Site icon Vistara News

Karnataka Ratna | ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಬರಲಿದ್ದಾರೆ ರಜನಿಕಾಂತ್‌, ಜ್ಯೂ. ಎನ್‌ಟಿಆರ್‌

rajaneekanth

‌ಬೆಂಗಳೂರು: ಕನ್ನಡ ಚಿತ್ರರಂಗದ ನೆಚ್ಚಿನ ನಟ, ಪವರ್‌ ಸ್ಟಾರ್‌ ಪುನೀತ್‌ ರಾಜಕುಮಾರ್‌ ಅವರಿಗೆ ನೀಡಲಾಗುತ್ತಿರುವ “ಕರ್ನಾಟಕ ರತ್ನ” (Karnataka Ratna) ಪ್ರಶಸ್ತಿ ಕಾರ್ಯಕ್ರಮಕ್ಕೆ ತಮಿಳು ಚಿತ್ರರಂಗದ ಸೂಪರ್‌ ಸ್ಟಾರ್‌ ರಜನಿಕಾಂತ್‌, ತೆಲುಗು ಚಿತ್ರರಂಗ ಖ್ಯಾತ ನಟ ಜ್ಯೂನಿಯರ್‌ ಎನ್‌ಟಿಆರ್‌ ಆಗಮಿಸಲಿದ್ದಾರೆ ಎಂದು ಕಂದಾಯ ಸಚಿವ ಆರ್.‌ ಅಶೋಕ್‌ ತಿಳಿಸಿದ್ದಾರೆ.

ಅವರು ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಬಾರಿ ಕನ್ನಡ ರಾಜ್ಯೋತ್ಸವ ಅಂಗವಾಗಿ ನವೆಂಬರ್‌ ೧ರಂದು ವಿಧಾನಸೌಧದ ಮೆಟ್ಟಿಲು ಮುಂಭಾಗ ನಡೆಯಲಿರುವ ಈ ಕಾರ್ಯಕ್ರಮಕ್ಕೆ ಆಗಮಿಸಲು ಕರ್ನಾಟಕ ಮೂಲದ ತಮಿಳು ನಟ ರಜನಿಕಾಂತ್‌ ಹಾಗೂ ತೆಲುಗಿನ ಜ್ಯೂ. ಎನ್‌ಟಿಆರ್‌ ಅವರು ಒಪ್ಪಿದ್ದಾರೆ ಎಂದು ತಿಳಿಸಿದರು.

ನವೆಂಬರ್ ೧ ರಂದು ಸಂಜೆ ೪ ಗಂಟೆಗೆ ವಿಧಾನಸೌಧದ ಮೆಟ್ಟಿಲು ಮುಂಭಾಗ ‌ಕಾರ್ಯಕ್ರಮ ನಡೆಯಲಿದೆ. ಜ್ಯೂನಿಯರ್‌ ಎನ್‌ಟಿಆರ್‌ ಅವರೂ ಸಹ ಕನ್ನಡವನ್ನು ಮಾತನಾಡುತ್ತಾರೆ. ಅವರ ತಾಯಿ ನಮ್ಮ ಕರ್ನಾಟಕದವರಾಗಿದ್ದಾರೆ ಎಂದು ಹೇಳಿದ ಆರ್‌. ಅಶೋಕ್‌, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ತಿಳಿಸಿದರು.

ಪುನೀತ್‌ಗೆ ಮರಣೋತ್ತರ ಪ್ರಶಸ್ತಿ ಪ್ರದಾನ
ಪುನೀತ್‌ ರಾಜಕುಮಾರ್‌ ಅವರಿಗೆ ಮರಣೋತ್ತರ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಈ ಪ್ರಶಸ್ತಿಯು ೫೦ ಗ್ರಾಂ ಚಿನ್ನದ ಪದಕವನ್ನೊಳಗೊಂಡಿದೆ. ಜತೆಗೆ ಬೆಳ್ಳಿಯ ಸ್ಮರಣಿಕೆಯನ್ನು ನೀಡಲಾಗುತ್ತದೆ. ಇದುವರೆಗೆ ೮ ಸಾಧಕರಿಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡಲಾಗಿದೆ. ರಾಷ್ಟ್ರಕವಿ ಕುವೆಂಪು, ವರನಟ ಡಾ. ರಾಜಕುಮಾರ್, ಮಾಜಿ ಸಿಎಂ ನಿಜಲಿಂಗಪ್ಪ, ಸಿದ್ಧಗಂಗಾ ಮಠದ ಶಿವಕುಮಾರ ಶ್ರೀ, ಸಾಹಿತಿ ದೇ. ಜವರೇಗೌಡ, ಧರ್ಮಸ್ಥಳ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರಿಗೆ ಪ್ರಶಸ್ತಿ ನೀಡಲಾಗಿದೆ ಎಂದು ಕಂದಾಯ ಸಚಿವ ಆರ್.‌ ಅಶೋಕ್‌ ತಿಳಿಸಿದರು.

ಇದನ್ನೂ ಓದಿ | Puneeth Parva | ನವೆಂಬರ್‌ 1ರಂದು ಪುನೀತ್‌ಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ: ನಾಡಿನ ಜನತೆಗೆ ಬೊಮ್ಮಾಯಿ ಆಹ್ವಾನ!

ಈ ಕಾರ್ಯಕ್ರಮದಲ್ಲಿ ವಿಜಯಪ್ರಕಾಶ್ ತಂಡದ ಗಾಯನವಿರಲಿದೆ. ಡಾ. ರಾಜಕುಮಾರ್‌ ಕುಟುಂಬ ಸೇರಿದಂತೆ ಚಿತ್ರರಂಗದ ಅನೇಕ ಗಣ್ಯರು ಭಾಗವಹಿಸಲಿದ್ದಾರೆ. ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಅವರೂ ಭಾಗಿಯಾಗಲಿದ್ದಾರೆ ಎಂದು ಆರ್.‌ ಅಶೋಕ್‌ ತಿಳಿಸಿದರು.

ವಿಧಾನಸೌಧದ ಮುಂದೆ ಇರುವ ರಸ್ತೆಯಲ್ಲೂ ಜನರನ್ನು ಸೇರಿಸುವ ಬಗ್ಗೆ ವ್ಯವಸ್ಥೆ ಮಾಡುತ್ತೇವೆ. ಈ ಬಗ್ಗೆ ಪೊಲೀಸ್ ಅಧಿಕಾರಿಗಳ ಜತೆ ಚರ್ಚಿಸಿ ಸೂಕ್ತ ನಿರ್ಧಾರ ಮಾಡುತ್ತೇವೆ. ರಸ್ತೆಯಲ್ಲೂ ಅಪ್ಪು ಅಭಿಮಾನಿಗಳು ನಿಂತುಕೊಳ್ಳಲು ವ್ಯವಸ್ಥೆ ಮಾಡುತ್ತೇವೆ ಎಂದು ಅಶೋಕ್ ತಿಳಿಸಿದರು.

ಚಾಮರಾಜಪೇಟೆ ಮೈದಾನದಲ್ಲಿ ರಾಜ್ಯೋತ್ಸವ; ಕಾನೂನು ಸಲಹೆ ಪಡೆಯುತ್ತೇವೆ
ಚಾಮರಾಜಪೇಟೆ ಆಟದ ಮೈದಾನದಲ್ಲಿ ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವ ಆಚರಿಸುವ ವಿಚಾರವಾಗಿ ಅಡ್ವೊಕೇಟ್ ಜನರಲ್ ಜತೆ ಚರ್ಚೆ ಮಾಡುತ್ತೇವೆ. ಕಾನೂನು ಸಲಹೆ ಪಡೆದ ನಂತರವಷ್ಟೇ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅಶೋಕ್‌ ತಿಳಿಸಿದರು.

ಕೃಷ್ಣಾ ಮೇಲ್ದಂಡೆ‌ ಭೂಸ್ವಾಧೀನ ಜಮೀನು ದರ ಹೆಚ್ಚಳ: ಆರ್.‌ ಅಶೋಕ್
ಕೃಷ್ಣಾ ಮೇಲ್ದಂಡೆ ಯೋಜನೆ ವಿಚಾರವಾಗಿ ಸಮಿತಿ ಸಭೆ ಮಾಡಲಾಗಿದೆ. 26 ಸಾವಿರ ಎಕರೆ ಭೂ ಸ್ವಾಧೀನಕ್ಕೆ ಪರಿಹಾರ ನೀಡಲಾಗಿದೆ. ಇನ್ನೂ 50 ಸಾವಿರ ಎಕರೆ ಪರಿಹಾರ ನೀಡಬೇಕಿದೆ. ಈಗಾಗಲೇ ಅಣೆಕಟ್ಟೆಯ ಎತ್ತರ ಹೆಚ್ಚಿಸಲು ನಿರ್ಧಾರ ಮಾಡಲಾಗಿದೆ. ರೈತರು ಹೆಚ್ಚಿನ ಪರಿಹಾರಕ್ಕೆ ಆಗ್ರಹ ಮಾಡಿದ್ದಾರೆ. ಸದ್ಯ ಪರಿಹಾರ 1.5 ಲಕ್ಷ ರೂ. ಇದೆ. ಮೂರು ಪಟ್ಟು ಹೆಚ್ಚು ಮಾಡಬೇಕು ಎಂದಾದರೆ 8 ಲಕ್ಷ ರೂಪಾಯಿಯಷ್ಟಾಗಬಹುದು. ಆದರೆ, ರೈತರು ಇನ್ನೂ ಹೆಚ್ಚಿನ ಪರಿಹಾರ ಕೇಳುತ್ತಿದ್ದಾರೆ. ರೈತರಿಗೆ ಅನುಕೂಲವಾಗಲಿ ಎಂದು ಭಾವಿಸಿ ಮಾನವೀಯ ದೃಷ್ಟಿಯಿಂದ ಹೆಚ್ಚಳ ಮಾಡುತ್ತೇವೆ. ವಿಶೇಷ ಪ್ರಕರಣವೆಂದು ಅಂತ ಭಾವಿಸಿ ಹೆಚ್ಚಳ ಮಾಡಲು ನಿರ್ಧಾರ ಮಾಡಿದ್ದೇವೆ. ಈ ಬಗ್ಗೆ ಇನ್ನೊಂದು ಸಭೆ ಮಾಡಿ ನಾವು ಪರಿಹಾರ ಎಷ್ಟು ನೀಡಬೇಕು ಎಂದು ನಿರ್ಧಾರ ಮಾಡುತ್ತೇವೆ. ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣ ಇದ್ದರೂ ನಮ್ಮ ಪರವಾಗಿ ಆಗಲಿದೆ ಎಂದು ಭಾವಿಸಿದ್ದೇವೆ ಎಂದು ಅಶೋಕ್‌ ತಿಳಿಸಿದರು.

ಸಿಎಂ ಭೇಟಿ ಮಾಡಿದ ಶಿವರಾಜಕುಮಾರ್‌ ದಂಪತಿ
ನವೆಂಬರ್ 1 ರಂದು ಕರ್ನಾಟಕ ರತ್ನ ಪ್ರಶಸ್ತಿ ಸಮಾರಂಭ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ್ದ ನಟ ಶಿವರಾಜ್ ಕುಮಾರ್ ದಂಪತಿ ಕೆಲ ಕಾಲ ಚರ್ಚೆ ನಡೆಸಿದರು. ರೇಸ್ ಕೋರ್ಸ್ ರಸ್ತೆಯಲ್ಲಿರುವ ಸಿಎಂ ನಿವಾಸದಲ್ಲಿ ಭೇಟಿಯಾದ ಶಿವರಾಜಕುಮಾರ್‌ ಹಾಗೂ ಗೀತಾ ಅವರು ಕಾರ್ಯಕ್ರಮದ ಬಗ್ಗೆ ಚರ್ಚೆ ನಡೆಸಿದರು.

ಇದನ್ನೂ ಓದಿ | Puneeth Rajkumar | ಕನ್ನಡ ಪಠ್ಯದಲ್ಲಿ ಪುನೀತ್‌ ಜೀವನ ಸಾಧನೆ; ಮುಂದಿನ ವರ್ಷಕ್ಕೆ ತೀರ್ಮಾನ: ಅಶೋಕ್

Exit mobile version