Site icon Vistara News

Rama Mandir : ಎಂಥಾ ಸೌಹಾರ್ದ ನೋಡಿ, ದರ್ಗಾದಲ್ಲಿ ಹಿಂದು-ಮುಸ್ಲಿಂ ಯುವಕರಿಂದ ಶ್ರೀರಾಮ ಜಪ!

Rama Mandir Hunasikatti Dargah

ಗದಗ: ಭಗವಾನ್‌ ಶ್ರೀರಾಮನ ಹೆಸರಿನಲ್ಲಿ ಹಿಂದು-ಮುಸ್ಲಿಂ ಐಕ್ಯತೆಯ (Hindu muslim Harmony) ಮಹಾನ್‌ ಸಂದೇಶವನ್ನು ಸಾರಿದ ವಿಶೇಷ ವಿದ್ಯಮಾನ ಗದಗ ಜಿಲ್ಲೆಯಲ್ಲಿ (Gadaga News) ನಡೆದಿದೆ. ಇಲ್ಲಿ ಹಿಂದೂ-ಮುಸ್ಲಿಂ ಯುವಕರು ಸೇರಿ ಮಸೀದಿಯಲ್ಲಿ ಶ್ರೀರಾಮನ ಜಪ ಮಾಡಿದ್ದಾರೆ. ಅಯೋಧ್ಯೆಯಲ್ಲಿ ಶ್ರೀರಾಮನ ಭವ್ಯ ಮಂದಿರದಲ್ಲಿ (Rama Mandir) ರಾಮನ ಮೂರ್ತಿಗೆ ಪ್ರಾಣ ಪ್ರತಿಷ್ಠೆಯ ಸಂದರ್ಭದಲ್ಲಿ ಗದಗ ಜಿಲ್ಲೆ ನರಗುಂದ ತಾಲೂಕಿನ ಹುಣಸಿಕಟ್ಟಿಯ ದರ್ಗಾದಲ್ಲಿ ಹಿಂದೂ ಮತ್ತು ಮುಸ್ಲಿಂ ಯುವಕರು ಸೇರಿ ರಾಮ ನಾಮ ಜಪ (Rama Nama Japa in dargah) ಮಾಡಿದರು. ಭಜನೆಗಳನ್ನು ಹಾಡಿದರು.

ದರ್ಗಾದ ಎದುರು ಜೈ ಶ್ರೀರಾಮ ಎಂದು ಬರೆದ ಯುವಕರು ಒಳಗೆ ವೇದೋಕ್ತ ಮಂತ್ರಪುಷ್ಪಾಂಜಲಿ ಮೂಲಕ ಭಾರತಮಾತೆಗೆ ಪೂಜೆ-ಪುನಸ್ಕಾರಗಳನ್ನು ನಡೆಸಿದರು. ಶ್ರೀ ರಾಮ ಜಯ ರಾಮ, ಜಯ ಜಯ ರಾಮ, ರಘುಪತಿ ರಾಘವ ರಾಜಾರಾಮ್‌ ಸೇರಿದಂತೆ ಹಲವಾರು ಭಜನ್‌ ಗಳನ್ನು ಹಾಡಿ ಸಂಭ್ರಮಿಸಿದರು. ವಿಶೇಷವೆಂದರೆ, ಈ ದರ್ಗಾದಲ್ಲಿ ಷೋಡಷೋಪಚಾರ ಮಂತ್ರದ ಮೂಲಕ ಅಭಿಷೇಕವನ್ನೂ ನಡೆಸಲಾಯಿತು.

ಹುಣಸಿಕಟ್ಟಿಯ ಈ ದರ್ಗಾ ಹಿಂದಿನಿಂದಲೂ ಸೌಹಾರ್ದತೆಗೆ ಹೆಸರಾಗಿದೆ. ಈ ಪರಿಸರದ ಹಿಂದು ಮತ್ತು ಮುಸ್ಲಿಂ ಕುಟುಂಬಗಳು ಜತೆಯಾಗಿ ಇಲ್ಲಿ ಹಿಂದು ಮತ್ತು ಮುಸ್ಲಿಂ ಹಬ್ಬಗಳನ್ನು ಆಚರಿಸಿ ಖುಷಿಪಡುತ್ತಾರೆ. ಹಿಂದಿನಿಂದಲೂ ಬಂದಿರುವ ಪರಂಪರೆಯನ್ನು ಈಗಿನ ಯುವಕರೂ ಮುಂದುವರಿಸಿದ್ದಾರೆ.

ಇಲ್ಲಿನ ದರ್ಗಾದ ಹೊರಭಾಗದ ಕಟ್ಟೆಯಲ್ಲಿ ಹಿಂದು ಮುಸ್ಲಿಂ ಯುವಕರು ಜತೆಯಾಗಿ ಸೇರಿ ಭಜನ್‌ಗಳನ್ನು ಹಾಡುವ ಮೂಲಕ ಗಮನ ಸೆಳೆದರು. ನಮಗೆ ರಾಮ, ಅಲ್ಲಾ ಎಲ್ಲವೂ ಒಂದೇ. ನಾವು ಈ ಊರಿನಲ್ಲಿ ಅಣ್ಣ-ತಮ್ಮಂದಿರಂತೆ ಬದುಕುತ್ತಿದ್ದೇವೆ ಎಂದು ಅಲ್ಲಿನ ಯುವಕರು ಹೇಳಿದ್ದಾರೆ.

ದರ್ಗಾದ ಎದುರು ಜೈ ಶ್ರೀರಾಮ ಎಂದು ಬರೆದಿರುವುದು.

ಶಿವಮೊಗ್ಗದಲ್ಲಿ ಅಲ್ಲಾಹೋ ಅಕ್ಬರ್ ಘೋಷಣೆ ಕೂಗಿದ ಮಹಿಳೆ

ಶಿವಮೊಗ್ಗ: ಶಿವಮೊಗ್ಗ ನಗರದ ಶಿವಪ್ಪನಾಯಕ ಸರ್ಕಲ್‌ನಲ್ಲಿ ಶ್ರೀ ರಾಮ ಭಕ್ತರು ಸಿಹಿ ಹಂಚುತ್ತಿದ್ದ ವೇಳೆ ಮುಸ್ಲಿಂ ಮಹಿಳೆಯೊಬ್ಬರು ಟ್ರಾಫಿಕ್‌ ಜಾಮ್‌ಗೆ ಸಿಲುಕಿಕೊಂಡ ವೇಳೆ ಅಲ್ಲಾಹೋ ಅಕ್ಬರ್‌ ಎಂದು ಕೂಗಿದ ಘಟನೆ ನಡೆದಿದೆ.

ರಾಮ ಭಕ್ತರು ಎಲ್ಲರಿಗು ಸಿಹಿ ಹಂಚುತ್ತಿದ್ದ ಸಂದರ್ಭದಲ್ಲಿ ಟ್ರಾಫಿಕ್‌ ಜಾಮ್‌ ಉಂಟಾಯಿತು. ಆಗ ಆ ದಾರಿಯಲ್ಲಿ ಮಗುವನ್ನು ಕಂಕುಳಲ್ಲಿ ಇಟ್ಟುಕೊಂಡಿದ್ದ ಮುಸ್ಲಿಂ ಮಹಿಳೆಯೊಬ್ಬರು ಸಿಲುಕಿಕೊಂಡರು. ಆಗ ರಾಮ ಭಕ್ತರು ಅವರನ್ನು ಮುಂದೆ ಹೋಗುವಂತೆ ಕೇಳಿಕೊಂಡರು.

ಆಗ ಸಿಟ್ಟಿಗೆದ್ದ ಮಹಿಳೆ ನನ್ನನ್ನು ಏಕೆ ತಡೆಯುತ್ತೀರಾ ಎಂದು ಆಕ್ರೋಶ ವ್ಯಕ್ತಪಡಿಸಿದರು. ಜತೆಗೆ ʻʻಹೇ ನಿಮ್ಮ ಮೋದಿ ಏನ್ ಮಾಡಿದ್ದಾನೆʼʼ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದರಿಂದ ಕೆರಳಿದ ರಾಮ ಭಕ್ತರು ಜೈ ಶ್ರೀರಾಮ್ ಘೋಷಣೆ ಕೂಗಿದರು. ಆಗ ಆ ಮಹಿಳೆ ಅಲ್ಲಾಹೋ ಅಕ್ಬರ್ ಎಂದು ಘೋಷಣೆ ಕೂಗಿದರು. ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆದು ಕರೆದೊಯ್ದರು.

Exit mobile version