ಬೆಂಗಳೂರು: ಭಾರಿ ಕುತೂಹಲ ಮೂಡಿಸಿರುವ ರಾಜ್ಯಸಭೆಯ ನಾಲ್ಕು ಸ್ಥಾನಗಳ ಚುನಾವಣೆಯ ಮತದಾನ ಶುಕ್ರವಾರ ಬೆಳಗ್ಗೆ 9ಕ್ಕೆ ವಿಧಾನಸೌಧದಲ್ಲಿ ಆರಂಭವಾಗಿದೆ. ಮತದಾನ ಸಂಜೆ 4 ಗಂಟೆಯವರೆಗೆ ಮತದಾನ ನಡೆಯಲಿದೆ. ಸಂಜೆ 5ರಿಂದ 6 ಗಂಟೆಯವರೆಗೆ ಮತ ಎಣಿಕೆ ಕಾರ್ಯ ನಡೆದು ರಾತ್ರಿ 8 ಗಂಟೆಯ ವೇಳೆಗೆ ಫಲಿತಾಂಶ ಹೊರಬೀಳುವ ನಿರೀಕ್ಷೆ ಇದೆ.
ವ್ಯವಸ್ಥಿತ ಮತದಾನಕ್ಕೆ ವಿಧಾನಸೌಧದಲ್ಲಿ ಗುರುವಾರವೇ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಮತ ಚಲಾಯಿಸುವಾಗ ಅನುಸರಿಬೇಕಾದ ಕ್ರಮಗಳ ಬಗ್ಗೆ ಸೂಚನಾ ಫಲಕಗಳನ್ನು ಅಳವಡಿಸಲಾಗಿದೆ. 4 ಸ್ಥಾನಗಳಿಗೆ 6 ಅಭ್ಯರ್ಥಿಗಳು ಕಣದಲ್ಲಿರುವುದರಿಂದ ಮತ ಲೆಕ್ಕಾಚಾರ ಕುತೂಹಲ ಕೆರಳಿಸಿದೆ.
ಮೂವರು ಅಭ್ಯರ್ಥಿಗಳ ಗೆಲುವು ಸುಲಭವಾಗಿದೆ. ಬಿಜೆಪಿಯ ನಿರ್ಮಲಾ ಸೀತಾರಾಮನ್, ಜಗ್ಗೇಶ್ ಹಾಗೂ ಕಾಂಗ್ರೆಸ್‌ನ ಜೈರಾಮ್ ರಮೇಶ್ ಮೊದಲ ಪ್ರಾಶಸ್ತ್ಯದ ಮತಗಳಲ್ಲಿ ಜಯ ಸಾಧಿಸುವ ಸಾಧ್ಯತೆ ನಿಚ್ಚಳವಾಗಿದೆ. ಹಾಲಿ ಸಂಖ್ಯಾಬಲ, ಅಭ್ಯರ್ಥಿಗಳಿಗೆ ಮಾಡುವ ಮತ ಹಂಚಿಕೆ ಆಧಾರದಲ್ಲಿ ಈ ಮೂವರ ಗೆಲುವು ಸುಲಭ. ಕೊನೆಯ ಒಂದು ಸ್ಥಾನಕ್ಕೆ ಮೂವರು ಅಭ್ಯರ್ಥಿಗಳು ಸ್ಫರ್ಧಿಸುತ್ತಿದ್ದಾರೆ. 3ನೇ ಅಭ್ಯರ್ಥಿಗೆ ಜೆಡಿಎಸ್ ಬಳಿ ಅತಿ ಹೆಚ್ಚು, ಅಂದರೆ 32 ಮೊದಲ ಪ್ರಾಶಸ್ತ್ಯದ ಮತಗಳು ಇವೆ. ಬಿಜೆಪಿ ಬಳಿ 32 ಹೆಚ್ಚುವರಿ ಮತಗಳು, 90 ಎರಡನೇ ಪ್ರಾಶಸ್ತ್ಯ ಮತಗಳಿವೆ.
ಕಾಂಗ್ರೆಸ್ ಬಳಿ 25 ಹೆಚ್ಚುವರಿ ಮತಗಳು, 45 ಎರಡನೇ ಪ್ರಾಶಸ್ತ್ಯದ ಮತಗಳು ಪಕ್ಕಾ ಆಗಿವೆ.
ಜೆಡಿಎಸ್ ಶಾಸಕರಿಗೆ ಎರಡನೇ ಪ್ರಾಶಸ್ತ್ಯದ ಮತ ಹಾಕುವ ಅವಕಾಶವಿಲ್ಲ. ಮೊದಲ ಸುತ್ತಿನಲ್ಲಿ ಮೊದಲ ಪ್ರಾಶಸ್ತ್ಯದ ಮತ ಪಡೆದ ಅಭ್ಯರ್ಥಿಗಳನ್ನು ಚುನಾಯಿತ ಎಂದು ಘೋಷಣೆ ಬಳಿಕ ಮತ್ತು ಮೊದಲ ಸುತ್ತಿನಲ್ಲಿ ಅತಿ ಕಡಿಮೆ ಮತ ಪಡೆದ ಅಭ್ಯರ್ಥಿಯನ್ನು ಕಣದಿಂದ ಕೈಬಿಡುವ ಪ್ರಕ್ರಿಯೆ ನಡೆಯಲಿದೆ. ನಂತರ 2ನೇ ಪ್ರಾಶಸ್ತ್ಯದ ಮತಗಳ ಎಣಿಕೆ ಕಾರ್ಯ ನಡೆಯಲಿದೆ. ಕಣದಿಂದ ಕೈಬಿಡಲಾದ ಅಭ್ಯರ್ಥಿಗಳಿಗೆ ಬಿದ್ದಿರುವ ಮತಗಳು ಆತನಿಗಿಂತ ಹೆಚ್ಚು ಮತಗಳನ್ನು ಪಡೆದಿದ್ದ ಅಭ್ಯರ್ಥಿಗೆ ವರ್ಗಾವಣೆ ಮಾಡಲಾಗುತ್ತದೆ. ಈ ರೀತಿ ಎರಡನೇ ಪ್ರಾಶಸ್ತ್ಯದ ಮತಗಳ ಪ್ರಕ್ರಿಯೆ ನಡೆದು ನಾಲ್ಕನೆ ಅಭ್ಯರ್ಥಿಯ ಭವಿಷ್ಯ ನಿರ್ಧಾರವಾಗಲಿದೆ. ಅಡ್ಡ ಮತದಾನ ನಡೆದರೆ, ಶಾಸಕರು ಮತದಾನಕ್ಕೆ ಗೈರು ಹಾಜರಾದರೆ, ಮತಗಳು ಕುಲಗೆಟ್ಟರೆ ಮತ ಲೆಕ್ಕಾಚಾರ ಏರುಪೇರು ಆಗುವ ಸಾಧ್ಯತೆ ಇದೆ.
ಹೀಗಿದೆ ಮೂರೂ ಪಕ್ಷಗಳ ಸಂಖ್ಯಾಬಲ
ಸ್ಪೀಕರ್ ಹಾಗೂ ಇಬ್ಬರು ಪಕ್ಷೇತರ ಶಾಸಕರು ಸೇರಿ ಬಿಜೆಪಿಯ ಸಂಖ್ಯಾಬಲ 122. ಒಬ್ಬ ಪಕ್ಷೇತರ ಶಾಸಕ ಸೇರಿ ಕಾಂಗ್ರೆಸ್ ಶಾಸಕರ ಸಂಖ್ಯಾಬಲ 70. ಜೆಡಿಎಸ್ ಶಾಸಕರ ಸಂಖ್ಯಾಬಲ 32 ಇದ್ದು, ನಾಮ ನಿರ್ದೇಶಿತ ಸದಸ್ಯರಿಗೆ ಮತದಾನದ ಹಕ್ಕು ಇರುವುದಿಲ್ಲ.
ಬೂತ್ ಏಜೆಂಟ್ಸ್
ಕಾಂಗ್ರೆಸ್ ಬೂತ್ ಏಜೆಂಟ್ಸ್ ಆಗಿ ಡಿ. ಕೆ. ಶಿವಕುಮಾರ್ ಹಾಗೂ ಧ್ರುವನಾರಾಯಣ್ ಇದ್ದಾರೆ. ಮನ್ಸೂರ್ ಅಲಿ ಖಾನ್‌ಗೆ ಈಶ್ವರ್ ಖಂಡ್ರೆ ಎಲೆಕ್ಷನ್ ಏಜೆಂಟ್ ಆಗಿದ್ದಾರೆ. ಪೊಲೀಂಗ್ ಏಜೆಂಟ್‌ಗಳಾಗಿ ಪಿ.ಆರ್.ರಮೇಶ್, ನಾರಾಯಣಸ್ವಾಮಿ, ಕೌಂಟಿಂಗ್ ಏಜೆಂಟ್‌ಗಳಾಗಿ ಹಸನಬ್ಬ, ಜಯರಾಂ ರಮೇಶ್ ಎಲೆಕ್ಷನ್ ಏಜೆಂಟ್ ಆಗಿ ಸಲೀಂ ಅಹಮ್ಮದ್, ಪೊಲಿಂಗ್ ಏಜೆಂಟ್ ಆಗಿ ಪ್ರಕಾಶ್ ರಾಥೋಡ್, ಯು.ಬಿ.ವೆಂಕಟೇಶ್, ಕೌಂಟಿಂಗ್ ಏಜೆಂಟ್ ಆಗಿ ಉಗ್ರಪ್ಪ ಕಾರ್ಯ ನಿರ್ವಹಿಸುತ್ತಿದ್ದಾರೆ. ಇನ್ನು ಬಿಜೆಪಿ ಮತದಾನದ ಏಜೆಂಟರಾಗಿ ಶಾಸಕರಾದ ಪಿ. ರಾಜೀವ್, ರವಿಸುಬ್ರಮಣ್ಯ ಮತ್ತು ವಿಧಾನ ಪರಿಷತ್ ಸರ್ಕಾರಿ ಮುಖ್ಯ ಸಚೇತಕ ವೈ.ಎ. ನಾರಾಯಣಸ್ವಾಮಿ, ಪಕ್ಷದ ಏಜೆಂಟರಾಗಿ ವಿಧಾನಸಭೆ ಸರ್ಕಾರಿ ಮುಖ್ಯ ಸಚೇತಕ ಸತೀಶ್ ರೆಡ್ಡಿ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಇದ್ದಾರೆ.
ಇದನ್ನೂ ಓದಿ | ಕರ್ನಾಟಕ ಸೇರಿ 4 ರಾಜ್ಯಗಳಲ್ಲಿ ಇಂದು 16 ಸ್ಥಾನಗಳಿಗೆ ರಾಜ್ಯಸಭೆ ಚುನಾವಣೆ, ಲೆಕ್ಕಾಚಾರ, ಮೈತ್ರಿಗೆ ಫೋಕಸ್