Site icon Vistara News

Rama Mandir : ತಾವೇ ಕಟ್ಟಿದ ರಾಮ ದೇಗುಲದಲ್ಲಿ ಕೆ.ಎನ್‌. ರಾಜಣ್ಣ ಪೂಜೆ; ನನ್ನ ರಾಮ ಮೋದಿ ರಾಮನಲ್ಲ!

KN Rajanna Rama pooje at his own temple

ತುಮಕೂರು: ಅಯೋಧ್ಯೆಯಲ್ಲಿ ವಿವಾದಿತ ಕಟ್ಟಡ ಧ್ವಂಸವಾದಾಗ ಎಲ್ಲಿಂದಲೋ ಎರಡು ಗೊಂಬೆ ತಂದು ಇದೇ ರಾಮಲಲ್ಲಾನ ಮೂರ್ತಿ ಎಂದರು ಎಂಬ ವಿವಾದಿತ ಹೇಳಿಕೆ ಮೂಲಕ ಸುದ್ದಿಯಾಗಿದ್ದ ಸಹಕಾರ ಸಚಿವ ಕೆ.ಎನ್‌. ರಾಜಣ್ಣ (Minister KN Rajanna) ಅವರು ಸೋಮವಾರ 2004ರಲ್ಲಿ ತಾವೇ ಕಟ್ಟಿಸಿದ ರಾಮನ ದೇವಾಲಯದಲ್ಲಿ (Kittagalli Rama Temple) ಪೂಜೆ ಸಲ್ಲಿಸಿದರು. ಅಯೋಧ್ಯೆಯಲ್ಲಿ ಶ್ರೀ ರಾಮ ಚಂದ್ರನ ಮೂರ್ತಿಗೆ (Ayodhya Rama Mandir) ಪ್ರಾಣ ಪ್ರತಿಷ್ಠಾಪನೆ ನಡೆಯುವ ಹೊತ್ತಿನಲ್ಲೇ ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಕಿತ್ತಗಳ್ಳಿ ಗ್ರಾಮದಲ್ಲಿ ಪೂಜೆ ನಡೆಯಿತು. ಈ ವೇಳೆ ಮಾತನಾಡಿದ ಕೆ.ಎನ್‌. ರಾಜಣ್ಣ ಅವರು, ನನ್ನ ರಾಮ ಮೋದಿಯ ರಾಮನಲ್ಲ, ಮಹಾತ್ಮ ಗಾಂಧಿ ಕೊನೆಯ ಉಸಿರು ಚೆಲ್ಲುವಾಗ ಹೇಳಿದ ಹೇ ರಾಮ್‌ ಎಂದು ನುಡಿದರು.

ಕಿತ್ತಗಳ್ಳಿ ಶ್ರೀರಾಮ ದೇವಸ್ಥಾನದಲ್ಲಿ ರಾಜಣ್ಣ ಕುಟುಂಬದಿಂದ ಬೆಳಗ್ಗಿನಿಂದಲೇ ಪೂಜೆ ನಡೆದಿತ್ತು. ಅವರ ಪತ್ನಿ ಮತ್ತು ಪುತ್ರ, ಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ ಪೂಜೆಯಲ್ಲಿ ಪಾಲ್ಗೊಂಡಿದ್ದರು. ಕೆ.ಎನ್‌. ರಾಜಣ್ಣ ಅವರು ಹವನದ ಪೂರ್ಣಾಹುತಿ ಸಂದರ್ಭದಲ್ಲಿ ಆಗಮಿಸಿ ಪೂಜೆಯಲ್ಲಿ ಪಾಲ್ಗೊಂಡರು.

ಪೂಜೆಯ ಬಳಿಕ ಮಾತನಾಡಿದ ಕೆ.ಎನ್‌. ರಾಜಣ್ಣ ಅವರು ಹಲವಾರು ವಿಚಾರಗಳನ್ನು ಹಂಚಿಕೊಂಡರು. ಮೊನ್ನೆ ರಾಮನ ಗೊಂಬೆ ಎಂದು ಹೇಳಿದವರು ಈಗ ಹೆದರಿಕೆಯಿಂದ ಪೂಜೆ ಮಾಡುತ್ತಿದ್ದಾರೆ ಎಂಬ ಕುಹಕಗಳಿಗೆ ಉತ್ತರಿಸಿದ ಅವರು, ಹೆದರಿಕೆ ಎಂಬುದೇ ನನ್ನ ಡಿಕ್ಷನರಿಯಲ್ಲಿಲ್ಲ. ಡ್ಯಾಮೇಜು ಇಲ್ಲ, ಕಂಟ್ರೋಲು ಇಲ್ಲ. ನಾನು ಏನು ಹೇಳುತ್ತೇನೋ ಅದಕ್ಕೆ ಸದಾ ಕಾಲ ಬದ್ಧನಾಗಿರುತ್ತೇನೆ ಎಂದು ಹೇಳಿದರು.

KN Rajanna11

1. ನಾನು ಆಸ್ತಿಕನೇ, ನಾಸ್ತಿಕನಲ್ಲ‌. ನಾನು ರಾಮನ ಪೂಜೆ ಮಾಡಬಹುದು ಅಥವಾ ಇನ್ನೊಬ್ಬನನ್ನು ಪೂಜೆ ಮಾಡಬಹುದು. ಅದೆಲ್ಲ ಬೇರೆ ವಿಚಾರ. ಈ ದೇವಸ್ಥಾನವನ್ನ ನಾನು 2004ರಲ್ಲಿ ಕಟ್ಟಿಸಿದ್ದೆ. 30 ಲಕ್ಷ ಖರ್ಚು ಮಾಡಿ ದೇವಾಲಯ ಕಟ್ಟಿಸಿದ್ದೆ. ಇವತ್ತಿನ ಲೆಕ್ಕದಲ್ಲಿ ಕೋಟಿಗಟ್ಟಲೆ ಬೆಲೆ ಹೇಳಿಕೊಳ್ಳಬಹುದು.

2.ನಮಗೆ ರಾಮನ ಮೇಲೆ ಭಕ್ತಿ ಇಲ್ಲ, ನಾವು ರಾಮನ ವಿರೋಧಿಗಳು ಅಂತ ಹೇಳುವಂಥದ್ದು ಸರಿಯಲ್ಲ. ಶಂಕರಾಚಾರ್ಯ ಮಠದ ಗುರುಗಳು ಏನೇನು ಹೇಳಿದ್ದಾರೆ ಅದಕ್ಕೆ ನನ್ನ ಸಹಮತವಿದೆ. ಅದರಲ್ಲಿ ಎರಡನೇ ಮಾತಿಲ್ಲ. ಶಂಕರಾಚಾರ್ಯರ ಮಠದ ಗುರುಗಳಿಗೆ ಆಧ್ಯಾತ್ಮಿಕತೆ ಬಗ್ಗೆ ತಿಳುವಳಿಕೆ ಇಲ್ಲ ಅಂತ ಹೇಳೋಕಾಗುತ್ತಾ?

3. ರಾಮ ಜನ್ಮಭೂಮಿ ಹೋರಾಟದಲ್ಲಿ ಭಾಗವಹಿಸಿದ್ದದಕ್ಷಿಣ ಕನ್ನಡ ಜಿಲ್ಲೆಯ ಹಿಂದೂ ಮಹಾಸಭಾ ಸದಸ್ಯರೇ ಇಂದಿನ ಕಾರ್ಯಕ್ರಮಕ್ಕೆ ವಿರೋಧ ಮಾಡಿದ್ದಾರೆ. ನಾನು ಕೂಡ ಅದನ್ನೇ ಹೇಳ್ತಿದ್ದೀನಿ.

4. ಇವರೆಲ್ಲ ರಾಜಕೀಯದ ರಾಮನನ್ನು ಮಾಡಲು ಹೊರಟಿದ್ದಾರೆ. ನಮಗೆ ಬೇಕಾಗಿರುವುದು ಮೋದಿಯ ರಾಮನಲ್ಲ. ನಿಜವಾದ ದಶರಥನ ಮಗ ರಾಮ. ಮಹಾತ್ಮ ಗಾಂಧಿಯವರಿಗೆ ಗೋಡ್ಸೆ ಗುಂಡು ಹೊಡೆದಾಗ ಅವರು ಹೇ ರಾಮ್ ಅಂತ ಹೇಳಿದ್ದಲ್ಲ. ಮಹಾತ್ಮ ಗಾಂಧಿ ಪೂಜಿಸುತ್ತಿದ್ದ ರಾಮ ಏನಿದಾನೆ ಅವನ ಭಕ್ತ ನಾನು.

5. ಇವರೆಲ್ಲ ಗೋಡ್ಸೆಯ ದೇವಸ್ಥಾನ ಕಟ್ಟಿ ಅವನನ್ನು ಪೂಜಿಸುವವರು. ಇವರೆಲ್ಲಾ ಗೋಡ್ಸೆ ಹಿಂದೂಗಳು. ದಶರಥ ರಾಮ ನಮ್ ರಾಮ, ಗಾಂಧಿ ಹೇಳಿದ ರಾಮ ನಮ್ ರಾಮ.

6. 1948ರಲ್ಲಿ ವಿವಾದಿತ ಜಾಗದಲ್ಲಿದ್ದ ರಾಮನ ದೇವಾಲಯಕ್ಕೆ ಬೀಗ ಹಾಕಲಾಗಿತ್ತು. ಮತ್ತೆ 1989ರಲ್ಲಿ ರಾಜೀವ್ ಗಾಂಧಿ ಬೀಗ ತೆಗೆಸಿಕೊಟ್ಟರು. ಹೀಗಾಗಿ ಅಲ್ಲಿ ಪೂಜೆಗೆ ಅವಕಾಶ ಸಿಕ್ಕಿತು.

7. ರಾಮರಾಜ್ಯದ ಕಲ್ಪನೆ ನಮ್ಮದು. ಒಂದು ಧರ್ಮ ಇನ್ನೊಂದು ಧರ್ಮವನ್ನು ದ್ವೇಷ ಮಾಡಬೇಕು ಅಂತ ಯಾವ ಧರ್ಮದಲ್ಲೂ ಇಲ್ಲ. ಜನಗಳಿಗೆಲ್ಲಾ ಒಳ್ಳೇದು ಮಾಡಲಿ, ಮಳೆ ಬೆಳೆ ಎಲ್ಲಾ ಚೆನ್ನಾಗಿ ಆಗಲಿ ಎಂಬುದು ನಮ್ಮ ಪ್ರಾರ್ಥನೆ.

8. ನಮ್ಮ ಕರ್ನಾಟಕದ ಪಂಡಿತರು ಒಳ್ಳೆ ಟೈಂ ಫಿಕ್ಸ್ ಮಾಡಿದ್ದರಿಂದ ಇಂದು ನಮ್ಮ ಗುಡಿಯಲ್ಲಿ ಪೂಜೆ ಮಾಡುತ್ತಿದ್ದೇವೆ.

9. ಅಯೋಧ್ಯೆಗೆ ನಾವ್ಯಾಕೆ ಹೋಗಬಾರದು, ನಾವೇನು ಅವರಿಗೆ ಜಾಗೀರು ಕೊಟ್ಟಿದ್ದೀವಾ?

ಇದನ್ನೂ ಓದಿ: Rama Mandir : ರಾಮ ಜನ್ಮಭೂಮಿ ಆಯ್ತು, ಮುಂದಿನ ಗುರಿ ಆಂಜನೇಯ ಜನ್ಮಸ್ಥಳ ಅಭಿವೃದ್ಧಿ ಎಂದ ಬೊಮ್ಮಾಯಿ

Exit mobile version