ಬೆಳಗಾವಿ: ರಾಮ ಜನ್ಮಭೂಮಿಯಲ್ಲಿ ಶ್ರೀರಾಮನ ಮೂರ್ತಿಯ ಪ್ರತಿಷ್ಠಾಪನೆಯ (Rama Mandri Ayodhya) ಸಂದರ್ಭದಲ್ಲಿ ರಾಷ್ಟ್ರದ ನಾನಾ ಭಾಗಗಳಲ್ಲಿ ರಾಮ ಭಕ್ತಿ ನಾನಾ ರೂಪಗಳಲ್ಲಿ ಮೇಳೈಸುತ್ತಿದೆ. ದೇವಸ್ಥಾನಗಳಲ್ಲಿ ಪೂಜೆ, ಧಾರ್ಮಿಕ ಕಾರ್ಯಕ್ರಮಗಳು, ಶೋಭಾ ಯಾತ್ರೆ ನಡೆದರೆ, ಕೆಲವರು ರಾಮನ ವೇಷ ಹಾಕಿ, ಮಕ್ಕಳಿಗೆ ಬಾಲ ರಾಮನ ವೇಷ ಹಾಕಿಸಿ ಖುಷಿಪಟ್ಟರು. ಈ ನಡುವೆ, ಬೆಳಗಾವಿಯ ಶಾಲೆಯೊಂದರಲ್ಲಿ (School in Belagavi) ನಡೆಯುತ್ತಿದ್ದ ಪರೀಕ್ಷೆ ವೇಳೆ ಬಾಲಕನೊಬ್ಬ ರಾಮನ ವೇಷ ಧರಿಸಿ (Boy comes in Ramas attire) ಬಂದಿದ್ದಾನೆ. ಆತನನ್ನು ಕಂಡು ಖುಷಿಪಟ್ಟ ಸಹಪಾಠಿಗಳು ಆತನನ್ನು ಸ್ವಾಗತಿಸಿ ಪಾದಪೂಜೆ ನಡೆಸಿದ್ದಾರೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ತೆಲಸಂಗ ಗ್ರಾಮದ ಸಂಸ್ಕೃತಿ ಕೋಚಿಂಗ್ ಸೆಂಟರ್ನಲ್ಲಿ ಈ ಘಟನೆ ನಡೆದಿದೆ. ಈ ಶಾಲೆಯಲ್ಲಿ ಸೋಮವಾರವೂ ಪರೀಕ್ಷೆ ಇತ್ತು. ಹಾಗಾಗಿ ರಜೆ ಕೊಟ್ಟಿರಲಿಲ್ಲ. ಈ ನಡುವೆ, 12 ವರ್ಷದ ಬಾಲಕ ಶ್ರೀಶಾಂತ್ ಕೋಟಿಹಾಳ ರಾಮನ ವೇಷ ಧರಿಸಿಯೇ ಕೋಚಿಂಗ್ ಸೆಂಟರ್ಗೆ ಬಂದಿದ್ದ.
ಅಯೋಧ್ಯೆಯಲ್ಲಿ ರಾಮನ ಮೂರ್ತಿಯ ಪ್ರಾಣ ಪ್ರತಿಷ್ಠೆ ಹಿನ್ನೆಲೆಯಲ್ಲಿ ಮನೆಯವರು ಆತನನ್ನು ರಾಮನ ವೇಷ ಹಾಕಿ ಕಳಹಿಸಿದ್ದರು. ಶ್ರೀಶಾಂತ್ ವೇಷ ಧರಿಸಿ ಬರುತ್ತಿದ್ದಂತೆಯೇ ಸಹಪಾಠಿಗಳು ಹೂವಿನ ಹಾಸಿಗೆ ಮೂಲಕ ಬರಮಾಡಿಕೊಂಡರು.
ವಿದ್ಯಾರ್ಥಿಗಳು ʻಜೈ ಶ್ರೀರಾಮ್ʼ ಎಂದು ಘೋಷಣೆ ಮಾಡುತ್ತಾ ಹೂವಿನ ಮಳೆ ಸುರಿಸಿದರು. ಅದಾದ ಬಳಿಕ ಆ ಬಾಲಕನ ಪಾದ ಪೂಜೆಯನ್ನು ಮಾಡಿದರು. ಪಾದಗಳಿಗೆ ಜಲ ಸಿಂಚನ ಮಾಡಿ, ಗಂಧ ಲೇಪಿಸಿ ಸ್ವಾಮಿಸಿದರು. ಬಳಿಕ ಬಾಲಕ ಎಂದಿನಂತೆ ಪರೀಕ್ಷೆ ಬರೆದಿದ್ದಾನೆ.
ಇದನ್ನೂ ಓದಿ : Rama Mandir : ಎಂಥಾ ಸೌಹಾರ್ದ ನೋಡಿ, ದರ್ಗಾದಲ್ಲಿ ಹಿಂದು-ಮುಸ್ಲಿಂ ಯುವಕರಿಂದ ಶ್ರೀರಾಮ ಜಪ!
ರಾಮ ಭಜನೆ ಮೂಲಕ ನಮನ ಸಲ್ಲಿಸಿದ ಅಂಧರ ಶಾಲೆ ಮಕ್ಕಳು
ರಾಮನಗರ: ಅಯೋಧ್ಯೆಯಲ್ಲಿ ಶ್ರೀರಾಮ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ರಾಮನಗರ ಬಿಜಿಎಸ್ ಅಂಧರ ಶಾಲೆಯಲ್ಲಿ ಮಕ್ಕಳು ಶ್ರೀರಾಮ ಭಜನೆ ಮೂಲಕ ನಮನ ಸಲ್ಲಿಸಿದರು.
ರಾಮದೇವರ ಫೋಟೋ ಇಟ್ಟು ಪೂಜೆ ಸಲ್ಲಿಸಿದ ಮಕ್ಕಳು ಅಯೋಧ್ಯೆಯಲ್ಲಿ ರಾಮದೇವರ ಪ್ರತಿಷ್ಠಾಪನೆಗೆ ಸಂತಸ ವ್ಯಕ್ತಪಡಿಸಿದರು. ʻʻಶ್ರೀರಾಮನ ಆದರ್ಶ ಎಲ್ಲರಿಗೂ ಬೆಳಕಾಗಲಿ. ಜೀವನದ ಆದರ್ಶ ನಮಗೆಲ್ಲರಿಗೂ ಪ್ರೇರಣೆ.ʼʼ ಎಂದು ಈ ಮಕ್ಕಳು ಹೇಳಿದರು. ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕರೂ ಸಹ ಭಾಗಿಯಾಗಿದ್ದರು.
ಈ ಸಂದರ್ಭದಲ್ಲಿ, ಕರಸೇವೆಯಲ್ಲಿ ಭಾಗಿಯಾಗಿದ್ದ ಶಿಕ್ಷ ಶಿವರಾಮ್ ಅವರು ಮಾತನಾಡಿ, ನಾನೂ ಸಹ 1992ರ ಹೋರಾಟದಲ್ಲಿ ಭಾಗಿಯಾಗಿದ್ದೆ. ರಾಮನಗರದಿಂದ 11 ಜನರ ತಂಡ ಅಯೋಧ್ಯೆಗೆ ಹೋಗಿತ್ತು. ಆ ಹೋರಾಟ ನಿಜಕ್ಕೂ ಇನ್ನೂ ಕಣ್ಣಿಗೆ ಕಟ್ಟಿದಂತಿದೆ. ನಮ್ಮೆಲ್ಲರ ಹೋರಾಟದ ಪ್ರತಿಫಲವಾಗಿ ಇವತ್ತು ನ್ಯಾಯ ದೊರಕಿದೆ ಎಂದರು.