Site icon Vistara News

ಪುನೀತ್‌ಗೆ ಕರ್ನಾಟಕ ರತ್ನ ಪ್ರಶಸ್ತಿ; ಕಾರ್ಯಕ್ರಮಕ್ಕೆ ಸೂಪರ್‌ಸ್ಟಾರ್ ರಜನಿಕಾಂತ್‌, ಜೂ. ಎನ್‌ಟಿಆರ್‌ಗೆ ಆಹ್ವಾನ

ಪುನೀತ್‌ಗೆ

ಬೆಂಗಳೂರು: ರಾಜ್ಯ ಸರ್ಕಾರದಿಂದ ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವದ ಭಾಗವಾಗಿ ಹಮ್ಮಿಕೊಂಡಿರುವ ಪವರ್‌ ಸ್ಟಾರ್ ಪುನೀತ್ ರಾಜಕುಮಾರ್‌ಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಸೂಪರ್‌ ಸ್ಟಾರ್‌ ರಜನಿಕಾಂತ್‌ ಹಾಗೂ ಟಾಲಿವುಡ್‌ ಖ್ಯಾತ ನಟ, ಆಂಧ್ರ ಪ್ರದೇಶದ ಜೂನಿಯರ್‌ ಎನ್‌ಟಿಆರ್‌ ಅವರಿಗೆ ಆಹ್ವಾನ ನೀಡಲಾಗಿದೆ.

ವಿಧಾನಸೌಧದ ಆವರಣದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಪುನೀತ್‌ ರಾಜಕುಮಾರ್‌ ಅವರಿಗೆ ಕರ್ನಾಟಕ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಹೀಗಾಗಿ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ರಜನಿಕಾಂತ್‌ ಹಾಗೂ ಜೂ.ಎನ್‌ಟಿಆರ್‌ ಅವರಿಗೆ ರಾಜ್ಯ ಸರ್ಕಾರದಿಂದ ಅಧಿಕೃತ ಆಹ್ವಾನ ನೀಡಲಾಗಿದೆ. ಕಾರ್ಯಕ್ರಮಕ್ಕೆ ಹಾಜರಾಗಲು ಇಬ್ಬರು ನಟರೂ ಆಹ್ವಾನ ಒಪ್ಪಿದ್ದಾರೆ ಎನ್ನಲಾಗಿದೆ.

ಈ ಹಿಂದೆ ಖ್ಯಾತ ನಟಿಯರಾದ ಐಶ್ವರ್ಯ ರೈ, ದೀಪಿಕಾ ಪಡುಕೋಣೆ ಅವರಿಗೆ ಆಹ್ವಾನ ನೀಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿತ್ತು. ಆದರೆ ಅವರಿಗೆ ಪೂರ್ವ ನಿಯೋಜಿತ ಕಾರ್ಯಕ್ರಮಗಳಿರುವ ಹಿನ್ನೆಲೆಯಲ್ಲಿ ರಜನಿಕಾಂತ್‌ ಹಾಗೂ ಜೂ.ಎನ್‌ಟಿಆರ್‌ ಅವರಿಗೆ ಆಹ್ವಾನ ನೀಡಲಾಗಿದೆ. ಕನ್ನಡ ಚಲನಚಿತ್ರ ಕ್ಷೇತ್ರದಲ್ಲಿ ಪುನೀತ್‌ ರಾಜಕುಮಾರ್‌ ಅವರ ಗಣನೀಯ ಸಾಧನೆಯನ್ನು ಪರಿಗಣಿಸಿ ಮರಣೋತ್ತರವಾಗಿ ರಾಜ್ಯ ಸರ್ಕಾರದ ಅತ್ಯುನ್ನತ ಪ್ರಶಸ್ತಿಯನ್ನು ನೀಡಲಾಗುತ್ತಿದೆ.

ಇದನ್ನೂ ಓದಿ | ಪುನೀತ್ ರಾಜಕುಮಾರ್‌ಗೂ ಮುನ್ನ ಕರ್ನಾಟಕ ರತ್ನ ಪ್ರಶಸ್ತಿ ಪಡೆದವರಾರು? ಇಲ್ಲಿದೆ ವಿವರ

Exit mobile version