Site icon Vistara News

Karnataka Election: ಭ್ರಷ್ಟ ಕಾಂಗ್ರೆಸ್‌ಗೆ ಈ ಚುನಾವಣೆಯಲ್ಲೂ ತಕ್ಕ ಪಾಠ: ರಾಜೀವ್ ಚಂದ್ರಶೇಖರ್

Rajeev Chandrasekhar says this election will be a lesson for corrupt Congress

ಬೆಂಗಳೂರು: ಭ್ರಷ್ಟಾಚಾರದಿಂದ 2018ರ ಚುನಾವಣೆಯಲ್ಲಿ (Karnataka Election) ಸೋಲು ಕಂಡಿದ್ದ ಕಾಂಗ್ರೆಸ್‍ಗೆ ಜನರು ಈ ಚುನಾವಣೆಯಲ್ಲೂ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ (rajeev chandrasekhar) ಹೇಳಿದ್ದಾರೆ.

ಮಲ್ಲೇಶ್ವರದ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿಕಾರದಲ್ಲಿದ್ದಾಗ ಕಾಂಗ್ರೆಸ್‍ನ ಭ್ರಷ್ಟಾಚಾರ ಸರಮಾಲೆಯಿಂದ ಜನರು ಚುನಾವಣೆಯಲ್ಲಿ 2018ರಲ್ಲಿ ಆ ಪಕ್ಷವನ್ನು ತಿರಸ್ಕರಿಸಿದ್ದರು. ಆದರೂ ಜೆಡಿಎಸ್‍ನೊಂದಿಗೆ ಕೈಜೋಡಿಸಿ ಹಿಂಬಾಗಿಲಿನಿಂದ ಸಮ್ಮಿಶ್ರ ಸರ್ಕಾರ ರಚನೆ ಮಾಡಿತ್ತು ಎಂದು ಆರೋಪಿಸಿದರು.

ನಿಂದನೆ, ಸುಳ್ಳು ಆರೋಪ, ಹಿಂಸಾಚಾರ, ಸುಳ್ಳು ಭರವಸೆ, ಒಡೆದಾಳುವ ಮತ್ತು ತುಷ್ಟೀಕರಣದ ರಾಜಕಾರಣವನ್ನು ಕಾಂಗ್ರೆಸ್ ಮುಂದುವರಿಸಿಕೊಂಡು ಬರುತ್ತಿದೆ. ಕಳೆದ 36 ಗಂಟೆಗಳಲ್ಲಿ ಕಾಂಗ್ರೆಸ್ ಪಕ್ಷದ ನಾಯಕರ ನಡವಳಿಕೆ ಮತ್ತು ವರ್ತನೆಗಳು ಇದಕ್ಕೆ ನಿದರ್ಶನವಾಗಿವೆ ಎಂದು ತಿಳಿಸಿದರು.

ರಾಷ್ಟ್ರೀಯ ಯುವ ಕಾಂಗ್ರೆಸ್ ಕಾರ್ಯದರ್ಶಿಯೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಚಿತ್ರವನ್ನು ಹಾಕಿ ‘ಪೇ ಸಿಎಂ’ ಎಂದು ನಿಂದಿಸಿದ್ದಾರೆ. ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ. ಶ್ರೀನಿವಾಸ್‌ ವಿರುದ್ಧ ಕಿರುಕುಳ ಆರೋಪ ಮಾಡಿದ್ದಕ್ಕೆ ಅಸ್ಸಾಂ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷೆ ಅಂಕಿತಾ ದತ್ತಾರನ್ನು ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದಾರೆಂದು ಅಮಾನತುಗೊಳಿಸಲಾಗಿದೆ ಎಂದು ಕಿಡಿ ಕಾರಿದರು.

ಇದನ್ನೂ ಓದಿ | BJP Karnataka: ಕಾಂಗ್ರೆಸ್‌ಗೆ ಹೋಗಿರುವುದು ಕುಂಡದ ಗಿಡಗಳು; ಹೆಮ್ಮರಗಳು ಬಿಜೆಪಿಯಲ್ಲೇ ಇವೆ ಎಂದ ಸಿಎಂ ಬೊಮ್ಮಾಯಿ

ಪ್ರಶ್ನೆ ಕೇಳಿದ್ದಕ್ಕೆ ವ್ಯಕ್ತಿಯೊಬ್ಬರನ್ನು ಎಂ.ಬಿ.ಪಾಟೀಲ್ ಥಳಿಸಿದ್ದಾರೆ. ಇನ್ನು ಸಮಾಜ ಕಲ್ಯಾಣ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆಸಿದ ಎಚ್.ಆಂಜನೇಯ, 2,500 ಕೋಟಿ ರೂ. ಹೌಸಿಂಗ್ ಹಗರಣದಲ್ಲಿ ಹೆಸರಿಸಲಾಗಿರುವ ಎಂ.ಕೃಷ್ಣಪ್ಪ, ಆರ್.ವಿ.ದೇವರಾಜ್, ಅಕ್ರಮ ಮರಳು ಸಾಗಣೆ ಪ್ರಕರಣದಲ್ಲಿರುವ ಎಚ್.ಸಿ. ಮಹದೇವಪ್ಪ ಪುತ್ರ ವಿರುದ್ಧ ತನಿಖೆ ನಡೆಯುತ್ತಿದ್ದರೂ ಮತ್ತೆ ಟಿಕೆಟ್ ನೀಡಲಾಗಿದೆ ಎಂದು ಹೇಳಿದರು.

ಸಿದ್ದರಾಮಯ್ಯ ಸರ್ಕಾರದಲ್ಲಿ ಸರಣಿ ಭ್ರಷ್ಟಾಚಾರ ಮತ್ತು ಹಗರಣಗಳು ನಡೆದಿವೆ. ಕಾಂಗ್ರೆಸ್ ನಾಯಕ ವಿರುದ್ಧದ ಪ್ರಕರಣಗಳನ್ನು ಮುಚ್ಚಿಹಾಕಲು ಅಧಿಕಾರದಲ್ಲಿದ್ದ ಸಿದ್ದರಾಮಯ್ಯ, ಲೋಕಾಯುಕ್ತವನ್ನು ದುರ್ಬಲಗೊಳಿಸಿ ಭ್ರಷ್ಟಾಚಾರ ನಿಗ್ರಹ ದಳ ರಚಿಸಿದರು. ಅರ್ಕಾವತಿ ಬಡಾವಣೆ ಪ್ರಕರಣ, ಬೆಂಗಳೂರಿನಲ್ಲಿ ಉಕ್ಕು ಸೇತುವೆ ನಿರ್ಮಾಣಕ್ಕೆ ಲಂಚ, ಅನ್ನ ಭಾಗ್ಯ, ಶಿಕ್ಷಕರ ನೇಮಕಾತಿ ಹಗರಣ ಅವರ ಸರ್ಕಾರದಲ್ಲೇ ನಡೆದಿತ್ತು. ಸಮಾಜವಾದಿ ನಾಯಕ ಎನ್ನುವ ಸಿದ್ದರಾಮಯ್ಯ 70 ಲಕ್ಷ ರೂ. ಮೌಲ್ಯದ ಹ್ಯೂಬ್ಲೆಟ್ ಕೈಗಡಿಯಾರ ಧರಿಸಿದ್ದರು ಎಂದು ಟೀಕಿಸಿದರು.

ಇದನ್ನೂ ಓದಿ | Karnataka Election 2023: ರಾಹುಲ್ ಗಾಂಧಿ ಅವರೇ ಬಿಜೆಪಿಯ ಸ್ಟಾರ್ ಕ್ಯಾಂಪೇನರ್‌: ಬಸನಗೌಡ ಪಾಟೀಲ್ ಯತ್ನಾಳ್

ಸಿದ್ದರಾಮಯ್ಯ ಹಿಂದು ವಿರೋಧಿ ಮತ್ತು ಒಡೆದಾಳುವ ರಾಜಕೀಯ ಮಾಡುತ್ತಿದ್ದಾರೆ. ಲಿಂಗಾಯತರನ್ನು, ಹಿಂದುಗಳನ್ನು ವಿಭಜಿಸಲು ಸದಾ ಪ್ರಯತ್ನಿಸುತ್ತಾರೆ ಎಂದ ಅವರು, ಕೋವಿಡ್ ಅವಧಿಯಲ್ಲೂ ಕಾಂಗ್ರೆಸ್ ಪಕ್ಷವು ಸುಳ್ಳುಗಳನ್ನು ಹಬ್ಬಿಸುತ್ತಿತ್ತು. ಇನ್ನು ಡಿ.ಕೆ.ಶಿವಕುಮಾರ್ ರಾಮನಗರ ಮತ್ತು ಕೊಳ್ಳೇಗಾಲದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದಾರೆ. ಅಕ್ರಮ ಹಣ ವರ್ಗಾವಣೆಯಲ್ಲಿ ಅವರ ವಿರುದ್ಧ ಪ್ರಕರಣವಿದೆ. ಸೌರ ವಿದ್ಯುತ್ ಹಗರಣದಲ್ಲಿ ಜಾರಿ ನಿರ್ದೇಶನಾಲಯ ಅವರಿಗೆ ನೋಟಿಸ್ ನೀಡಿದ್ದು, ಸರ್ಕಾರ ಅವರ ವಿರುದ್ಧ ತನಿಖೆಗೆ ಸೂಚಿಸಿದೆ. ಈ ಮೂಲಕ ಭ್ರಷ್ಟಾಚಾರ ಮತ್ತು ಅಪರಾಧವನ್ನು ಕೇಂದ್ರೀಯ ನಾಯಕತ್ವದಿಂದ ಹಿಡಿದು ರಾಜ್ಯ ನಾಯಕತ್ವದವರೆಗೆ ಕಾಂಗ್ರೆಸ್ ಪ್ರತಿನಿಧಿಸುತ್ತಿದೆ ಎಂದು ಆರೋಪಿಸಿದರು.

ರಾಜ್ಯ ಬಿಜೆಪಿ ವಕ್ತಾರರು ಹಾಗೂ ವಿಧಾನಪರಿಷತ್ ಸದಸ್ಯೆ ಡಾ. ತೇಜಸ್ವಿನಿ ಗೌಡ, ರಾಜ್ಯ ಮುಖ್ಯ ವಕ್ತಾರ ಎಂ.ಜಿ. ಮಹೇಶ್ ಉಪಸ್ಥಿತರಿದ್ದರು.

Exit mobile version