ವಿಜಯನಗರ: ತಂಬ್ರಹಳ್ಳಿ 2ನೇ ಹಂತದ ಏತ ನೀರಾವರಿ ಯೋಜನೆ ಮಂಜೂರು ಹಾಗೂ ಪದವಿ ಕಾಲೇಜು ಆರಂಭಕ್ಕಾಗಿ ತಂಬ್ರಹಳ್ಳಿಯ ನೂರಾರು (Rally From Thambrahalli) ಜನರಿಂದ ವಿಜಯನಗರದ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್ ಪಾದಯಾತ್ರೆ ನಡೆಸಲಾಗಿದೆ.
ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ತಂಬ್ರಹಳ್ಳಿ ಗ್ರಾಮದಿಂದ ನೂರಾರು ರೈತರಿಂದ 50 ಕಿ.ಮೀ ಪಾದಯಾತ್ರೆ ನಡೆಲಾಗಿದ್ದು, ವಿದ್ಯಾರ್ಥಿಗಳು ಕೂಡ ಭಾಗಿಯಾಗಿದ್ದಾರೆ. ಪಾದಯಾತ್ರೆ ಮುಗಿದ ಬಳಿಕ ವಿಜಯನಗರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಿದ್ದಾರೆ.
2ನೇ ಹಂತದ ನೀರಾವರಿ ಯೋಜನೆಗಾಗಿ ತಂಬ್ರಹಳ್ಳಿ ಸುತ್ತಮುತ್ತಲಿನ ಭಾಗದ ರೈತರು ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿದ್ದರೂ, ಸರ್ಕಾರ ರೈತರ ಬೇಡಿಕೆಗೆ ಸ್ಪಂದಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ನೀರಾವರಿ ಯೋಜನೆ ಜಾರಿಯಾದರೆ ಸಾವಿರಾರು ಎಕರೆ ಪ್ರದೇಶಕ್ಕೆ ನೀರಾವರಿ ಸೌಕರ್ಯ ಲಭ್ಯವಾಗಲಿದ್ದು, ತಾಲೂಕಿನ ಶೇ.70ರಷ್ಟು ರೈತರಿಗೆ ವರದಾನವಾಗಲಿದೆ.
ಇದನ್ನೂ ಓದಿ | ಪುನರ್ವಸತಿ ನೀಡಲು ಲಂಚ ಪಡೆದ ಆರೋಪ; ನಾಲ್ವರು ಅಧಿಕಾರಿಗಳಿಗೆ 2 ವರ್ಷ ಜೈಲುಶಿಕ್ಷೆ, ₹70 ಸಾವಿರ ದಂಡ
ಪದವಿ ಕಾಲೇಜಿಗೆ ಆಗ್ರಹ
ತಂಬ್ರಹಳ್ಳಿ ಗ್ರಾಮಕ್ಕೆ ಪದವಿ ಕಾಲೇಜು ಆರಂಭಕ್ಕೆ 6 ವರ್ಷದಿಂದ ನಿರಂತರವಾಗಿ ಹೋರಾಟ ನಡೆಯುತ್ತಿದೆ. ಆದರೂ ಸರ್ಕಾರ ಗಮನಹರಿಸುತ್ತಿಲ್ಲ. ಡಿಗ್ರಿ ಕಾಲೇಜು ಇಲ್ಲದೆ ವಿದ್ಯಾರ್ಥಿನಿಯರು ಅರ್ಧಕ್ಕೆ ವ್ಯಾಸಂಗವನ್ನು ಮೊಟಕುಗೊಳಿಸುತ್ತಿದ್ದಾರೆ. 25 ವರ್ಷಗಳಿಂದ ತಂಬ್ರಹಳ್ಳಿಯಲ್ಲಿ ಸರ್ಕಾರಿ ಪಿಯು ಕಾಲೇಜು ಆರಂಭ ಮಾಡಲಾಗಿದೆ. ಆದರೆ, ಪದವಿ ಕಾಲೇಜು ಮಂಜೂರು ಮಾಡಲು ಸರ್ಕಾರ ಹಿಂದೇಟು ಹಾಕುತ್ತಿದೆ. ಕೂಡಲೇ ಈ ಬಗ್ಗೆ ಕ್ರಮವಹಿಸಬೇಕು. ಜತೆಗೆ 2ನೇ ಹಂತದ ನೀರಾವರಿ ಯೋಜನೆಯನ್ನು ಅನುಷ್ಠಾನಗೊಳಿಸಬೇಕು ಎಂದು ರೈತರು, ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.
ಇದನ್ನೂ ಓದಿ | ಗುತ್ತಿ ಬಸವಣ್ಣ ನೀರಾವರಿ ಹೋರಾಟಕ್ಕೆ ಧುಮುಕಿದ ಮಕ್ಕಳು