ರಾಮನಗರ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಗ್ರಾಮೀಣ ಮಕ್ಕಳಿಗೆ ಅನೂಕೂಲ ಕಲ್ಪಿಸುವ ಉದ್ದೇಶದೊಂದಿಗೆ ಪ್ರಾರಂಭಿಸಲಾಗಿರುವ ಕೂಸಿನ ಮನೆಗಳು (Kusina Mane) ಇದೀಗ ಮಕ್ಕಳ ಹಾಗೂ ಪೋಷಕರ ಪಾಲಿಗೆ ಆಶಾಕಿರಣವಾಗಿವೆ.
ಗ್ರಾಮ ಪಂಚಾಯಿತಿಗೆ ಒಂದರಂತೆ ರಾಮನಗರ ತಾಲೂಕಿನಲ್ಲಿ ಆರಂಭಿಸಿರುವ 20 ಕೂಸಿನ ಮನೆಗಳು ಗ್ರಾಮೀಣ ಮಕ್ಕಳಿಗೆ ಅನುಕೂಲ ವಾಗುತ್ತಿದೆ. ಕೂಸಿನ ಮನೆಗಳು ಪ್ರತಿದಿನ ಬೆಳಗ್ಗೆ 9.30 ರಿಂದ ಸಂಜೆ 4ರ ವರೆಗೆ ಕಾರ್ಯ ನಿರ್ವಹಿಸುತ್ತಿವೆ. ಕೂಸಿನ ಮನೆಯಲ್ಲಿ 6 ತಿಂಗಳಿಂದ 3 ವರ್ಷದ ಒಳಗಿನ ಮಕ್ಕಳನ್ನು ಆರೈಕೆ ಮಾಡಲಾಗುತ್ತದೆ. ಇದರಿಂದಾಗಿ ನರೇಗಾ ಮಹಿಳಾ ಕೂಲಿಕರಾರು ನೆಮ್ಮದಿಯಿಂದ ಕೆಲಸಕ್ಕೆ ತೆರಳುವಂತಾಗಿದೆ.
ಆರಂಭದಲ್ಲಿ ಕೂಸಿನ ಮನೆಗೆ ಮಕ್ಕಳು ನಿರೀಕ್ಷಿತ ಪ್ರಮಾಣದಲ್ಲಿ ಬಂದಿರಲಿಲ್ಲ. ನಂತರ ಪಂಚಾಯಿತಿ ಹಾಗೂ ಶಿಶು ಆರೈಕೆದಾರರ ಜಾಗೃತಿ, ಐಇಸಿ (IEC) ಚಟುವಟಿಕೆ, ಜಾಗೃತಿ ಕಾರ್ಯಕ್ರಮದ ಮೂಲಕ ಮನವರಿಕೆ ಮಾಡಿದ್ದಾರೆ. ಇದರ ಫಲವಾಗಿ ಮಹಿಳಾ ಕಾರ್ಮಿಕರು ಕೂಸಿನ ಮನೆಯಲ್ಲಿ ಮಕ್ಕಳನ್ನು ಬಿಟ್ಟು ಕೆಲಸಕ್ಕೆ ಹೋಗಲಾರಂಭಿಸಿದ್ದಾರೆ.
ಇದೀಗ ಮಕ್ಕಳ ದಾಖಲಾತಿ ಸಂಖ್ಯೆ ದಿನೇ ದಿನೇ ಹೆಚ್ಚಳವಾಗುತ್ತಿದೆ. ಮಕ್ಕಳಿಗೆ ಉತ್ತಮ ಪೌಷ್ಟಿಕ ಆಹಾರ ನೀಡುತ್ತಿದ್ದು, ಮಕ್ಕಳನ್ನು ಆರೈಕೆ ಮಾಡಲಾಗುತ್ತಿದೆ. ಇದರಿಂದ ಮಹಿಳಾ ಕೂಲಿಕಾರರು ತಮ್ಮ ಜೀವನವನ್ನು ಇನ್ನಷ್ಟು ಸುಧಾರಿಸಿಕೊಳ್ಳಲು ಕೂಸಿನ ಮನೆ ಕಾರಣವಾಗಿದೆ ಎಂದು ರಾಮನಗರ ತಾಲೂಕಿನ ಐಇಸಿ ಸಂಯೋಜಕರು ಸುಚಿತ್ರ ತಿಳಿಸಿದ್ದಾರೆ.
ಈಗಾಗಲೇ ರಾಮನಗರದ 20 ಗ್ರಾಮ ಪಂಚಾಯ್ತಿಗಳಲ್ಲಿ ಕೂಸಿನ ಮನೆ (ಶಿಶುಪಾಲನ ಕೇಂದ್ರ) ಆರಂಭವಾಗಿದ್ದು, ಬನ್ನಿಕುಪ್ಪೆ, ಕೆ, ಸುಗ್ಗನಹಳ್ಳಿ, ಬನ್ನಿಕುಪ್ಪೆ.ಬಿ, ಕೈಲoಚ ಗ್ರಾಮ ಪಂಚಾಯ್ತಿಗಳಲ್ಲಿ ಕೂಸಿನ ಮನೆ ಕೇಂದ್ರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಬರುತ್ತಿದ್ದು, ಉತ್ತಮ ಸ್ಪಂದನೆ ಸಿಕ್ಕಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ