ನಟಿ ರಾಖಿ ಸಾವಂತ್ (Rakhi Sawant) ಗುರುವಾರ ಮೈಸೂರಿನಲ್ಲಿ ಇರುವ ತನ್ನ ಪತಿ ಆದಿಲ್ ಖಾನ್ ದುರಾನಿ ಮನೆಗೆ ಭೇಟಿ ನೀಡಿದ್ದರು. ಆದಿಲ್ ಖಾನ್ ಇನ್ನೂ ಮುಂಬಯಿ ಪೊಲೀಸ್ ಕಸ್ಟಡಿಯಲ್ಲಿಯೇ ಇದ್ದಾರೆ. ಇತ್ತ ರಾಖಿ ಸಾವಂತ್ ದಿನಕ್ಕೊಂದು ಆರೋಪ ಮಾಡುತ್ತಲೇ ಇದ್ದಾರೆ. ಅದರ ಮಧ್ಯೆಯೇ ಮೈಸೂರಿಗೆ ಆಗಮಿಸಿ, ಆದಿಲ್ ನಿವಾಸಕ್ಕೂ ಭೇಟಿ ಕೊಟ್ಟಿದ್ದರು.
ಮೈಸೂರಿನಲ್ಲಿ ಆದಿಲ್ ಮನೆಗೆ ಬಂದ ರಾಖಿ ಸಾವಂತ್ ಅಲ್ಲೇ ಮಾಧ್ಯಮದವರ ಬಳಿ ಮಾತನಾಡುತ್ತ, ‘ಇದೇ ನನ್ನ ಪತಿ ಆದಿಲ್ ಮನೆ’ ಎಂದು ಹೇಳಿದ್ದಾರೆ. ಅಂದಹಾಗೇ ಆ ಮನೆಗೆ ಬೀಗ ಹಾಕಲಾಗಿತ್ತು. ಅಲ್ಯಾರೂ ಇರಲಿಲ್ಲ. ರಾಖಿ ಹೊರಗೇ ನಿಂತು ಮನೆಯನ್ನು ನೋಡುತ್ತ, ಮಾಧ್ಯಮದವರ ಬಳಿ ಮಾತನಾಡಿ, ‘ನೋಡಿ ಮನೆಯಲ್ಲಿ ಯಾರೂ ಇಲ್ಲ, ಬೀಗ ಹಾಗಿ ಅವರೆಲ್ಲ ಓಡಿ ಹೋಗಿದ್ದಾರೆ. ನಾನು ನನ್ನ ಪತಿಯ ಮನೆಗೆ ಬಂದರೆ, ಇಲ್ಲಿ ನನ್ನ ಅತ್ತೆ-ಮಾವ ಯಾರೂ ಇಲ್ಲ. ನನ್ನ ಅತ್ತೆ ಮಾವ ಇಬ್ಬರೂ ಇಲ್ಲಿಂದ ಪರಾರಿಯಾಗಿದ್ದಾರೆ. ಇಂದು ಮುಂಜಾನೆಯಷ್ಟೇ ನನಗೆ ಕರೆ ಮಾಡಿ ನಿಂದಿಸಿದ್ದರು. ನಿನ್ನನ್ನು ಸೊಸೆ ಎಂದು ಎಂದಿಗೂ ಒಪ್ಪಿಕೊಳ್ಳುವುದಿಲ್ಲ ಎಂದು ಹೇಳಿದ್ದರು’ ಎಂದೂ ರಾಖಿ ಸಾವಂತ್ ಹೇಳಿಕೊಂಡಿದ್ದಾರೆ. ಅಂದಹಾಗೇ, ರಾಖಿ ಸಾವಂತ್ ಹಸಿರು ಸೀರೆಯುಟ್ಟು ಮೈಸೂರಿಗೆ ಬಂದಿದ್ದರು.
ಇದನ್ನೂ ಓದಿ: Rakhi Sawant: ಹಿಂದು ಎಂಬ ಕಾರಣಕ್ಕೆ ಆದಿಲ್ ಮನೆಯವರು ಸೇರಿಸಿಕೊಳ್ಳುತ್ತಿಲ್ಲ: ಮೈಸೂರಿನಲ್ಲಿ ಗಳಗಳನೇ ಅತ್ತ ರಾಖಿ ಸಾವಂತ್!
ರಾಖಿ ಸಾವಂತ್ ಇತ್ತೀಚೆಗೆ ತಾವು ಮೈಸೂರಿನ ಆದಿಲ್ ಜತೆ ಮದುವೆ ಮಾಡಿಕೊಂಡಿದ್ದಾಗಿ ಹೇಳಿಕೊಂಡಿದ್ದರು. ಆದರೆ ಕೆಲವೇ ದಿನದಲ್ಲಿ ಪತಿ ವಿರುದ್ಧ ಆರೋಪಗಳ ಸುರಿಮಳೆಗೈಯಲು ಶುರು ಮಾಡಿದರು. ‘ನಾನು ಮುಸ್ಲಿಂ ಅಲ್ಲ ಎಂಬ ಕಾರಣಕ್ಕೆ ಆದಿಲ್ ಮತ್ತು ಅವರ ಮನೆಯವರು ನನ್ನನ್ನು ಒಪ್ಪಿಕೊಳ್ಳುತ್ತಿಲ್ಲ. ನಾನು ಇಸ್ಲಾಂಗೆ ಸೇರುತ್ತೇನೆ ಎಂದು ಹೇಳಿದರೂ ಅವರು ಕೇಳುತ್ತಿಲ್ಲ’ ಎಂದು ಮೈಸೂರು ಕೋರ್ಟ್ ಹೊರಗಡೆ ರಾಖಿ ಗಳಗಳನೆ ಅತ್ತಿದ್ದರು. ಈ ಮಧ್ಯೆ ಅವರು ಮನೆಯಲ್ಲಿ ನಮಾಜ್ ಮಾಡುತ್ತಿರುವ ವಿಡಿಯೊ, ವೈರಲ್ ಆಗಿ ಸಖತ್ ಟ್ರೋಲ್ ಆಗಿದ್ದರು.