಚಾರ್ಯ, ಉದಯಪುರದಲ್ಲಿ ಕನ್ಹಯಲಾಲ್ ಹತ್ಯೆ ಖಂಡಿಸಿ ಪ್ರತಿಭಟಿಸಿದರು. ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಪಾಕಿಸ್ತಾನದಲ್ಲಿ ತರಬೇತಿ ಪಡೆಯುವ ಭಯೋತ್ಪಾದಕರು ನಮ್ಮ ದೇಶದಲ್ಲಿ ದಾಳಿ ಮಾಡುತ್ತಾರೆ. ಈಗ ಕನ್ಹಯ್ಯ ಲಾಲ್‌ನ ಹತ್ಯೆ ಮಾಡಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬೆದರಿಕೆ ಹಾಕಿದ್ದಾರೆ. ಅವರನ್ನು ಗುಂಡಿಕ್ಕಿ ಕೊಂದಾಗ ಮಾತ್ರ ಹತ್ಯೆಯಾದ ಹಿಂದುಗಳ ಆತ್ಮಕ್ಕೆ ಶಾಂತಿ ಸಿಗಲಿದೆ. ಕೊಲೆ ಬೆದರಿಕೆ ಇದೆ ಎಂದು ತಿಳಿದ ಮೇಲೂ ರಾಜಸ್ಥಾನ ಸರ್ಕಾರ ನಿರ್ಲಕ್ಷ್ಯವಹಿಸಿದೆ. ಕೂಡಲೇ ರಾಜಸ್ಥಾನ ಸರ್ಕಾರವನ್ನು ವಜಾ ಮಾಡಬೇಕೆಂದು ರಾಷ್ಟ್ರಪತಿಗಳಿಗೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.
ಈ ಮಧ್ಯೆ, ಹತ್ಯೆ ಮಾಡಿದ ಹಂತಕರು ಬಿಜೆಪಿ ಕಾರ್ಯಕರ್ತರು ಎನ್ನುವ ವಿಚಾರವನ್ನು ಹುಟ್ಟುಹಾಕಿದ್ದಾರೆ. ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್, ರಾಹುಲ್ ಗಾಂಧಿ ಹಿಂದುಗಳ ಪರ ಎಂದು ಹೇಳಿಕೊಳ್ಳುತ್ತಿದ್ದಾರೆ. ನಾವು ಅವರಂತೆ ವೋಟ್ ಬ್ಯಾಂಕ್ ರಾಜಕಾರಣ ಮಾಡುವುದಿಲ್ಲ. ಅವರು ಅಲ್ಪಸಂಖ್ಯಾತರ ಓಲೈಕೆ ಮಾಡುತ್ತಿಲ್ಲ ಎಂದು ಹೇಳಲಿ ನೋಡೋಣಾ ಎಂದು ಸವಾಲು ಹಾಕಿದ ರೇಣುಕಾಚಾರ್ಯ, ಇದೆಲ್ಲ ಕಾಂಗ್ರೆಸಿಗರ ಸೃಷ್ಟಿಯಾಗಿದ್ದು, ಇದಕ್ಕೂ ಬಿಜೆಪಿಗೂ ಸಂಬಂಧ ಇಲ್ಲ ಎಂದು ಸ್ಪಷ್ಟನೆ ನೀಡಿದರು.
ಇದನ್ನೂ ಓದಿ | ರಾಜಸ್ಥಾನ ಹತ್ಯೆ; ಟೇಲರ್ ಕನ್ಹಯ್ಯಲಾಲ್‌ಗೆ ಮುಸ್ಲಿಂ ದುಷ್ಕರ್ಮಿಗಳು ಇರಿದಿದ್ದು 26 ಬಾರಿ