Site icon Vistara News

Ram Mandir: ಚಿಕ್ಕಮಗಳೂರಲ್ಲಿ ತಾರಕ ಹೋಮಕ್ಕೆ ಅನುಮತಿ ನಿರಾಕರಣೆ; ಡಿಸಿ ಕಚೇರಿ ಮುಂದೆ ರಾಮ ಜಪ!

Protest at Chikmagalur for not allowed to perform Taraka Homa

ಚಿಕ್ಕಮಗಳೂರು: ಅತ್ತ ರಾಮಜನ್ಮಭೂಮಿ (Ram Janmabhoomi) ಅಯೋಧ್ಯೆಯ ರಾಮ ಮಂದಿರದಲ್ಲಿ (Ram Mandir) ರಾಮಲಲ್ಲಾ ಮೂರ್ತಿ ಪ್ರಾಣಪ್ರತಿಷ್ಠಾಪನಾ (Ram Lalla Murti Pranapratishthapane) ಕಾರ್ಯವು ಅದ್ಧೂರಿಯಾಗಿ ನೆರವೇರುತ್ತಿದ್ದರೆ, ಇತ್ತ ಚಿಕ್ಕಮಗಳೂರಿನಲ್ಲಿ ಜಿಲ್ಲಾಡಳಿತದ ವಿರುದ್ಧ ರಾಮ ಭಕ್ತರು ಸಿಡಿದೆದ್ದಿದ್ದಾರೆ. ರಾಮ ತಾರಕ ಹೋಮಕ್ಕೆ ಜಿಲ್ಲಾಡಳಿತ ನಿರ್ಬಂಧ ಹೇರಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಕುಳಿತಿರುವ ಹಿಂದು ಕಾರ್ಯಕರ್ತರು ರಾಮ ಜಪ ಮಾಡುತ್ತಿದ್ದಾರೆ.

ವಿವಾದಿತ ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದಲ್ಲಿ ರಾಮ ತಾರಕ ಹೋಮವನ್ನು ನಡೆಸುವುದಾಗಿ ಹಿಂದು ಕಾರ್ಯಕರ್ತರು ಅನುಮತಿ ಕೋರಿದ್ದರು. ಹೋಮ ಮಂಟಪದಲ್ಲಿ ಹೋಮ ನಡೆಸಲು ಅನುಮತಿ ಕೊಡಿ ಎಂದು ಜಿಲ್ಲಾಡಳಿತವನ್ನು ಕೋರಲಾಗಿತ್ತು.

ಆದರೆ, ವಿವಾದಿತ ಸ್ಥಳವಾಗಿರುವುದರಿಂದ ಮುಂದೆ ಯಾವುದೇ ಸಮಸ್ಯೆಯಾದೀತು ಎಂಬ ನಿಟ್ಟಿನಲ್ಲಿ ಅನುಮತಿ ನಿರಾಕರಣೆ ಮಾಡಲಾಗಿತ್ತು. ಅಲ್ಲದೆ, ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರು ಹೋಮ ಮಂಟಪಕ್ಕೂ ಬೀಗ ಹಾಕಿಸಿದ್ದರು. ಇದರಿಂದ ಆಕ್ರೋಶಗೊಂಡ ಹಿಂದು ಕಾರ್ಯಕರ್ತರು, ಚಿಕ್ಕಮಗಳೂರು ನಗರದ ಡಿ.ಸಿ ಕಚೇರಿ ಮುಂದೆ ಸೋಮವಾರ (ಜ. 22) ಜಮಾಯಿಸಿ ರಾಮ ಜಪದ ಮೂಲಕ ಸಾತ್ವಿಕ ಪ್ರತಿಭಟನೆ ನಡೆಸಿದ್ದಾರೆ.

ಡಿಸಿ ಕಚೇರಿಯ ಮುಂದೆ ಸೇರಿರುವ ಹಿಂದು ಕಾರ್ಯಕರ್ತರು, ಕಚೇರಿ ಮುಂದಿನ ರಸ್ತೆಯಲ್ಲಿಯೇ ಕುಳಿತುಕೊಂಡಿದ್ದಾರೆ. ಅಲ್ಲದೆ, ಶ್ರೀರಾಮನ ಭಾವಚಿತ್ರ ಇಟ್ಟು ರಾಮ ಜಪ ಮಾಡಿದ್ದಾರೆ. ಡಿಸಿ ಮೀನಾ ನಾಗರಾಜ್ ವಿರುದ್ಧ ಆಕ್ರೋಶವನ್ನು ಹೊರಹಾಕಿದ್ದಾರೆ.

ಡಿಸಿ ಕಚೇರಿ ಎದುರೇ ಹೋಮಕ್ಕೆ ಸಿದ್ಧತೆ

ಜಿಲ್ಲಾಧಿಕಾರಿ ಕಚೇರಿಗೆ ಹಿಂದು ಕಾರ್ಯಕರ್ತರು ಹೋಮ ಕುಂಡವನ್ನು ತಂದಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಬಾಗಿಲಲ್ಲಿ ಹೋಮಕ್ಕೆ ಸಿದ್ಧತೆಯನ್ನು ಮಾಡಿಕೊಂಡರು. ವಿಷಯ ಅರಿಯುತ್ತಿದ್ದಂತೆ ಸ್ಥಳಕ್ಕೆ ಡಿಸಿ ಮೀನಾ ನಾಗರಾಜ್, ಎಸ್‌ಪಿ ವಿಕ್ರಂ ಆಗಮಿಸಿದ್ದಾರೆ. ಪ್ರತಿಭಟನಾನಿರತರ ಮನವೋಲಿಕೆಗೆ ಯತ್ನಿಸಿದ್ದಾರೆ. ಆದರೆ, ಮಾತು ಕೇಳಿದ ಹಿಂದು ಸಂಘಟನೆಯವರು, ಹೋಮಕ್ಕೆ ಅನುಮತಿ ನೀಡುವಂತೆ ಪಟ್ಟು ಹಿಡಿದು ಕುಳಿತರು.

ಆಗ ಮಾತನಾಡಿದ ಡಿಸಿ ಮೀನಾ ನಾಗರಾಜ್‌, ಈ ಸಂಬಂಧ ನೀವೆಲ್ಲರೂ ಸೇರಿ ಮನವಿ ಕೊಡಿ, ಸರ್ಕಾರದ ಅನುಮತಿ ಕೇಳುತ್ತೇನೆ ಎಂದು ಹೇಳಿದರು. ಹೋಮ ಮಂಟಪ ವಿವಾದದ ವ್ಯಾಪ್ತಿಯಲ್ಲಿ ಬರಲ್ಲ ಎಂದು ಸಂಘಟನೆಗಳ ಪಟ್ಟು ಹಿಡಿದರು. ಇದನ್ನು ಒಪ್ಪದ ಜಿಲ್ಲಾಧಿಕಾರಿ, ಹೋಮಕ್ಕೆ ಅನುಮತಿ ನೀಡಲು ನಿರಾಕರಿಸಿದರು. ಹೀಗಾಗಿ ಜಿಲ್ಲಾದ್ಯಂತ ಹಿಂದೂ ಕಾರ್ಯಕರ್ತರು ಒಗ್ಗೂಡಲು ಕರೆ ನೀಡಲಾಗಿದೆ.

ಇದನ್ನೂ ಓದಿ: Ram Mandir: ರಾಮಮಂದಿರಕ್ಕೆ ಆಗಮಿಸಿದ ಪ್ರಧಾನಿ ಮೋದಿ; ಕೆಲವೇ ಕ್ಷಣಗಳಲ್ಲಿ ಪ್ರಾಣ ಪ್ರತಿಷ್ಠೆ

ಡಿಸಿ ಕಚೇರಿ ಬಳಿಯೇ ಹೋಮಕ್ಕೆ ಹಿಂದು ಸಂಘಟನೆಗಳ ಸಿದ್ಧತೆ ಮಾಡಿಕೊಂಡಿದ್ದಲ್ಲದೆ, ಹೋಮದ ಕುಂಡವನ್ನು ಇಟ್ಟು, ರಾಮನ ಫೋಟೊ ಇಟ್ಟು ಹೋಮಕ್ಕೆ ಸಿದ್ಧತೆ ನಡೆಸಲಾಗಿದೆ.

ಇದನ್ನೂ ಓದಿ: Ram Mandir : ರಾಮ ಮಂದಿರದ ವಿಶೇಷತೆಗಳ ಸಂಕ್ಷಿಪ್ತ ವಿವರ ಇಲ್ಲಿದೆ

Exit mobile version