ಬೆಂಗಳೂರು: ರಾಮನ ನಾಮಸ್ಮರಣೆಯು (Ram mandir) ಎಲ್ಲೆಡೆ ಮೊಳಗಿದ್ದು, ರಾಜ್ಯದಲ್ಲೀಗ ಹಬ್ಬದ ವಾತಾವರಣವೇ ಸೃಷ್ಟಿಯಾಗಿದೆ. ಜೈ ಶ್ರೀರಾಮ್ ಎಂಬ ಕೂಗು ಗಲ್ಲಿ ಗಲ್ಲಿಯಲ್ಲೂ ಕೇಳಿ ಬರುತ್ತಿದೆ. ಪ್ರತಿ ಜಿಲ್ಲೆಗಳಲ್ಲೂ ರಾಮನನ್ನು ವಿಶೇಷವಾಗಿ ಸ್ಮರಿಸುತ್ತಿದ್ದಾರೆ. ಎಲ್ಲೆಲ್ಲಿ ಹೇಗಿದೆ ಸಂಭ್ರಮ ಇಲ್ಲಿದೆ ಮಾಹಿತಿ.
ಬೆಳಗಾವಿಯಲ್ಲಿ ಟ್ಯಾಟೂ ಅಭಿಯಾನ
ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಇತ್ತ ಬೆಳಗಾವಿಯಲ್ಲಿ ಟ್ಯಾಟೂ ಅಭಿಯಾನ ನಡೆಯುತ್ತಿದೆ. ಕಳೆದ ಮೂರು ದಿನಗಳಿಂದ ಸುಮಾರು 3500 ಮಂದಿ ಕೈ ಮೇಲೆ ಶ್ರೀರಾಮಚಂದ್ರನ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಶಾಸಕ ಅನಿಲ್ ಬೆನಕೆ ನೇತೃತ್ವದಲ್ಲಿ ಟ್ಯಾಟೂ ಅಭಿಯಾನ ನಡೆಯುತ್ತಿದ್ದು, ಭಾನುವಾರ ರಾತ್ರಿಯವರೆಗೂ ಮುಂದುವರಿಯಲಿದೆ. ಇನ್ನೂ ಕನ್ನಡ, ಹಿಂದಿ, ಮರಾಠಿ ಭಾಷೆಯಲ್ಲಿ ಯುವಕರು ಟ್ಯಾಟೂ ಹಾಕಿಸಿಕೊಳ್ಳುತ್ತಿರುವುದು ವಿಶೇಷವಾಗಿದೆ.
ಬಳ್ಳಾರಿಯಲ್ಲಿ ಶಾಲಾ ಮಕ್ಕಳ ರಾಮನ ಅವತಾರ
ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಟಾಪನೆ ಕ್ಷಣಗಣನೆ ಆರಂಭವಾಗಿದೆ. ಈಗಾಗಲೇ ದೇಶಾದ್ಯಂತ ದೇವಾಲಯ ಹಾಗೂ ಮಂದಿರಗಳಲ್ಲಿ ಪೂಜಾ ವಿಧಾನಗಳು ನಡೆಯುತ್ತಿದೆ. ಇದರಂತೆ ಗಣಿನಾಡು ಬಳ್ಳಾರಿಯ ವಾಸವಿ ಶಾಲೆಯಲ್ಲಿ ಶಾಲಾ ಮಕ್ಕಳಿಗೆ ಶ್ರೀರಾಮ, ಲಕ್ಷ್ಮಣ, ಸೀತೆ ಹಾಗೂ ಆಂಜನೇಯ ವೇಷ ಹಾಕಲಾಗಿತ್ತು. ಮಕ್ಕಳೇ ಸೇರಿ ಅಯೋಧ್ಯೆಯ ರಾಮಮಂದಿರವನ್ನು ಥರ್ಮಾಕೋಲ್ ಮೂಲಕ ನಿರ್ಮಿಸಿದರು. ಭಾನುವಾರ ಶಾಲೆ ರಜೆಯಿದ್ದರೂ ಆಡಳಿತ ಮಂಡಳಿ ಕಾಳಜಿಯಿಂದ ಶ್ರೀರಾಮನ ಬಗ್ಗೆ ತಿಳಿಸಲು ವಿಶೇಷವಾಗಿ ಕಾರ್ಯಕ್ರಮ ಆಯೋಜಿಸಿತ್ತು. ಶಾಲಾ ಆಡಳಿತ ಮಂಡಳಿ, ಶಿಕ್ಷಕರು, ವಿದ್ಯಾರ್ಥಿಗಳು ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದರು.
ಚಿಕ್ಕಬಳ್ಳಾಪುರದಲ್ಲಿ ಕಲಾವಿದರ ಕೈ ಚಳಕ
ಅಯೋಧ್ಯೆ ರಾಮಮಂದಿರ ಲೋಕಾರ್ಪಣೆ ನಿಮಿತ್ತ ಚಿಕ್ಕಬಳ್ಳಾಪುರದಲ್ಲೂ ಚಿತ್ರ ಕಲಾವಿದ ಶಿಕ್ಷಕರೊಬ್ಬರ ಕೈಯಲ್ಲಿ ಮಾದರಿ ರಾಮಮಂದಿರ ಮೂಡಿ ಬಂದಿತ್ತು. ಸರ್ಕಾರಿ ಫ್ರೌಢಶಾಲೆಯ ಚಿತ್ರ ಕಲಾವಿದ ಶಿಕ್ಷಕ ಸತೀಶ್ ಎಂಬುವವರು ಥರ್ಮಾಕೋಲ್ ಮುಖಾಂತರ ರಾಮಮಂದಿರದ ಮಾದರಿ ನಿರ್ಮಾಣ ಮಾಡಿದ್ದಾರೆ. 4 ಅಡಿ ಉದ್ದ ಹಾಗೂ 3 ಅಡಿ ಎತ್ತರದ ಸೇಮ್ ಟು ಸೇಮ್ ರಾಮಮಂದಿರದ ಮಾದರಿ ಎಲ್ಲರ ಆಕರ್ಷಣೆಗೆ ಪಾತ್ರವಾಗುತ್ತಿದೆ. 20 ದಿನಗಳ ಕಾಲ ಕೆತ್ತನೆ ಮಾಡಿ ಜೋಡಿಸುವ ಮೂಲಕ ಈ ಮಂದಿರ ನಿರ್ಮಾಣ ಮಾಡಲಾಗಿದೆ. ಈ ಮಾದರಿಯನ್ನು ಚಿಕ್ಕಬಳ್ಳಾಪುರದ ಗ್ರಾಮದೇವತೆ ಜಾಲಾರಿ ಗಂಗಮ್ಮ ದೇವಾಲಯದಲ್ಲಿ ಸಾರ್ವಜನಿಕರ ಪ್ರದರ್ಶನಕ್ಕಾಗಿ ಇಡಲಾಗುವುದು. ಹತ್ತು ದಿನಗಳ ನಂತರ ಖಾಸಗಿ ಶಾಲೆಯಲ್ಲಿ ಮಕ್ಕಳಿಗಾಗಿ ಪ್ರದರ್ಶನಕ್ಕೆ ಇಡಲಾಗುವುದು ಎಂದು ಶಿಕ್ಷಕ ಸತೀಶ್ ತಿಳಿಸಿದ್ದಾರೆ.
ಚಿಕ್ಕಮಗಳೂರಲ್ಲಿ ಕೋಟಿ ರಾಮ ನಾಮ ಜಪ
ಅಯೋಧ್ಯೆಯಲ್ಲಿ ಐತಿಹಾಸಿಕ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಚಿಕ್ಕಮಗಳೂರಿನ ಕಡೂರಿನಲ್ಲಿ ರಾಮ ಭಕ್ತರೊಬ್ಬರು ಒಂದು ಕೋಟಿ ಇಪ್ಪತ್ತು ಲಕ್ಷ ಸಲ ರಾಮ ನಾಮ ಜಪ ಬರೆದು ಭಕ್ತಿ ಮೆರೆದಿದ್ದಾರೆ. 2007ರಿಂದ ನಿರಂತರವಾಗಿ ರಾಮ ನಾಮ ಜಪ ಬರೆಯುತ್ತಿರುವ ಕಡೂರು ಪಟ್ಟಣದ ನಿವಾಸಿ ಪರಮೇಶ್ವರ್ ಸ್ವಾಮಿ ಅವರು ಅಯ್ಯಪ್ಪ ಸ್ವಾಮಿ ದೇಗುಲದ ಅರ್ಚಕರಾಗಿದ್ದಾರೆ. 19 ಪುಸ್ತಕಗಳಲ್ಲಿ ರಾಮ ನಾಮ ಜಪ ಬರೆದಿರುವ ಪರಮೇಶ್ವರ್ ಅವರು ಎಲ್ಲವನ್ನು ಭಕ್ತಿ ಪೂರ್ವಕವಾಗಿ ಸಂಗ್ರಹಿಸಿದ್ದಾರೆ. ಹಲವು ವರ್ಷಗಳಿಂದ ಹಿಂದೂಗಳ ಕನಸಾಗಿದ್ದ ಅಯೋಧ್ಯೆ ರಾಮ ಮಂದಿರ ಸ್ಥಾಪನೆಗಾಗಿ ಇವರು ಪ್ರಾರ್ಥಿಸಿದ್ದರು. ಇದೀಗ ಬರೋಬ್ಬರಿ 500 ವರ್ಷಗಳ ಕನಸು ನನಸಾಗಿದ್ದು, ಕೋಟಿ ರಾಮ ನಾಮ ಜಪ ಬರೆದಿದ್ದು ಸಾರ್ಥಕವಾಯಿತು ಎಂದಿದ್ದಾರೆ.
ಚಿಕ್ಕಮಗಳೂರಲ್ಲಿ ಅಪರೂಪದ ವಿಗ್ರಹ
ದೇಶದಲ್ಲೇ ಎಲ್ಲೂ ಇರದ ಅಪರೂಪದ ರಾಮನ ವಿಗ್ರಹ ಕಾಫಿ ನಾಡು ಚಿಕ್ಕಮಗಳೂರಿನಲ್ಲಿ ಇದೀಗ ಭಕ್ತರ ಗಮನ ಸೆಳೆಯುತ್ತಿದೆ. ಚಿಕ್ಕಮಗಳೂರಿನ ತರೀಕೆರೆ ಪಟ್ಟಣದಲ್ಲಿ ರಾಮನ ವಿಶೇಷ ವಿಗ್ರಹ ಇದೀಗ ಎಲ್ಲರ ಕೇಂದ್ರ ಬಿಂದುವಾಗಿದೆ. ರಾಮನ ಎಡ ತೊಡೆಯ ಮೇಲೆ ಕೂತಿರುವ ಅಪರೂಪದ ರಾಮ ಸೀತೆ ವಿಗ್ರಹ 1960ನೇ ಇಸವಿಯಲ್ಲಿ ಕೆರೆಯಲ್ಲಿ ದೊರೆತಿತ್ತು.
ತರೀಕೆರೆ ತಾಲೂಕಿನ ದಳವಾಯಿ ಕೆರೆಯಲ್ಲಿ ಸಿಕ್ಕಿದ್ದ ರಾಮನಶಿಲೆ 1982 ನೇ ವರ್ಷದಂದು ತರೀಕೆರೆ ನಾಗರಿಕರು ಪ್ರತಿಷ್ಠಾಪನೆ ಮಾಡಿದ್ದರು. ಪಟ್ಟಣದ ಅಂತರಘಟ್ಟಮ್ಮ ದೇವಾಲಯದಲ್ಲಿ ಇರುವ ಈ ವಿಗ್ರಹ ಇದೀಗ ಅಯೋಧ್ಯೆಯಲ್ಲಿ ರಾಮನ ವಿಗ್ರಹ ಪ್ರಾಣ ಪ್ರತಿಷ್ಠಾಪನೆ ಸಂದರ್ಭದಲ್ಲಿ ಅತ್ಯಂತ ಗಮನ ಸೆಳೆಯುತ್ತಿದೆ. ನಿತ್ಯವೂ ಈ ವಿಶೇಷ ವಿಗ್ರಹಕ್ಕೆ ಪೂಜೆ ಸಲ್ಲಿಸಿ ಕೊಂಡು ಬರುತ್ತಿರುವ ಸ್ಥಳೀಯರು ಭಕ್ತಿ ಭಾವದಿಂದ ಈ ದೇವರಿಗೆ ನಡೆದುಕೊಳ್ಳುತ್ತಾರೆ.
ಗದಗನಲ್ಲಿ ಕೇಕ್‌ನಲ್ಲಿ ಮೂಡಿದ ರಾಮಮಂದಿರ
ಗದಗನ ಮುಳಗುಂದ ನಾಕಾದಲ್ಲಿನ ಸಾಸನೂರ ಬೇಕರಿಯಲ್ಲಿ ಕೇಕ್‌ನಲ್ಲಿ ರಾಮಮಂದಿರ ಕಂಗೊಳಿಸುತ್ತಿದೆ. ರಾಮಮಂದಿರ ಉದ್ಘಾಟನೆ ಹಿನ್ನೆಲೆ ಬೇಕರಿ ಮಾಲೀಕರ ಅಳಿಲು ಸೇವೆಯಾಗಿದ್ದು, ತಮ್ಮ ಕಾಯಕದಲ್ಲೇ ಪ್ರಭು ಶ್ರೀರಾಮನನ್ನು ಬೇಕರಿ ಮಾಲೀಕರು ಸ್ಮರಿಸಿದ್ದಾರೆ.
ಸುಮಾರು 30 ಕೆ.ಜಿ ಕೇಕ್ ಬಳಸಿ, ಎಂಟತ್ತು ಜನ ಕಾರ್ಮಿಕರಿಂದ ಹತ್ತುದಿನ ಕಾಲ ರಾಮಮಂದಿರ ಮಾದರಿಯನ್ನು ತಯಾರಿಸಲಾಗಿದೆ. ರಾಮಮಂದಿರದ ಕೇಕ್ ನೋಡಲೆಂದೇ ಬೇಕರಿಗೆ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಗ್ರಾಹಕರು ರಾಮಮಂದಿರದ ಕೇಕ್ ಎದುರು ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ.
ರಾಮಮಂದಿರದ ನಿರ್ಮಾಣದಲ್ಲಿ ಗದಗ ಯುವಶಿಲ್ಪಿಯ ಮೋಡಿ
ಅಯೋಧ್ಯೆ ರಾಮಮಂದಿರ ನಿರ್ಮಾಣದಲ್ಲಿ ಗದಗ ಜಿಲ್ಲೆಯ ಯುವಶಿಲ್ಪಿಯ ಸೇವೆ ಕೂಡ ಸಲ್ಲಿದೆ. ತಿಂಗಳುಗಳ ಕಾಲ ರಾಮಮಂದಿರ ನಿರ್ಮಾಣದಲ್ಲಿ ಮುಂಡರಗಿ ಪಟ್ಟಣದ ಶಿಲ್ಪಿ ನಾಗಮೂರ್ತಿ ಸೇವೆ ಸಲ್ಲಿಸಿ ಬಂದಿದ್ದಾರೆ. ಗರ್ಭಗುಡಿಯ ಎದುರಿನ ಒಳಾಂಗಣ ಮಂಟಪದಲ್ಲಿ ಶಿಲ್ಪಿ ಕೆಲಸ ಮಾಡಿದ್ದು, ಮಂಟಪದ ಕಂಬಗಳಲ್ಲಿ ಯುವಶಿಲ್ಪಿ ಕೈಚಳಕ ಮೂಡಿ ಬಂದಿದೆ. ಮೂಲತಃ ಕೊಪ್ಪಳ ಜಿಲ್ಲೆಯವರಾದ, ನಾಗಮೂರ್ತಿ, ಸದ್ಯ ಮುಂಡರಗಿ ಪಟ್ಟಣದಲ್ಲಿ ಜಗತ್ ಸೃಷ್ಠಿ ಶಿಲ್ಪಕಲಾ ಕೇಂದ್ರ ತೆರೆದು ಶಿಲ್ಪಿ ಕಾಯಕ ಮಾಡುತ್ತಿದ್ದಾರೆ. ರಾಮಮಂದಿರ ನಿರ್ಮಾಣ ಕಾರ್ಯದಲ್ಲಿ ನನಗೆ ಅಳಿಲು ಸೇವೆ ದೊರೆತಿದ್ದು ಪೂರ್ವಜನ್ಮದ ಪುಣ್ಯ. ಹಿಂದಿನ ರಾಮನ ಕಾಲದಲ್ಲಿ ನಾನೂ ಸಹ ಸೇವೆ ಮಾಡಿರಬಹುದು. ಹೀಗಾಗಿ ಈಗೀನ ಜನ್ಮದಲ್ಲಿ ನನಗೆ ಇಂತಹ ಕಾರ್ಯದಲ್ಲಿ ಅವಕಾಶ ಸಿಕ್ಕಿದೆ ಎಂದು ನಾಗಮೂರ್ತಿ ವಿಸ್ತಾರ ನ್ಯೂಸ್‌ಗೆ ತಿಳಿಸಿದರು.
ನಾಲಿಗೆಯಲ್ಲೇ ರಾಮನ ಚಿತ್ರ ಬಿಡಿಸಿದ ಹಾವೇರಿ ಕಲಾವಿದ
ಅಯೋಧ್ಯೆಯಲ್ಲಿ ರಾಮಮಂದಿರದ ಲೋಕಾರ್ಪಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಹಾವೇರಿಯಲ್ಲಿಯು ರಾಮ ನಾಮ ಜಪ ಜೋರಾಗಿದೆ. ಹೊಸರಿತ್ತಿ ಗ್ರಾಮದ ಕಲಾವಿದ ಚನ್ನಬಸಪ್ಪ ಎಂಬಾತ ಕೈಗಳನ್ನು ಬಳಸದೆ ನಾಲಿಗೆಯನ್ನು ಬಳಸಿ ರಾಮನ ಚಿತ್ರ ಬಿಡಿಸಿದ್ದಾರೆ. ನಾಲಿಗೆಯಿಂದ ಚಿತ್ರ ಬಿಡಿಸುವುದರಲ್ಲಿ ಹೆಸರುವಾಸಿಯಾಗಿದ್ದಾರೆ.
ಹುಬ್ಬಳ್ಳಿಯಲ್ಲಿ ದೀರ್ಘದಂಡ ನಮಸ್ಕಾರ
ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ ಶ್ರೀರಾಮ ಸೇನಾ ಕಾರ್ಯಕರ್ತರು ದೀರ್ಘದಂಡ ನಮಸ್ಕಾರ ಮಾಡಿದರು. ಸುಮಾರು ಒಂದು ಕಿಲೋ ಮೀಟರ್ ದೂರ ದೀರ್ಘ ದಂಡ ನಮಸ್ಕಾರ ಹಾಕಿದರು. ಹುಬ್ಬಳ್ಳಿಯ ದಾಜಿಬಾನ ಪೇಟೆ ತುಳಜಾ ಭವಾನಿ ದೇವಸ್ಥಾನದಿಂದ ಗೌಳಿಗಲ್ಲಿಯ ರಾಮಮಂದಿರ ದೇವಸ್ಥಾನದವರೆಗೆ ದೀರ್ಘ ದಂಡ ನಮಸ್ಕಾರ ಮಾಡಿದರು. ಜೈ ಶ್ರೀರಾಮ್ ಘೋಷಣೆಯೊಂದಿಗೆ ಶ್ರೀರಾಮ ಸೇನೆ ಕಾರ್ಯಕರ್ತರು ಮೆರವಣಿಗೆ ಮಾಡಿದರು. ರಾಮನಾಮ ಸ್ಮರಣೆ ಮಾಡುತ್ತಾ ಕುಣಿದು ಕುಪ್ಪಳಿಸಿದರು. ರಾಮ ಮಂದಿರ ನಿರ್ಮಾಣಕ್ಕೆ ಹರಕೆ ಹೊತ್ತಿದ್ದ ಕಾರ್ಯಕರ್ತರು ಪ್ರಾಣ ಪ್ರತಿಷ್ಠಾಪನೆ ಆಗುತ್ತಿರುವುದಕ್ಕೆ ಸಂಭ್ರಮಿಸಿದರು. ಶ್ರೀರಾಮ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಿ ಹರಕೆ ತೀರಿಸಿದರು.
ಹುಬ್ಬಳ್ಳಿಯಲ್ಲಿ ಕರಸೇವಕನ ಅಯೋಧ್ಯಾ ಸ್ಮರಣೆ
ಬಾಬ್ರಿ ಮಸೀದಿ ಕೆಡವಿದ ಮೇಲೆ ಒಳಗಿದ್ದ ರಾಮ, ಲಕ್ಷ್ಮಣರ ಮೂರ್ತಿಯನ್ನು ಎತ್ತಿ ಸುರಕ್ಷಿತವಾಗಿಟ್ಟಿದ್ದು ನಾನೇ ಎಂದು ಹುಬ್ಬಳ್ಳಿಯ ನಂದಗೋಪಾಲ ಸಫಾರೆ ಸ್ಮರಿಸಿಕೊಂಡಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಈಗ ಅದೇ ಸ್ಥಳದಲ್ಲಿ ರಾಮಮಂದಿರ ನಿರ್ಮಾಣವಾಗಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಆಗುತ್ತಿರುವುದು ಅತ್ಯಂತ ಖುಷಿಯಾಗಿದೆ.
1992ರಲ್ಲಿ ರಾಮ ಜನ್ಮಭೂಮಿ ಹೋರಾಟದಲ್ಲಿ ಪಾಲ್ಗೊಂಡು ಕರಸೇವಕರಾಗಿ ಅಯೋಧ್ಯೆಗೆ ತೆರಳಿದ್ದೆವು. 8 ದಿನ ಮುಂಚಿತವಾಗಿಯೇ ಅಯೋಧ್ಯೆಗೆ ತಲುಪಿದ್ದ 15 ಜನರ ತಂಡ ಮಸೀದಿ ನೆಲಸಮವಾದ ಮರುದಿನ ಅಲ್ಲಿಂದ ಮರಳಿದ್ದೆವು. ಡಿಸೆಂಬರ್ 6ರಂದು ಬೆಳಗ್ಗೆ ಮಸೀದಿ ಕೆಡವಲು ಆರಂಭಿಸಿದಾಗ ರಾಮ, ಲಕ್ಷ್ಮಣ, ಸೀತಾ, ಹನುಮಂತ ಮೂರ್ತಿಯನ್ನು ಸುರಕ್ಷಿತವಾದ ಜಾಗದಲ್ಲಿ ಇರಿಸಿದೆವು. ಅಲ್ಲೇ ಪಕ್ಕದಲ್ಲಿದ್ದ 120 ಕೆಜಿ ತೂಕದ ಘಂಟೆಯನ್ನು ಐದಾರು ಜನ ಸೇರಿ ಎತ್ತಿಟ್ಟೆವು.
ಕರಸೇವೆಯಲ್ಲಿ ತೊಡಗಿದ್ದ ವೇಳೆ ನನ್ನ ಗುರುತಿನ ಚೀಟಿ ಕಳೆದಿತ್ತು. ಅದನ್ನು ಬೇರೆ ರಾಜ್ಯದ ಕರಸೇವಕರು ತಂದು ಕರ್ನಾಟಕದ ಟೆಂಟ್‌ಗೆ ಕೊಟ್ಟಿದ್ದರು. ಅದನ್ನು ನೋಡಿ ಹಿರಿಯರೆಲ್ಲರೂ ಬಹುಶಃ ನಾನು ಅಲ್ಲೇ ಗದ್ದಲದಲ್ಲಿ ಬಿದ್ದು ಸತ್ತಿರಬೇಕು ಎಂದುಕೊಂಡಿದ್ದರು. ರಾತ್ರಿ ನಾನು ಟೆಂಟ್‌ಗೆ ಹಿಂತಿರುಗಿದಾಗಲೇ ನಾನು ಜೀವಂತ ಇರುವುದು ನಮ್ಮೊಂದಿಗೆ ಬಂದಿದ್ದ ಕರಸೇವಕರಿಗೆ ಗೊತ್ತಾಯಿತು.
ರಾತ್ರಿ ಅಯೋಧ್ಯೆಯಲ್ಲಿ ವಿದ್ಯುತ್ ಕಡಿತ ಮಾಡಲಾಗಿತ್ತು. ಅಲ್ಲಿನ ಜನರು ಕ್ಯಾಂಡಲ್ ಬೆಳಗಿಸಿ ಕರಸೇವಕರಿಗೆ ಬೆಳಕು ಮಾಡಿಕೊಟ್ಟಿದ್ದು ಅವಿಸ್ಮರಣೀಯ. ಹುಬ್ಬಳ್ಳಿಗೆ ಮರಳಿ ಬರುವಾಗ ರೈಲಿನಲ್ಲಿ ನಮಗೆ ಕುಳಿತುಕೊಳ್ಳಲು ಜಾಗವೇ ಸಿಗಲಿಲ್ಲ. ರೈಲಿನ ಮೇಲೆ ಹತ್ತಿ ಪ್ರಯಾಣಿಸಿದ್ದೆವು. ದಾರಿಯುದ್ದಕ್ಕೂ ಅನ್ಯ ಕೋಮಿನ ಜನ ನಮ್ಮ ಮೇಲೆ ಕಲ್ಲೆಸೆಯುತ್ತಿದ್ದರು. ನಾವು ಕಲ್ಲು ಚೀಲದಲ್ಲಿ ತುಂಬಿ ಅವರ ಮೇಲೆ ಎಸೆಯುತ್ತಾ ಮರಳಿ ಊರು ತಲುಪಿದೆವು. ಈಗ ರಾಮಮಂದಿರ ನಿರ್ಮಾಣದ ಕನಸು ನನಸಾಗುತ್ತಿದೆ. ಕರಸೇವೆ ಮೂಲಕ ನಾನು ಕೂಡ ಅಳಿಲು ಸೇವೆ ಮಾಡಿದ್ದೇನೆ ಎಂಬ ಸಂತಸ ನನ್ನಲ್ಲಿದೆ ಎಂದು ನಂದಗೋಪಾಲ ಸಫಾರೆ ಸಂತಸ ವ್ಯಕ್ತಪಡಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ