Site icon Vistara News

Rajyotsava Awards : 68 ಸಾಧಕರು, 10 ಸಂಸ್ಥೆಗಳಿಗೆ ರಾಜ್ಯೋತ್ಸವ ಪ್ರಶಸ್ತಿ; ಪಟ್ಟಿ ನಾಳೆ ಪ್ರಕಟ

rajyotsava-award-2023 : Sewa sindhu portal will be open for for Public Nominations

ಬೆಂಗಳೂರು: ರಾಜ್ಯದ 68 ಮಂದಿ ಸಾಧಕರು ಮತ್ತು 10 ಸಂಸ್ಥೆಗಳನ್ನು ಒಳಗೊಂಡ 2023ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ (Karnataka Rajyotsava Awards) ಪಟ್ಟಿ ಮಂಗಳವಾರ ಪ್ರಕಟವಾಗಲಿದೆ. ಮಂಗಳವಾರ ನಡೆಯಲಿರುವ ಸುದ್ದಿಗೋಷ್ಠಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ್ ತಂಗಡಗಿ (Shivaraja Tangadagi) ಅವರು ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಬಿಡುಗಡೆ ಮಾಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಇದು 68ನೇ ಕನ್ನಡ ರಾಜ್ಯೋತ್ಸವ (68th Kannada Rajyotsava) ಆಗಿರುವುದರಿಂದ ಪ್ರಶಸ್ತಿಗೆ 68 ಮಂದಿಯನ್ನು ಆಯ್ಕೆ ಮಾಡಲಾಗಿದೆ. ಇದರ ಜತೆ ಕರ್ನಾಟಕ ಎಂದು ನಾಮಕರಣ ಮಾಡಿ ಐವತ್ತು ವರ್ಷವಾಗಿರುವ ಸುವರ್ಣ (Suvarna Karnataka) ಸಂಭ್ರಮದ ನೆನಪಿನಲ್ಲಿ 10 ಸಂಘ ಸಂಸ್ಥೆಗಳಿಗೂ ಪ್ರಶಸ್ತಿ ನೀಡಲಾಗುತ್ತಿದೆ.

ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಚಾರವಾಗಿ ಕಳೆದ ಅಕ್ಟೋಬರ್‌ 26ರಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿಯ ಉನ್ನತ ಮಟ್ಟದ ಸಭೆಯಲ್ಲಿ ಯಾವ ಯಾವ ನೆಲೆಗಳಲ್ಲಿ ಪ್ರಶಸ್ತಿ ನೀಡಬೇಕು ಎಂಬ ಬಗ್ಗೆ ಸವಿಸ್ತಾರ ಚರ್ಚೆ ನಡೆದಿತ್ತು.

ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡುವ ಸಂದರ್ಭದಲ್ಲಿ ಅರ್ಹರಿಗೆ ಪ್ರಶಸ್ತಿ ನೀಡಬೇಕು. ಸಾಮಾಜಿಕ, ಪ್ರಾದೇಶಿಕ ನ್ಯಾಯವನ್ನು (Social and Regional Justice) ಕಡ್ಡಾಯವಾಗಿ ಪಾಲಿಸಬೇಕು. ಎಲ್ಲ ಜಾತಿ, ಧರ್ಮ, ಲಿಂಗಗಳಿಗೂ ಪ್ರಾತಿನಿಧ್ಯ ದೊರಕಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಸಭೆಯಲ್ಲಿ ಸೂಚಿಸಿದ್ದರು. ಅದರಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪಟ್ಟಿಯನ್ನು ಮಾಡಿಕೊಂಡಿದೆ.

ಮತ್ತೊಂದು ಸುತ್ತಿನ ಸಭೆಯಲ್ಲಿ ಅಂತಿಮ

ಭಾನುವಾರ ರಾತ್ರಿ ಸಿಎಂ ಸಿದ್ದರಾಮಯ್ಯ ಅವರ ನಿವಾಸದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಪಟ್ಟಿಯನ್ನು ಅಂತಿಮ ಮಾಡಲಾಗಿದೆ. 68 ಸಾಧಕರು ಮತ್ತು 10 ಸಂಘ ಸಂಸ್ಥೆಗಳಿಗೆ ಪ್ರಶಸ್ತಿ ನೀಡಲು ಅಂತಿಮ ಒಪ್ಪಿಗೆ ನೀಡಲಾಗಿದೆ.

ಈ ಬಾರಿ ಆನ್‌ಲೈನ್‌ನಲ್ಲಿ ಮತ್ತು ಆಫ್‌ಲೈನ್‌ನಲ್ಲಿ ಸುಮಾರು 30 ಸಾವಿರಕ್ಕೂ ಅಧಿಕ ಅರ್ಜಿಗಳು ಬಂದ ಹಿನ್ನೆಲೆಯಲ್ಲಿ ಆಯ್ಕೆ ಸಮಿತಿ ಭಾರಿ ಹರಸಾಹಸದಿಂದ ಪಟ್ಟಿಯನ್ನು ಅಂತಿಮಗೊಳಿಸಿದೆ ಎನ್ನಲಾಗಿದೆ.

ಈ ಬಾರಿ ಆನ್‌ಲೈನ್‌ನಲ್ಲಿ 26,555 ಶಿಫಾರಸು ಪತ್ರ ಬಂದಿದ್ದವು. ನೇರವಾಗಿ 3,523 ಅರ್ಜಿಗಳು ಬಂದಿವೆ. ಇವುಗಳನ್ನು 28 ಸಮಿತಿ ಸದಸ್ಯರು ವರ್ಗೀಕರಿಸಿ ಒಂದು ಹಂತದ ಆಯ್ಕೆಯನ್ನು ನಡೆಸಿದ್ದರು. ಬಳಿಕ ಉನ್ನತ ಮಟ್ಟದ ಸಮಿತಿ ಕೊನೆಯ 68 ಸಾಧಕರನ್ನು ಆಯ್ಕೆ ಮಾಡಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Kannada Rajyotsava : ಕನ್ನಡ ರಾಜ್ಯೋತ್ಸವ ದಿನ ಪಂಚ ಗೀತೆಗಳ ಗಾಯನ ಕಡ್ಡಾಯ

ವರ್ಷವಿಡೀ ಕಾರ್ಯಕ್ರಮ ನಡೆಸಲು ನಿರ್ಧಾರ

ರಾಜ್ಯಕ್ಕೆ ಕರ್ನಾಟಕ ಎಂಬುದಾಗಿ ನಾಮಕರಣವಾಗಿ 50 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ವರ್ಷವಿಡಿ ಕಾರ್ಯಕ್ರಮವನ್ನು ಆಯೋಜನೆ ಮಾಡಲು ತೀರ್ಮಾನಿಸಿದ್ದೇವೆ. ಆ ಕಾರ್ಯಕ್ರಮಗಳು ಯಾವ ರೀತಿ ಇರಲಿದೆ ಎಂಬುದನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು ಎಂದು ಶಿವರಾಜ್‌ ತಂಗಡಗಿ ತಿಳಿಸಿದ್ದಾರೆ. ಕರ್ನಾಟಕ ಎಂದು ಮರುನಾಮಕರಣವಾಗಿ 50 ವರ್ಷಗಳು ತುಂಬಿರುವ ಹಿನ್ನೆಲೆಯಲ್ಲಿ ಕನ್ನಡದ ಪರವಾಗಿ ಕಾರ್ಯನಿರ್ವಹಿಸಿರುವ ಸಂಘ – ಸಂಸ್ಥೆಗಳಿಗೆ ಒಟ್ಟಾರೆ 10 ಪ್ರಶಸ್ತಿಗಳನ್ನು ನೀಡಲಾಗುತ್ತಿದೆ.

ನವೆಂಬರ್‌ 1ರಂದು ಪ್ರಶಸ್ತಿ ಪ್ರದಾನ

ನವೆಂಬರ್‌ 1ರಂದು ನಡೆಯುವ ಅದ್ಧೂರಿ ಕಾರ್ಯಕ್ರಮದಲ್ಲಿ ರಾಜ್ಯೋತ್ಸವ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ. ಬಹುತೇಕ ಈ ಕಾರ್ಯಕ್ರಮ ಎಂದಿನಂತೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದೆ.

Exit mobile version