ಬೆಂಗಳೂರು: ಕಾಪಿ ರೈಟ್ಸ್ ಉಲ್ಲಂಘನೆ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ನಟ ರಕ್ಷಿತ್ ಶೆಟ್ಟಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಜುಲೈ 24ಕ್ಕೆ ಸೆಷನ್ಸ್ ಕೋರ್ಟ್ ಮುಂದೂಡಿದೆ. ಪ್ರಕರಣದಲ್ಲಿ ಬಂಧನ ಭೀತಿ ಎದುರಾದ ಹಿನ್ನೆಲೆಯಲ್ಲಿ ನಟ ರಕ್ಷಿತ್ ಶೆಟ್ಟಿ (Rakshit Shetty) ಅವರು ನಿರೀಕ್ಷಿತ ಜಾಮೀನಿಗಾಗಿ ಕೋರ್ಟ್ ಮೊರೆ ಹೋಗಿದ್ದಾರೆ.
ಪರಂವ್ಹ ಸ್ಟೂಡಿಯೋಸ್ ನಿರ್ಮಿಸಿರುವ ಬ್ಯಾಚುಲರ್ಸ್ ಪಾರ್ಟಿ ಸಿನಿಮಾಗಾಗಿ ಅನಧಿಕೃತವಾಗಿ ಹಾಡು ಬಳಕೆ ಆರೋಪ ನಟ ರಕ್ಷಿತ್ ಶೆಟ್ಟಿ ವಿರುದ್ಧ ಕೇಳಿಬಂದಿದೆ. ನ್ಯಾಯ ಎಲ್ಲಿದೆ ಚಿತ್ರದ ʼನ್ಯಾಯ ಎಲ್ಲಿದೆʼ ಹಾಡು ಹಾಗೂ ಗಾಳಿ ಮಾತು ಚಿತ್ರದ ʼಒಮ್ಮೆ ನಿನ್ನನ್ನುʼ ಹಾಡಿನ ಕಾಪಿ ರೈಟ್ಸ್ ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಿ ಎಂಆರ್‌ಟಿ ಮ್ಯೂಸಿಕ್ ಸಂಸ್ಥೆಯ ನವೀನ್ ಕುಮಾರ್ ದೂರು ನೀಡಿದ್ದರು. ಹೀಗಾಗಿ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ನಂತರ ನಿರೀಕ್ಷಣಾ ಜಾಮೀನು ಕೋರಿ ರಕ್ಷಿತ್ ಶೆಟ್ಟಿ, ಬೆಂಗಳೂರಿನ ಸೆಷನ್ಸ್ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ರಕ್ಷಿತ್ ಶೆಟ್ಟಿ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಪಬ್ಲಿಕ್ ಪ್ರಾಸಿಕ್ಯೂಟರ್ ಕಾಲಾವಕಾಶ ಕೋರಿದ್ದು, ವಿಚಾರಣೆಯನ್ನು ಜುಲೈ 24ಕ್ಕೆ ಸೆಷನ್ಸ್ ಕೋರ್ಟ್ ಮುಂದೂಡಿದೆ.
ಇದನ್ನೂ ಓದಿ | Rakshit Shetty: ಬ್ಯಾಚಲರ್ ಪಾರ್ಟಿ ’ಕಿರಿಕ್’; ಕೇಸ್ ಬೆನ್ನಲ್ಲೇ ಕಾನೂನು ಹೋರಾಟ ಎಂದ ರಕ್ಷಿತ್ ಶೆಟ್ಟಿ; ಇಲ್ಲಿದೆ ಪತ್ರ
ನಟ ರಕ್ಷಿತ್ ಶೆಟ್ಟಿ ನಿರ್ಮಾಣದ ‘ಬ್ಯಾಚುಲರ್ ಪಾರ್ಟಿ’ ಜನವರಿ 26 ರಂದು ರಿಲೀಸ್ ಆಗಿತ್ತು. ಕಾಮಿಡಿ ಜಾನರ್‌ನ ಈ ಸಿನಿಮಾದಲ್ಲಿ ನಟ ದಿಗಂತ್, ಲೂಸ್ ಮಾದ ಯೋಗಿ, ಅಚ್ಯುತ್ ಕುಮಾರ್, ನಟಿ ಸಿರಿ ರವಿಕುಮಾರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಕಿರಿಕ್ ಪಾರ್ಟಿ’ ಚಿತ್ರದ ಬರಹಗಾರ ಅಭಿಜಿತ್ ಮಹೇಶ್ ಈ ಚಿತ್ರಕ್ಕೆ ಸಂಭಾಷಣೆ ಬರೆದಿದ್ದರು. ಕಿರಿಕ್ ಪಾರ್ಟಿಯ ಬರಹಗಾರರಲ್ಲಿ ಅಭಿಜಿತ್ ಮಹೇಶ್ ಕೂಡ ಒಬ್ಬರು. ಈ ಚಿತ್ರದ ಮೂಲಕ ಅವರು ಸ್ವತಂತ್ರ ನಿರ್ದೇಶಕರಾಗಿ ಬೆಳ್ಳಿ ಪರದೆಗೆ ಕಾಲಿಟ್ಟಿದ್ದರು. ಪರಂವಃ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ರಕ್ಷಿತ್ ಶೆಟ್ಟಿ ಹಾಗೂ ಅಮಿತ್ ಗುಪ್ತ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸಿದ್ದು, ಅರವಿಂದ್ ಛಾಯಾಗ್ರಹಣ, ಅರ್ಜುನ್ ರಾಮು ಸಂಗೀತ ನಿರ್ದೇಶನ ಈ ಚಿತ್ರಕ್ಕಿತ್ತು.
ಏನಿದು ಪ್ರಕರಣ?
ಈ ಹಿಂದೆ ‘ಸಿಂಪಲ್ ಸ್ಟಾರ್‘ ರಕ್ಷಿತ್ ಶೆಟ್ಟಿ ಅಭಿನಯದ ರಿಷಬ್ ಶೆಟ್ಟಿ (Rakshit Shetty)ನಿರ್ದೇಶನದ ‘ಕಿರಿಕ್ ಪಾರ್ಟಿ’ 2016ರಲ್ಲಿ ತೆರೆಗೆ ಬಂದಿತ್ತು. ‘ಕಿರಿಕ್ ಪಾರ್ಟಿ’ ಸಿನಿಮಾ ‘ಕಾಪಿರೈಟ್’ ವಿಚಾರವಾಗಿ ವಿವಾದಕ್ಕೂ ಗ್ರಾಸವಾಗಿತ್ತು. ಇದೀಗ ನಟ ರಕ್ಷಿತ್ ಶೆಟ್ಟಿ ನಿರ್ಮಾಣದ ‘ಬ್ಯಾಚುಲರ್ ಪಾರ್ಟಿ’ ಚಿತ್ರದ ಸರದಿ.
ʻನ್ಯಾಯ ಎಲ್ಲಿದೆʼ ಟೈಟಲ್ ಸಾಂಗ್ ಹಾಗೂ ‘ಒಮ್ಮೆ ನಿನ್ನನ್ನು ಕಣ್ತುಂಬ ನೋಡುವಾಸೆ” ಹಾಡುಗಳನ್ನು ಕದ್ದಿದ್ದಾರೆ ಎನ್ನುವ ಆರೋಪ ನಟ ರಕ್ಷಿತ್ ಶೆಟ್ಟಿ ವಿರುದ್ಧ ಕೇಳಿ ಬಂದಿದೆ. ಈ ಹಿಂದೆ ನವೀನ್ ಕುಮಾರ್ ಎಂಬುವವರ ಜತೆ ಹಾಡುಗಳ ಬಗ್ಗೆ ಮಾತುಕತೆ ನಡೆದಿತ್ತು. ನವೀನ್ ಕುಮಾರ್ ಹಾಡುಗಳ ಕಾಪಿರೈಟ್ ಪಡೆದು ಮಾರಾಟ ಮಾಡುವ ಬ್ಯುಸಿನೆಸ್ ಮೆನ್ ಆಗಿದ್ದರು. ಇವರ ಜೊತೆ ಹಾಡಿಗೆ ಸಂಬಂಧಿಸಿದ ಮಾತುಕತೆ ನಡೆದಿತ್ತು. ಆದರೆ ನಾನಾ ಕಾರಣಕ್ಕೆ ಈ ಡೀಲ್ ಮುರಿದು ಬಿದ್ದಿತ್ತು. ಆದರೂ ಆ ಹಾಡನ್ನು ಮಾಲೀಕರ ಅನುಮತಿ ಇಲ್ಲದೆ ಬಳಕೆ ಆಗಿತ್ತು. ಚಿತ್ರದಲ್ಲಿ ಎರಡೂ ಹಾಡುಗಳನ್ನು ಅನುಮತಿ ಇಲ್ಲದೆ ಬಳಕೆ ಮಾಡಿದ್ದಾರೆಂದು ನವೀನ್‌ರಿಂದ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು.
ಇದನ್ನೂ ಓದಿ | Rakshit Shetty: ರಕ್ಷಿತ್ ಶೆಟ್ಟಿಗೆ ತಪ್ಪದ ಸಂಕಷ್ಟ; ಮತ್ತೊಂದು ದೂರು ದಾಖಲು!
ಈ ಮುಂಚೆ ‘ಕಿರಿಕ್ ಪಾರ್ಟಿ’ ಚಿತ್ರದಲ್ಲಿ ಬಳಕೆಯಾದ ಒಂದು ಹಾಡಿನ ವಿರುದ್ಧ ಲಹರಿ ಮ್ಯೂಸಿಕ್ ಸಂಸ್ಥೆ ಕೋರ್ಟ್ ಮೆಟ್ಟಿಲೇರಿತ್ತು. ‘ಕಿರಿಕ್ ಪಾರ್ಟಿ’ ಚಿತ್ರದಲ್ಲಿ ಕಾಪಿರೈಟ್ ನಿಯಮ ಉಲ್ಲಂಘಿಸಿ ತಮ್ಮ ಸಂಸ್ಥೆಯ ಹಾಡುಗಳನ್ನು ಅಕ್ರಮವಾಗಿ ಬಳಕೆ ಮಾಡಿಕೊಳ್ಳಲಾಗಿದೆ, ಅನುಮತಿ ಇಲ್ಲದೆ ಹಾಡು ಬಳಸಲಾಗಿದೆ ಎಂದು ಆರೋಪಿಸಿ ಲಹರಿ ಸಂಸ್ಥೆ ಕೇಸ್ ಹಾಕಿತ್ತು.