ಬೆಂಗಳೂರು: ನನಗೀಗ 74 ವರ್ಷ ವಯಸ್ಸಾಗಿದೆ. ನನ್ನ ವಯಸ್ಸು ಮತ್ತು ಅನುಭವವನ್ನು ರಾಜ್ಯಸಭೆಯ ಮೂಲಕ ದೇಶಕ್ಕಾಗಿ ಬಳಸಲು ಒಂದು ವೇದಿಕೆ ಸಿಕ್ಕಿದೆ ಎಂದು ಭಾವಿಸಿದ್ದೇನೆ- ಇದು ರಾಜ್ಯಸಭೆಗೆ ನಾಮನಿರ್ದೇಶನಗೊಂಡಿರುವ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮಾತು.
ರಾಜ್ಯಸಭೆಗೆ ಆಯ್ಕೆಯಾಗಿರುವ ಬಗ್ಗೆ ಖುಷಿ ಹಂಚಿಕೊಂಡ ಅವರು ʻʻಈ ಬಗ್ಗೆ ಯಾವ ನಿರೀಕ್ಷೆಯೂ ನನಗಿರಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಮೂಲಕ ನಾವು ಮಾಡಿದ ಸೇವೆಯನ್ನು ಗುರುತಿಸಿ, ನನ್ನನ್ನು ಹತ್ತಿರದಿಂದ ಗಮನಿಸಿ ರಾಜ್ಯಸಭೆಗೆ ನಾಮ ನಿರ್ದೇಶನ ಮಾಡಿದ್ದಾರೆಂದು ಭಾವಿಸುತ್ತೇನೆʼʼ ಎಂದು ಹೇಳಿದರು.
ದೇಶವ್ಯಾಪಿ ಗ್ರಾಮಾಭಿವೃದ್ಧಿ ಯೋಜನೆ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯನ್ನು ಇತರ ರಾಜ್ಯಗಳಿಗೂ ವಿಸ್ತರಿಸುವ ಯೋಜನೆಯಿದೆ. ಯೋಜನೆಯನ್ನು ದೇಶವ್ಯಾಪಿ ಜನರಿಗೆ ತಲುಪಿಸಲು ಇದೊಂದು ಉತ್ತಮ ವೇದಿಕೆಯಾಗಲಿದೆ ಎಂದು ಹೆಗ್ಗಡೆಯವರು ಅಭಿಪ್ರಾಯಪಟ್ಟಿದ್ದಾರೆ.
ಯೋಜನೆ ವತಿಯಿಂದ ಈಗಾಗಲೇ ಕರ್ನಾಟಕದಲ್ಲಿ ಆರು ಸಾವಿರ ಗ್ರಾಹಕ ಸೇವಾ ಕೇಂದ್ರಗಳನ್ನು ತೆರೆದಿದ್ದೇವೆ. ಶೀಘ್ರದಲ್ಲೇ ಇನ್ನೂ ನಾಲ್ಕು ಸಾವಿರ ಕೇಂದ್ರಗಳನ್ನು ತೆರೆಯುವ ಉದ್ದೇಶವಿದೆ. 30 ಲಕ್ಷ ಇ-ಶ್ರಮ ಕಾರ್ಡ್‌ಗಳನ್ನು ವಿತರಿಸಲಾಗಿದೆ. ಕೃಷಿ ವಿಮೆ ಯೋಜನೆಯೂ ಸೇರಿದಂತೆ ಸರಕಾರದ ಅನೇಕ ಉತ್ತಮ ಯೋಜನೆಗಳನ್ನು ಜನರಿಗೆ ತಲುಪಿಸಬೇಕಿದೆ. ಈಗ ರಾಜ್ಯಸಭೆಯ ಮೂಲಕ ಈ ಯೋಜನೆಯನ್ನು ಎಲ್ಲ ಜನರಿಗೆ ತಲುಪಿಸಿ ಜನರ ಕಲ್ಯಾಣಕ್ಕೆ ಶ್ರಮಿಸಲು ಒಳ್ಳೆಯ ಅವಕಾಶ ಒದಗಿದೆ ಎಂದು ಹೆಗ್ಗಡೆಯವರು ಹೇಳಿದ್ದಾರೆ.
ಮೋದಿ ಅವರಿಗೆ ಧನ್ಯವಾದ
ಇದೇ ವೇಳೆ, ಶ್ರೀ ಕ್ಷೇತ್ರ ಧರ್ಮಸ್ಥಳದ ಟ್ವಿಟರ್ ಹ್ಯಾಂಡಲ್ ಮೂಲಕ ಹೆಗ್ಗಡೆಯವರು ನರೇಂದ್ರ ಮೋದಿ ಅವರಿಗೆ ಧನ್ಯವಾದ ಹೇಳಿದ್ದಾರೆ.
ʻʻನರೇಂದ್ರ ಮೋದಿ ಅವರೇ ನೀವು ನೀಡಿದ ಗೌರವಕ್ಕಾಗಿ ಕೃತಜ್ಞತೆಗಳು. ನನ್ನ ಮೇಲೆ ನೀವಿಟ್ಟಿರುವ ನಂಬಿಕೆಗೆ ಮತ್ತು ನನ್ನ ಚಟುವಟಿಕೆಗಳಿಗೆ ಮಾನ್ಯತೆ ನೀಡಿದ್ದಕ್ಕೆ ಧನ್ಯವಾದ ಅರ್ಪಿಸುತ್ತೇನೆ. ನನಗೆ ನೀಡಿರುವ ಈ ಪ್ರತಿಷ್ಠಿತ ನಾಮನಿರ್ದೇಶನವನ್ನು ದೇಶಕ್ಕಾಗಿ ಸೇವೆ ಸಲ್ಲಿಸುವ ನನ್ನ ವ್ಯಾಪ್ತಿ ವಿಸ್ತರಣೆಗೆ ಸಿಕ್ಕಿರುವ ಅವಕಾಶವೆಂದು ಭಾವಿಸುವೆ. ಶ್ರೀ ಮಂಜುನಾಥ ಸ್ವಾಮಿಯು ನಿಮಗೆ ಯಸಸ್ಸು ಮತ್ತು ಉತ್ತಮ ಆರೋಗ್ಯವನ್ನು ದಯಪಾಲಿಸಲಿʼʼ ಎಂದು ಹೆಗ್ಗಡೆಯವರು ಹಾರೈಸಿದ್ದಾರೆ.