Site icon Vistara News

ಸುಸಜ್ಜಿತ ಸ್ಮಾರ್ಟ್ ಅಂಗನವಾಡಿ ನಿರ್ಮಾಣ: ಮಕ್ಕಳು ಫುಲ್ ಹ್ಯಾಪಿ ಹ್ಯಾಪಿ

ಸ್ಮಾರ್ಟ್ ಅಂಗನವಾಡಿ

ರಾಮನಗರ: ಜಾರುಬಂಡೆ, ಜೋಕಾಲಿ ಆಡುತ್ತಾ ಸಂಭ್ರಮಿಸುತ್ತಿರುವ ಪುಟ್ಟ ಮಕ್ಕಳು.. ಕೊಠಡಿಯಲ್ಲಿ ಕುಳಿತು ಲವಲವಿಕೆಯಿಂದ ಕಲಿಯುತ್ತಿರುವ ಚಿಣ್ಣರು.. ಟಿವಿ ಪರದೆ ಮೇಲೆ ಸ್ಮಾರ್ಟ್ ಟಿವಿಯಲ್ಲಿ ಸ್ಮಾರ್ಟ್ ಆಗಿ ಪಾಠ ಮಾಡುತ್ತಿರುವ ಶಿಕ್ಷಕಿಯರು.. ಇದ್ಯಾವುದೊ ಖಾಸಗಿ ಪ್ಲೇ ಹೋಂ ಅಲ್ಲ. ಹೈಟೆಕ್ ಕಾನ್ವೆಂಟ್ ಕೂಡ ಅಲ್ಲ. ಇದು ಒಂದು ಸರ್ಕಾರಿ ಅಂಗನವಾಡಿ. ಇಲ್ಲಿ ಎಲ್ಲವೂ ಸ್ಮಾರ್ಟ್ ಆಗಿಯೇ ನಡೆಯುತ್ತಿದೆ.

ಸ್ಮಾರ್ಟ್ ಅಂಗನವಾಡಿ

ವಿಭೂತಿಕೆರೆ ಗ್ರಾಂ ಪಂಚಾಯಿತಿ ವ್ಯಾಪ್ತಿಯ ಚೌಡೇಶ್ವರಿಪುರ ಗ್ರಾಮದಲ್ಲಿ ಸುಸಜ್ಜಿತ ಸ್ಮಾರ್ಟ್ ಅಂಗನವಾಡಿ ಕಟ್ಟಡ ನಿರ್ಮಾಣಗೊಂಡಿದೆ. ಅಡುಗೆ ಮನೆ, ಶುದ್ಧ ಕುಡಿಯುವ ನೀರು, ಶೌಚಾಲಯ ಮುಂತಾದ ಸೌಲಭ್ಯಗಳನ್ನು ಅಂಗನವಾಡಿ ಕೇಂದ್ರದಲ್ಲಿ ಕಲ್ಪಿಸಲಾಗಿದೆ.
ಸರ್ಕಾರದ ಶಿಕ್ಷಣ ಸಂಸ್ಥೆಗಳೆಂದರೆ ಮೂಗು ಮುರಿಯುವಂಥ ಪರಿಸ್ಥಿತಿಯಿದೆ. ಎಷ್ಟೋ ಕಡೆ ಪಡಸಾಲೆ, ಜೋಪಡಿಗಳಲ್ಲಿ ಅಂಗನವಾಡಿ ಕೇಂದ್ರಗಳು ನಡೆಯುತ್ತಿರುವುದು ನಮ್ಮ ಕಣ್ಣಿಂದ ನೋಡಿರುತ್ತೇವೆ. ಅದಕ್ಕೆ ತಕ್ಕಂತೆ ಇಲ್ಲಿ ನೋಡುಗರ ಕಣ್ಣು ಕುಕ್ಕುವಂತಹ ಸ್ಮಾರ್ಟ್ ಅಂಗನವಾಡಿ ಕೇಂದ್ರ ರಾಮನಗರ ತಾಲೂಕಿನ ಪುಟ್ಟ ಗ್ರಾಮದಲ್ಲಿ ಶುರುವಾಘಿದೆ. ಈ ಅಂಗನವಾಡಿ ಯಾವುದೇ ಖಾಸಗಿ ಪ್ಲೇ ಹೋಮ್‌ಗೇನೂ ಕಡಿಮೆ ಇಲ್ಲ.

ಅಂಗನವಾಡಿಯಲ್ಲಿ ಎಲ್.ಇ.ಡಿ ಟಿವಿ ಪರದೆ ಮೇಲೆ ಸ್ಮಾರ್ಟ್ ಕ್ಲಾಸ್‌ನಲ್ಲಿ ಮಕ್ಕಳಿಗೆ ಕಲಿಕಾ ಅಭ್ಯಾಸ ಮಾಡಲಾಗುತ್ತದೆ. ಸುಸಜ್ಜಿತವಾದ ಅಡುಗೆ ಮನೆ ಹಾಗು ಹಚ್ಚ ಹಸಿರಿನ ಲಾನ್ ಇದ್ದು, ಆಕರ್ಷಕ ಆಟದ ಸಲಕರಣೆಗಳಿವೆ. ವಿದ್ಯುತ್ ಸಮಸ್ಯೆ ಎದುರಾಗಬಾರದೆಂದು ಯುಪಿಎಸ್ ವ್ಯವಸ್ಥೆಯನ್ನು ಸಹ ಮಾಡಲಾಗಿದೆ.

-ಚನ್ನಕೇಶವ, ಜಿಲ್ಲಾ ಮುಖ್ಯ ಗ್ರಂಥಾಲಯ ಅಧಿಕಾರಿ

ಈ ಅಂಗನವಾಡಿ ನಿರ್ಮಿಸಲು ರಾಮನಗರ ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್ ಹಾಗೂ ಗ್ರಾಮ ಪಂಚಾಯತಿ ಸಹಯೋಗವಿದೆ. ಅಂದಾಜು ₹20 ಲಕ್ಷ ವೆಚ್ಚದಲ್ಲಿ ಈ ಸ್ಮಾರ್ಟ್ ಅಂಗನವಾಡಿ ನಿರ್ಮಾಣ ಮಾಡಲಾಗಿದೆ. ಜಿಲ್ಲೆಯಲ್ಲೇ ಹೈಟೆಕ್ ಅಂಗನವಾಡಿ ಎಂಬ ಕೀರ್ತಿಗೆ ಇದು ಪಾತ್ರವಾಗಿದ್ದು, ನಗರ ಪ್ರದೇಶಗಳಲ್ಲಿನ ಪ್ಲೇ ಹೋಮ್‌ಗಳಿಗೆ ಮಾರು ಹೋಗಿರುವ ಈ ಭಾಗದ ಜನರು ಈ ಸ್ಮಾರ್ಟ್ ಅಂಗನವಾಡಿ ನೋಡಿ, ತಮ್ಮ ಮಕ್ಕಳನ್ನು ಅಲ್ಲಿಗೇ ಸೇರಿಸಲು ಮನಸ್ಸು ಮಾಡುತ್ತಿದ್ದಾರೆ.

ಕೊಠಡಿಯಲ್ಲಿ ಮಕ್ಕಳು

ಈ ಕುರಿತು ಪ್ರತಿಕ್ರಿಯಿಸಿರುವ ಚೌಡೇಶ್ವರಿಪುರ ಗ್ರಾಮಸ್ಥ ನಾಗರಾಜ್, ಊರಿನಲ್ಲಿ ಒಂದು ಚಿಕ್ಕ ಕೊಠಡಿ ಇತ್ತು. ಮೂರು ಮಕ್ಕಳು ಕೂರುವುದಕ್ಕೂ ಜಾಗ ಇರಲಿಲ್ಲ. ಮಕ್ಕಳಿಗೆ ಉಸಿರು ಕಟ್ಟಿದ ವಾತಾವರಣ ನಿರ್ಮಾಣವಾಗಿತ್ತು. ಅದ್ದನ್ನು ನೋಡಿ ಇಲ್ಲಿ ಗ್ರಾಮ ಪಂಚಾಯತ್ ಸದಸ್ಯೆ ಸುನೀತಾ ನಾಗರಾಜ್ ಸಿಂಗ್ ಅವರು ಇಲ್ಲಿ ಒಂದು ಅತ್ಯುತ್ತಮ ಅಂಗನವಾಡಿ ಕಟ್ಟಲೇಬೇಕು ಎಂದು ಹೊರಟರು. ಪಂಚಾಯತಿ ಅನುದಾನ, ಜಿಲ್ಲಾ ಪಂಚಾಯತಿ ಅನುದಾನ ಮತ್ತು ತಾಲೂಕ್ ಪಂಚಾಯತಿ ಅನುದಾನದಿಂದ ಈ ಸ್ಮಾರ್ಟ್ ಅಂಗನವಾಡಿ ನಿರ್ಮಾಣ ಮಾಡಿದರು. ಮಕ್ಕಳಿಗೆ ಯಾವುದೇ ಕೊರತೆ ಆಗದಂತೆ ಒಳ್ಳೆಯ ವಾತಾವರಣ ನಿರ್ಮಾಣ ಮಾಡಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಅಂಗನವಾಡಿಗಳ ಬಗ್ಗೆ ಸಂಶೋಧನೆ ನಡೆಸುತ್ತಿರುವ ತಂಡವೊಂದು ಈ ಅಂಗನವಾಡಿಗೆ ಭೇಟಿ ಕೊಟ್ಟು ನೋಡಿ ಸಂತಸ ವ್ಯಕ್ತಪಡಿಸಿದೆ. ಒಟ್ಟಾರೆ ಸರಕಾರಿ ಶಾಲೆ, ಅಂಗನವಾಡಿ ಕೇಂದ್ರ ಎಂದರೆ ತಿರುಗಿಯೂ ನೋಡದ ಜನರೇ ಹೆಚ್ಚಾಗಿರುವ ಈ ಕಾಲಘಟ್ಟದಲ್ಲಿ ಸರ್ಕಾರಿ ಅಂಗನವಾಡಿಯನ್ನು ಸ್ಮಾರ್ಟ್ ಆಗಿ ನಿರ್ಮಾಣ ಮಾಡಿ, ನಾವು ಖಾಸಗಿಯವರಿಗಿಂತ ಕಡಿಮೆ ಇಲ್ಲ ಎಂಬುದನ್ನ ಸಾಬೀತುಗೊಳಿಸಿದವರಿಗೆ ನಿಜಕ್ಕೂ ಶಹಬ್ಬಾಶ್ ಗಿರಿ ನೀಡಲೇಬೇಕಿದೆ.

ಇದನ್ನೂ ಓದಿ| ಸರಕಾರಿ ನೌಕರರ ಸಂಘದಿಂದ ಮಕ್ಕಳಿಗೆ ಉಚಿತ ಸ್ಕೂಲ್‌ಬ್ಯಾಗ್, ನೋಟ್‌ಬುಕ್

Exit mobile version