Site icon Vistara News

Ramesh Jarakiholi : ರಮೇಶ್‌ ಜಾರಕಿಹೊಳಿ ದೆಹಲಿ ಭೇಟಿ ಸಕ್ಸೆಸ್‌; ಅಮಿತ್‌ ಶಾ ಜತೆ 10 ನಿಮಿಷ ಚರ್ಚೆ, ಏನೆಲ್ಲಾ ಹೇಳಿದ್ರು?

Ramesh Jarakiholi- amith Shah

#image_title

ನವ ದೆಹಲಿ: ತನ್ನ ವಿರುದ್ಧದ ವಿವಾದಾತ್ಮಕ ಲೈಂಗಿಕ ಸಿಡಿ ಪ್ರಕರಣ ಡಿ.ಕೆ. ಶಿವಕುಮಾರ್‌ ಅವರ ಷಡ್ಯಂತ್ರದ ಫಲ ಎಂದು ಆಪಾದಿಸುತ್ತಿರುವ ರಮೇಶ್‌ ಜಾರಕಿಹೊಳಿ ಅವರು ಇದರ ಬಗ್ಗೆ ಸಿಬಿಐ ತನಿಖೆ ನಡೆಸಬೇಕು ಎಂದು ಪಟ್ಟು ಹಿಡಿದಿದ್ದಾರೆ. ಅದನ್ನು ಸಾಧಿಸುವುದಕ್ಕಾಗಿ ದೆಹಲಿಗೆ ಹೋಗಿರುವ ಅವರು, ಕೊನೆಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿ ಮಾಡುವಲ್ಲಿ ಸಫಲರಾಗಿದ್ದಾರೆ. ಈ ಮೂಲಕ ಈ ಹೋರಾಟದಲ್ಲಿ ಮೊದಲ ಯಶಸ್ಸು ಸಿಕ್ಕಿದೆ.

ಗುರುವಾರ ಮಧ್ಯಾಹ್ನ ೩ ಗಂಟೆಗೆ ದೆಹಲಿಗೆ ತಲುಪಿದ್ದ ಜಾರಕಿಹೊಳಿ ಅವರು ಗೃಹ ಸಚಿವ ಅಮಿತ್‌ ಅವರನ್ನು ಭೇಟಿ ಮಾಡಲು ಶತಪ್ರಯತ್ನ ನಡೆಸಿದ್ದರು. ಈ ನಡುವೆ ಗುರುವಾರ ರಾತ್ರಿ ೧೧ ಗಂಟೆಗೆ ಅವರು ಅಮಿತ್‌ ಶಾ ಅವರನ್ನು ಭೇಟಿ ಮಾಡಿದ್ದಾಗಿ ಅವರು ಹೇಳಿಕೊಂಡಿದ್ದರು.

ಈ ನಡುವೆ, ಶುಕ್ರವಾರ ಬೆಳಗ್ಗಿನಿಂದಲೇ ಸಂಸತ್‌ ಭವನದಲ್ಲಿ ಹೋಗಿ ಕುಳಿತಿದ್ದ ಅವರು ಅಮಿತ್‌ ಶಾ ಅವರನ್ನು ಭೇಟಿ ಮಾಡಲು ಕಾಯುತ್ತಿದ್ದರು. ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಅವರ ಕಚೇರಿಯಲ್ಲಿ ಕಾಯುತ್ತಿದ್ದ ಅವರಿಗೆ ಮಧ್ಯಾಹ್ನ ೧೨ ಗಂಟೆಯ ಹೊತ್ತಿಗೆ ಅಮಿತ್‌ ಶಾ ಅವರ ಭೇಟಿಗೆ ಅವಕಾಶ ಸಿಕ್ಕಿದೆ.

೧೦ ನಿಮಿಷಗಳ ಮಾತುಕತೆ
ಅಮಿತ್‌ ಶಾ ಅವರು ಸಂಸತ್‌ ಭವನದಲ್ಲಿ ಸುಮಾರು ೧೦ ನಿಮಿಷಗಳ ಕಾಲ ರಮೇಶ್‌ ಜಾರಕಿಹೊಳಿ ಅವರ ಜತೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಸಾಮಾನ್ಯವಾಗಿ ಯಾರ ಜತೆ ಮಾತುಕತೆಗೂ ಸಿಗದ ಅಮಿತ್‌ ಶಾ ಅವರು ಜಾರಕಿಹೊಳಿ ಅವರ ಜತೆ ಮಾತನಾಡಿದ್ದು, ಅವರೂ ಡಿ.ಕೆ.ಶಿವಕುಮಾರ್‌ ಮೇಲಿನ ಆರೋಪಗಳ ವಿಚಾರಗಳಲ್ಲಿ ಗಂಭೀರವಾಗಿದ್ದಾರೆ ಎನ್ನುವುದನ್ನು ತೋರಿಸಿದೆ.

ಹೈಕಮಾಂಡ್‌ ಮಟ್ಟದಲ್ಲೇ ಪ್ರಯತ್ನ
ಡಿ.ಕೆ. ಶಿವಕುಮಾರ್‌ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್‌ ಅವರ ವಿರುದ್ಧ ಹಲವು ಹಗರಣಗಳ ಆರೋಪ ಮಾಡಿದ್ದ ರಮೇಶ್‌ ಜಾರಕಿಹೊಳಿ ಅವರು ತಮ್ಮ ವಿರುದ್ಧದ ಸಿ.ಡಿ. ಪ್ರಕರಣವೂ ಕೂಡಾ ಒಂದು ಷಡ್ಯಂತ್ರ ಎಂದಿದ್ದರು. ಈ ಎಲ್ಲಾ ವಿಷಯಗಳ ಬಗ್ಗೆ ಸಿಬಿಐ ತನಿಖೆ ನಡೆಸಬೇಕು ಎನ್ನುವುದು ಅವರ ಬೇಡಿಕೆ.

ಈ ಬೇಡಿಕೆಯನ್ನು ಮುಂದಿಟ್ಟುಕೊಂಡು ರಮೇಶ್‌ ಜಾರಕಿಹೊಳಿ ಎರಡು ದಿನ ಸಿಎಂ ಬಸವರಾಜ ಬೊಮ್ಮಾಯಿ ಅವರ ಜತೆ ಓಡಾಡಿದ್ದರೂ ಸಿಎಂ ಅವರ ಮಾತಿಗೆ ಮನ್ನಣೆ ನೀಡಲಿಲ್ಲ. ಮೊದಲು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಬಳಿಕ ಅದರ ಆಧಾರದಲ್ಲಿ ಯಾವ ತನಿಖೆ ಎಂದು ತೀರ್ಮಾನಿಸೋಣ ಎಂದು ಹೇಳಿ ಕಳುಹಿಸಿದ್ದರು. ಇದಾದ ಬಳಿಕ ರಮೇಶ್‌ ಜಾರಕಿಹೊಳಿ ದಿಲ್ಲಿ ಬಾಗಿಲು ತಟ್ಟಲು ಮುಂದಾಗಿದ್ದರು.

ಅಮಿತ್‌ ಶಾ ಭೇಟಿಯ ಬಳಿಕ ಮುಂದೇನು?
ಅಮಿತ್‌ ಶಾ ಅವರ ಭೇಟಿಯ ಬಳಿಕ ಮುಂದೇನಾಗಬಹುದು ಎನ್ನುವ ಕುತೂಹಲ ಈಗ ಗರಿಗೆದರಿದೆ. ಜಾರಕಿಹೊಳಿ ಅವರು ಸಿ.ಡಿ ವಿವಾದ ಮತ್ತು ಡಿ.ಕೆ.ಶಿವಕುಮಾರ್‌, ಲಕ್ಷ್ಮೀ ಹೆಬ್ಬಾಳ್ಕರ್‌ ಅವರ ಮೇಲಿನ ಎಲ್ಲ ಆರೋಪಗಳ ಬಗ್ಗೆ ಅಮಿತ್‌ ಶಾ ಅವರಿಗೆ ವಿವರಣೆ ನೀಡಿದ್ದಾರೆ ಎನ್ನಲಾಗಿದೆ. ಅಮಿತ್‌ ಶಾ ಅವರು ಜಾರಕಿಹೊಳಿ ಅವರು ಹೇಳಿದರು ಎಂದ ಮಾತ್ರಕ್ಕೆ ಸಿಬಿಐ ತನಿಖೆಗೆ ವಹಿಸುತ್ತಾರಾ? ಅಥವಾ ಸೂಕ್ತ ಕಾಲ ಬರಲಿ ಎಂದು ಕಾಯುತ್ತಾರಾ ಎಂದು ಕಾದು ನೋಡಬೇಕಾಗಿದೆ.

ಇದನ್ನೂ ಓದಿ : Ramesh Jarkiholi : ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ, ಚಿಕಿತ್ಸೆ ಕೊಡಿಸಲಿ: ರಮೇಶ್ ಜಾರಕಿಹೊಳಿ ಆರೋಪಕ್ಕೆ ಡಿ.ಕೆ. ಶಿವಕುಮಾರ್‌ ಮೊದಲ ಪ್ರತಿಕ್ರಿಯೆ

Exit mobile version