Site icon Vistara News

ಎಂ.ಬಿ. ಪಾಟೀಲ್‌ಗೆ ನೀರಾವರಿ ಖಾತೆ ಸಿಗಬೇಕಿತ್ತು; ಡಿಕೆಶಿಗೆ ಕೊಟ್ಟಿದ್ದಕ್ಕೆ ರಂಭಾಪುರಿ ಶ್ರೀ ಬೇಸರ!

Rambhapuri seer and MB Patil

ವಿಜಯಪುರ: ಎಂ.ಬಿ. ಪಾಟೀಲ್‌ಗೆ ಜಲಸಂಪನ್ಮೂಲ ಖಾತೆ ಸಿಗದಿದ್ದಕ್ಕೆ ಸಿಎಂ ಸಿದ್ದರಾಮಯ್ಯ ವಿರುದ್ಧ ರಂಭಾಪುರಿ ಶ್ರೀಗಳು (Rambhapuri seer) ಅಸಮಾಧಾನ ವ್ಯಕ್ತಪಡಿಸಿರುವುದು ಕಂಡುಬಂದಿದೆ. ಈ ಬಾರಿ ಸರ್ಕಾರದಲ್ಲಿ ಎಂ.ಬಿ ಪಾಟೀಲ್‌ಗೆ ನೀರಾವರಿ ಖಾತೆ ಕೊಟ್ಟಿದ್ದರೆ ಆ ಕಥೆಯೇ ಬೇರೆಯಾಗಿರುತ್ತಿತ್ತು ಎಂದು ಹೇಳುವ ಮೂಲಕ ಡಿಕೆಶಿಗೆ ಜಲಸಂಪನ್ಮೂಲ ಖಾತೆ ಸಿಕ್ಕಿದ್ದಕ್ಕೆ ಪರೋಕ್ಷವಾಗಿ ಬೇಸರ ಹೊರಹಾಕಿದ್ದಾರೆ.

ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಬಳವಾಟ ಗ್ರಾಮದಲ್ಲಿ ಮಾತನಾಡಿರುವ ಬಾಳೆ ಹೊನ್ನೂರು ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿ ಅವರು, ಕರ್ನಾಟಕ ಸರ್ಕಾರದಲ್ಲಿ ಬೃಹತ್ ಕೈಗಾರಿಕಾ ಸಚಿವರಾಗಿ ಎರಡನೇ ಸ್ಥಾನದಲ್ಲಿ ಎಂ.ಬಿ. ಪಾಟೀಲ್ ಮುನ್ನಡೆಯುತ್ತಿದ್ದಾರೆ. ಅವರಿಗೆ ನೀರಾವರಿ ಖಾತೆ ಕೊಟ್ಟಿದ್ದರೆ ಆ ಕಥೆಯೇ ಬೇರೆಯಾಗಿರುತ್ತಿತ್ತು. ದೊಡ್ಡ ಪ್ರಮಾಣದಲ್ಲಿ ಕೆಲಸ ಮಾಡಲು ಸಾಧ್ಯವಿತ್ತು. ಆದರೆ ಸಿದ್ದರಾಮಯ್ಯರ ಅವರು ಅವಕಾಶ ಕೊಡಲಿಲ್ಲ. ಸಿಎಂಗೆ ಖಂಡಿತವಾಗಿಯೂ ಎಂ.ಬಿ. ಪಾಟೀಲ್ ಬೇಕಾದವರು. ಅವರು ಖಾತೆ ಸಿಗುತ್ತದೆ ಎಂದು ಬಹಳ ಆಸೆ ಇಟ್ಟುಕೊಂಡಿದ್ದೆವು. ಆದರೆ ಜಲಸಂಪನ್ಮೂಲ ಖಾತೆ ಬೇರೆಯವರ ಪಾಲಾಯಿತು ಎಂದು ತಿಳಿಸಿದ್ದಾರೆ.

ಕೈಗಾರಿಕೆಗಳಿಂದ ರಾಜ್ಯದಲ್ಲಿ ಏನೇನು ಮಾಡಬೇಕು ಎಂಬುವುದರ ಬಗ್ಗೆ ಎಂ.ಬಿ. ಪಾಟೀಲ್ ಭದ್ರ ಬುನಾದಿ ಹಾಕುತ್ತಿದ್ದು, ಹೆಚ್ಚಿನ ವಿದೇಶಿ ಹೂಡಿಕೆಯನ್ನು ತರುತ್ತಿದ್ದಾರೆ. ಈ ಹಿಂದೆ ಜಲಸಂಪನ್ಮೂಲ ಸಚಿವರಿದ್ದಾಗ ಎಂ.ಬಿ.ಪಾಟೀಲ್ ಬಹಳ ದೊಡ್ಡ ಕೆಲಸ ಮಾಡಿದ್ದಾರೆ. ವಿಜಯಪುರ ಜಿಲ್ಲೆಯ ಎಲ್ಲಾ ಭಾಗದಲ್ಲಿ ಕೆರೆ ತುಂಬಿಸುವ ಕೆಲಸ ಮಾಡಿದರು. ಇವತ್ತು ಬಹಳ ಮಳೆ ಆಗದೇ ಇದ್ದರೂ ಇಲ್ಲಿನ ಹಸಿರು ನೋಡಿದರೆ ತಿಳಿಯುತ್ತದೆ. ಎಲ್ಲಾ ಕೆರೆ ತುಂಬಿದ ಪರಿಣಾಮದಿಂದಲೇ ಅಂತರ್ಜಲ ಹೆಚ್ಚಾಗಿ ಬೋರ್ವೆಲ್‌ನಲ್ಲಿ ನೀರಿದೆ. ಫಸಲು ಬೆಳೆಯಲು ಸಾಧ್ಯ ಆಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ | Congress Guarantee: ಸಿಎಂ ಸಿದ್ದರಾಮಯ್ಯ ತವರಲ್ಲೇ ಸಿಗದ ಗ್ಯಾರಂಟಿ ಯೋಜನೆಗಳು; ಸ್ಲಂ ನಿವಾಸಿಗಳ ಪರದಾಟ

ಉಚಿತ ಯೋಜನೆಗಳಿಂದ ಅಭಿವೃದ್ಧಿಗೆ ಹಿನ್ನಡೆ

ಕಾಂಗ್ರೆಸ್ ಸರ್ಕಾರದ ಉಚಿತ ಯೋಜನೆಗಳಿಂದ ರಾಜ್ಯದ ಅಭಿವೃದ್ಧಿ ಕೆಲಸಗಳಿಗೆ ಹಿನ್ನಡೆಯಾಗಿದೆ. ಸರ್ಕಾರದ ಯೋಜನೆಗಳಿಗೆ ಮುಕ್ಕಾಲು ಭಾಗ ಹಣ ಖರ್ಚಾಗುವುದರಿಂದ ಅಭಿವೃದ್ಧಿ ಸ್ಥಗಿತಗೊಂಡಿದೆ. ಯೋಜನೆಗಳ ಮೊರೆ ಹೋಗಿ ದುಡಿಯುವ ಜನರು ಕೂಡ ಸೋಮಾರಿಗಳಾಗಿದ್ದಾರೆ. ಧಾರ್ಮಿಕ ಕ್ಷೇತ್ರ ಅಲ್ಲದೇ ರಾಜ್ಯದ ಯಾವ ಅಭಿವೃದ್ಧಿ ಕೆಲಸಗಳಿಗೂ ಹಣ ಬಿಡುಗಡೆ ಆಗುತ್ತಿಲ್ಲ. ಈ ಬಗ್ಗೆ ಅಧಿವೇಶನದಲ್ಲಿ ಚರ್ಚೆಯಾಗಬೇಕು. ಜಾತಿಯ ತುಷ್ಟೀಕರಣ ಮಾಡುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಸ್ವಾಮೀಜಿ ತಿಳಿಸಿದ್ದಾರೆ.

ಅನುದಾನ ನೀಡದ್ದಕ್ಕೆ ಅಸಮಾಧಾನ

ರೇಣುಕಾಚಾರ್ಯ ಶಿಲಾ ಮಂಟಪಕ್ಕೆ ರಾಜ್ಯ ಸರ್ಕಾರದಿಂದ ಅನುದಾನ ಕೊಡದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ರಂಭಾಪುರಿ ಶ್ರೀಗಳು, ಬಾಳೆ ಹೊನ್ನೂರು ಧರ್ಮ ಪೀಠದಲ್ಲಿ 51 ಅಡಿ ಎತ್ತರದ ಜಗದ್ಗುರು ರೇಣುಕಾಚಾರ್ಯರ ಶಿಲಾ ಮಂಟಪ ನಿರ್ಮಾಣ ಮಾಡಲಾಗುತ್ತಿದೆ. ಈಗಾಗಲೇ ಮೂರು ಬೃಹತ್ ಶಿಲೆಗಳು ಬಂದಿದ್ದು, ಶಿಲ್ಪಿಗಳು ಕೆಲಸ ಮಾಡುತ್ತಿದ್ದಾರೆ. 36 ಅಡಿ ಎತ್ತರ, 22 ಅಗಲದ ಕಲ್ಲು ಆಂಧ್ರದಿಂದ ವರ್ಷಾಂತ್ಯಕ್ಕೆ ಬರಲಿದೆ. ಅದು 12 ಕೋಟಿ ರೂಪಾಯಿ ಯೋಜನೆಯಾಗಿದ್ದು, ಯಡಿಯೂರಪ್ಪ ಸಿಎಂ ಆಗಿದ್ದಾಗ 5 ಕೋಟಿ ಬಿಡುಗಡೆ ಮಾಡಿದ್ದರು. ನಂತರ ಬಂದ ಸಿಎಂಗಳು ಯಾವುದೇ ರೀತಿ ಸ್ಪಂದಿಸದೇ ತಟಸ್ಥವಾಗಿದ್ದಾರೆ ಎಂದು ತಿಳಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version