Site icon Vistara News

Rama Mandir : ಅಯೋಧ್ಯೆಯಲ್ಲಿ ಕರ್ನಾಟಕದ ಶಿಲ್ಪಿ ಕೆತ್ತಿದ ವಿಗ್ರಹ ಪ್ರತಿಷ್ಠೆ; ಪ್ರಲ್ಹಾದ್‌ ಜೋಶಿ ಹರ್ಷ

Central Minister Pralhad Joshi ram Mandir

ನವ ದೆಹಲಿ: ಜನವರಿ 22ರಂದು ಲೋಕಾರ್ಪಣೆಗೊಳ್ಳಲಿರುವ ಅಯೋಧ್ಯೆಯ ಭವ್ಯ ರಾಮ ಮಂದಿರದಲ್ಲಿ (Rama Mandir) ಕರ್ನಾಟಕದ ಶಿಲ್ಪಿ ಕೆತ್ತಿದ ದಿವ್ಯ ‌ ಮೂರ್ತಿ (Statue carved by sculptor from Karnataka) ಪ್ರತಿಷ್ಠಾಪನೆಗೊಳ್ಳುತ್ತಿರುವ ಬಗ್ಗೆ ಕೇಂದ್ರ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ಅವರು ಸಂತಸ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು, ಮೈಸೂರು ಮತ್ತು ರಾಜಸ್ಥಾನದ ಮೂವರು ಶಿಲ್ಪಿಗಳು ಕೆತ್ತಿದ ಶ್ರೀ ರಾಮನ ವಿಗ್ರಹ ಈಗಾಗಲೇ ತಯಾರಾಗಿದ್ದು, ಅವುಗಳ ಪೈಕಿ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ಒಂದನ್ನು ಪ್ರತಿಷ್ಠಾಪನೆಗೆ ಆಯ್ಕೆ ಮಾಡಿದೆ. ಅದರ ಅಧಿಕೃತ ಪ್ರಕಟಣೆ ಇನ್ನಷ್ಟೇ ಆಗಬೇಕಾಗಿದೆಯಾದರೂ, ಮೈಸೂರಿನ ಶಿಲ್ಪಿ ಅರುಣ್‌ ಯೋಗಿರಾಜ್‌ (Arun Yogiraj) ಅವರು ಕೆತ್ತಿರುವ ಬಾಲ ರಾಮನ ಮೂರ್ತಿ ಆಯ್ಕೆಯಾಗಿದೆ ಎಂದು ಬಹುತೇಕ ಸ್ಪಷ್ಟವಾಗಿದೆ.

ಹೀಗಾಗಿ ಕೇಂದ್ರ ಸಚಿವರಾಗಿರುವ ಪ್ರಲ್ಹಾದ್‌ ಜೋಶಿ ಅವರು ಖುಷಿ ವ್ಯಕ್ತಪಡಿಸಿದ್ದಾರೆ.

“ಎಲ್ಲಿ ರಾಮನೋ ಅಲ್ಲಿ ಹನುಮನು” ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ಕೆ ವಿಗ್ರಹ ಆಯ್ಕೆ ಅಂತಿಮಗೊಂಡಿದೆ. ನಮ್ಮ ನಾಡಿನ ಹೆಸರಾಂತ ಶಿಲ್ಪಿ ನಮ್ಮ ಹೆಮ್ಮೆಯ ಅರುಣ್‌ ಯೋಗಿರಾಜ್‌ (Arun Yogiraj) ಅವರು ಕೆತ್ತಿರುವ ಶ್ರೀರಾಮನ ವಿಗ್ರಹ ಪುಣ್ಯಭೂಮಿ ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆಗೊಳ್ಳಲಿದೆ. ರಾಮ ಹನುಮರ ಅವಿನಾಭಾವ ಸಂಬಂಧಕ್ಕೆ ಇದು ಮತ್ತೊಂದು ನಿದರ್ಶನ. ಹನುಮನ ನಾಡು ಕರ್ನಾಟಕದಿಂದ ರಾಮಲಲ್ಲಾನಿಗೆ ಇದೊಂದು ಮಹತ್ವಪೂರ್ಣ ಸೇವೆ ಎಂದರೆ ತಪ್ಪಾಗಲಾರದು.- ಎಂದು ಜಾಲ ತಾಣ ಎಕ್ಸ್‌ನಲ್ಲಿ ಅವರು ಬರೆದುಕೊಂಡಿದ್ದಾರೆ.

ಅಯೋಧ್ಯೆ ರಾಮ ಜನ್ಮಭೂಮಿಯಾಗಿದ್ದರೆ ಕರ್ನಾಟಕ ಹನುಮನ ನಾಡು ಎಂದೇ ಪ್ರಸಿದ್ಧವಾಗಿದೆ. ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟದಲ್ಲಿ ಹನುಮಂತನ ಜನನವಾಗಿದೆ ಎಂದು ಪುರಾಣ ಕಥೆಗಳಿಂದ ತಿಳಿದುಬಂದಿದೆ. ಅದಕ್ಕೆ ಪೂರಕವಾದ ಹಲವು ಐತಿಹಾಸಿಕ ಸಾಕ್ಷ್ಯಗಳು ಕೂಡಾ ಲಭ್ಯವಿವೆ. ಹೀಗಾಗಿ ಜೋಶಿ ಅವರು ಎಲ್ಲಿ ರಾಮನೋ ಅಲ್ಲಿ ಹನುಮನು ಎಂಬ ಸಂಬಂಧವನ್ನು ಬೆಸೆದಿದ್ದಾರೆ.

ಅರುಣ್‌ ಯೋಗಿರಾಜ್‌ ಅವರು ಕೆತ್ತಿದ ವಿಗ್ರಹವೇ ಆಯ್ಕೆಯಾಗಿದ್ದು ಯಾಕೆ?

ರಾಮಲಲ್ಲಾನ ಮೂರ್ತಿ ಕೆತ್ತನೆಗಾಗಿ ಸಹಸ್ರ​ ಸಂಖ್ಯೆಯ ಶಿಲ್ಪಿಗಳ ನಡುವಿನ ತುರುಸಿನ ಸ್ಪರ್ಧೆ ನಡೆದಿತ್ತು. ಇದು ಒಂದು ವರ್ಷದ ಹಿಂದಿನ ಪ್ರಕ್ರಿಯೆ. ಇಲ್ಲಿ ಆಯ್ಕೆಗೊಂಡ ಅಂತಿಮ ಮೂವರಲ್ಲಿ ಒಬ್ಬರಾಗಿದ್ದಾರೆ ಅರುಣ್​. ಆ ಮೂವರಲ್ಲಿಯೂ ಅರುಣ್​ ಅವರ ಭಾವಕ್ಕೆ ಹಾಗೂ ಕಲ್ಪನೆಗೆ ಮನ್ನಣೆ ದೊರಕಿದೆ ಎಂಬುದೇ ವಿಶೇಷ. ಬೆಂಗಳೂರಿನ ಜಿ.ಎಲ್.ಭಟ್ ಮತ್ತು ರಾಜಸ್ಥಾನದ ಸತ್ಯನಾರಾಯಣ ಪಾಂಡೆ ಆಯ್ಕೆಯಾಗಿದ್ದ ಇನ್ನಿಬ್ಬರು ಮಹಾನ್ ಶಿಲ್ಪಿಗಳು. ಎಲ್ಲರೂ ಒಬ್ಬರಿಗಿಂತ ಒಬ್ಬರು ಮಹಾನ್​ ಶಿಲ್ಪಿಗಳು. ಆದರೆ ಉಳಿದಿಬ್ಬರು ರಚಿಸಿದ ಮೂರ್ತಿಗಿಂತಲೂ ಅರುಣ್ ಅವರ ಕೆತ್ತನೆಗೆ ಪ್ರಾಶಸ್ತ್ಯ ಸಿಕ್ಕಿದೆ.

ಅರುಣ್ ಅವರು ರಚನೆ ಆಯ್ಕೆಯಾಗಲು ಮೊದಲ ಕಾರಣವೇ ವಿಗ್ರಹ ಮುಖದಲ್ಲಿನ ತೇಜಸ್ಸು. ಅದರಲ್ಲಿ ಹೆಚ್ಚು ದೈವಿಕ ಭಾವವಿದೆ ಎಂಬುದನ್ನು ತೀರ್ಪುಗಾರರು ಮನಗಂಡಿದ್ದಾರೆ. ಪ್ರಾಣಪ್ರತಿಷ್ಠೆ ಆಗಲಿರುವ ವಿಗ್ರಹವು ಬಾಲ ರಾಮನಾಗಿದೆ ಎಂಬುದು ಇಲ್ಲಿ ಗಮನಾರ್ಹ. ಅಂತೆಯೇ ಅರುಣ್ ಅವರ ಕೆತ್ತನೆಯ ವಿಗ್ರಹದಲ್ಲಿ ಮುಗ್ಧ ಮಗುವಿನ ಸುಂದರ ನೋಟವಿದೆ. ಬಾಲ ರಾಮದೇವರು ಸಾಕ್ಷಾತ್ ಮಂದೆ ನಿಂತಿರುವಂತೆ ಕಾಣುವ ಮೂರ್ತಿಯನ್ನು ಅವರು ಕೆತ್ತಿದ್ದಾರೆ. ಅಲ್ಲದೆ ಹೆಚ್ಚು ನೈಜತೆಯಿಂದ ಕೂಡಿದೆ.

ಅರುಣ್​ ಅವರು ಕೆತ್ತಿರುವ ಐದು ವರ್ಷದ ಬಾಲ ರಾಮನ ಮೂರ್ತಿಯ ಕೈಯಲ್ಲಿ ಧನಸ್ಸು ಹಾಗೂ ಬಾಣವಿದೆ. ರಾಮನ ಮೂರ್ತಿಯು 51 ಇಂಚು ಎತ್ತರವಿದ್ದರೆ ಪ್ರಭಾವಳಿ ಸೇರಿದಂತೆ ಒಟ್ಟು ವಿಗ್ರಹ 8 ಅಡಿ ಎತ್ತರ ಹಾಗೂ ಮೂರುವರೆ ಅಡಿ ಅಗಲವಿದೆ. ಇದು ತೇಜಸ್ಸಿನಿಂದ ಕಂಗೊಳಿಸುತ್ತಿದೆ. ಒಟ್ಟಾರೆಯಾಗಿ ಕೋಟ್ಯಂತರ ರಾಮಭಕ್ತರ ಪೂಜೆಗೆ ಅರ್ಹವಾಗಿದೆ ಎಂದು ತೀರ್ಪುಗಾರರು ಅದನ್ನೇ ಆಯ್ಕೆ ಮಾಡಿದ್ದಾರೆ ಎಂದು ಹೇಳಲಾಗಿದೆ.

Exit mobile version