Site icon Vistara News

Ramakrishna Hegde Birthday: ಮಾದರಿ ರಾಜಕಾರಣಿ ರಾಮಕೃಷ್ಣ ಹೆಗಡೆ; ಇಲ್ಲಿವೆ ಅವರ ಅಪರೂಪದ ಫೋಟೊಗಳು!

Ramakrishna Hegde Birthday

ಭಾಸ್ಕರ್ ಆರ್. ಗೆಂಡ್ಲ, ವಿಸ್ತಾರ ನ್ಯೂಸ್

ಶಿರಸಿ: ಇವರು ನಾಡು ಕಂಡ ಅಪರೂಪದ ಮೌಲ್ಯಾಧಾರಿತ ರಾಜಕಾರಣಿ. ರಾಜಕೀಯ ಮುತ್ಸದ್ದಿ. ಸ್ವಾತಂತ್ರ್ಯ ಚಳವಳಿಯಲ್ಲೂ ಭಾಗವಹಿಸಿದ ಇವರು, ಸೆರೆಮನೆ ವಾಸವನ್ನು ಅನುಭವಿಸಿದ್ದರು. ಕಿರಿಯ ವಯಸ್ಸಿನಲ್ಲೇ ರೈತ ಚಳವಳಿಯನ್ನು ರೂಪಿಸಿದ್ದರು. ಕೇವಲ ರಾಜಕೀಯ, ಸಾಮಾಜಿಕ ಕ್ಷೇತ್ರದಲ್ಲಿ ಮಾತ್ರವಲ್ಲ ಸಿನಿಮಾ ರಂಗದಲ್ಲೂ ಮಿಂಚಿದ ಮಹಾನ್ ಚೇತನ…ಅವರೇ ನಮ್ಮ ರಾಜ್ಯದ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ.

ಇಂದು (ಆ.29) ಅವರ 98ನೇ ವರ್ಷದ ಹುಟ್ಟುಹಬ್ಬ. ರಾಜಕೀಯವಾಗಿ ಎಲ್ಲರಿಗೂ ಚಿರಪರಿಚಿತ ಆಗಿರುವ ಇವರ ಬಾಲ್ಯ ಜೀವನ ಶುರುವಾದದ್ದು ಪುಟ್ಟ ಗ್ರಾಮವಾದ ದೊಡ್ಮನೆ ಎಂಬಲ್ಲಿ. ಉತ್ತರ ಕನ್ನಡ ಜಿಲ್ಲೆ ಸಿದ್ಧಾಪುರದಿಂದ 25 ಕಿಲೋ ಮೀಟರ್ ಹೋದರೆ ಸಿಗೋದೇ ದೊಡ್ಮನೆ ಗ್ರಾಮ. ಇಲ್ಲಿ ಅವರು ವಿದ್ಯಾಭ್ಯಾಸ ಮಾಡಿರುವ ಶಾಲೆ, ಅವರೇ ಕಟ್ಟಿಸಿದ ದೇವಸ್ಥಾನ ಕಾಣಿಸುತ್ತದೆ. ಮಹಾಬಲೇಶ್ವರ ಹೆಗಡೆ ಮತ್ತು ಸರಸ್ವತಿ ದಂಪತಿಯ ಪುತ್ರರಾಗಿ ಜನಿಸಿದ ಹೆಗಡೆ ಅವರು, ಪ್ರಾಥಮಿಕ ಶಿಕ್ಷಣವನ್ನು ದೊಡ್ಮನೆ ಗ್ರಾಮದ ಇದೇ ಸರ್ಕಾರಿ ಶಾಲೆಯಲ್ಲಿ ಪಡೆದಿದ್ದರು. ಮುಂಚೆ ದೇವಾಲಯದ ಆವರಣದಲ್ಲಿ ಇದ್ದ ಶಾಲೆ ಈಗ ಬೇರೆಡೆ ತೆರೆಯಲಾಗಿದೆ.

ಗ್ರಾಮದಲ್ಲಿ ಒಂದರಿಂದ ನಾಲ್ಕನೇ ತರಗತಿವರೆಗೂ ಓದಿದ ಹೆಗಡೆ ಅವರು ಮುಂದಿನ ಅಭ್ಯಾಸಕ್ಕೆ ಸಿದ್ದಾಪುರಕ್ಕೆ ತೆರಳಿದರು. ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದಿಂದ ಬಂದ ಹೆಗಡೆಯವರು ಬಾಲ್ಯದಿಂದಲೇ ಹೋರಾಟ ಸ್ವಭಾವ ಹೊಂದಿದ್ದವರು. ಚಿಕ್ಕಂದಿನಲ್ಲಿ ಸ್ವಾಭಿಮಾನದ ಜೀವನ ನಡೆಸುತ್ತಿದ್ದ ಅವರು ಮುಂದೆ ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿ ಜನ ಮಾನಸದಲ್ಲಿ ಉಳಿದಿದ್ದಾರೆ. ಪ್ರಾಥಮಿಕ ಶಿಕ್ಷಣ ನೀಡಿದ ಗುರುಗಳನ್ನು ಎಂದೂ ಮರೆಯದ ಹೆಗಡೆ ಅವರು, 1992ರಲ್ಲಿ ನಡೆದ ಶಾಲಾ ಶತಮಾನೊತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅಲ್ಲದೆ ಅಘನಾಶಿನಿ ಶತಮಾನೋತ್ಸವ ಸ್ವರ್ಣ ಸಂಚಿಕೆಯನ್ನ ಬಿಡುಗಡೆ ಮಾಡಿದ್ದರು. ಅದರಲ್ಲಿ ತಮ್ಮ ಗುರುಗಳ ಬಗ್ಗೆ ಹಿತನುಡಿಗಳನ್ನ ಕೂಡ ಬರೆದಿದ್ದಾರೆ. ವರ್ಷಕ್ಕೊಮ್ಮೆ ಆದರೂ ಊರಿಗೆ ಭೇಟಿ ನೀಡುತ್ತಿದ್ದ ಹೆಗಡೆ ಅವರು, ಮನೆಯಲ್ಲಿ ಯಾವುದೇ ಕಾರ್ಯಕ್ರಮ ಇದ್ದರೂ ತಮ್ಮ ಮೂಲ ದೇವರಿಗೆ ವಂದಿಸಿ ಹೋಗುತ್ತಿದ್ದರು. ಅಲ್ಲದೆ ಒಡನಾಡಿಗಳಲ್ಲಿ ಉತ್ತಮ ಒಟನಾಟ ಬೆಳೆಸಿಕೊಂಡಿದ್ದವರು.

ಮನೆಯಿಂದ ಹಾಗೆ ಕೊಂಚ ಮುಂದೆ ಹೋದರೆ ಸಿಗೋದೆ ಲಕ್ಷ್ಮೀ ನಾರಾಯಣ ದೇವಾಲಯ. ಇದು ಹೆಗಡೆ ಅವರ ಮೂಲ ದೇವರಂತೆ. ಪರಮ ಭಕ್ತರಾದ ಇವರು ತಮ್ಮ ಕುಲ ದೇವರನ್ನ ತಮ್ಮ ಊರಿನಲ್ಲೇ ಪ್ರತಿಷ್ಠಾಪಿಸಿದ್ದಾರೆ. ವರ್ಷಕ್ಕೊಮ್ಮೆ ಪತ್ನಿ ಶಕುಂತಲಾ ಹಾಗೂ ಕುಟುಂಬ ಸಹಿತ ಕುಲ ದೇವರಿಗೆ ಪೂಜೆ ಸಲ್ಲಿಸಲು ಬರುತ್ತಿದ್ದ ಹೆಗಡೆ ಅವರು, ಸಂಬಂಧಿಕರು, ಸ್ನೇಹಿತರ ಮನೆಯಲ್ಲಿ ಗಂಟೆಗಟ್ಟಲೆ ಕುಳಿತು ಹರಟೆ ಹೊಡಿಯುತ್ತಿದ್ದರಂತೆ. ಮೃದು ಸ್ವಭಾವ ಹೊಂದಿದ್ದ ಹೆಗಡೆ ಅವರು ಯಾರನ್ನೂ ದ್ವೇಷಿಸುತ್ತಿರಲ್ಲ.

ಈ ಗ್ರಾಮಕ್ಕೆ ದೊಡ್ಮನೆ ಎಂದು ಹೆಸರು ಬರಲು ಇವರಿರುವ 325 ವರ್ಷದ ಮನೆಯೇ ಮೂಲ ಕಾರಣ. ಗ್ರಾಮದ ಮುಖ್ಯ ರಸ್ತೆಯಿಂದ ಕೊಂಚ ತೋಟ ದಾಟಿ ಮುಂದೆ ಹೋದರೆ ಸಿಗೋದೆ ಅವರ ಮೂಲ ಮನೆ. ಗ್ರಾಮಕ್ಕೆ ಅತಿ ದೊಡ್ಡ ಮನೆ ಹೊಂದಿದ್ದ ಇವರ ನಿವಾಸಕ್ಕೆ ದೊಡ್ಮನೆ ಎಂದು ಕರೆಯುತ್ತಿದ್ದರಂತೆ. ಅದೇ ದೊಡ್ಮನೆ ಗ್ರಾಮವಾಯ್ತು. ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ದೊಡ್ಮನೆಯಲ್ಲಿ ಮುಗಿಸಿದ ಅವರು, ಹೈಸ್ಕೂಲ್ ಗೆ ಬಂದದ್ದು ಸಿದ್ದಾಪುರಕ್ಕೆ.

ಕೃಷಿಕ ಕುಟುಂಬದಿಂದ ಬಂದ ಇವರು ಮುಂದೆ ಕಾಶಿ ವಿದ್ಯಾಪೀಠ, ಬನಾರಸ್ ಹಾಗೂ ಲಕ್ನೋ ಯುನಿವರ್ಸಿಟಿಗಳಲ್ಲಿ ಓದಿ ನ್ಯಾಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ರಾಮಕೃಷ್ಣ ಹೆಗಡೆಯವರ ವ್ಯಕ್ತಿತ್ವವೂ ಕೂಡ ಬಲು ವರ್ಣರಂಜಿತ. ಅಂತಹ ಮಹಾನ್ ಚೇತನದ ಹುಟ್ಟುಹಬ್ಬವನ್ನ ವಿನೂತನವಾಗಿ ಆಚರಿಸುತ್ತಾ ಬಂದಿರುವ ಅವರ ಕುಟುಂಬಸ್ಥರು, ಅವರ ಹೆಸರಿನಲ್ಲಿ ಸಮುದಾಯ ಭವನವನ್ನು ನಿರ್ಮಿಸಿದ್ದಾರೆ.

ದೇಶದ ಹಿರಿಯ ರಾಜಕೀಯ ನೇತಾರರಾದ ಹೆಗಡೆ, ಮೌಲ್ಯಾಧಾರಿತ ರಾಜಕಾರಣ ಮಾಡಿ ಕರ್ನಾಟಕವನ್ನು ದೇಶದ ನಕ್ಷೆಯಲ್ಲಿ ಒಂದು ಮಾದರಿ ರಾಜ್ಯವನ್ನಾಗಿ ಗುರುತಿಸುವಂತೆ ಮಾಡಿದ್ದರು. ರಾಮಕೃಷ್ಣ ಹೆಗಡೆಯವರು ದೇಶದಲ್ಲೇ ಪ್ರಥಮವಾಗಿ ಬಡ ವಿದ್ಯಾರ್ಥಿಗಳಿಗೆ ಸಮವಸ್ತ್ರ ನೀಡಿದ್ದರು. ಭ್ರಷ್ಟರ ಬೇಟೆಗಾಗಿ ಲೋಕಾಯುಕ್ತರನ್ನು ನೇಮಕ ಮಾಡಿದ್ದರು. ರಾಜಕೀಯ ಮಾತ್ರವಲ್ಲದೆ ಸಾಂಸ್ಕೃತಿಕ ವಲಯದಲ್ಲೂ ಸಕ್ರಿಯರಾಗಿದ್ದರು. ಮರಣ ಮೃದಂಗ ಮತ್ತು ಪ್ರಜಾಶಕ್ತಿ ಎಂಬ ಚಲನಚಿತ್ರಗಳಲ್ಲಿ ನಟಿಸಿದ್ದರು. ರಾಜ್ಯ ಮಾತ್ರವಲ್ಲ, ರಾಷ್ಟ್ರ ರಾಜಕಾರಣದಲ್ಲೂ ಮುಂಚೂಣಿಯಲ್ಲಿದ್ದರು. ಇಂಥ ಮಹಾನ್ ಚೇತನ ಜನವರಿ 12, 2004ರಂದು ನಮ್ಮಿಂದ ದೂರವಾಯಿತು. ಆದರೆ ಅವರ ನೆನಪು ಮಾತ್ರ ಇಂದಿಗೂ ಅಮರ.

ಇದನ್ನೂ ಓದಿ: Ramakrishna Hegde BirthDay: ರಾಮಕೃಷ್ಣ ಹೆಗಡೆ ಕುರಿತ ಕುತೂಹಲಕಾರಿ ಸಂಗತಿಗಳಿವು

Exit mobile version