ರಾಮನಗರ: ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಅವೈಜ್ಞಾನಿಕ ಕಾಮಗಾರಿ ಹಿನ್ನೆಲೆಯಲ್ಲಿ ಜಮೀನಿಗೆ ಮಳೆ ನೀರು(Rain News) ನುಗ್ಗಿ ಹತ್ತಾರು ತೆಂಗಿನ ಮರಗಳು ನೆಲಕಚ್ಚಿವೆ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. ಚನ್ನಪಟ್ಟಣ ತಾಲೂಕು ತಿಟ್ಟಮಾರನಹಳ್ಳಿ ಗ್ರಾಮಸ್ಥರು ಮೈಸೂರು-ಕೊಡಗು ಸಂಸದ ಪ್ರತಾಪ ಸಿಂಹ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಗೆ ಕೆಲವೆಡೆ ಕಿರಿದಾದ ಸೇತುವೆಗಳನ್ನು ನಿರ್ಮಿಸಲಾಗಿದೆ. ಅವೈಜ್ಞಾನಿಕ ಕಾಮಗಾರಿಯಿಂದ ಮಳೆ ನೀರು ಜಮೀನಿಗೆ ನುಗ್ಗಿ ವಿವಿಧ ಬೆಳೆ, ತೆಂಗಿನ ಮರಗಳಿಗೆ ಹಾನಿಯಾಗುತ್ತಿದೆ. 45 ವರ್ಷಕ್ಕೂ ಮೇಲ್ಪಟ್ಟ ಹತ್ತಾರು ತೆಂಗಿನ ಮರಗಳು ನೀರುಪಾಲಾಗಿದೆ. ಬಿಡದಿಯಿಂದ ಮೈಸೂರಿನವರೆಗೂ ಇದೇ ಕತೆಯಾಗಿದೆ. ವಾಹನ ಸವಾರರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ರೈತರು ತಿಳಿಸಿದ್ದಾರೆ.
ಮಳೂರು ಹೋಬಳಿ ವ್ಯಾಪ್ತಿಯಲ್ಲಿ ಮಳೆಯಿಂದ ಹೆಚ್ಚಿನ ಹಾನಿಯಾಗಿದೆ. ರಸ್ತೆಗೆ ಜಾಗ ಕೊಟ್ಟು, ನಮ್ಮ ಭೂಮಿಯನ್ನು ಕಳೆದುಕೊಳ್ಳುತ್ತಿದ್ದೇವೆ. ನೀವು ಕೊಟ್ಟ ಪರಿಹಾರ ನಮಗೆ ಸಾಲುವುದಿಲ್ಲ. ಹೆದ್ದಾರಿಯಲ್ಲಿ ಫೋಟೋಶೂಟ್ ಮಾಡುವುದಲ್ಲ, ಸಂಸದರೇ ಮಳೆ ಹಾನಿ ಪ್ರದೇಶಕ್ಕೆ ಬಂದು ಫೋಟೋಶೂಟ್ ಮಾಡಿ ಎಂದು ಕಿಡಿ ಕಾರಿದ್ದಾರೆ.
ಹೋಟೆಲ್‌ಗೆ ನುಗ್ಗಿದ ನೀರು
ಭಾರೀ ನೀರು ನುಗ್ಗಿದ್ದರಿಂದಾಗಿ, ರಸ್ತೆಯ ಸಮೀಪವಿದ್ದ ಇಂದ್ರಧನುಷ್ ಹೋಟೆಲ್ ಸಂಪೂರ್ಣ ಜಲಾವೃತವಾಗಿದ್ದು, ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಹೋಟೆಲ್ ಸಾಮಾಗ್ರಿಗಳು ನಾಶವಾಗಿವೆ. ನಿಧಿ ಮಂಜುನಾಥ್ ಎಂಬುವವರಿಗೆ ಸೇರಿದ ಹೋಟೆಲ್‌ನಲ್ಲಿ 1. 8 ಕೋಟಿ ರೂ. ಮೌಲ್ಯದ ಸಾಮಾಗ್ರಿ, ಐಶಾರಾಮಿ ಕಾರು ನಷ್ಟವಾಗಿದೆ. ಈ ಕುರಿತು ಮಾತನಾಡಿದ ನಿಧಿ ಮಂಜುನಾಥ್, ಮೊದಲು ಅಗಲವಾಗಿದ್ದ ಸೇತುವೆಯನ್ನು ಕಿತ್ತು ಚಿಕ್ಕದು ಮಾಡಿದ್ದಾರೆ. ಇದರಿಂದ ಹಾನಿಯಾಗುತ್ತದೆ ಎಂದು ಆರು ತಿಂಗಳಿಂದಲೂ ಅಧಿಕಾರಿಗಳಿಗೆ ಹೇಳುತ್ತಲೇ ಬಂದಿದ್ದೇವೆ. ಆದರೆ ಯಾವೊಬ್ಬ ಅಧಿಕಾರಿ ಸಹ ಇತ್ತ ಸುಳಿಯಲೇ ಇಲ್ಲ.
ಕಾಮಗಾರಿ ವೇಳೆ ಈ ಸೇತುವೆಯನ್ನು ತಾತ್ಕಾಲಿಕವಾಗಿ ನಿರ್ಮಾಣ ಮಾಡುತ್ತಿದ್ದೇವೆ ಎಂದಿದ್ದರು, ಆದರೆ ಕಾಮಗಾರಿ ನಂತರ ಇತ್ತ ಯಾರೂ ಬಂದಿಲ್ಲ. ಮೊದಲೆಲ್ಲ ಈ ರೀತಿ ಇರಲೇ ಇಲ್ಲ, ಈ ಹೈವೇ ಮಾಡಿದ ಮೇಲೆಯೇ ತೊಂದರೆ ಆಗುತ್ತಿದೆ.
ಇದನ್ನೂ ಓದಿ | ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿಗೆ 20 ವರ್ಷ ಜೈಲು, ₹50 ಸಾವಿರ ದಂಡ